Site icon Vistara News

Lockup Death: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್; 23 ಕಿಡಿಗೇಡಿಗಳ ಸೆರೆ

Lockup Death

ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ 23 ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಚನ್ನಗಿರಿ ಟೌನ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಯುವಕನ ಲಾಕಪ್‌ ಡೆತ್‌ ಪ್ರಕರಣ ಖಂಡಿಸಿ, ಠಾಣೆಗೆ ಕಲ್ಲು ತೂರಾಟ (Lockup Death) ನಡೆಸಿದ್ದ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸದ್ಯ ಬಂಧಿತರಾಗಿರುವ 23 ಆರೋಪಿಗಳಿಗೆ ಚನ್ನಗಿರಿ ನ್ಯಾಯಾಲಯ, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆದಿಲ್‌ ಎಂಬ ಯುವಕನ ಲಾಕಪ್‌ ಡೆತ್‌ ಆಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಸಿಸಿ ಕ್ಯಾಮೆರಾ, ಮೊಬೈಲ್‌ ವಿಡಿಯೊ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಇಂದು ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ

ಯುವಕನ ಲಾಕಪ್‌ ಡೆತ್‌ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯ ಚನ್ನಗಿರಿ ಪಟ್ಟಣ ಸಹಜ‌ ಸ್ಥಿತಿಯತ್ತ ಮರಳುತ್ತಿದೆ. ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.

ಪೊಲೀಸ್ ವಶದಲ್ಲಿದ್ದ ಆದಿಲ್ (32) ಎಂಬ ವ್ಯಕ್ತಿ ಸಾವಿಗೀಡಾದ ಹಿನ್ನೆಲೆಯಲ್ಲಿ ಲಾಕಪ್ ಡೆತ್ ಆರೋಪ ಕೇಳಿಬಂದಿತ್ತು. ಇದರಿಂದ ರೊಚ್ಚಿಗೆದ್ದ ಕೆಲ ಕಿಡಿಗೇಡಿಗಳು ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಐದು ಪೊಲೀಸ್ ವಾಹನ‌‌ ಜಖಂಗೊಂಡು, ಹನ್ನೊಂದು ಪೊಲೀಸರಿಗೆ ಗಾಯಗಳಾಗಿದ್ದವು. 200ಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ದಾಳಿಯಾದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಇದನ್ನೂ ಓದಿ | Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

ಈಗ ಶವ ಪರೀಕ್ಷೆ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದಿಲ್‌ ಪೊಲೀಸ್ ಠಾಣೆಯಲ್ಲಿದ್ದದ್ದು ಕೇವಲ‌ ಏಳು ನಿಮಿಷ. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇಂದು ವೈದ್ಯರು ಪ್ರಾಥಮಿಕ ವರದಿ ನೀಡುವ ಸಾಧ್ಯತೆ ಇದೆ.

Exit mobile version