ಕೋಲಾರ: ಕೋಲಾರ ಲೋಕಸಭೆ ಕ್ಷೇತ್ರದಲ್ಲಿ (Kolar constituency) ಕಾಂಗ್ರೆಸ್ ಪಕ್ಷದಿಂದ (Congress) ಸ್ಪರ್ಧಿಸುವ (Lok Sabha Election) ಅಭ್ಯರ್ಥಿಯ ಹೆಸರು ಫೈನಲ್ ಆಗಿದ್ದು, ವರಿಷ್ಠರು ಅಳೆದು ತೂಗಿ ಕೆ.ಎಚ್. ಮುನಿಯಪ್ಪ (K.H. Muniyappa) ಅವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಹಿಂದೆಯೇ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು, ರಮೇಶ್ ಕುಮಾರ್ (Ramesh Kumar) ಟೀಮ್ ಕೆರಳಿದೆ.
ಚಿಕ್ಕಪೆದ್ದಣ್ಣ ಮುನ್ನಡೆಯಿಂದ ಕೆರಳಿರುವ ರಮೇಶ್ ಕುಮಾರ್ ಟೀಮ್ ರಾಜೀನಾಮೆ ಬೆದರಿಕೆ ಅಸ್ತ್ರ ಪ್ರಯೋಗ ಮಾಡಿದೆ. ಹಾಲಿ ಎಂಎಲ್‌ಸಿ, ಹಾಲಿ ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೇಡಿಕೆಗೆ ಹೈಕಮಾಂಡ್ ಮಣಿಯದಿದ್ದರೆ ರಾಜೀನಾಮೆ ಕೊಡುತ್ತೇವೆ ಎಂದು ಕೋಲಾರ ಶಾಸಕರು ಹೇಳಿದ್ದಾರೆ.
ಎಂಎಲ್‌ಸಿಗಳಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸೇರಿ ಪ್ರಮುಖ ಶಾಸಕರು, ಮುನಿಯಪ್ಪ ಅಳಿಯನಿಗೆ ಟಿಕೇಟ್ ನೀಡಿದರೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ ಪ್ರಕಾರ ಕೋಲಾರವನ್ನು ಜೆಡಿಎಸ್ ಪಡೆದುಕೊಂಡಿದ್ದು, ಮಲ್ಲೇಶ್ ಬಾಬು ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಪ್ರಚಾರ ಆರಂಭಿಸಿವೆ.
ಈ ನಡುವೆ ನಾಲ್ಕು ಕ್ಷೇತ್ರಗಳ ಟಿಕೆಟ್ ಬಾಕಿ ವಿಚಾರ ಇಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ಕೋಲಾರದ ಕುರಿತು ಪ್ರಶ್ನಿಸಿದ ಸುದ್ದಿಗಾರರಿಗೆ, “ಅರೇ ಎಲ್ಲ ಆಗಿದೆಯಲ್ಲ, ಮುನಿಯಪ್ಪ ಇಲ್ಲೇ ಇದ್ದಾರೆ ನೋಡಿ, ಆಗಿದೆ. ಕೇಳಿ ಅವರನ್ನೇ” ಎಂದು ಖರ್ಗೆ ಉತ್ತರಿಸಿದ್ದಾರೆ. ತೀರ್ಮಾನ ಮುನಿಯಪ್ಪ ಪರವಾಗಿ ಆಗಿದೆ ಎಂದು ಇದರಿಂದ ಊಹಿಸಲಾಗಿದೆ.
ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, “ಟಿಕೆಟ್ ಸಂಜೆ ಕ್ಲಿಯರ್ ಆಗಬಹುದು. ಟಿಕೆಟ್‌ಗೆ ಮನವಿ ಮಾಡಿದ್ದೇವೆ,” ಎಂದಿದ್ದಾರೆ. “ನಾನು 7 ಬಾರಿ ಸಂಸದನಾಗಿದ್ದೆ. ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಮಾಜಿ ಶಾಸಕರು ಎಲ್ಲರಿಗೂ ಮನವಿ ಮಾಡಿದ್ದೇವೆ. ಅವರೂ ಕೇಳಿದ್ದಾರೆ, ನಾವೂ ಕೇಳಿದ್ದೇವೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ. ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು. ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿ ಎರಡೂ ಕ್ಷೇತ್ರ ಗೆಲ್ಲಿಸಬೇಕು. ರಮೇಶ್ ಕುಮಾರ್ ಹಾಗೂ ನಾವು ಎಲ್ಲಾ ಒಟ್ಟಿಗೆ ಸೇರಿ ಮಾತನಾಡಿದ್ದೇವೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ತೀರ್ಮಾನ ಆಗಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸಬೇಕು,” ಎಂದು ಹೇಳಿದ್ದಾರೆ.
ಶಾಸಕರ ರಾಜೀನಾಮೆ ಬೆದರಿಕೆ ವಿಚಾರದಲ್ಲಿ ಮುನಿಯಪ್ಪ, “ಎಲ್ಲಾ ಅವರನ್ನೇ ಕೇಳಬೇಕು,” ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಕೋಲಾರ ಟಿಕೆಟ್ ಮಿಸ್; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!