ಬೆಂಗಳೂರು/ಮೈಸೂರು: ಇಂದು ಮೈಸೂರಿನಲ್ಲಿ (Mysore) ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಹಾಗೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಲೋಕಸಭೆ ಚುನಾವಣೆ (Lok Sabha Election 2024) ಕಣದಲ್ಲಿರುವ ಅನೇಕ ಹುದ್ದರಿಗಳು ನಾಮಪತ್ರ (Nomination) ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಮೈಸೂರು ನಗರದಲ್ಲಿರುವ ಮಹನೀಯರ ಪ್ರತಿಮೆಗೆ ಯದುವೀರ್ ಪುಷ್ಪಾರ್ಚನೆ ಸಲ್ಲಿಸಿದರು. ಅರಮನೆ ಮುಂಭಾಗದಲ್ಲಿರುವ ಹತ್ತನೇ ಚಾಮರಾಜ ಒಡೆಯರ್ ಪ್ರತಿಮೆಯಿಂದ ಆರಂಭಿಸಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹನೀಯರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿದರು. ಪುಷ್ಪಾರ್ಚನೆ ನಂತರ ಕೋಟೆ ಅಂಜನೇಯ ಸ್ವಾಮಿ ದೇವಾಯಲದಿಂದ ಮೆರವಣಿಗೆ ನಡೆಸಿದರು.
“ದೇಶದಲ್ಲಿ ಮೋದಿ ವರ್ಚಸ್ಸು ಕುಗ್ಗಿಲ್ಲ. ಅದು ದಿನೇ ದಿನೆ ಹೆಚ್ಚಾಗುತ್ತಿದೆ. 10 ವರ್ಷಗಳಲ್ಲಿ ಅವರು ಮಾಡಿರುವ ಕೆಲಸಗಳನ್ನು ಯಾರ ಜತೆಯಲ್ಲೂ ಹೋಲಿಕೆ ಮಾಡಲು ಸಾಧ್ಯವಿಲ್ಲ” ಎಂದು ಯದುವೀರ್ ಹೇಳಿದ್ದು, ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ʼಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿದ್ದು ದೇವೇಗೌಡರುʼ ಎಂಬ ಹೇಳಿಕೆಗೆ ಯದುವೀರ್ ಪ್ರತಿಕ್ರಿಯೆ ನೀಡಲಿಲ್ಲ. ʼಯದುವೀರ್ ಯಾರೆಂಬುದು ನಮಗೆ ಗೊತ್ತಿಲ್ಲʼ ಎಂಬ ಸಚಿವ ವೆಂಕಟೇಶ್ ಹೇಳಿಕೆಗೆ ಯದುವೀರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, “ರಾಜರ ಕೊಡುಗೆ ಏನೆಂಬುದು ಇಡೀ ನಾಡಿಗೆ ಗೊತ್ತಿದೆ. ಕಳೆದ 9 ವರ್ಷಗಳಲ್ಲಿ ನಾನು ಕೂಡ ಮೈಸೂರಿನಾದ್ಯಂತ ಸಂಚಾರ ಮಾಡಿದ್ದೇನೆ. ಜನರು ಕೂಡ ನನ್ನನ್ನು ನೋಡಿದ್ದಾರೆ. ಇದಕ್ಕೆಲ್ಲಾ ಜನರೇ ಉತ್ತರ ಕೊಡುತ್ತಾರೆ,” ಎಂದಿದ್ದಾರೆ.
ರಾಜಧಾನಿಯಲ್ಲಿ ನಾಮಪತ್ರಗಳ ಸಲ್ಲಿಕೆ
ಇಂದು ರಾಜಧಾನಿಯಲ್ಲಿ ನಾಮಪತ್ರ ಸಲ್ಲಿಕೆಗಳ ಜಾತ್ರೆಯೇ ನಡೆಯಲಿದೆ. ಬೆಂಗಳೂರು ಕೇಂದ್ರ, ಉತ್ತರ ಕ್ಷೇತ್ರದ ಕೈ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭೆ ಕೈ ಅಭ್ಯರ್ಥಿ ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಸಂಪಂಗಿರಾಮ ನಗರದ ಪ್ರಸನ್ನ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. 12 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ರಾಜೀವ ಗೌಡ ಇಂದು ನಾಮಪತ್ರ ಸಲ್ಲಿಕೆಗೆ ಮುನ್ನ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದಾರೆ. ಸಮಾವೇಶದ ಬಳಿಕ ಮೆರವಣಿಗೆ ಮೂಲಕ ತೆರಳಿ ಕೆಜಿ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ 2:10 ಗಂಟೆಗೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಬೆಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ಕೂಡ ಇಂದು ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಟೆಂಪಲ್ ರನ್ ಮಾಡಲಿದ್ದಾರೆ. ಸಂಜಯನಗರದ ರಾಧಕೃಷ್ಣ ದೇವಸ್ಥಾನದಲ್ಲಿ ಹಾಗೂ ನಂತರ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೃಹತ್ ರೋಡ್ ಶೋದಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: Yaduveer: ಬಿಜೆಪಿಯ ಯದುವೀರ್ ಆಸ್ತಿ ಮೌಲ್ಯ 4.99 ಕೋಟಿ ರೂ.; ಇವರ ಬಳಿ ಸ್ವಂತ ಕಾರೂ ಇಲ್ಲ