ಬೆಂಗಳೂರು: ಇಂದು ಲೋಕಸಭೆ ಚುನಾವಣೆ (Lok Sabha Election 2024) ಬಿಜೆಪಿ ಅಭ್ಯರ್ಥಿಗಳಾದ (BJP Candidates) ತೇಜಸ್ವಿ ಸೂರ್ಯ (Tejaswi Surya), ಡಾ. ಸಿಎನ್ ಮಂಜುನಾಥ್ (Dr CN Manjunath), ಡಾ.ಕೆ ಸುಧಾಕರ್ (Dr K Sudhakar) ಮುಂತಾದ ಘಟಾನುಘಟಿಗಳು ನಾಮಪತ್ರ ಸಲ್ಲಿಕೆ (Nomination) ಮಾಡಲಿದ್ದಾರೆ. ರೋಡ್ ಶೋಗಳನ್ನೂ (Road Show) ಏರ್ಪಡಿಸಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬೆಳಿಗ್ಗೆ 10ಕ್ಕೆ ಜಯನಗರ ಬಿಬಿಎಂಪಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಅವರು ಜಯನಗರ 4ನೇ ಬ್ಲಾಕ್‍ನ ಮಯ್ಯಾಸ್ ಹೋಟೆಲ್‍ನಿಂದ ರೋಡ್ ಶೋ ಆರಂಭಿಸಲಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಆರ್. ಅಶೋಕ್, ಅಶ್ವತ್ಥನಾರಾಯಣ್, ಪ್ರತಾಪ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ. ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಲಿದ್ದಾರೆ.
ರಾಮನಗರ: ಇಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ರಣಕಣದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ ಸಿ.ಎನ್ ಮಂಜುನಾಥ್ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಬೃಹತ್ ಶಕ್ತಿ ಪ್ರದರ್ಶನಕ್ಕೆ ಕೂಡ ಸಜ್ಜು ಮಾಡಿಕೊಂಡಿದ್ದಾರೆ.
ಡಿಕೆ ಬ್ರದರ್ಸ್ ಭದ್ರಕೋಟೆ ಭೇಧಿಸಲು ಕೇಂದ್ರ ನಾಯಕರು ಬಿಜೆಪಿ- ಜೆಡಿಎಸ್ ಮುಖಂಡರಿಗೆ ಟಾಸ್ಕ್ ನೀಡಿದ್ದು, ನಾಮಪತ್ರ ಸಲ್ಲಿಕೆಗೆ ಮುನ್ನ ಬೃಹತ್ ಮೆರವಣಿಗೆಯಲ್ಲಿ ಮೈತ್ರಿ ನಾಯಕರು ಭಾಗವಹಿಸುತ್ತಾರೆ. ಬೆಳಿಗ್ಗೆ 10 ಘಂಟೆಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಎಸ್ಪಿ ಕಚೇರಿ ಸರ್ಕಲ್‌ನಿಂದ ಡಿಸಿ ಕಚೇರಿವರೆಗೂ ಬೃಹತ್ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಬಿಎಸ್‌ವೈ, ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಸಿಪಿವೈ, ಶಾಸಕರಾದ ಮುನಿರತ್ನ, ಎಂ. ಕೃಷ್ಣಪ್ಪ, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಮುಂತಾದವರು ಭಾಗವಹಿಸಲಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಕೆ. ಸುಧಾಕರ್ ಇಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಸುಧಾಕರ್ ಟೆಂಪಲ್‌ರನ್ ಆರಂಭಿಸಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಾರೆ. ಬಳಿಕ ಆಟೋ ಚಾಲಕರು, ಪೌರ ಕಾರ್ಮಿಕರು, ರೈತರು, ಮಹಿಳೆಯರ ಆಶೀರ್ವಾದ ಪಡೆಯಲಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಧ್ಯಾಹ್ನ 3 ಗಂಟೆಗೆ ಬೃಹತ್ ರೋಡ್ ಶೋ ನಡೆಯಲಿದ್ದು, ರೋಡ್ ಶೋನಲ್ಲಿ ರಾಜ್ಯ ಮಟ್ಟದ ಮೈತ್ರಿ ನಾಯಕರು ಭಾಗಿಯಾಗಲಿರುವರು. ಬಿವೈ ವಿಜಯೇಂದ್ರ, ಆರ್. ಅಶೋಕ್, ಎಚ್.ಡಿ ಕುಮಾರಸ್ವಾಮಿ, ಪಿ.ಸಿ ಮೋಹನ್, ಅರವಿಂದ ಲಿಂಬಾವಳಿ, ತಾರಾ ಅನುರಾಧ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Congress Guarantee: ಲೋಕಸಭೆ ಚುನಾವಣೆಗೆ 25 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್; ಇಷ್ಟೆಲ್ಲ ಫ್ರೀ ಫ್ರೀ