ಕಲಬುರಗಿ: ಲೋಕಾಯುಕ್ತ ಅಧಿಕಾರಿಗಳು (Lokayukta Officers) ಇಂದು ಬಿಬಿಎಂಪಿ (BBMP) ಕಂದಾಯ ಅಧಿಕಾರಿ (Revenue Officer) ಬಸವರಾಜ ಮಗ್ಗಿ ಅವರ ಕಲಬುರಗಿಯಲ್ಲಿರುವ ಮನೆ ಸೇರಿದಂತೆ ಇವರಿಗೆ ಸಂಬಂಧಿಸಿದ ಹತ್ತಾರು ಕಡೆಗಳಲ್ಲಿ ದಾಳಿ (Lokayukta Raid) ನಡೆಸಿದ್ದು, ಕೋಟ್ಯಂತರ ಮೌಲ್ಯದ ಅನಧಿಕೃತ ಆಸ್ತಿಪಾಸ್ತಿ (Disproportionate assets) ಪತ್ತೆ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ, ನೂರಾರು ಕ್ಯಾಸಿನೋ (Casino) ಕಾಯಿನ್‌ಗಳನ್ನು (Coins) ಪತ್ತೆ ಹಚ್ಚಿದ್ದು, ಈತ ಜೂಜಾಡಲು ಕ್ಯಾಸಿನೋಗಳಿಗೆ ಪದೇ ಪದೆ ಹೋಗುತ್ತಿದ್ದ ಎಂಬುದು ತಿಳಿದುಬಂದಿದೆ.
ಬಸವರಾಜ್ ಮಗ್ಗಿಯ ಕಲಬುರಗಿಯಲ್ಲಿರುವ ಮನೆ, ಬೆಂಗಳೂರಿನ ಮನೆ ಸೇರಿದಂತೆ 9 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಮೋಟಿ ಅಪಾರ್ಟ್‌ಮೆಂಟ್ ಕುಮಾರ ಪಾರ್ಕ್, ಬಿಬಿಎಂಪಿ ಕಚೇರಿ ಮಹದೇವಪುರ, ರಾಯಲ್ ವಿಸ್ತಾರ ಅಪಾರ್ಟ್ಮೆಂಟ್ ಅಮೃತಹಳ್ಳಿ, ರಾಮ್ಕಿ ಒನ್ ಅಪಾರ್ಟ್ಮೆಂಟ್ ಯಲಹಂಕ, ದಿ ಟ್ರಿ ಪ್ರಾವಿಡೆಂಟ್ ಅಪಾರ್ಟ್ಮೆಂಟ್ ಬಿದರಹಳ್ಳಿಗಳಲ್ಲಿ ರೈಡ್ ಮಾಡಲಾಗಿದೆ.
ಕಲಬುರಗಿಯ ವೀರೇಂದ್ರ ಪಾಟೀಲ್ ಬಡಾವಣೆಯಲ್ಲಿ ಬಸವರಾಜ್ ಐದು ಅಂತಸ್ತಿನ ಭವ್ಯ ಭಂಗಲೆ ಹೊಂದಿದ್ದು, ಇಲ್ಲಿಗೆ ದಾಳಿ ನಡೆಸಿ ದಾಖಲೆಪತ್ರಗಳ ಪರಿಶೀಲನೆ ಮಾಡಲಾಗಿದೆ. ನಾಲ್ಕನೆ ಅಂತಸ್ತಿನಲ್ಲಿ ಬಸವರಾಜ್ ಮಗ್ಗಿ ಕುಟುಂಬ ವಾಸವಾಗಿದ್ದು, ಕೆಳಗಿನ ಮೂರು ಅಂತಸ್ತು ಬಾಡಿಗೆ ನೀಡಲಾಗಿದೆ. ಮನೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಿಂದ ಅಲಂಕಾರ ಮಾಡಲಾಗಿದೆ.
ಬಸವರಾಜ್ ಮಗ್ಗಿಗೆ ವಿಪರೀತ ಕ್ಯಾಸಿನೊ ಹುಚ್ಚು ಇದೆ ಎನ್ನಲಾಗಿದ್ದು, ಕಲಬುರಗಿ ನಿವಾಸದಲ್ಲಿ ನೂರಾರು ಕ್ಯಾಸಿನೋ ಕಾಯಿನ್‌ಗಳು ಪತ್ತೆಯಾಗಿವೆ. ಆಗಾಗ ಕ್ಯಾಸಿನೋಗಳಿಗೆ ತೆರಳುತ್ತಿದ್ದ ಈತನ ಬಳಿ ಬರೋಬ್ಬರಿ 12 ಲಕ್ಷ ರೂ. ಮೌಲ್ಯದ ಕಾಯಿನ್‌ಗಳು ಕಂಡುಬಂದಿವೆ. ಬಸವರಾಜ್ ಮಗ್ಗಿ ಸಹೋದರಿ ಹೇಮಾ ರವಿ ಪ್ರಕಾಶ್ ಅವರಿಗೆ ಸೇರಿದ ಮನೆಯಲ್ಲೂ 50, 100, 1000, 10000 ಮುಖಬೆಲೆಯ ಮಾದರಿಯಲ್ಲಿನ ಕಾಯಿನ್‌ಗಳು ಕಂಡುಬಂದಿವೆ.
ಕಲಬುರಗಿಯ KHB ಕಾಲೋನಿ, ಪಾಳಾ ಗ್ರಾಮದಲ್ಲಿನ ಮನೆ ಹಾಗೂ ಫಾರಂ ಹೌಸ್, ಈತನ ಸಹೋದರಿ ಹೇಮಾ ರವಿಪ್ರಕಾಶ್ ಮನೆಗಳಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೋಟಿ ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮಾಡಿರುವ ಬಿಬಿಎಂಪಿ ಕಂದಾಯ ಅಧಿಕಾರಿ ಬಸವರಾಜ ಮಗ್ಗಿ, ಬೆಲೆಬಾಳುವ ಸುಮಾರು 10 ಎಕರೆಗೂ ಅಧಿಕ ಜಮೀನು ತಾಯಿ ಹೆಸರಲ್ಲಿ ಖರೀದಿ ಮಾಡಿದ್ದಾನೆ. ಪಾಳಾ ಗ್ರಾಮದಲ್ಲಿ ಜಮೀನು ಖರೀದಿ ಮಾಡಿ ಫಾರ್ಮ್ ಹೌಸ್ ನಿರ್ಮಿಸಿದ್ದಾನೆ.
9 ಅಧಿಕಾರಿಗಳ 56 ಸ್ಥಳಗಳಲ್ಲಿ ಮೆಗಾ ರೇಡ್
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ (Corrupt Officers) ಲೋಕಾಯುಕ್ತ ಶಾಕ್ ಮುಟ್ಟಿಸಿದೆ. ರಾಜ್ಯದ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ದಾಳಿ (Lokayukta Raid) ನಡೆಸಿ, ಭ್ರಷ್ಟಾಚಾರ ಆರೋಪಿತ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳಲ್ಲಿ ಪರಿಶೀಲನೆ ಆರಂಭಿಸಿವೆ.
9 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. 11 ಪ್ರಕರಣಗಳಿಗೆ ಸಂಬಂಧಿಸಿ ಸುಮಾರು 100 ಅಧಿಕಾರಿಗಳು 56 ಕಡೆ ನಡೆದ ದಾಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಮಂಡ್ಯ, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಕೋಲಾರ, ಮೈಸೂರು, ಹಾಸನ, ಬೆಂಗಳೂರು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು, ಬೆಳಗಾಗುವ ಮುನ್ನವೇ ತಂಡ ಕಟ್ಟಿಕೊಂಡು ದಾಳಿ ನಡೆಸಿದರು. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಇವರ ತಪಾಸಣೆ ನಡೆದಿದೆ.
ಕಲಬುರಗಿಯಲ್ಲಿ ಬಿಬಿಎಂಪಿ ರೆವಿನ್ಯೂ ಅಧಿಕಾರಿ ಬಸವರಾಜ ಮಾಗಿ, ಮಂಡ್ಯದಲ್ಲಿ ಗ್ರಾಮೀಣ ನೀರು ಸರಬರಾಜು ನಿವೃತ್ತ ಎಕ್ಷಿಕ್ಯೂಟಿವ್ ಇಂಜಿನಿಯರ್ ಶಿವರಾಜು ಎಸ್., ಚಿತ್ರದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆ ನಿವೃತ್ತ ಚೀಫ್ ಇಂಜಿನಿಯರ್ ಎಂ. ರವೀಂದ್ರ, ಧಾರವಾಡದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಶೇಖರ ಗೌಡ, ಬೆಳಗಾವಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾದೇವ ಬನ್ನೂರ್, ದಾವಣೆಗೆರೆಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಡಿ.ಎಚ್ ಉಮೇಶ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಎಸ್ ಪ್ರಭಾಕರ್, ಮೈಸೂರಿನಲ್ಲಿ ಸೂಪರಿಂಟೆಂಡೆಂಟ್ ಇಂಜಿಯರ್ ಮಹೇಶ್ ಕೆ., ಹಾಸನದಲ್ಲಿ ಸೆಕ್ರೆಟರಿ ಎನ್.ಎಂ ಜಗದೀಶ್, ಚಿತ್ರದುರ್ಗದಲ್ಲಿ ಸೂಪರಿಂಟೆಂಡೆಂಟ್ ಇಂಜಿಯರ್ ಕೆ.ಜಿ ಜಗದೀಶ್ ಇವರುಗಳ ಮನೆಗಳು, ಕಚೇರಿಗಳು ಹಾಗೂ ಇತರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ | ED Raid: ಇಡಿ- ಸಿಬಿಐ ಮೆಗಾ ದಾಳಿ; 80 ಅಧಿಕಾರಿಗಳಿಂದ ರೇಡ್, ಬ್ಯಾಂಕ್ ಸಿಬ್ಬಂದಿ ಮನೆ ಸೀಜ್! ಬೆಳಗ್ಗೆಯಿಂದ ಏನೇನಾಯ್ತು?