ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆ (Beer Price) ಮತ್ತೆ ಏರಿಕೆ ಮಾಡಲಾಗಿದೆ. ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ (Liquor Price Karnataka) ಏರಿಕೆಯಾಗುತ್ತಿದ್ದು, ನೊರೆ ಉಕ್ಕಿಸುವ ಬಿಯರ್ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆಯಾಗಲಿದೆ. ದರ ಕೇಳಿಯೇ ಮದ್ಯಪ್ರಿಯರ ಕಿಕ್ ಇಳಿಯವಂತಾಗಿದೆ.
ಬಿಯರ್ ಬೆಲೆಯನ್ನು ಬಾಟಲಿಗೆ 10ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಕಂಪನಿಗಳು ಬಿಯರ್ ದರ ಏರಿಕೆ ಮಾಡಿದ್ದವು. ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ಬೆಲೆ ಹೆಚ್ಚಿಸಲಾಗಿದೆ. ಬಿಯರ್ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ಇತರ ದುಬಾರಿ ಹಾಟ್ ಮದ್ಯಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಮದ್ಯಪ್ರಿಯರು ಬಿಯರ್‌ಗೆ ತೃಪ್ತಿಪಟ್ಟುಕೊಳ್ಳೋಣ ಎಂದು ಭಾವಿಸಿದರೆ ಈಗ ಅದೂ ಸಾಧ್ಯವಿಲ್ಲದಾಗಿದೆ.
ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಸುಮಾರು 60 ರೂಪಾಯಿಯಷ್ಟು ಏರಿಕೆಯಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರ ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಅದರಿಂದ ದರ ಏರಿಕೆಯಾಗಿತ್ತು. ಆ ನಂತರ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು.
ನಂತರ ಮತ್ತೆ ಸರ್ಕಾರದಿಂದ ಬಿಯರ್ ಮೇಲಿನ ಸುಂಕ ಹೆಚ್ಚಳ ಮಾಡಿದ್ದ ಕಾರಣ ಕಳೆದ ಫೆಬ್ರವರಿಯಲ್ಲಿ ಬಿಯರ್ ದರ ಏರಿದೆ. ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನಿಸಿವೆ. ಹೀಗಾಗಿ 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 60 ರೂ. ವರೆಗೆ ಹೆಚ್ಚಳವಾದಂತಾಗಿದೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ಸುಂಕವನ್ನು ಅನಿಯಮಿತವಾಗಿ ಹೆಚ್ಚಿಸುವ ದಾರಿಯನ್ನು ಸರಕಾರ ಹಿಡಿದಿದೆ ಎಂದು ಲಿಕ್ಕರ್‌ಪ್ರಿಯರು ಆರೋಪಿಸಿದ್ದಾರೆ.
ಟಾರ್ಗೆಟ್ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್ ಹೆಚ್ಚು ವರಮಾನ
ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಕಿಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.
ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಈಗ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಟಾರ್ಗೆಟ್ ರೀಚ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.
2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಆದರೂ, ತಲೆಕೆಡಿಸಿಕೊಳ್ಳದೆ ಮದ್ಯ ಪ್ರಿಯರು ಮದ್ಯ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: CM Siddaramaiah: ಅಬಕಾರಿ ಪರವಾನಗಿ ನವೀಕರಣಕ್ಕೆ ಕಿರುಕುಳ ನೀಡಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ