ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಭರಾಟೆ ಜೋರಾಗುತ್ತಲೇ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟವೂ ದಿನೇದಿನೆ ಜಾಸ್ತಿಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (S R Vishwanath) ಅವರು ತಮ್ಮದೇ ಪಕ್ಷದ ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ.ಕೆ. ಸುಧಾಕರ್ (Dr K Sudhakar) ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಡಾ.ಕೆ.ಸುಧಾಕರ್ ಅವರ ಹೆಸರಲ್ಲಿ ಮತ ಕೇಳಿದರೆ ಪಕ್ಷಕ್ಕೇ ಮೈನಸ್ ಆಗುತ್ತದೆ. ಹಾಗಾಗಿ, ಮೋದಿ ಹೆಸರಿನಲ್ಲಿ ಮತ ಕೇಳುತ್ತೇವೆ” ಎಂದು ಹೇಳಿದ್ದಾರೆ.
ಸುಧಾಕರ್ ಅವರ ಮನೆಗೆ ಭಾನುವಾರ (ಮಾರ್ಚ್ 31) ಭೇಟಿ ನೀಡಿದ ಬಳಿಕ ಸೋಮವಾರ (ಏಪ್ರಿಲ್ 1) ಯಲಹಂಕದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಟಿಕೆಟ್ ಸಿಗದಿದ್ದಾಗ ಅಸಮಾಧಾನ ಇರುವುದು ಸಹಜ. ಟಿಕೆಟ್ ಸಿಗದಿದ್ದರೆ ಮನೆಯಲ್ಲಿ ಇರುತ್ತಿದ್ದೆ ಎಂಬುದಾಗಿ ಸುಧಾಕರ್ ಅವರು ಹೊಸಕೋಟೆಯಲ್ಲಿ ಹೇಳಿದ್ದಾರೆ. ಆದರೆ, ನಾನು ಆ ರೀತಿ ಎಲ್ಲೂ ಹೇಳಿಲ್ಲ. ನಮಗೆ ಪಕ್ಷದ ಹಿತಾಸಕ್ತಿ ಬಿಟ್ಟರೆ ಸ್ವಾರ್ಥ ಎಂಬುದಿಲ್ಲ. ಆದರೆ, ಮಾಧ್ಯಮಗಳನ್ನು ಕರೆತಂದು ಸಿಂಪತಿ ಕ್ರಿಯೇಟ್ ಮಾಡುವ ಕೆಲಸ ಮಾಡಬಾರದು” ಎಂದು ಹೇಳಿದರು.
“ನಾಲ್ಕೈದು ದಿನಗಳ ಹಿಂದೆ ಭೇಟಿ ಮಾಡಬೇಕು ಎಂದು ಮೆಸೇಜ್ ಮಾಡಿದ್ದರು ಅಷ್ಟೆ. ಮೆಸೇಜ್ ಮಾಡಿದ್ದಾರೆಯೇ ಹೊರತು ಕರೆ ಮಾಡಿಲ್ಲ. ನಾನು ಸುಧಾಕರ್ ಅವರನ್ನು ಒಬ್ಬನೇ ಭೇಟಿ ಮಾಡುವುದಿಲ್ಲ. ಮುಖಂಡರ ಜತೆ ತೆರಳಿ ಭೇಟಿ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದೆ. ಸುಧಾಕರ್ ಬರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಹಾಗಾಗಿ, ನಾನು ನನ್ನ ಕೆಲಸಗಳಿಗೆ ಹೋದೆ. ಭೇಟಿ ಮಾಡಲು ಬರುವವರು ಒಬ್ಬರೇ ಬಂದು ಭೇಟಿ ಮಾಡಬೇಕು. ಮಾಧ್ಯಮಗಳನ್ನು ಕರೆಸಿ ಸಿಂಪತಿ ಕ್ರಿಯೇಟ್ ಮಾಡಬಾರದು. ನಮ್ಮ ಕ್ಷೇತ್ರದಲ್ಲಿ ನಾಳೆ ಮತದಾನ ನಡೆದರೂ ಮತ ಹಾಕಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.
ಗೇಟ್ ಒಳಗೆ ಬಿಟ್ಟಿಲ್ಲ ಎಂಬುದು ಸುಳ್ಳು
ಮಾಜಿ ಸಚಿವರೂ ಆದ ಸುಧಾಕರ್ ಅವರನ್ನು ಮನೆಯೊಳಗೆ ಬಿಟ್ಟಿಲ್ಲ ಎಂಬ ಕುರಿತು ಕೂಡ ವಿಶ್ವನಾಥ್ ಮಾತನಾಡಿದರು. “ಯಲಹಂಕದವರನ್ನು ಖಳನಾಯಕರು ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಿದ್ದಾರೆ. ಗೇಟ್ ಒಳಗೆ ಬಿಟ್ಟಿಲ್ಲ ಎಂಬುದಾಗಿ ಆರೋಪ ಮಾಡಿದ್ದಾರೆ. ನಮ್ಮ ಮನೆಗೆ ಕಾರ್ಯಕರ್ತರು ಸೇರಿ ಯಾರೇ ಬಂದರೂ ನೀರು ಕೊಟ್ಟು ಉಪಚಾರ ಮಾಡುತ್ತೇವೆ. ಮಾಜಿ ಸಚಿವರನ್ನು ಬೀದಿಯಲ್ಲಿ ನಿಲ್ಲಿಸುವ ನಿಕೃಷ್ಟ ನಾನಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಸೇರಿ ಎಲ್ಲರಿಗೂ ನನ್ನ ಬಗ್ಗೆ ಗೌರವ ಇದೆ. ಹಾಗಾಗಿ ನಾನು ಸ್ಪಷ್ಟೀಕರಣ ನೀಡುತ್ತಿದ್ದೇನೆ” ಎಂದರು. ಅಲೋಕ್ ಅವರಿಗೆ ಸೀಟ್ ಸಿಕ್ಕಿಲ್ಲ ಬೇಜಾರಾಗಿದ್ದಾರೆ ಅಂತ ಹೇಳುವುದನ್ನ ಬಿಡಬೇಕು.
ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್ ಅವರಿಗೆ ಲೋಕಸಭೆ ಟಿಕೆಟ್ ಸಿಗುತ್ತದೆ ಎಂದೇ ಹೇಳಲಾಗುತ್ತಿದೆ. ಈ ಕುರಿತು ಅಲೋಕ್ ವಿಶ್ವನಾಥ್ ಅವರು ಕೂಡ ಬಹಿರಂಗವಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ಸಿಕ್ಕರುವ ಕಾರಣ ಎಸ್.ಆರ್.ವಿಶ್ವನಾಥ್ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸುದ್ದಿಗೋಷ್ಠಿ ಮೂಲಕ ವಿಶ್ವನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ