Site icon Vistara News

Lok Sabha Election 2024: ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ; ಘಟಾನುಘಟಿಗಳು ರೆಡಿ, ಯಾರು ಮೊದಲು?

lok sabha election 2024 bjp versus congress

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಲಿದೆ. ತಮ್ಮ ಪಕ್ಷಗಳಿಂದ ಸ್ಪರ್ಧಿಸಲು ಟಿಕೆಟ್‌ ಪಡೆದಿರುವ ಬಿಜೆಪಿ (BJP)- ಕಾಂಗ್ರೆಸ್‌ನ (Congress) ಘಟಾನುಘಟಿಗಳು ಹಾಗೂ ಸ್ವತಂತ್ರ ಹುರಿಯಾಳುಗಳು ಇಂದಿನಿಂದ ನಾಮಪತ್ರ ಸಲ್ಲಿಕೆ (Nomination submission) ಶುರು ಮಾಡಲಿದ್ದಾರೆ.

28 ಲೋಕಸಭೆ ಕ್ಷೇತ್ರಗಳಲ್ಲೂ ಇಂದಿನಿಂದಲೇ ವಾತಾವರಣ ರಂಗೇರಲಿದ್ದು, ಇದರಲ್ಲಿ ಮೊದಲ ಹಂತದ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಿಗೆ ಅಧಿಸೂಚನೆ ಇಂದಿನಿಂದ ಆರಂಭವಾಗುತ್ತಿದೆ. ನಾಮಪತ್ರ ಸಲ್ಲಿಕೆಯ ಕ್ಷಣದಿಂದಲೇ ಅಸಲಿ ರಣಕಣ ಶುರುವಾಗಲಿದೆ. ಇನ್ನೊಂದು ತಿಂಗಳ ಕಾಲ ಪ್ರಚಾರದ ಭರಾಟೆ, ಮನೆಮನೆ ಭೇಟಿ, ಆಶ್ವಾಸನೆಗಳು ಸುರಿಮಳೆ, ವಾಗ್ವಾದ- ಚಕಮಕಿಗಳ ತೀವ್ರ ಕೋಲಾಹಲಕ್ಕೆ ಇನ್ನಷ್ಟು ರಂಗೇರಲಿದೆ.

ರಾಮನಗರದಲ್ಲಿ ಕಾಂಗ್ರೆಸ್‌ ಮೊದಲ ನಾಮಪತ್ರ ಡಿ.ಕೆ ಸುರೇಶ್‌ (DK Suresh) ಅವರಿಂದ ಸಲ್ಲಿಕೆಯಾಗಲಿದ್ದು, ಇಲ್ಲಿಂದಲೇ ಕಾಂಗ್ರೆಸ್‌ ಕಲಿಗಳು ರಣಕಹಳೆ ಮೊಳಗಿಸಲಿದ್ದಾರೆ. ಹಾಸನದ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಅವರಿಂದಲೂ ಇಂದೇ ನಾಮಪತ್ರ ಸಲ್ಲಿಕೆಯಾಗಲಿದೆ.

ದಿನಾಂಕಗಳು ಹೀಗಿವೆ:

ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ- ಮಾರ್ಚ್‌ 28
ನಾಮಪತ್ರ ಸಲ್ಲಿಕೆ ಕಡೆಯ ದಿನ- ಏಪ್ರಿಲ್ 4
ನಾಮಪತ್ರ ಪರಿಶೀಲನೆ- ಏಪ್ರಿಲ್ 5
ನಾಮಪತ್ರ ಹಿಂಪಡೆಯಲು ಕೊನೆಯ ದಿನ- ಏಪ್ರಿಲ್ 8
ಮತದಾನ ದಿನಾಂಕ- ಏಪ್ರಿಲ್ 26
ಚುನಾವಣಾ ಫಲಿತಾಂಶ- ಜೂನ್ 4

ಯಾವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ?

ಉಡುಪಿ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ

ಬಿಸಿಯೇರಿದ ರಾಮನಗರ

ಇಂದಿನಿಂದ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಆರಂಭ ಹಿನ್ನೆಲೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದಲ್ಲಿ ವಾತಾವರಣ ಬಿಸಿಯೇರಿದೆ. ಭಾರಿ ಹುದ್ದರಿಗಳ ಪೈಪೋಟಿಗೆ ತೆರೆದುಕೊಂಡಿರುವ ಈ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಡಿ.ಕೆ ಸುರೇಶ್ ಹಾಗೂ ಹೃದಯ ತಜ್ಞ, ಬಿಜೆಪಿಯ ಡಾ. ಮಂಜುನಾಥ್ ನಡುವೆ ಸೆಣಸಾಟ ನಡೆಯಲಿದೆ.

ಇಂದು ರಾಮನಗರದಲ್ಲಿ ಡಿ.ಕೆ ಸುರೇಶ್ ಅವರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ. ಏಪ್ರಿಲ್ 4ರಂದು ಎದುರಾಳಿ ಡಾ.ಸಿ.ಎನ್.ಮಂಜುನಾಥ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಂದು ನಾಮಪತ್ರ ಸಲ್ಲಿಕೆಗೆ ಪಕ್ಷದ ಘಟಾನುಘಟಿಗಳನ್ನು ಡಿ.ಕೆ ಸುರೇಶ್ ಕರೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ. ಇಂದು ರಾಮನಗರದಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಹಾಗೂ ನಂತರ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ ಏಪ್ರಿಲ್ 15ರಂದು, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಏಪ್ರಿಲ್ 3ರಂದು ಮೈಸೂರಿನಲ್ಲಿ ಬಿಜೆಪಿಯ ಯದುವೀರ ಒಡೆಯರ್ ಏಪ್ರಿಲ್ 3ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lok Sabha Election 2024: ಮಾಜಿ‌ ಸಚಿವ ಕೋಟೆ ಎಂ.ಶಿವಣ್ಣ ಕಾಂಗ್ರೆಸ್‌ ಸೇರ್ಪಡೆ; ಇನ್ನೂ ಅನೇಕರು ಬರುತ್ತಾರೆ ಎಂದ ಡಿಕೆಶಿ

Exit mobile version