ಬೆಳಗಾವಿ: ಬೆಳಗಾವಿಯಿಂದ (Belagavi) ಹಾಗೂ ಇದೇ ಮೊದಲ ಬಾರಿಗೆ ಕೆನರಾದಿಂದ (Canara) ಲೋಕಸಭೆ ಚುನಾವಣೆ (Lok Sabha Election 2024) ಕಣಕ್ಕೆ ಇಳಿಯುವ ದಾಷ್ಟ್ಯವನ್ನು ನಾಡದ್ರೋಹಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ (Maharashtra Ekikaran Samiti – MES) ತೋರಿಸಿದೆ. ಬೆಳಗಾವಿ ಹಾಗೂ ಕೆನರಾ ಎರಡೂ ಲೋಕಸಭೆ ಕ್ಷೇತ್ರಗಳಿಂದ ಎಂಇಎಸ್‌ನಿಂದ ಇಬ್ಬರು ಸ್ಪರ್ಧಿಸಲು ಮುಂದಾಗಿದ್ದಾರೆ.
ಇದೇ ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರಕ್ಕೂ ನಾಡದ್ರೋಹಿ ಎಂಇಎಸ್ ಎಂಟ್ರಿ ಕೊಟ್ಟಿದೆ. ಬೆಳಗಾವಿ ಹಾಗೂ ಕೆನರಾ ಎರಡೂ ಲೋಕಸಭೆ ಕ್ಷೇತ್ರಗಳಿಂದ ಸ್ಪರ್ಧೆಗೆ ಎಂಇಎಸ್ ನಿರ್ಧರಿಸಿದ್ದು, ಎರಡೂ ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎಂಇಎಸ್ ಅಭ್ಯರ್ಥಿ ಆಗಿ ಮಹಾದೇವ ಪಾಟೀಲ ಹಾಗೂ ಕೆನರಾ ಕ್ಷೇತ್ರಕ್ಕೆ ಎಂಇಎಸ್ ಅಭ್ಯರ್ಥಿ ಆಗಿ ನಿರಂಜನ ಸರದೇಸಾಯಿ ಕಣಕ್ಕೆ ಇಳಿದಿದ್ದಾರೆ. 51 ವರ್ಷಗಳಿಂದ ಎಂಇಎಸ್ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ಮಹಾದೇವ ಪಾಟೀಲನಿಗೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಎಂಇಎಸ್ ಮುಖಂಡರು ಟಿಕೆಟ್ ನೀಡಿದ್ದಾರೆ.
15 ವರ್ಷಗಳಿಂದ ಸಮಿತಿಯಲ್ಲಿರುವ ನಿರಂಜನ್ ಕೆನರಾ ಲೋಕಸಭಾ ಕ್ಷೇತ್ರದ ಮೊದಲ ಎಂಇಎಸ್ ಅಭ್ಯರ್ಥಿಯಾಗಿದ್ದಾನೆ. ಎಂಇಎಸ್ ಸ್ಪರ್ಧೆಯಿಂದ ಎರಡೂ ಕ್ಷೇತ್ರಗಳ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಲ್ಲಿ ಮತ ವಿಭಜನೆ ಆತಂಕ ಶುರುವಾಗಿದೆ. ಇಬ್ಬರೂ ತಮ್ಮ ಕನ್ನಡವಿರೋಧಿ ಚಟುವಟಿಕೆ ಹಾಗೂ ಭಾಷಣಗಳಿಂದ ಇಲ್ಲಿ ಖ್ಯಾತರಾಗಿದ್ದಾರೆ. ಈ ಹಿಂದಿನ ಕಾರ್ಪೊರೇಷನ್ ಚುನಾವಣೆಗಳ ಸಂದರ್ಭದಲ್ಲೂ ಕನ್ನಡವಿರೋಧವಾಗಿ ಇವರು ಸಾಕಷ್ಟು ಕೆಲಸ ಮಾಡಿದ್ದರು. ಬೆಳಗಾವಿ ನೆಲ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಇವರ ಪ್ರತಿಪಾದನೆಯಾಗಿದೆ.
ನಾಮಪತ್ರ ಸಲ್ಲಿಸುವ ನಿರ್ಧಾರದ ಪ್ರಕಟಣೆಯ ಬಳಿಕ ಇಬ್ಬರೂ ಮಾತನಾಡಿ, “ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಇದನ್ನು ತಡೆಯಲು ತಮಗೆ ಮತ ಹಾಕಿ” ಎಂದು ವಿನಂತಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮರಾಠ ಸಮುದಾಯದವರು ಬಿಜೆಪಿಗೆ ಬೆಂಬಲಿಸುವುದು ವಾಡಿಕೆಯಾಗಿದೆ. ಮತ್ತೊಂದೆಡೆ ಬೆಳಗಾವಿ ಕ್ಷೇತ್ರದ ಮರಾಠ ಭಾಗದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮದೇ ಪ್ರಭಾವ ಹೊಂದಿದ್ದಾರೆ. ಇದೀಗ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಮೃಣಾಲ್‌ಗೆ ಮರಾಠಾ ಮತಗಳ ವಿಭಜನೆ ಆತಂಕ ಆರಂಭವಾಗಿದೆ.
ಮರಾಠ ಸಮುದಾಯವನ್ನು ಗಮನದಲ್ಲಿಟ್ಟುಕೊಂಡೇ ಕೆನರಾ ಕ್ಷೇತ್ರಕ್ಕೆ ಡಾ. ಅಂಜಲಿ ನಿಂಬಾಳ್ಕರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಎಂಇಎಸ್ ಅಭ್ಯರ್ಥಿ ನಿರಂಜನ್ ಸ್ಪರ್ಧೆಯಿಂದ ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾಪಲ್ಟಾ ಆಗಬಹುದು. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೂ ಮರಾಠ ಮತಗಳ ವಿಭಜನೆ ಆತಂಕ ಎದುರಾಗಿದೆ.