ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ (Sumalatha Ambareesh) ಅವರು ಸ್ಪರ್ಧೆಯಿಂದ ಹಿಂದೆ ಸರಿದು, ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದು, ಇದಕ್ಕೂ ಮೊದಲು ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿದರು. ಅಂಬರೀಶ್ ಸಮಾಧಿಗೆ (Ambareesh Grave) ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯ” ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಐದು ವರ್ಷದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಜನರ ಸೇವೆ ಮಾಡಿದ್ದೆ. ಇಂದಿನಿಂದ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಏನೇ ಒಳ್ಳೆಯ ಕಾರ್ಯ ಮಾಡುವಾಗ ಇಲ್ಲಿ ಬಂದು ಆಶೀರ್ವಾದ ಪಡೆಯುತ್ತೇವೆ. ಅವರ ಆಶೀರ್ವಾದ ನಮ್ಮ ಮೇಲೆ ಇದೆ. ಮೊದಲನೆದಾಗಿ ಎಲ್ಲ ರೀತಿಯ ಶಿಷ್ಟಾಚಾರದ ಪ್ರಕಾರ ಪಕ್ಷ ಸೇರ್ಪಡೆ ಇವತ್ತು ನಡೆಯುತ್ತದೆ. ಅದಾದ ಮೇಲೆ ಯಾವ ರೀತಿಯಲ್ಲಿ ಚುನಾವಣೆಗೆ ಕೆಲಸ ಮಾಡಬೇಕು ಅಂತ ಚರ್ಚೆ ಮಾಡಲಾಗುತ್ತದೆ” ಎಂದು ತಿಳಿಸಿದರು.
ಮಂಡ್ಯ ಸೇರಿ ಎಲ್ಲೆಡೆ ಪ್ರಚಾರ
“ಪಕ್ಷವು ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಹೇಳುತ್ತದೆಯೋ, ಅಲ್ಲೆ ಪ್ರಚಾರಕ್ಕೆ ಹೋಗುತ್ತೇನೆ” ಎಂಬುದಾಗಿ ಸುಮಲತಾ ಸ್ಪಷ್ಟಪಡಿಸಿದರು. ಮಂಡ್ಯ ಮಾತ್ರವಲ್ಲ, ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಬೇಕು. ಎಲ್ಲೆಲ್ಲಿ ನನಗೆ ಪ್ರಚಾರಕ್ಕೆ ಹೋಗಲು ಹೇಳುತ್ತಾರೋ, ಅಲ್ಲಿ ನಾನು ಪ್ರಚಾರ ಮಾಡುತ್ತೇನೆ. ಪಾರ್ಟಿ ಚೌಟ್ಟಿನಲ್ಲಿ ಎಲ್ಲರೂ ಕೂಡ ಕೆಲಸ ಮಾಡಬೇಕು. ನಾನು ಕೂಡ ಮಾಡುತ್ತೇನೆ. ಮಂಡ್ಯದಲ್ಲಿ ನಾನು, ಜೆಡಿಎಸ್ ಅಥವಾ ಎಚ್.ಡಿ.ಕುಮಾರಸ್ವಾಮಿ ಮಾತ್ರ ಬರಲ್ಲ. ಎನ್‌ಡಿಎ ಹೆಚ್ಚಿನ ಸೀಟು ಗೆಲ್ಲಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬುದು ನನ್ನ ಉದ್ದೇಶ” ಎಂದರು.
ಅಭಿಷೇಕ್ ಬಿಜೆಪಿ ಸೇರಲ್ಲ
“ನಾನು ಮಾತ್ರ ಇಂದು ಬಿಜೆಪಿ ಸೇರುತ್ತಿದ್ದೇನೆಯೇ ಹೊರತು, ಅಭಿಷೇಕ್ ಅಂಬರೀಶ್ ಬಿಜೆಪಿ ಸೇರ್ಪಡೆಯಾಗುತ್ತಿಲ್ಲ” ಎಂದು ತಿಳಿಸಿದರು. “ನಾನು ನನ್ನ ಬಗ್ಗೆ ಮಾತ್ರ ಯೋಚನೆ ಮಾಡಿಲ್ಲ. ಮಂಡ್ಯದ ಜನತೆ, ದೇಶದ ಹಿತದೃಷ್ಟಿಯಿಂದ ಬಿಜೆಪಿ ಸೇರುತ್ತಿದ್ದೇನೆ. ಪಕ್ಷ ಸೇರಿದ ಮೇಲೆ ಅಲ್ಲಿನ ರೀತಿರಿವಾಜುಗಳಿಗೆ ಒಗ್ಗಿಕೊಂಡು ನಡೆಯಬೇಕಾಗುತ್ತದೆ. ಆದರೆ, ನನಗೆ ಮಂಡ್ಯದ ಜನರೇ ಹೈಕಮಾಂಡ್. ಅವರ ಬೆಂಬಲದೊಂದಿಗೇ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲೂ ಸಮಾಜಕ್ಕಾಗಿಯೇ ದುಡಿಯುತ್ತೇನೆ” ಎಂದು ತಿಳಿಸಿದರು.
ಇದನ್ನೂ ಓದಿ: Lok Sabha Election 2024: ಎಚ್.ಡಿ. ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ತಾರಾ ದರ್ಶನ್? ಏನಂದ್ರು ಸುಮಲತಾ?
ಬಿಜೆಪಿ ಕಚೇರಿಯಲ್ಲಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ, ಆರ್. ಅಶೋಕ್, ಮಾಜಿ ಸಿಎಂ ಬಿ.ಎಸ್. ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ