Site icon Vistara News

Lok Sabha Election 2024: ಪ್ರತಿಪಕ್ಷಗಳಿಗೆ ರೆಡ್‌ ಅಲರ್ಟ್‌ ನೀಡಿದ ಪ್ರಶಾಂತ್‌ ಕಿಶೋರ್‌; ಏನವರ ಚುನಾವಣಾ ಲೆಕ್ಕಾಚಾರ?

No logic in Rahul Gandhi nyay yatra Says Prashant Kishor

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಎರಡು ವಾರಗಳ ಮೊದಲು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಅವರು ಕಾಂಗ್ರೆಸ್ (Congress) ಮತ್ತು ಇಂಡಿಯಾ ಬ್ಲಾಕ್‌ (INDIA Bloc) ಮೈತ್ರಿಕೂಟಕ್ಕೆ ರೆಡ್ ಅಲರ್ಟ್ ನೀಡಿದ್ದಾರೆ. ಆರು ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಭಾರಿ ಪ್ರದರ್ಶನ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

“ಆಡಳಿತ ಪಕ್ಷವು ಅಜೇಯವಲ್ಲ. ಆದರೆ ಪ್ರತಿಪಕ್ಷಗಳು ಇನ್ನಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಿವೆ. ನೀವು ಕ್ಯಾಚ್‌ಗಳನ್ನು ಕೈಬಿಟ್ಟರೆ, ಬ್ಯಾಟರ್ ಶತಕ ಗಳಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳಿಗೆ ಪ್ರಶಾಂತ್ ಕಿಶೋರ್ ಎಚ್ಚರಿಕೆ

“ಬಿಜೆಪಿ ತೆಲಂಗಾಣದಲ್ಲಿ ಮೊದಲಿಗರು ಅಥವಾ ಎರಡನೆಯವರಾಗಲಿದ್ದಾರೆ. ಒಡಿಶಾದಲ್ಲಿ ನಂಬರ್ 1 ಆಗುತ್ತಾರೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆ ಎಂದರೆ, ಬಿಜೆಪಿ ಬಂಗಾಳದಲ್ಲಿ ನಂಬರ್ 1 ಆಗಲಿದೆ” ಎಂದು ಕಿಶೋರ್ ಹೇಳಿದ್ದಾರೆ. “ತಮಿಳುನಾಡಿನಲ್ಲಿ ಪಕ್ಷವು ಎರಡಂಕಿ ಪ್ರಮಾಣದ ಮತಗಳನ್ನು ಗಳಿಸಬಹುದು” ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಇಲ್ಲಿ 3.6 ಶೇಕಡಾ ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2.6 ಶೇಕಡಾ ಇತ್ತು.

ಈ ಹಿಂದೆ ಬಿಜೆಪಿ ಇಲ್ಲಿ ಅಸ್ತಿತ್ವಕ್ಕಾಗಿ ಸಾಕಷ್ಟು ಹೆಣಗಾಡಿದೆ. ಆದರೆ ಮತದಾರರು ಬಿಜೆಪಿಯ ಹಾರ್ಡ್‌ಕೋರ್‌ ಸಿದ್ಧಾಂತದತ್ತ ಒಲಿದಿಲ್ಲ. 2014 ಮತ್ತು 2019ರಲ್ಲಿ ತೆಲಂಗಾಣ, ಒಡಿಶಾ, ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಾದ್ಯಂತದ 164 ಸ್ಥಾನಗಳಲ್ಲಿ ಏಳು ಮತ್ತು 30 ಸ್ಥಾನಗಳನ್ನು ಮಾತ್ರ ಗೆದ್ದಿದೆ.

ಕರ್ನಾಟಕದಲ್ಲಿ 2019ರಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದುದು ಮಾತ್ರ ಅಪವಾದವಾಗಿದೆ. ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದೊಡ್ಡ ಗೆಲುವಿನ ನಂತರ ಇಲ್ಲಿ ಪಕ್ಷವು ದುರ್ಬಲಗೊಂಡಿದೆ ಎಂದು ಹಲವರು ನಂಬುತ್ತಾರೆ.

ಆದರೂ, ಐದು ವರ್ಷಗಳ ಆಡಳಿತದಿಂದ ಈ ಪ್ರದೇಶಗಳಲ್ಲಿ ಬಿಜೆಪಿಯ ನಿರಂತರ ಪ್ರಭಾವ ದೊಡ್ಡ ಲಾಭಾಂಶವನ್ನು ನೀಡಬಹುದು. ಇದು ಸೀಟುಗಳಾಗಿ ಸಿಗದಿದ್ದರೂ ಸಹ ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಪಕ್ಷದ ಪ್ರೊಫೈಲ್ ಅನ್ನು ಹೆಚ್ಚಿಸಬಹುದು. ಈ ಆರು ರಾಜ್ಯಗಳಲ್ಲಿ ಮೂರು- ಬಂಗಾಳ, ಕೇರಳ ಮತ್ತು ತಮಿಳುನಾಡು- 2026ರಲ್ಲಿ ಮತ ಚಲಾಯಿಸುತ್ತವೆ.

ಈ ರಾಜ್ಯಗಳಲ್ಲಿ ಬಿಜೆಪಿ ವಿಸ್ತರಣೆಯ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಪಕ್ಷದ ಎರಡು ದೊಡ್ಡ ಹಿಟ್ಟರ್‌ಗಳಾದ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪುನರಾವರ್ತಿತ ಭೇಟಿಗಳನ್ನು ಪಿಕೆ ಸೂಚಿಸಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರು ತಮಿಳುನಾಡಿಗೆ ನೀಡಿದ ಭೇಟಿಗಳು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಥವಾ ಯಾವುದೇ ವಿರೋಧ ಪಕ್ಷದ ನಾಯಕರ ಭೇಟಿಗಳಿಗಿಂತ ಅಧಿಕ.”

ಹಿಂದಿ ಹೃದಯಭಾಗದ ಲಾಭ

ಹಿಂದಿ ಹೃದಯಭಾಗವೆನಿಸಿದ ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ 239 ಸ್ಥಾನಗಳಿವೆ. ಇಲ್ಲಿಯವರೆಗೆ ಈ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗಿದ್ದು, ಇಲ್ಲಿ ನುಗ್ಗಲು ಪ್ರತಿಪಕ್ಷ ವಿಫಲವಾಗಿದೆ. ಮೋದಿಯವರು ಪಕ್ಷಕ್ಕೆ 370+ ಸೀಟುಗಳಿಗೆ, ಮೈತ್ರಿಕೂಟದ ಪಾಲುದಾರರು ಸೇರಿದಂತೆ 400ಕ್ಕೂ ಅಧಿಕ ಸ್ಥಾನ ಗೆಲ್ಲಲು ಯೋಜಿಸಿದ್ದಾರೆ. ಇದರ ದೊಡ್ಡ ಭಾಗವು ಗುಜರಾತ್, ರಾಜಸ್ಥಾನ, ಹರಿಯಾಣ, ಬಿಹಾರ, ಮಧ್ಯಪ್ರದೇಶ, ಹಾಗೆಯೇ ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡಗಳನ್ನು ಒಳಗೊಂಡಿರುವ ಹೃದಯಭಾಗದ ರಾಜ್ಯಗಳಿಂದ ಬರುತ್ತದೆ.

ಇನ್ನಷ್ಟು ಹೃದಯಭಾಗದಲ್ಲಿ – ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ – 149 ಸ್ಥಾನಗಳಿವೆ. 2019ರಲ್ಲಿ ಇಲ್ಲಿ ಬಿಜೆಪಿ 107, ಕಾಂಗ್ರೆಸ್ ಮೂರು ಸೇರಿ ಪ್ರಸ್ತುತ ಮಿತ್ರಪಕ್ಷಗಳು ಎಂಟು ಗೆದ್ದಿದ್ದವು. ಕಾಂಗ್ರೆಸ್ ಕಳೆದ ವರ್ಷ ಮೂರು ರಾಜ್ಯಗಳಲ್ಲಿ- ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ – ಅಧಿಕಾರ ಕಲೆದುಕೊಂಡರೆ, ಇತರ ಮೂರು – ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗುಜರಾತ್ – ರಾಜ್ಯಗಳಲ್ಲಿ ಹಿಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸೋತಿದೆ.

“ನಿಮ್ಮ ಹೋರಾಟ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿದೆ. ಆದರೆ ನೀವು ಮಣಿಪುರ ಮತ್ತು ಮೇಘಾಲಯ ಪ್ರವಾಸ ಮಾಡುತ್ತಿದ್ದೀರಿ. ನೀವು ಹೇಗೆ ಯಶಸ್ವಿಯಾಗುತ್ತೀರಿ?” ಎಂದು ರಾಹುಲ್‌ ಗಾಂಧಿ ಅವರ ʼಭಾರತ್ ಜೋಡೋ ನ್ಯಾಯ ಯಾತ್ರೆʼಗೆ ಸಂಬಂಧಿಸಿ ಕಿಶೋರ್ ಕೇಳಿದ್ದಾರೆ. ಮಣಿಪುರ ಮತ್ತು ಮೇಘಾಲಯ ಒಟ್ಟು ನಾಲ್ಕು ಲೋಕಸಭಾ ಸ್ಥಾನಗಳನ್ನು ಹೊಂದಿವೆ.

ಬಿಜೆಪಿಗೆ 370 ಅಸಂಭವ, ಆದರೆ…

ಒಟ್ಟಾರೆಯಾಗಿ, ಬಿಜೆಪಿಯು ತನ್ನ ಮಹತ್ವಾಕಾಂಕ್ಷೆಯ ಗುರಿಯನ್ನು ಮುಟ್ಟುವ ಸಾಧ್ಯತೆಯಿಲ್ಲ ಎಂದು ಕಿಶೋರ್‌ ಒಪ್ಪಿಕೊಂಡಿದ್ದಾರೆ. ಆದರೆ ಬಿಜೆಪಿ ಹೃದಯಭಾಗದ ಭದ್ರಕೋಟೆಗಳ ಫಲಿತಾಂಶಗಳ ಬೆಂಬಲದೊಂದಿಗೆ ಇನ್ನೂ ಸುಲಭ ಗೆಲುವು ದಾಖಲಿಸುತ್ತದೆ. ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ಉತ್ತರ ಮತ್ತು ಪಶ್ಚಿಮದಲ್ಲಿ ಸುಮಾರು 100 ಸ್ಥಾನಗಳನ್ನು ಕಸಿದರೆ ಮಾತ್ರ ಬಿಜೆಪಿ ಬಿಸಿಯನ್ನು ಅನುಭವಿಸುತ್ತದೆ. ಆದರೆ ಅದು ಆಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರತಿಪಕ್ಷವು ಸ್ಪಷ್ಟವಾದ ನಿರೂಪಣೆ ಮತ್ತು ಕಾರ್ಯಸೂಚಿಯನ್ನು ಹೊಂದಿರುವುದು ಮುಖ್ಯ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಬಗ್ಗೆ ಪ್ರಶಾಂತ್ ಕಿಶೋರ್

2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಗೆದ್ದಿದ್ದ ಯುಪಿಯ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಿಂದ ಸ್ಪರ್ಧಿಸಲು ಗಾಂಧಿಯವರ ಹಿಂಜರಿಕೆಯ ಬಗ್ಗೆ ಕಿಶೋರ್ ಎಚ್ಚರಿಸಿದ್ದಾರೆ. “ನೀವು ಯುಪಿ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಗೆಲ್ಲದಿದ್ದರೆ, ನೀವು ವಯನಾಡಿನಲ್ಲಿ ಗೆದ್ದರೂ ಯಾವುದೇ ಪ್ರಯೋಜನವಿಲ್ಲ” ಎಂದಿದ್ದಾರೆ.

ರಾಹುಲ್‌ ಗಾಂಧಿಯವರು ಕೇರಳದ ವಯನಾಡ್‌ನಿಂದ ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಅಮೇಠಿಗೆ ಮರಳುವ ಸಾಧ್ಯತೆಯಿಲ್ಲ. ಅಮೇಥಿಯನ್ನು ಕೈಬಿಡುವುದು ತಪ್ಪು ಸಂದೇಶವನ್ನು ಮಾತ್ರ ರವಾನಿಸುತ್ತದೆ ಎಂದು ಕಿಶೋರ್ ಹೇಳಿದರು. 2019ರಲ್ಲಿ ಸೋನಿಯಾ ಗಾಂಧಿಯವರು ಗೆದ್ದಿದ್ದ ಕಾಂಗ್ರೆಸ್‌ನ ಎರಡನೇ ಯುಪಿ ಭದ್ರಕೋಟೆಯಾದ ರಾಯ್‌ಬರೇಲಿ ಸಹ ಗೊಂದಲದಲ್ಲಿದೆ. ಸೋನಿಯಾ ಗಾಂಧಿ ಅವರು ಈ ವರ್ಷ ರಾಜ್ಯಸಭೆಗೆ ಸ್ಥಳಾಂತರಗೊಂಡಿದ್ದಾರೆ. ಈ ಕ್ಷೇತ್ರಕ್ಕೂ ಕಾಂಗ್ರೆಸ್ ಬೇರೆ ಅಭ್ಯರ್ಥಿಯನ್ನು ಹೆಸರಿಸಿಲ್ಲ.

ಇದನ್ನೂ ಓದಿ: Lok Sabha Election 2024: ಹಾಸನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೈ ಎಂದ ಪ್ರೀತಂ ಗೌಡ ಅತ್ಯಾಪ್ತರು; ಪ್ರಜ್ವಲ್‌ ರೇವಣ್ಣಗೆ ಶಾಕ್!

Exit mobile version