ಬೆಂಗಳೂರು: 2014ರ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಣಕ್ಕೆ ಚುರುಕು ಮುಟ್ಟಿಸಲು ʼಚುನಾವಣಾ ಚಾಣಕ್ಯʼ ಅಮಿತ್ ಶಾ (Amit Shah) ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ- ಜೆಡಿಎಸ್ (BJP – JDS) ಮೈತ್ರಿ ನಾಯಕರಿಗೆ ಟಾಸ್ಕ್ ನೀಡಿ ಮೈತ್ರಿ ಪಕ್ಷಗಳಿಗೆ ಚುರುಕು ಮುಟ್ಟಿಸಲು ಅವರು ಮುಂದಾಗಲಿದ್ದಾರೆ. ಇಂದು ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಬರಮಾಡಿಕೊಂಡರು.
ಒಂದು ದಿನ ನಾಲ್ಕು ಕಾರ್ಯಕ್ರಮ
ಇಂದು ಬೆಳಿಗ್ಗೆ 8-45ರಿಂದ 10ರವರೆಗೂ ಎಚ್‌ಡಿ ಕುಮಾರಸ್ವಾಮಿ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಿಗದಿಪಡಿಸಲಾಗಿದ್ದು, ಇದರಲ್ಲಿ ಎಚ್‌ಡಿಕೆ, ನಿಖಿಲ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಆಶೋಕ್ ಮುಂತಾದ ನಾಯಕರು ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ 28 ಸ್ಥಾನ ಟಾರ್ಗೆಟ್ ರೀಚ್ ಆಗಲು ಮೈತ್ರಿ ನಾಯಕರು ಮಾಡಬೇಕಾರದ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಇರುವ ಅಸಮಾಧಾನ ಬದಿಗೊತ್ತಿ ಚುನಾವಣೆ ನಡೆಸಿ, 28ಕ್ಕೆ 28 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ ಅಂತ ಕೆಲಸ ಮಾಡಿ ಎಂಬ ಸಂದೇಶ ನೀಡಲಿದ್ದಾರೆ.
ಇದೇ ವೇಳೆ ಅವರು ಮಂಡ್ಯ ಸಂಸದೆ ಸುಮಲತಾಗೂ ಕರೆ ಮಾಡುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಟಿಕೆಟ್ ನೀಡಿರುವುದರಿಂದ ಮುನಿಸಿಕೊಂಡಿರುವ ಸಂಸದೆ ಸುಮಲತಾ ನಡೆ ಇನ್ನೂ ನಿಗೂಢವಾಗಿದೆ. ಮಾಜಿ ಸಿಎಂ ಎಚ್‌ಡಿಕೆಯವರನ್ನು ಭೇಟಿ ಮಾಡಿದಗಲೂ ಅವರು ನಿಖರ ಉತ್ತರ ಕೊಟ್ಟಿಲ್ಲ. ಮಂಡ್ಯದಲ್ಲಿಯೇ ನಿಲುವು ತಿಳಿಸುವ ಮಾತನ್ನಾಡಿದ್ದಾರೆ.
ಹೀಗಾಗಿ ಇಂದು ಅಮಿತ್ ಶಾ ಬಳಿ ಈ ಬಗ್ಗೆ ಎಚ್‌ಡಿಕೆ ಮಾತನಾಡುವ ಸಾಧ್ಯತೆ ಇದೆ. ನೀವೇ ಮನವೊಲಿಸಿ ಅಂತ ಎಚ್‌ಡಿಕೆ ಮನವಿ ಮಾಡಬಹುದು. ಸುಮಲತಾ ಸಹ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅಮಿತ್ ಶಾ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ಭರವಸೆ ಕೊಟ್ಟರೆ ಸುಮಲತಾ ಈ ಮೈತ್ರಿಗೆ ಜೈ ಎನ್ನಬಹುದು. ಇಲ್ಲವಾದರೆ ಸ್ವತಂತ್ರ ಸ್ಪರ್ಧೆ ನಡೆಸಲಿದ್ದಾರೆ. ಇದು ಜೆಡಿಎಸ್ ಮತಗಳನ್ನು ಒಡೆಯಲಿದೆ.
ಬೂತ್ ಮಟ್ಟದಲ್ಲಿ ಪ್ಲಾನ್
ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರದ ಪ್ರಮುಖರಿಗೆ ಅಮಿತ್ ಶಾ ಎಲೆಕ್ಷನ್ ಪಾಠ ಹೇಳಲಿದ್ದು, ಮಧ್ಯಾಹ್ನ 11ರಿಂದ 1 ಗಂಟೆಯವರೆಗೂ ಅರಮನೆ ಮೈದಾನದಲ್ಲಿ ಸಭೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ನಾಯಕರ ಜತೆ ಸಭೆ ನಡೆಸಲಿದ್ದು, ಬೂತ್ ಮಟ್ಟದಲ್ಲಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಸಲಹೆ ನೀಡಲಿದ್ದಾರೆ.
ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಿರುವ ಬಗ್ಗೆ, ಮೋದಿಯವರ ಆಡಳಿತದ ಬಗ್ಗೆ ಹೆಚ್ಚು ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಬೂತ್ ಗೆದ್ದರೆ ಕ್ಷೇತ್ರ ಗೆಲ್ಲಬಹುದು, ಕ್ಷೇತ್ರ ಗೆದ್ದರೆ ದೇಶ ಗೆಲ್ಲಬಹುದು ಎಂಬ ಸರಳ ಸೂತ್ರ ನೀಡಿದ್ದು, ಉಳಿದಿರುವ 33 ದಿನಗಳಲ್ಲಿ 24×7 ಕೆಲಸ ಮಾಡುವಂತೆ ಸೂಚಿಸಲಿದ್ದಾರೆ ಶಾ.
ಅಸಮಾಧಾನಿತರ ಭೇಟಿ
ಮಧ್ಯಾಹ್ನ 2-20ರಿಂದ 3-50ರವರೆಗೆ ಪಕ್ಷದಲ್ಲಿ ಅಸಮಾಧಾನಗೊಂಡಿರುವ ನಾಯಕರ ಜತೆ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಈ ಬಾರಿ ಹಲವು ಕಡೆ ಬಂಡಾಯದ ಬಿಸಿ ಮುಟ್ಟಿದ್ದು, ಬಂಡಾಯದ ಬಿಸಿ ತಣಿಸಲು ಅಮಿತ್ ಶಾ ಮುಂದಾಗಿದ್ದಾರೆ.
ಚಿತ್ರದುರ್ಗ, ತುಮಕೂರು, ಬೆಳಗಾವಿ, ಕೊಪ್ಪಳ, ದಾವಣಗೆರೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಯಡಿಯೂರಪ್ಪ, ವಿಜಯೇಂದ್ರ ಅವರಿಂದ ಮನವೊಲಿಸುವ ಪ್ರಯತ್ನವಾಗಿದೆ. ಆದರೆ ಇನ್ನೂ ಸಂಪೂರ್ಣ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಸ್ವತಃ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದು ನಿಮ್ಮ ಜವಾಬ್ದಾರಿ, ನಿಮ್ಮ ಸಂಪೂರ್ಣ ಸಹಕಾರ ಕೊಡಬೇಕು. ಹೈಕಮಾಂಡ್ ಟೀಮ್ ರಾಜ್ಯದಲ್ಲಿ ಠಿಕಾಣಿ ಹಾಕಿ ಮಾನಿಟರ್ ಮಾಡಲಿದೆ. ಫಲಿತಾಂಶ ಹೆಚ್ಚು ಕಡಿಮೆಯಾದರೆ ನೀವೇ ಜವಾಬ್ದಾರರು ಎಂಬ ಸಂದೇಶ ರವಾನೆ ಮಾಡುವ ಸಾಧ್ಯತೆ ಇದೆ.
ಚನ್ನಪಟ್ಟಣದಲ್ಲಿ ರೋಡ್ ಶೋ
ಸಂಜೆ 5-30ಯಿಂದ 6 ಗಂಟೆಯವರೆಗೂ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕ್ಷೇತ್ರವಾಗಿದೆ.
ಡಿಕೆಶಿ ಬ್ರದರ್ಸ್ ಈ ಕ್ಷೇತ್ರದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದು, ಇಲ್ಲಿಗೆ ಚುನಾವಣಾ ಚಾಣಕ್ಯ ಎಂಟ್ರಿ ಕೊಟ್ಟಿದ್ದಾರೆ.
2014ರಿಂದ ಇಲ್ಲಿಯವರೆಗೂ ಅಮಿತ್ ಶಾ ಪ್ಲಾನ್ ಮಾಡಿದ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಈ ಬಾರಿ ಮೊದಲ ಕ್ಷೇತ್ರವಾಗಿ ಬೆಂಗಳೂರು ಗ್ರಾಮಾಂತರ ಆಯ್ಕೆ ಮಾಡಿಕೊಂಡಿದ್ದು, ಡಿಕೆ ಸುರೇಶ್ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಆಳಿಯ ಡಾ. ಮಂಜುನಾಥ್ ಕಣಕ್ಕೆ ಇಳಿದಿದ್ದಾರೆ. ಶತಾಯಗತಾಯ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಅಮಿತ್ ಶಾ ಪ್ಲಾನ್ ಮಾಡಿದ್ದು, ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಎಲೆಕ್ಷನ್ ಕಾವು ಹೆಚ್ಚಿಸಲಿದ್ದಾರೆ.
ಇದನ್ನೂ ಓದಿ: Amit Shah: ಡಿಕೆಶಿಯ ‘ಬಂಡೆ’ ಸಾಮ್ರಾಜ್ಯದಲ್ಲಿ ನಾಳೆ ಅಮಿತ್ ಶಾ ರಣಕಹಳೆ; ಇಲ್ಲಿದೆ ವೇಳಾಪಟ್ಟಿ