ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ (Congress- JDS) ಮೈತ್ರಿಕೂಟ ಸರ್ಕಾರ ರಚಿಸಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಸಿಎಂ ಆಗಿಸಿದ್ದೇ ನಾನು. ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಟೀಕಿಸಿದ್ದಾರೆ. ಈ ಬಾರಿ (Lok Sabha Election 2024) ಒಕ್ಕಲಿಗರಿಗೆ (vokkaligas) 8 ಟಿಕೆಟ್ ನೀಡಿದ್ದೇವೆ, ನೀವೇ ಗೆಲ್ಲಿಸಿಕೊಳ್ಳಬೇಕು ಎಂದು ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ.
ಒಕ್ಕಲಿಗರ ಮತಬೇಟೆಗೆ ಖುದ್ದು ಫೀಲ್ಡ್‌ಗಿಳಿದಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಮೈಸೂರಿನಲ್ಲಿ ನಡೆದ ಒಕ್ಕಲಿಗ ಸಭೆಯಲ್ಲಿ ಭಾಗವಹಿಸಿ ಈ ಮಾತುಗಳನ್ನು ಆಡಿದ್ದು, ಮೈತ್ರಿಕೂಟ ಸರ್ಕಾರ ರಚನೆಯಾದಾಗಿನ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಜೊತೆಗೆ, ಒಕ್ಕಲಿಗ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಮೈಸೂರಿನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
“2018ರಲ್ಲಿ ನಾವು 80 ಸೀಟ್ ಗೆದ್ದೆವು. ಬಿಜೆಪಿಯವರು 104 ಸ್ಥಾನ ಗೆದ್ದರು. ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ನಾನೇ ಮುಂದಾಳತ್ವ ತೆಗೆದುಕೊಂಡು ಹಳೆಯದನ್ನು ಮರೆತೆ. ಸಮ್ಮಿಶ್ರ ಸರ್ಕಾರ ರಚನೆಯಾಯ್ತು. ನಿನ್ನನ್ನು ಡಿಸಿಎಂ ಮಾಡುತ್ತೇನೆ ಎಂದು ಆಗಲೇ ಹೇಳಿದ್ದರು. ಅಧಿಕಾರ ಕೊಟ್ಟ ಮೇಲೆ ಉಳಿಸಿಕೊಳ್ಳುವುದು ಯಾರ ಜವಾಬ್ದಾರಿ? ನಾನು ಬರೀ ಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡೆ” ಎಂದು ಡಿಕೆಶಿ ಹೇಳಿದರು.
“ಸಿಎಂ ಹಾಗೂ ಡಿಸಿಎಂ ಇಬ್ಬರೂ ಒಕ್ಕಲಿಗರು ಆಗುತ್ತಾರೆಂದು ಕೊನೆಗೆ ಡಾ.ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದೆವು. ರಾಹುಲ್ ಗಾಂಧಿ ನನಗೆ ಇಂಧನ ಮತ್ತು ನೀರಾವರಿ ಖಾತೆ ಕೊಟ್ಟರು.
ಕುಮಾರಸ್ವಾಮಿಗಳು ಯಾವುದೋ ಫಂಕ್ಷನ್‌ಗೋಸ್ಕರ ಅಮೇರಿಕಾಗೆ ಹೋದರು. ಪರಿಸ್ಥಿತಿ ಸರಿಯಿಲ್ಲ, ಅನುಸರಿಸಿಕೊಂಡು ಹೋಗಿ ಅಂತ ನಾವು ಹೇಳ್ತಾ ಇದ್ದೆವು. ಮನೆಯಿಂದ ಹೊರಗಡೆ ಬರಲೇ ಇಲ್ಲ. ಹೋಟೆಲ್‌ನಿಂದ ಹೊರಗಡೆ ಬರಲೇ ಇಲ್ಲ. ಕ್ವಾರ್ಟರ್ಸ್‌ನಲ್ಲೂ ಇರಲಿಲ್ಲ. ದೇವೇಗೌಡರು ಸಹ ಕ್ವಾರ್ಟರ್ಸ್‌ನಲ್ಲಿ ಇರಲು ಹೇಳಿದರು. ಆದರೆ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಬೀಗ ಹಾಕಿಕೊಂಡು ಕುಳಿತರೆ ಹೇಗೆ ರಾಜಕಾರಣ ಮಾಡಲು ಸಾಧ್ಯ? ನಮ್ಮವರೆಲ್ಲಾ ಸೇರಿ ವಿಶ್ವನಾಥ್, ಸೋಮಶೇಖರ್, ನಾರಾಯಣ ಗೌಡ ದಳದವರು ಎಲ್ಲಾ ಸೇರಿ ಜನ ಅಧಿಕಾರದಿಂದ ಕೆಳೆಗಿಳಿಸಿದರು” ಎಂದು ಡಿಕೆಶಿ ಟೀಕಿಸಿದರು.
“ಯಾಗಕ್ಕಿಂತ ಯೋಗಕ್ಷೇಮ ತುಂಬ ಮುಖ್ಯ. ನಾನು ವಿಷ ಹಾಕಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಬಾಂಬೆಗೆ ಹೋಗಿ ಇವರಿಗಾಗಿ ಹೋರಾಟ ಮಾಡಿದೆ. ಜಿ.ಟಿ ದೇವೇಗೌಡ, ಶಿವಲಿಂಗೇಗೌಡ ಎಲ್ಲಾ ಇದ್ದರು. ಪೊಲೀಸರು ಗಲಾಟೆಯಾಗುತ್ತೆ ಅಂತ ಬಾಂಬೆಯಿಂದ ಹೊರಗೆ ಕಳುಹಿಸಿದರು. ಇಷ್ಟೆಲ್ಲಾ ಯಾರಿಗೋಸ್ಕರ ಮಾಡಿದ್ದು?” ಎಂದು ಡಿಕೆಶಿ ನೆನಪಿಸಿಕೊಂಡಿದ್ದಾರೆ.
“ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ನಾನು. ಈ ಬಾರಿ ಒಕ್ಕಲಿಗರಿಗೆ ಎಂಟು ಸ್ಥಾನ ಕೊಟ್ಟಿದ್ದೇವೆ. ಅದನ್ನು ಉಳಿಸಿಕೊಳ್ಳುವ ಕೆಲಸ ನೀವು ಮಾಡಬೇಕು. ನಾನು ಟಿಕೆಟ್ ಕೊಡಿಸಿದ್ದೇನೆ. ಉಳಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು. ಯಡಿಯೂರಪ್ಪ ಸಿಎಂ ಆಗ್ತಾರೆ ಅನ್ನುವ ಕಾರಣಕ್ಕೆ ನಾನೇ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದು. ಈಗ ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದಾರೆ. ಆವತ್ತು ರಾಹುಲ್ ಗಾಂಧಿ ನನ್ನನ್ನ ಡಿಸಿಎಂ ಆಗು ಅಂದ್ರು, ಆದರೆ ನಾನು ಸಚಿವ ಸ್ಥಾನಕ್ಕೆ ತೃಪ್ತಿ ಪಟ್ಟೆ. ನಾವು ದೇವೇಗೌಡರ ಕುಟುಂಬಕ್ಕೆ ಒಳ್ಳೆಯದೇ ಮಾಡಿದ್ದೇವೆ. ಆದರೆ ನಮ್ಮ ವಿರುದ್ಧ ಅವರು ರಾಜಕಾರಣ ಮಾಡಿದ್ದಾರೆ. ಈ ಚುನಾವಣೆ ನನ್ನ ಶಕ್ತಿ ಹೆಚ್ಚಿಸುವ ಚುನಾವಣೆ. ಎಲ್ಲವೂ ದೆಹಲಿಯಲ್ಲಿ ನಿರ್ಧಾರ ಆಗಿದೆ” ಎಂದು ಭಾವನಾತ್ಮಕವಾಗಿ ಒಕ್ಕಲಿಗರನ್ನು ಸೆಳೆಯುವ ಮಾತುಗಳನ್ನು ಡಿಕೆಶಿ ಆಡಿದರು.
ಇದನ್ನೂ ಓದಿ: Lok Sabha Election 2024: ನಿಮ್ಮ ರಾಜಕೀಯಕ್ಕೆ ನನ್ನ, ಮಠದ ಹೆಸರು ಬಳಸಬೇಡಿ: ಒಕ್ಕಲಿಗ ನಾಯಕರಿಗೆ ನಿರ್ಮಲಾನಂದನಾಥ ಶ್ರೀ ಸೂಚನೆ