ಕೋಲಾರ: ರಾಜಕಾರಣಿಗಳ ಅದೃಷ್ಟ ದೈವ ಎಂದೇ ಖ್ಯಾತಿಯಾಗಿರುವ ಕೋಲಾರದ ಕುರುಡು ಮಲೆ ವಿನಾಯಕ ದೇವಾಲಯದಿಂದ (Kurudu male Vinayak Temple) ಇಂದು ಕಾಗ್ರೆಸ್ ನಾಯಕರ ತಂಡ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಅಭಿಯಾನ ಪ್ರಜಾಧ್ವನಿ ಯಾತ್ರೆ (Praja Dhwani Yatre) ಆರಂಭಿಸಲಿದೆ.
ಇಂದು ಕುರುಡು ಮಲೆ ವಿನಾಯಕ ದೇವಾಲಯಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಸಚಿವರ ತಂಡ ಭೇಟಿ ನೀಡಲಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಹಿನ್ನಲೆ ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆ ಹಾಗೂ ಕಾಂಗ್ರೆಸ್ ಮತ ಪ್ರಚಾರಕ್ಕಾಗಿ ಪ್ರಜಾಧ್ವನಿ ಯಾತ್ರೆಗೆ ಸಿಎಂ ರಿಂದ ಚಾಲನೆ ನೀಡಲಿದ್ದಾರೆ.
ಇಂದು ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದಲ್ಲಿ ಮುಳಬಾಗಿಲಿನ ಕುರುಡುಮಲೆ ದೇವಾಲಯಕ್ಕೆ ಭೇಟಿ ಕೊಡಲಿದ್ದಾರೆ. ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ಕೊಡಲಿದ್ದಾರೆ.
ಕುರುಡುಮಲೆಯಿಂದ ಮುಳಬಾಗಿಲು ಪಟ್ಟಣಕ್ಕೆ ಆಗಮಿಸಿ ದರ್ಗಾಗೆ ಸಿಎಂ ಭೇಟಿ ಕೊಡಲಿದ್ದಾರೆ. ಡಾ.ಬಿಆರ್ ಅಂಬೇಡ್ಕರ್ ವೃತ್ತದಿಂದ ಸೌಂದರ್ಯ ಸರ್ಕಲ್‌ವರೆಗೂ ರೋಡ್ ಶೋ ನಡೆಲಿದ್ದಾರೆ. ಸೌಂದರ್ಯ ಸರ್ಕಲ್ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಸಿಎಂ, ಡಿಸಿಎಂ ಹಾಗೂ ಸಚಿವರ ತಂಡ ಮತ ಯಾಚನೆ ಮಾಡಲಿದೆ. ಜಿಲ್ಲೆಯ ಎಲ್ಲ ಶಾಸಕರು ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಭದ್ರತೆ ಕಲ್ಪಿಸಲಾಗಿದೆ.
ಒಂದು ವಾರದ ಹಿಂದೆಯೇ ಕುರುಡು ಮಲೆಯಿಂದಲೇ ಕಾಂಗ್ರೆಸ್‌ನ ಪ್ರಚಾರ ಅಭಿಯಾನ ಶುರುವಾಗಬೇಕಿತ್ತು. ಆದರೆ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಅಂತಿಮಗೊಳ್ಳದ ಕಾರಣ ಅಭಿಯಾನ ಶುರುವಾಗಿರಲಿಲ್ಲ. ಕೋಲಾರದ ಕಾಂಗ್ರೆಸ್ ಮುಖಂಡರಾದ ಕೆ.ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಅವರ ನಡುವೆ, ತಮ್ಮವರಿಗಾಗಿ ಟಿಕೆಟ್ ಪಡೆಯುವ ಲಾಬಿ ಹಾಗೂ ಮುಸುಕಿನ ಗುದ್ದಾಟ ನಡೆದಿತ್ತು. ಕಡೆಗೆ ಇದು ತೃತೀಯ ವ್ಯಕ್ತಿಯಾದ ಕೆವಿ ಗೌತಮ್ ಅವರಿಗೆ ಟಿಕೆಟ್ ನೀಡುವಲ್ಲಿ ಪರ್ಯವಸಾನಗೊಂಡಿದೆ.