Site icon Vistara News

Lok Sabha Election 2024: ಯದುವೀರ ಒಡೆಯರ್ – ಪ್ರತಾಪ್ ಸಿಂಹ ಇಂದು ಮುಖಾಮುಖಿ!

pratap simha and Yaduveer Wadiyar

ಮೈಸೂರು: ಬಿಜೆಪಿಯಿಂದ (BJP) ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ (Lok Sabha Election 2024) ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ (Pratap Simha) ಇಂದು ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.

ಟಿಕೆಟ್ ಅನೌನ್ಸ್ ಆದ ಬಳಿಕ ಪ್ರತಾಪ್‌ ಸಿಂಹ ಅವರು ಕ್ಷೇತ್ರದಿಂದ ದೂರವೇ ಉಳಿದಿದ್ದರು. ಇದೀಗ ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ನಾಯಕರು ಭೇಟಿ ಆಗುತ್ತಿದ್ದಾರೆ. ಟಿಕೆಟ್‌ ಘೋಷಣೆ ಬಳಿಕ ಯದುವೀರ್ ಒಡೆಯರ್‌ ಅವರು ಎಲ್ಲ ಬಿಜೆಪಿ ನಾಯಕರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದರು. ಆದರೆ ಪ್ರತಾಪ್ ಸಿಂಹ ಮಾತ್ರ ಯಾರ ಸಂಪರ್ಕಕ್ಕೂ ಸಿಗದೆ, ಯದುವೀರ್ ಭೇಟಿಗೂ ಅವಕಾಶ ನೀಡಿರಲಿಲ್ಲ.

ಎಕ್ಸ್‌ ಜಾಲತಾಣದಲ್ಲಿ ʼಸೋಮವಾರದಿಂದ ಪ್ರಚಾರಕ್ಕೆ ಬರುತ್ತೇನೆʼ ಎಂದು ಪ್ರತಾಪ್‌ ಸಿಂಹ ಪೋಸ್ಟ್ ಮಾಡಿದ್ದರು. ಟಿಕೆಟ್ ಘೋಷಣೆಗೂ ಮುನ್ನ ಯದುವೀರ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದರು. ʼಅರಸರ ಬಗೆಗೆ ಹೀಗೆಲ್ಲ ಮಾತಾಡಬೇಡಿʼ ಎಂದು ಕೆಲವು ಬಿಜೆಪಿ ನಾಯಕರೇ ಹೇಳಿದ್ದರು. ಟಿಕೆಟ್‌ ದೊರೆಯದ ಅಸಮಾಧಾನ ಹಾಗೂ ಬೇಸರವನ್ನು ನಂತರ ಮೌನವಾಗಿರುವ ಮೂಲಕ ಹೊರಹಾಕಿದ್ದರು. ಸಿಂಹ ವ್ಯಂಗ್ಯಕ್ಕೆ ಪ್ರತ್ಯುತ್ತರವಾಗಿ ಎಂಬಂತೆ ʼಸಾಂಬಾರಿನಲ್ಲಿ ಮೆಣಸಿನಕಾಯಿ ಸಿಗುತ್ತೆʼ ಎಂದು ಯದುವೀರ್ ಹೇಳಿದ್ದರು.‌

ಯದುವೀರ್‌ ಅವರು ಟಿಕೆಟ್‌ ಸಿಕ್ಕಿದ ಬಳಿಕ ಚಾಮುಂಡೇಶ್ವರಿ ದರ್ಶನ ಮಾಡಿ, ಬೆಂಗಳೂರಿನ ಬಿಜೆಪಿ ಕಚೇರಿಗೆ ಹೋಗಿ, ಮರಳಿ ಮೈಸೂರಿನ ಬಿಜೆಪಿ ಕಚೇರಿಗೂ ತೆರಳಿ ತಮ್ಮ ಚಟುವಟಿಕೆಯನ್ನು ತೀವ್ರಗೊಳಿಸಿದ್ದಾರೆ. ಆದರೆ, ಯದುವೀರ್‌ ಅವರು ಆ್ಯಕ್ಟಿವ್‌ ಆಗುತ್ತಿದ್ದಂತೆಯೇ ಪಕ್ಷ‌ ಕಟ್ಟೋಣ ಎಂದಿದ್ದ ಪ್ರತಾಪ್ ಸಿಂಹ ಸೈಲೆಂಟ್‌ ಆಗಿದ್ದರು.

ಮೈಸೂರು ರಾಜ ವಂಶಸ್ಥರಾದ ಯದುವೀರ್‌ ಅವರು ಬೀದಿಗೆ ಇಳೀತಾರಾ? ಎಲ್ಲರ ಜತೆ ಬೆರೆಯುತ್ತಾರಾ ಎಂಬ ಪ್ರಶ್ನೆಗಳನ್ನು ಸ್ವತಃ ಪ್ರತಾಪ್‌ ಸಿಂಹ ಕೇಳಿದ್ದರು. ಆದರೆ, ಎಲ್ಲರ ನಿರೀಕ್ಷೆಗಳನ್ನು ಮೀರಿ ಯದುವೀರ್‌ ಮೊದಲ ದಿನವೇ ಮೈಸೂರಿನ ಬಿಜೆಪಿ ಕಚೇರಿಗೆ ಬಂದಿದ್ದರು. ಎಲ್ಲ ನಾಯಕರ ಜತೆ ಮಾತನಾಡಿದ್ದಾರೆ. ಮಾತ್ರವಲ್ಲ, ಬೀದಿಗೆ ಬಂದು ಮಾರ್ಗದ ಬದಿಯ ಚಹಾ ಅಂಗಡಿಯಲ್ಲಿ ಚಹಾ ಕುಡಿದಿದ್ದರು.

ಇಂದು ಬಿಜೆಪಿ ಪಕ್ಷದ ವತಿಯಿಂದ ಅಧಿಕೃತ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗಲಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದು, ನಗರ ಬಿಜೆಪಿ ಘಟಕದಿಂದ ಮಾಧ್ಯಮ ಸಂವಾದ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ನಗರಾಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಶ್ರೀವತ್ಸ, ಮಾಜಿ ಸಚಿವ ಎಸ್.ಎ ರಾಮದಾಸ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಇಂದಿನಿಂದ ಮೈಸೂರಿನ ಚುನಾವಣಾ ಅಖಾಡ ರಂಗೇರಲಿದೆ. ಪಕ್ಷದ ಸ್ಟಾರ್‌ ಪ್ರಚಾರಕರನ್ನು ನಿರೀಕ್ಷಿಸಲಾಗುತ್ತಿದೆ. ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಇನ್ನೂ ಹುಡುಕುತ್ತಿದೆ.

ಇದನ್ನೂ ಓದಿ: MP Pratap Simha : ಯದುವೀರ್‌ ಆ್ಯಕ್ಟಿವ್‌ ಆಗುತ್ತಿದ್ದಂತೆಯೇ ಸಿಂಹ ಸೈಲೆಂಟ್‌?; ಭೇಟಿಗೂ ಮಿಸ್‌!

Exit mobile version