ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ರಾಜ್ಯದ ಪ್ರಚಾರ ಕಣಕ್ಕೆ ಇಂದು ಕಾಂಗ್ರೆಸ್ (congress) ರಾಷ್ಟ್ರೀಯ ನಾಯಕರ ಎಂಟ್ರಿಯಾಗಲಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಮಂಡ್ಯ (Mandya) ಹಾಗೂ ಕೋಲಾರದಲ್ಲಿ (Kolar) ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ, ರ್ಯಾಲಿ ನಡೆಸಲಿದ್ದಾರೆ.
ಇಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮನದಿಂದ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ಮಂಡ್ಯದ ವಿವಿ ಆವರಣದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ- 2 ಸಮಾವೇಶದಲ್ಲಿ ರಾಹುಲ್ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಮಾವೇಶ ನಡೆಯಲಿದೆ.
ದೆಹಲಿಯಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬರಲಿರುವ ರಾಹುಲ್, ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಹೆಲಿಪ್ಯಾಡ್‌ನಿಂದ ನೇರವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 3 ಗಂಟೆ ವೇಳೆಗೆ ರಾಹುಲ್ ಗಾಂಧಿ ಕೋಲಾರಕ್ಕೆ ತೆರಳಲಿದ್ದಾರೆ.
ಈಗಾಗಲೇ ಮಂಡ್ಯದಲ್ಲಿ ನಾಲ್ಕು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿರುವ ಕಾಂಗ್ರೆಸ್ ನಾಯಕರಿಗೆ, ರಾಹುಲ್ ಗಾಂಧಿ ಆಗಮನದಿಂದ ಶಕ್ತಿ ಸಿಗಲಿದೆಯಾ ಎಂದು ನೋಡಬೇಕಿದೆ. ಭಾರತ್ ಜೋಡೋ ಯಾತ್ರೆ, ಗ್ಯಾರಂಟಿ ಯೋಜನೆಯಿಂದ ಅಧಿಕಾರಕ್ಕೆ ಬಂದಿದ್ದು, ರಾಹುಲ್ ಗಾಂಧಿ ಅವರು ಮಂಡ್ಯಕ್ಕೆ ಬರ್ತಿರೋದು ನಮಗೆ ಮತ್ತಷ್ಟು ಬಲ ಬಂದಂತೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ಹೂಡಿರುವ ಸಚಿವ ಚಲುವರಾಯಸ್ವಾಮಿ, ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಅಖಾಡದಲ್ಲಿ ತೊಡೆ ತಟ್ಟಿದ್ದಾರೆ.
ಕೋಲಾರದಲ್ಲಿ ಗೌತಮ್ ಪರ ಪ್ರಚಾರ
ಇಂದು ಸಂಜೆ 3 ಗಂಟೆಗೆ ಕೋಲಾರದ ಮಾಲೂರು ತಾಲೂಕು ಚಿಕ್ಕೊಂಡಹಳ್ಳಿ ಗೇಟ್ ಬಳಿ ನಡೆಯುವ ಕಾಂಗ್ರೆಸ್ ಪ್ರಚಾರಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿ, ಕೋಲಾರ ಮೀಸಲು ಕ್ಷೇತ್ರದ ಅಭ್ಯರ್ಥಿ ಕೆ.ವಿ ಗೌತಮ್ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ, ರಾಜ್ಯದ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಮಾಲೂರು ಪಟ್ಟಣದ ಹೊರವಲಯದ ಚಿಕ್ಕೊಂಡಹಳ್ಳಿ ಬಳಿ ಸಮಾವೇಶಕ್ಕೆ ವೇದಿಕೆ ಸಿದ್ಧತೆ ಮಾಡಲಾಗಿದ್ದು, ಹೊಸಕೋಟೆ –ಮಾಲೂರು ಗಡಿ ಭಾಗದಲ್ಲಿನ ಕಟ್ಟಿಗೇನಹಳ್ಳಿ ಸಮೀಪದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಜನರವನ್ನು ಸೇರಿಸುವ ಉದ್ದೇಶ ಕಾಂಗ್ರೆಸ್‌ಗೆ ಇದೆ.
ಕೋಲಾರದಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವಿಕೆಯ ಸಮಸ್ಯೆ ಬಿಗಡಾಯಿಸಿತ್ತು. ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳು ಟಿಕೆಟ್‌ಗಾಗಿ ಜಿದ್ದಿಗೆ ಬಿದ್ದಿದ್ದವು. ಕೊನೆಯಲ್ಲಿಈ ಎರಡೂ ಬಣಗಳಿಗೆ ನೀಡದೆ ಮೂರನೆಯವರಿಗೆ ನೀಡುವ ಸೂತ್ರದ ಮೊರೆ ಹೋಗಿತ್ತು ಕಾಂಗ್ರೆಸ್ ಹೈಕಮಾಂಡ್. ಆದರೆ ಬಣಗಳ ಮುನಿಸು ಶಮನಗೊಂಡಿಲ್ಲ.
ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮೂರು ಬಾರಿ ಬಂದು ಬಿರುಗಾಳಿಯಂತೆ ಪ್ರವಾಸ ನಡೆಸಿದ್ದಾರೆ. ಹಲವಾರು ಕಡೆಗಳಲ್ಲಿ ಪ್ರಚಾರ ಸಭೆ, ರ್ಯಾಲಿಗಳನ್ನು ಅವರು ನಡೆಸಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಶಕ್ತಿ ತುಂಬಿದ್ದಾರೆ. ಆದರೆ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯದ ಚುನಾವಣೆ ಪ್ರಚಾರ ಕಣಕ್ಕೆ ಕಾಲಿಡುತ್ತಿದ್ದಾರೆ. ಇದುವರೆಗೂ ಅವರು ನ್ಯಾಯಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: Lok Sabha Election 2024: ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ, ಪವನ್ ಕಲ್ಯಾಣ್ ಎಂಟ್ರಿ