Site icon Vistara News

Lok Sabha Election 2024: ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ನಿರ್ಧಾರ ಇಂದು; ಕಾಂಗ್ರೆಸ್‌ನಿಂದಲೋ, ಸ್ವತಂತ್ರವೋ?

dingaleshwar swamiji

ಧಾರವಾಡ: ಶಿರಹಟ್ಟಿಯ ಫಕೀರೇಶ್ವರ (Shirahatti Pakireshwara Mutt) ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ (Sri Dingaleshwar Swamiji) ರಾಜಕೀಯ ಪ್ರವೇಶ ಹಾಗೂ ಲೋಕಸಭೆ ಚುನಾವಣೆ (Lok Sabha Election 2024) ಸ್ಪರ್ಧೆ ಖಚಿತವಾಗಿದ್ದು, ಈ ಬಗ್ಗೆ ಇಂದು ಬೆಳಗ್ಗೆ ಸಭೆ ನಡೆಸಿ ತಮ್ಮ ನಿರ್ಣಯ ಪ್ರಕಟಿಸಲಿದ್ದಾರೆ.

ಇಂದು ಧಾರವಾಡದ (Dharwad) ವೀರಶೈವ ಲಿಂಗಾಯತ ಭವನದಲ್ಲಿ ಶ್ರೀಗಳು ಬೆಳಗ್ಗೆ ಸಭೆ ಕರೆದಿದ್ದು, ಈ ವಿಚಾರ ಲಿಂಗಾಯತ ಸಮಾಜದಲ್ಲಿ (Lingayat community) ಸಂಚಲನ ಸೃಷ್ಟಿಸಿದೆ. ಈ ಹಿಂದೆ ಧಾರವಾಡ ಲೋಕಸಭಾ ಆಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತವನ್ನು ದಿಂಗಾಲೇಶ್ವರ ಶ್ರೀಗಳು ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಧಾರವಾಡ, ಹುಬ್ಬಳ್ಳಿ ಭಾಗದ ಲಿಂಗಾಯತ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ಕೆಲವು ಭಕ್ತರ ಸಭೆಗಳು ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದ ಶ್ರೀಗಳು, ಸ್ಪರ್ಧಿಸುವ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. “ನಾನು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ, ಯಾವ ಕಾರಣಕ್ಕೂ ನಾನು ಹೋರಾಟದಿಂದ ಹಿಂದೆ ಸರಿಯಲ್ಲ. ಚುನಾವಣೆಗೆ ನಾನೇ ಸ್ಪರ್ಧೆ ಮಾಡುವಂತೆ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ” ಎಂದು ಹೇಳಿದ್ದರು.

ಧಾರವಾಡದಲ್ಲಿ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಯನ್ನು ಹಾಕುವಂತೆ ದಿಂಗಾಲೇಶ್ವರ ಸ್ವಾಮೀಜಿ ಒತ್ತಡ ಹಾಕಿದ್ದರು. ಆದರೆ ಪ್ರಹ್ಲಾದ್‌ ಜೋಶಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ದಿಂಗಾಲೇಶ್ವರ ಶ್ರೀಗಳು, ಹಾಲಿ ಸಂಸದ ಪ್ರಹ್ಲಾದ್‌ ಜೋಶಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಇದರಿಂದ ಐದನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿದಿದ್ದ ಪ್ರಹ್ಲಾದ್‌ ಜೋಶಿಗೆ ಸವಾಲು ಎದುರಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಬ್ರಾಹ್ಮಣ VS ಲಿಂಗಾಯತ ವೇದಿಕೆ ಸೃಷ್ಟಿಯಾಗುತ್ತಿದ್ದು, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಿದರೆ ಲಿಂಗಾಯತ ಮತಗಳು ವಿಭಜನೆಯಾಗುವುದು ಖಂಡಿತ ಎನ್ನಲಾಗಿದೆ. ಈ ಹಿನ್ನೆಲೆ ಬಿಜೆಪಿ ನಾಯಕರು ದಿಂಗಾಲೇಶ್ವರ ಸ್ವಾಮೀಜಿ ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇದರ ನಡುವೆ, ಪ್ರಹ್ಲಾದ್‌ ಜೋಶಿ ಬಗ್ಗೆ ಬೇಸರ ಹೊಂದಿರುವ ಶ್ರೀಗಳನ್ನು ಕಾಂಗ್ರೆಸ್‌ಗೆ ಸೆಳೆಯಲು ಕಾಂಗ್ರೆಸ್‌ನ ಕೆಲವು ಮುಖಂಡರು ಯತ್ನಿಸುತ್ತಿದ್ದಾರೆ. ಧಾರವಾಡದಲ್ಲಿ ಕುರುಬ ಸಮುದಾಯದ ವಿನೋದ ಅಸೂಟಿ ಅವರಿಗೆ ಟಿಕೆಟ್‌ ನೀಡಲಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಸಮಯವಿದ್ದು, ಲಿಂಗಾಯ ಸಮುದಾಯದಲ್ಲಿ ಪ್ರಭಾವ ಹೊಂದಿರುವ ದಿಂಗಾಲೇಶ್ವರರನ್ನು ಸೆಳೆದುಕೊಂಡರೆ ಗೆಲುವು ಸುಲಭ ಎಂಬ ಅಭಿಪ್ರಾಯ ಕಾಂಗ್ರೆಸ್‌ ಮುಖಂಡರದ್ದಾಗಿದೆ.

ಇದನ್ನೂ ಓದಿ: Hubballi News: ದಿಂಗಾಲೇಶ್ವರ ಶ್ರೀಗಳ ನಡೆ ಬಗ್ಗೆ ನಾನು ಯಾರ ಮೊರೆಯೂ ಹೋಗಿಲ್ಲ: ಪ್ರಲ್ಹಾದ್‌ ಜೋಶಿ

Exit mobile version