Site icon Vistara News

LIC Dividend: ಫೆ.8ರಂದು ಎಲ್‌ಐಸಿ ಡಿವಿಡೆಂಡ್‌ ಘೋಷಣೆ

LIC office

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ವಿಮಾ ದೈತ್ಯ ಜೀವ ವಿಮಾ ನಿಗಮ (ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ – Life insurance corporation) ಫೆಬ್ರವರಿ 8ರಂದು 2023-24 ಹಣಕಾಸು ವರ್ಷದ ಮಧ್ಯಂತರ ಲಾಭಾಂಶದ (LIC Dividend) ಘೋಷಣೆ ಮಾಡುವ ಸಾಧ್ಯತೆಯಿದೆ. ಸಂಸ್ಥೆಯು 2024ರ ಮೂರನೇ ತ್ರೈಮಾಸಿಕದ (FY24 Q3) ಫಲಿತಾಂಶಗಳನ್ನು ಅದೇ ದಿನ ಬಿಡುಗಡೆ ಮಾಡುತ್ತದೆ.

ಸೋಮವಾರ ಈ ಬಗ್ಗೆ ಎಲ್‌ಐಸಿ ಆಡಳಿತಾತ್ಮಕ ಅಧಿಸೂಚನೆ ನೀಡಿದೆ. “ಕಾರ್ಪೊರೇಷನ್‌ನ ನಿರ್ದೇಶಕರ ಮಂಡಳಿಯು ತ್ರೈಮಾಸಿಕದಲ್ಲಿ ಲೆಕ್ಕಪರಿಶೋಧನೆ ಮಾಡದ ಹಣಕಾಸು ಫಲಿತಾಂಶಗಳನ್ನು (ಸ್ವತಂತ್ರ ಮತ್ತು ಏಕೀಕೃತ) ಪರಿಗಣಿಸಲು ಮತ್ತು ಅನುಮೋದಿಸಲು ಫೆಬ್ರವರಿ 8, 2024ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 31, 2023ರಂದು ಕೊನೆಗೊಂಡ ಒಂಬತ್ತು ತಿಂಗಳ ಅವಧಿಯನ್ನು ಪರಿಗಣಿಸಲಾಗುತ್ತಿದೆ. ನಿರ್ದೇಶಕರ ಮಂಡಳಿಯು 2023-24ರ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶವನ್ನು ಘೋಷಿಸುವ ಪ್ರಸ್ತಾಪವನ್ನು ಪರಿಗಣಿಸಬಹುದು” ಎಂದು ಅದರಲ್ಲಿ ತಿಳಿಸಿದೆ.

ಮಂಗಳವಾರ ಎಲ್‌ಐಸಿಯ ಷೇರುಗಳು ಬಿಎಸ್‌ಇಯಲ್ಲಿ 1,008 ರೂ.ಗೆ ಮಾರಾಟವಾದವು. ಇದು 7.65 ರೂ. ಅಥವಾ 0.76 ಪರ್ಸೆಂಟ್ ಹೆಚ್ಚಿನ ಬೆಲೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಇದರ ಷೇರುಗಳು ಶೇಕಡಾ 55ಕ್ಕಿಂತ ಹೆಚ್ಚಿವೆ.

ಭಾರತೀಯ ಜೀವ ವಿಮಾ ನಿಗಮವು ಆರಂಭಿಕ ಸಾರ್ವಜನಿಕ ಷೇರು ಮಾರಾಟ (IPO) ಆರಂಭಿಸಿದ ಬಳಿಕ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದ ಕಾರಣ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಎಲ್‌ಐಸಿ ಷೇರುಗಳ ಮೌಲ್ಯವು ಗಣನೀಯವಾಗಿ ಜಾಸ್ತಿಯಾಗಿದ್ದು, ಮಾರ್ಕೆಟ್‌ ಕ್ಯಾಪ್‌ (Market Cap) ದೃಷ್ಟಿಯಿಂದ ಈಗ ಭಾರತದಲ್ಲೇ ಅತಿ ಮೌಲ್ಯಯುತ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಅನ್ನೂ ಹಿಂದಿಕ್ಕಿ ಎಲ್‌ಐಸಿ ಈ ಸಾಧನೆ ಮಾಡಿದೆ.

ಜನವರಿ 17ರಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳ ಮೌಲ್ಯವು ದಾಖಲೆಯ 919.45 ರೂಪಾಯಿ ತಲುಪಿತು. ಇದರಿಂದಾಗಿ ಎಲ್‌ಐಸಿ ಮಾರುಕಟ್ಟೆ ಕ್ಯಾಪ್‌ (Market capitalization) 5.8 ಲಕ್ಷ ಕೋಟಿ ರೂ. ತಲುಪಿತು. ಹಾಗೆಯೇ, ಎಸ್‌ಬಿಐ ಮಾರುಕಟ್ಟೆ ಕ್ಯಾಪ್‌ (ಬಿಎಸ್‌ಇ) 5.62 ಲಕ್ಷ ಕೋಟಿ ರೂ. ಇರುವುದರಿಂದ ಭಾರತದಲ್ಲಿಯೇ ಎಲ್‌ಐಸಿಯು ಮಾರುಕಟ್ಟೆ ಕ್ಯಾಪ್‌ ಮಾನದಂಡದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: LIC: ಎಸ್‌ಬಿಐಅನ್ನೂ ಹಿಂದಿಕ್ಕಿದ ಎಲ್‌ಐಸಿ; ಷೇರು ನೆಗೆತ, ದೇಶದಲ್ಲೇ ಮೌಲ್ಯಯುತ ಸಂಸ್ಥೆ ಗರಿ

Exit mobile version