ಬೆಂಗಳೂರು: ರೆಬೆಲ್ ಸ್ಟಾರ್ ಪತ್ನಿ, ಮಂಡ್ಯ ಸಂಸದೆ (Mandya MP) ಸುಮಲತಾ ಅಂಬರೀಶ್ (Sumalatha Ambaressh) ಅವರು ಮಂಡ್ಯ ಲೋಕಸಭೆ ಕ್ಷೇತ್ರದಿಂದಲೇ ತನಗೆ ಚುನಾವಣೆಗೆ ((Lok Sabha Election 2024) ಬಿಜೆಪಿ ಟಿಕೆಟ್ (BJP Ticket) ಸಿಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಟಿಕೆಟ್ ಸಿಗದಿದ್ದರೆ ʼರೆಬೆಲ್ ಸ್ಟಾರ್ʼ ಆಗುವುದು ಗ್ಯಾರಂಟಿಯಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌ನಲ್ಲಿ ಸುಮಲತಾ ಎಕ್ಸ್‌ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.
“ಮಂಡ್ಯ ನನ್ನದೇ ಅಡ್ಡಾ. ಮಂಡ್ಯ ಬಿಟ್ಟು ಬೇರ್ಯಾವುದೇ ಕಡೆ ನಾನು ರಾಜಕಾರಣ ಮಾಡಲಾರೆ. ಮಂಡ್ಯ ಅಡ್ಡಾಕ್ಕೆ ಬರಬೇಡಿ. ಇಲ್ಲಿನ ಟಿಕೆಟ್ ನನಗೇ ಸಿಗುತ್ತೆ ಎಂಬ ವಿಶ್ವಾಸವಿದೆ. ಇದನ್ನು ಜೆಡಿಎಸ್‌ಗೆಗೆ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಈ ಕ್ಷಣದವರೆಗೂ ವರಿಷ್ಠರ ಮೇಲೆ ನನಗೆ ನಂಬಿಕೆ ಇದೆʼʼ ಎಂದು ಸುಮಲತಾ ಹೇಳಿದ್ದಾರೆ.
ಆರು ತಿಂಗಳ ಹಿಂದೆಯೇ ತಮಗೆ ಮೈಸೂರು ಅಥವಾ ಬೇರೆ ಕಡೆ ಬಿಜೆಪಿಯಿಂದ ಟಿಕೆಟ್ ನೀಡುವ ಸೂಚನೆ ಪಕ್ಷದ ವರಿಷ್ಠರಿಂದ ನೀಡಲಾಗಿತ್ತು ಎಂಬುದನ್ನು ಸುಮಲತಾ ಸಂದರ್ಶನದಲ್ಲಿ ಹೊರಗೆಡಹಿದ್ದರು. ಅಂದರೆ, ಮೈಸೂರಿನಲ್ಲಿ ಟಿಕೆಟ್ ಪ್ರತಾಪ್ ಸಿಂಹಗೆ ಕೈ ತಪ್ಪುವದು ಖಚಿತವಾದಂತೆಯೇ, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಚಿಂತನೆ ನಡೆಸಿದೆ ಎಂಬುದೂ ಖಚಿತವಾಗಿದೆ. ಆದರೆ, ಒಂದು ವೇಳೆ ಟಿಕೆಟ್ ಮಿಸ್ ಆದರೆ ಸುಮಲತಾ ರೆಬೆಲ್ ಆಗಿ, ಕಳೆದ ಸಲದಂತೆಯೇ ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತವಾಗಲಿದೆ.
ಐದು ವರ್ಷಗಳ ಹಿಂದೆ ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸಿದ್ದಾಗ, ಬಿಜೆಪಿ ಮೌನ ಬೆಂಬಲ ನೀಡಿತ್ತು. ಆದರೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಸುಮಲತಾ ಅವರನ್ನು ಕಟುವಾದ ಶಬ್ದಗಳಿಂದ ಚುನಾವಣೆ ಕಣದಲ್ಲಿ ಟೀಕಿಸಿ ಎದುರಿಸಿದ್ದರು. ಆದರೆ ಈಗ ಬಿಜೆಪಿ- ಜೆಡಿಎಸ್ ಮೈತ್ರಿಯ ಹಿನ್ನೆಲೆಯಲ್ಲಿ ಚಿತ್ರಣ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಸ್ಪರ್ಧೆಯಲ್ಲಿ ಅಭದ್ರತೆ ಎದುರಿಸುತ್ತಿದ್ದಾರೆ.
ನಾಲ್ಕುವರೆ ವರ್ಷಗಳ ಬಳಿಕ ಮಗ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುತ್ತಿದ್ದಾರೆ. ಮಂಡ್ಯದಿಂದಲೇ ರಾಜಕೀಯ ಪ್ರವೇಶ ಮಾಡಲು ಅವರು ನಿರ್ಧರಿಸಿದ್ದು ಮಗನ ಭವಿಷ್ಯ ಸುಭದ್ರಪಡಿಸಲು ಸುಮಲತಾ ನಿರ್ಧರಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿಯೇ ರಾಜಕಾರಣ ಮಾಡಲು ತೀರ್ಮಾನಿಸಿದ್ದಾರೆ. ಇದರಿಂದಾಗಿಯೇ ತಮಗೆ ಬಂದ ಬೆಂಗಳೂರು ಉತ್ತರ ಮತ್ತು ಮೈಸೂರು ಆಫರ್ ತಿರಸ್ಕರಿಸಿದ್ದಾರೆ.
ಸದ್ಯ ನರೇಂದ್ರ ಮೋದಿ, ಅಮಿತ್ ಶಾ ಕರೆಗೆ ಸುಮಲತಾ ಕಾಯುತ್ತಿದ್ದಾರೆ. ಒಂದು ವೇಳೆ ಕೊನೆಯ ಕ್ಷಣದಲ್ಲಿ ಆ ಕರೆ ಬಂದರೆ ಅವರ ನಿಲುವು ಬದಲಾಗುವ ಸಾಧ್ಯತೆಯೂ ಇದೆ. “ಈ ಬಾರಿ ನೀವು ಕ್ಷೇತ್ರ ತ್ಯಾಗ ಮಾಡಿ.
ನಿಮ್ಮ ಮಗನ ರಾಜಕೀಯ ಏಳಿಗೆ ನಮಗೆ ಬಿಡಿ” ಎಂಬ ಭರವಸೆ ನೀಡಿದರೆ, ಸುಮಲತಾ ಅವರಿಗೆ ರಾಜ್ಯಸಭೆ ಇಲ್ಲವೇ ವಿಧಾನ ಪರಿಷತ್ ಆಫರ್ ಕೊಟ್ಟರೆ, ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: Lok Sabha Election 2024: ಸುಮಲತಾಗೆ ಮಂಡ್ಯ ಕ್ಷೇತ್ರ ಬಹುತೇಕ ಮಿಸ್! ನಾನು ನೋಡ್ಕೊಳ್ತೇನೆ ಅಂದ್ರು ಶಾ