ನವ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸಂಸತ್ ಭವನದ ನೂತನ ಕಟ್ಟಡದ ಮೇಲೆ ಅಳವಡಿಸಿರುವ ರಾಷ್ಟ್ರ ಲಾಂಛನ ಇದೀಗ ವಿವಾದ ಸೃಷ್ಟಿಸಿದೆ. ರಾಷ್ಟ್ರ ಲಾಂಛನದಲ್ಲಿ ಹಲವು ನ್ಯೂನತೆಗಳನ್ನು ಪಟ್ಟಿ ಮಾಡಿರುವ ಕಾಂಗ್ರೆಸ್, ಇದರಿಂದ ಲಾಂಛನದ ಗೌರವಕ್ಕೆ ಚ್ಯುತಿಯಾಗಿದೆ ಎಂದು ಆರೋಪಿಸಿದೆ. ಆದರೆ ಕೇಂದ್ರ ಸರ್ಕಾರ ಈ ಎಲ್ಲ ಅಪವಾದಗಳನ್ನು ತಳ್ಳಿ ಹಾಕಿದೆ. ಹಾಗಾದರೆ ಏನಿದು ವಿವಾದ? ತಿಳಿಯೋಣ ಬನ್ನಿ.
ಪ್ರಧಾನಿ ನರೇಂದ್ರ ಮೋದಿಯಿಂದ ಅನಾವರಣ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೋಮವಾರ (ಜುಲೈ ೧೧, ೨೦೨೨) ನವ ದೆಹಲಿಯ ಸೆಂಟ್ರಲ್ ವಿಸ್ಟಾದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್ ಭವನ ಕಟ್ಟಡದ ಮೇಲ್ಭಾಗದಲ್ಲಿ ಭವ್ಯವಾದ ರಾಷ್ಟ್ರ ಲಾಂಛನವನ್ನು ಅನಾವರಣಗೊಳಿಸಿದ್ದರು. ನೂತನ ಸಂಸತ್ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ಈ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. “”ಲಾಂಛನದಲ್ಲಿನ ನಾಲ್ಕು ಸಿಂಹಗಳನ್ನು ಗರ್ಜಿಸುತ್ತಿರುವಂತೆ ಕೆತ್ತನೆ ಮಾಡಲಾಗಿದ್ದು, ಇದು ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಘನತೆ ಮತ್ತು ಗೌರವಕ್ಕೆ ಈ ಮೂಲಕ ಮಸಿ ಬಳಿಯಲಾಗಿದೆʼʼ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಏನಿದು ರಾಷ್ಟ್ರ ಲಾಂಛನ?
ರಾಷ್ಟ್ರದ ಅಸ್ಮಿತೆಯನ್ನು ಬಿಂಬಿಸುವ ಪ್ರಮುಖ ಚಿಹ್ನೆಗಳಲ್ಲಿ ರಾಷ್ಟ್ರ ಲಾಂಛನವೂ ಒಂದು. ಇದನ್ನು ಭಾರತದ ರಾಷ್ಟ್ರ ಮುದ್ರೆಯಾಗಿ ಬಳಸಲಾಗುತ್ತದೆ. ಉತ್ತರಪ್ರದೇಶದ ವಾರಾಣಸಿಯಿಂದ ೧೦ ಕಿ.ಮೀ ದೂರದಲ್ಲಿರುವ ಐತಿಹಾಸಿಕ ಸಾರನಾಥದಲ್ಲಿ ಮೌರ್ಯ ವಂಶದ ಚಕ್ರವರ್ತಿ ಅಶೋಕ ಕಟ್ಟಿಸಿದ ಬೌದ್ಧ ಸ್ತೂಪದಲ್ಲಿ ನಾಲ್ಕು ಸಿಂಹಗಳನ್ನು ಒಳಗೊಂಡಿರುವ ಸ್ತಂಭ ಇದೆ. ಇದನ್ನು ಅಶೋಕ ಸ್ತಂಭ ಎಂದೂ ಕರೆಯುತ್ತಾರೆ. ನಾಲ್ಕು ಸಿಂಹಗಳು ಮತ್ತು ಧರ್ಮಚಕ್ರವನ್ನು ( ಬೌದ್ಧ ನೀತಿಗಳನ್ನು ಪ್ರತಿನಿಧಿಸುವ ಚಕ್ರ) ಒಳಗೊಂಡಿದೆ. ಸ್ತೂಪದ ಈ ಭಾಗವನ್ನು ಸಾರನಾಥದ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾಗಿದೆ. ಅಶೋಕಸ್ತಂಭದ ಈ ಲಾಂಛನದಲ್ಲಿ ಮೂರು ಭಾಗಗಳನ್ನು ಕಾಣಬಹುದು. ತಳ ಭಾಗದಲ್ಲಿರುವ ತಲೆ ಕೆಳಗಾಗಿರುವ ತಾವರೆಯ ರಚನೆ ಇದೆ. ಅದರ ಮೇಲೆ ನಾಲ್ಕು ದಿಕ್ಕುಗಳಿಗೆ ನಾಲ್ಕು ಚಕ್ರಗಳು ಇವೆ. ಪ್ರತಿ ಚಕ್ರದಲ್ಲೂ ೨೪ ಗೆರೆಗಳಿದ್ದು, ಬೌದ್ಧರ ಆಚರಣೆಗಳ ಸಂಕೇತವಾಗಿದೆ. ಪ್ರತಿ ಎರಡು ಚಕ್ರದ ಮಧ್ಯೆ ತಲಾ ಒಂದು ಕುದುರೆ, ಎತ್ತು, ಆನೆ, ಸಿಂಹದ ಕೆತ್ತನೆಗಳನ್ನು ಕಾಣಬಹುದು. ತುದಿಯಲ್ಲಿ ನಾಲ್ಕು ದಿಕ್ಕುಗಳಿಗೆ ನಾಲ್ಕು ಸಿಂಹಗಳು ಮುಖ ಮಾಡಿವೆ. ಪ್ರತಿ ಸಿಂಹವೂ ಮೂರು ಅಡಿ ಎತ್ತರವಿದೆ. ಇದನ್ನು ಆಧರಿಸಿ ರಾಷ್ಟ್ರ ಲಾಂಛನವನ್ನು ೧೯೫೦ರ ಜನವರಿ ೨೬ರಂದು ಅಂಗೀಕರಿಸಲಾಯಿತು. ಇದಕ್ಕೆ ಮಂಡೂಕ ಉಪನಿಷತ್ತಿನಲ್ಲಿರುವ “ಸತ್ಯಮೇವ ಜಯತೇʼ ಸಾಲನ್ನೂ ಸೇರಿಸಲಾಯಿತು.
ಮೂಲ ವಿನ್ಯಾಸ ರಚನೆಯಾಗಿದ್ದು ಎಂದು? ಸಾರನಾಥದಲ್ಲಿ ಕ್ರಿಸ್ತಪೂರ್ವ ೨೫೦ರಲ್ಲಿ ಅಶೋಕ ಸ್ತಂಭದ ಮೂಲ ವಿನ್ಯಾಸ ಆಗಿತ್ತು. ಇದೇ ಸಾರನಾಥದಲ್ಲಿ ಗೌತಮ ಬುದ್ಧ ಮೊದಲ ಸಲ ಅಷ್ಟ ಮಾರ್ಗಗಳ ಬಗ್ಗೆ ಉಪನ್ಯಾಸವನ್ನು ನೀಡಿದ್ದ. ೧೯೦೫ರಲ್ಲಿ ಫ್ರೆಡಿಚ್ ಆಸ್ಕರ್ ಓರ್ಟೆಲ್ ಈ ಸ್ತಂಭವನ್ನು ಉತ್ಖನನದ ಮೂಲಕ ಬೆಳಕಿಗೆ ತಂದರು. ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ನಾಯಕರು ರಾಷ್ಟ್ರ ಲಾಂಛನದ ಅಗತ್ಯವನ್ನು ಮನಗಂಡು ಹುಡುಕಾಟ ಆರಂಭಿಸಿದರು. ಆಗ ನಾಗರಿಕ ಸೇವಾ ಅಧಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬದ್ರುದ್ದೀನ್ ತ್ಯಾಬ್ಜಿ ಮತ್ತು ಅವರ ಪತ್ನಿ ಸುರಯ್ಯಾ ತ್ಯಾಬ್ಜಿ ಅವರು ಸಿಂಹದ ಮುಖವಿರುವ ಅಶೋಕಸ್ತಂಭದ ಗುರುತನ್ನು ಲಾಂಛನವಾಗಿ ಬಳಸಬಹುದು ಎಂದು ಪ್ರಸ್ತಾಪಿಸಿದ್ದರು.
ಲಾಂಛನದ ಚಿತ್ರ ರಚಿಸಿದ್ದು ಯಾರು?
ಸಂವಿಧಾನ ಕರಡು ರಚನೆಯ ಸಂದರ್ಭ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ದೀನನಾಥ್ ಭಾರ್ಗವ ಅವರಿಗೆ ರಾಷ್ಟ್ರ ಲಾಂಛನದ ವಿನ್ಯಾಸವನ್ನು ಸಿದ್ಧಪಡಿಸುವಂತೆ ತಿಳಿಸಲಾಯಿತು. ಸಂವಿಧಾನದ ದಾಖಲೆಗಳಲ್ಲಿ ವಿನ್ಯಾಸಗಳನ್ನು ರಚಿಸಿದ್ದ ಕಲಾವಿದ ನಂದನ್‌ಲಾಲ್ ಅವರ ಸಲಹೆಗಳನ್ನು ಪಡೆದು ದೀನ ನಾಥ್ ಭಾರ್ಗವ ಅವರು ಲಾಂಛನದ ವಿನ್ಯಾಸವಿರುವ ಚಿತ್ರವನ್ನು ರಚಿಸಿದರು.
ರಾಜಕೀಯ ವಿವಾದವೇನು? ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರ ಲಾಂಛನದ ‘ಸ್ವರೂಪ’ವನ್ನು ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಮೂಲ ಲಾಂಛನದಲ್ಲಿ ಸಿಂಹಗಳ ಮುಖ ಸೌಮ್ಯವಾಗಿದ್ದರೆ, ಸಂಸತ್ ಭವನದ ಮೇಲೆ ರೂಪಿಸಲಾಗಿರುವ ಹೊಸ ಲಾಂಛನದಲ್ಲಿ ಗರ್ಜಿಸುತ್ತಿರುವಂತೆ ಉಗ್ರ ಸ್ವರೂಪವನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ” ಸಾರನಾಥದ ಅಶೋಕ ಸ್ತಂಭದಲ್ಲಿರುವ ಸಿಂಹಗಳ ಮುಖ ಭಾವಕ್ಕೂ, ಹೊಸ ಲಾಂಛನಕ್ಕೂ ಭಾರಿ ವ್ಯತ್ಯಾಸ ಇದೆ. ಇದು ಭಾರತದ ಲಾಂಛನಕ್ಕೆ ಮಾಡಿರುವ ಅಗೌರವವಾಗಿದೆʼʼ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ದೂರಿದ್ದಾರೆ.
ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ: ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, “ಸೌಂದರ್ಯ ಎನ್ನುವುದು ನೋಡುಗನ ದೃಷ್ಟಿಯಲ್ಲಿರುತ್ತದೆ ಎಂಬ ಮಾತಿದೆ, ಮುಖದ ಶಾಂತತೆ ಹಾಗೂ ಉಗ್ರತೆ ಕೂಡ ಹಾಗೆಯೇ. ಈಗ ಅನಾವರಣಗೊಳಿಸಿರುವ ರಾಷ್ಟ್ರ ಲಾಂಛನವು ಮೂಲ ಸಾರನಾಥ ಸಿಂಹ ಲಾಂಛನದಂತೆ ಇದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲʼʼ ಎಂದು ಸಮಜಾಯಿಷಿ ನೀಡಿದ್ದಾರೆ.
ಲಾಂಛನವನ್ನು ರಚಿಸಿದ ಶಿಲ್ಪಿ ಏನೆನ್ನುತ್ತಾರೆ?
ಹೊಸ ಲಾಂಛನವನ್ನು ನಿರ್ಮಿಸಿದ ಶಿಲ್ಪಿ ಸುನಿಲ್ ಡಿಯೋರ್ “ನಾವು ಮೂಲ ಸಾರನಾಥ ಲಾಂಛನವನ್ನು ಸಮಗ್ರವಾಗಿ, ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಬಳಿಕವೇ ಈ ಲಾಂಛನವನ್ನು ರೂಪಿಸಿದ್ದೇವೆ. ಥೇಟ್ ಸಾರನಾಥ ಲಾಂಛನದಲ್ಲಿರುವ ಸಿಂಹಗಳಂತೆಯೇ ಇದನ್ನೂ ಕೆತ್ತಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ” ಈ ಲಾಂಛನ ನಿರ್ಮಾಣ ವಿಚಾರದಲ್ಲಿ ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಮೂಲ ಲಾಂಛನ ಸ್ವತಃ ಅಧ್ಯಯನ ಮಾಡಿದ್ದೇನೆʼ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಮೂಲ ಲಾಂಛನಕ್ಕೂ, ಸಂಸತ್ ಭವನದ ಮೇಲೆ ನಿರ್ಮಾಣವಾಗುತ್ತಿರುವ ಲಾಂಛನಕ್ಕೂ ಯಾವುದೇ ವ್ಯತ್ಯಾಸ ಆಗಬಾರದು ಎಂಬುದನ್ನು ನಾವು ಗಮನದಲ್ಲಿ ಇಟ್ಟುಕೊಂಡು, ಅದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ರೂಪಿಸಿದ್ದೇವೆ. ಸಾರನಾಥ ಲಾಂಛನದ ಅಳತೆ 3×3.5 ಅಡಿ ಎತ್ತರವಿದೆ. ಆದರೆ ನಾವು ಈಗ ನಿರ್ಮಿಸಿದ ಲಾಂಛನ 21.3 ಎತ್ತರ ಇದೆ ಎಂದು ತಿಳಿಸಿದ್ದಾರೆ.
ಕೆಳಗಿಂದ ಫೋಟೋ ತೆಗೆಯಲಾಗಿದೆ : ಲಾಂಛನದ ಫೋಟೋವನ್ನು ವಿವಿಧ ಆಯಾಮಗಳಿಂದ ಸೆರೆ ಹಿಡಿದಾಗ ಬೇರೆಬೇರೆ ಸ್ವರೂಪದಲ್ಲಿ ಗೋಚರಿಸುತ್ತದೆ. ಈಗ ಲಾಂಛನವನ್ನು ಕೆಳಭಾಗದಿಂದ ಫೋಟೋ ತೆಗೆದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ. ಕೆಳಭಾಗದಿಂದ ಸೆರೆ ಹಿಡಿಯಲಾದ ಫೋಟೋದಲ್ಲಿ ಸಹಜವಾಗಿಯೇ ಸಿಂಹಗಳ ಬಾಯಿ ದೊಡ್ಡದಾಗಿ ಕಾಣುತ್ತದೆ ಮತ್ತು ಅವು ವ್ಯಘ್ರ ಸ್ವರೂಪ ತಳೆದಂತೆ ಅನಿಸುತ್ತಿದೆ ಎಂದು ಶಿಲ್ಪಿ ಸುನಿಲ್ ಡಿಯೋರ್ ಹೇಳಿದ್ದಾರೆ.
೯,೫೦೦ ಕೆ.ಜಿ ತೂಕದ ಭವ್ಯ ಲಾಂಛನ
ನೂತನ ಸಂಸತ್ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ಕಂಚಿನ ರಾಷ್ಟ್ರ ಲಾಂಛನ ೬.೫ ಮೀಟರ್ ಎತ್ತರ ಮತ್ತು ೪.೪ ಮೀಟರ್ ಅಗಲವಿದ್ದು, ೯,೫೦೦ ಕೆ.ಜಿ ತೂಕವಿದೆ. ರಾಷ್ಟ್ರ ಲಾಂಛನಕ್ಕೆ ಪೂರಕವಾಗಿ ಉಕ್ಕಿನಿಂದ ತಯಾರಿಸಿದ ೬,೫೦೦ ಕೆ.ಜಿ ತೂಕದ ರಚನೆಯನ್ನೂ ಅಳವಡಿಸಲಾಗಿದೆ. ಒಟ್ಟು ಎಂಟು ಹಂತಗಳಲ್ಲಿ ಈ ಲಾಂಛನವನ್ನು ನಿರ್ಮಿಸಲಾಗಿದೆ. ಮಣ್ಣಿನ ಮಾದರಿ, ಕಂಪ್ಯೂಟರ್ ಗ್ರಾಫಿಕ್, ಕಂಚಿನ ಲೋಹದಿಂದ ತಯಾರಿಕೆ, ಪಾಲಿಷಿಂಗ್ ಸೇರಿ ಎಂಟು ಹಂತಗಳಲ್ಲಿ ಸಿದ್ಧಪಡಿಸಲಾಗಿದೆ. ಈ ಬೃಹತ್ ಲಾಂಛನವನ್ನು ೧೫೦ ಬಿಡಿ ಭಾಗಗಳಾಗಿ ವಿಂಗಡಿಸಿ, ಚಾವಣಿಯಲ್ಲಿ ಜೋಡಿಸಿ ಅಳವಡಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಈ ಕೆಲಸ ಆರಂಭವಾಗಿ ಪೂರ್ಣವಾಗಲು ಎರಡು ತಿಂಗಳಿನ ಸಮಯ ತೆಗೆದುಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.