ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ (Lok Sabha Election 2024) ಕ್ಷೇತ್ರದಲ್ಲಿ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಬಿಜೆಪಿ- ಜೆಡಿಎಸ್ (BJP- JDS) ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ (Dr CN Manjunath) ಅವರ ವಿರುದ್ಧ ಮತ್ತೊಬ್ಬ ಡಾ.ಸಿ ಎನ್ ಮಂಜುನಾಥ್ ಎಂಬವರು ಸ್ಪರ್ಧಿಸಿದ್ದು, ಇವರು ನಕಲಿ ಅಂಕಪಟ್ಟಿ (Fake Certificate) ಸಲ್ಲಿಸಿರುವ ಕುರಿತು ದೂರು ನೀಡಲು ಬಿಜೆಪಿ ಮುಂದಾಗಿದೆ.
ಬಹು ಜನ ಭಾರತ ಪಕ್ಷದಿಂದ (ಬಿಬಿಪಿ) ಇನ್ನೊಬ್ಬ ಡಾ. ಸಿ.ಎನ್ ಮಂಜುನಾಥ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ನಾಮಪತ್ರ ಸಲ್ಲಿಕೆ ವೇಳೆ ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲು ಬಿಜೆಪಿ ಮುಂದಾಗಿದೆ.
ಚೆನ್ನೈ ಮೂಲದ ʼಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯʼದ ಸರ್ಟಿಫಿಕೇಟ್ ಎಂದು ಅವರು ವಿಳಾಸ ನಮೂದಿಸಿದ್ದಾರೆ. ಈ ಹೆಸರಿನ ವಿಶ್ವವಿದ್ಯಾಲಯ ಭಾರತದಲ್ಲೇ ಇಲ್ಲ ಎಂದು ಆರೋಪಿಸಲಾಗಿದೆ. ಯುಜಿಸಿ ಕೆಳಗೆ ಇಂಥಾ ಯಾವುದೇ ವಿಶ್ವವಿದ್ಯಾಲಯ ರಿಜಿಸ್ಟರ್ ಆಗಿಲ್ಲ. ಫೇಕ್ ಸರ್ಟಿಫಿಕೇಟ್ ತೋರಿಸಿ ಡಾಕ್ಟರ್ ಎಂದು ಹೇಳಿಕೊಳ್ಳಲು ತಂತ್ರ ಬಳಸಿದ್ದಾರೆ ಎಂದು ದೂರಲಾಗಿದೆ. ಸುಳ್ಳು ಸರ್ಟಿಫಿಕೇಟ್ ಹೊಂದಿರುವ ವ್ಯಕ್ತಿ ಹೇಗೆ ಡಾಕ್ಟರ್ ಆಗ್ತಾರೆ ಅಂತ ಮೈತ್ರಿ ನಾಯಕರ ಪ್ರಶ್ನೆಯಾಗಿದೆ.
ಚನ್ನರಾಯಪಟ್ಟಣ ಮೂಲದ ಡಾ.ಸಿಎನ್ ಮಂಜುನಾಥ್ ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರ ಇರುವ ಮತದಾರರಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್‌ನವರೇ ಅದೇ ಹೆಸರಿನ ಅಭ್ಯರ್ಥಿಯನ್ನು ಹಾಸನದಿಂದ ಕರೆತಂದು ಇಲ್ಲಿ ಕಣಕ್ಕಿಳಿಸುತ್ತಿದ್ದಾರೆಂಬ ಆರೋಪವನ್ನು ಬಿಜೆಪಿ- ಜೆಡಿಎಸ್ ಮಾಡಿವೆ. ಇದನ್ನು ಬಿಬಿಪಿ ಅಭ್ಯರ್ಥಿ ತಳ್ಳಿಹಾಕಿದ್ದಾರೆ.
“ಇದೆಲ್ಲವೂ ಬಿಜೆಪಿಯವರು ಹೇಳುವ ಸುಳ್ಳು.. ನಾನು ಈ ದೇಶದ ಪ್ರಜೆ, ಸಂವಿಧಾನದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ. ನನಗೆ ಗ್ಲೋಬಲ್ ಹ್ಯೂಮನ್ ಫೀಸ್ ಯೂನಿವರ್ಸಿಟಿಯಿಂದ ಪ್ರಮಾಣಪತ್ರ ಸಿಕ್ಕಿದೆ. ಅದು ಅಮೇರಿಕಾದಲ್ಲಿರುವ ಕೇಂದ್ರ ಯೂನಿವರ್ಸಿಟಿ, ನನಗೆ ಸಿಕ್ಕಿರೋದು ಚೆನ್ನೈಯ ಅದರ ಅಂಗ ಸಂಸ್ಥೆಯಿಂದ. ಬಿಜೆಪಿಯವರು ಬೇಕಾದ್ರೆ ತನಿಖೆ ಮಾಡಿಸಲಿ, ನಾನು ಸಿದ್ಧ” ಎಂದಿದ್ದಾರೆ.
ಸ್ವಂತ ಜಿಲ್ಲೆ ಹಾಸನ ಬಿಟ್ಟು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಕುರಿತು, “ನಮ್ಮ ಪಕ್ಷದಿಂದ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಹೇಳಿದ್ದಾರೆ. ನನ್ನ ಸ್ಪರ್ಧೆಯಲ್ಲಿ ಯಾವುದೇ ತಂತ್ರಗಾರಿಕೆ ಇಲ್ಲ. ಇವೆಲ್ಲವೂ ಬಿಜೆಪಿಯವರ ಅಪಪ್ರಚಾರ” ಎಂದಿದ್ದಾರೆ ಅವರು.
ನಾಲ್ವರು ಮಂಜುನಾಥರು!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅಷ್ಟೇ ಅಲ್ಲದೆ ಮಂಜುನಾಥ್ ಹೆಸರಿನ ಇನ್ನೂ ನಾಲ್ವರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಹುಜನ ಭಾರತ ಪಾರ್ಟಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್, ಪಕ್ಷೇತರರಾಗಿ ಸಿ.ಮಂಜುನಾಥ್, ಎನ್.ಮಂಜುನಾಥ್, ಕೆ.ಮಂಜುನಾಥ್ ಎಂಬವರು ಕೂಡ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ಇಷ್ಟೊಂದು ಮಂಜುನಾಥರು ಎಲ್ಲಿಂದ ಉದ್ಭವವಾದರು ಎಂದು ಮತದಾರರು ತಲೆ ಕೆರೆದುಕೊಳ್ಳುವಂತಾಗಿದೆ.
ಇಂದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ, ಖ್ಯಾತ ಹೃದಯತಜ್ಞ ಡಾ. ಸಿ.ಎನ್ ಮಂಜುನಾಥ್ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 10 ಘಂಟೆಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಎಸ್ಪಿ ಕಚೇರಿ ಸರ್ಕಲ್‌ನಿಂದ ಡಿಸಿ ಕಚೇರಿವರೆಗೂ ಬೃಹತ್ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಬಿಎಸ್‌ವೈ, ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಸಿಪಿವೈ, ಶಾಸಕರಾದ ಮುನಿರತ್ನ, ಎಂ. ಕೃಷ್ಣಪ್ಪ, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಮುಂತಾದವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Lok Sabha Election 2024: ಇಂದು ತೇಜಸ್ವಿ ಸೂರ್ಯ, ಡಾ.ಮಂಜುನಾಥ್, ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ, ರೋಡ್ ಶೋಗಳ ಭರಾಟೆ