Site icon Vistara News

Loksabha Election 2024: ಐವರು ಪತ್ನಿಯರು, 150 ಮೊಮ್ಮಕ್ಕಳು; ಒಂದೇ ಕುಟುಂಬದಲ್ಲಿದ್ದಾರೆ 350 ಮತದಾರರು!

Loksabha Election

ಅಸ್ಸಾಂ: ಸಾಮಾನ್ಯವಾಗಿ ಚುನಾವಣೆಯಲ್ಲಿ ಒಂದು ಕುಟುಂಬದಲ್ಲಿ ಹೆಚ್ಚೆಂದರೆ 10-12 ಮಂದಿ ಮತ ಚಲಾಯಿಸಬಹುದು. ಆದರೆ ಏಪ್ರಿಲ್ 19ರಂದು ನಡೆಯಲಿರುವ ಅಸ್ಸಾಂನ ಲೋಕಸಭಾ ಕ್ಷೇತ್ರದ (Loksabha Election 2024) ಚುನಾವಣೆಗೆ ಮತದಾನ ಮಾಡಲು ಒಂದೇ ಕುಟುಂಬದ 350 ಮತದಾರರು ಭಾಗವಹಿಸಲಿರುವುದು ಅಚ್ಚರಿಯನ್ನುಂಟು ಮಾಡಿದೆ.

ಅಸ್ಸಾಂನಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ. ಈ ವೇಳೆ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಫುಲೋಗುರಿ ನೇಪಾಳಿ ಪಾಮ್‌ನಲ್ಲಿ ವಾಸವಾಗಿದ್ದ ದಿವಂಗತ ರಣ್‌ ಬಹದ್ದೂರ್ ಥಾಪಾ ಅವರ ಕುಟುಂಬದ ಸುಮಾರು 350 ಮತದಾರರು ಭಾಗವಹಿಸಲಿದ್ದಾರೆ. ಆ ಮೂಲಕ ಈ ಕುಟುಂಬ ಅಸ್ಸಾಂನಲ್ಲಿ ಅತಿದೊಡ್ಡ ಮತದಾರರನ್ನು ಹೊಂದಿರುವ ಕುಟುಂಬ ಎಂದೆನಿಸಿಕೊಳ್ಳಲಿದೆ.

ರಣ್‌ ಬಹದ್ದೂರ್ ಥಾಪಾ ಅವರು 1964ರಿಂದ ಅಸ್ಸಾಂನ ಸೋನಿತ್ ಪುರ ಜಿಲ್ಲೆಯ ಫುಲೋಗುರಿ ನೇಪಾಳಿ ಪಾಮ್ ನಲ್ಲಿ ಬಂದು ನೆಲೆಸಿದ್ದು, ಇವರು 5 ಹೆಂಡತಿಯರು, 12 ಪುತ್ರರು ಹಾಗೂ 9 ಪುತ್ರಿಯರು ಮತ್ತು 150ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ್ದಾರೆ. ಒಟ್ಟಾರೆ ಇವರ ಕುಟುಂಬದಲ್ಲಿ ಒಟ್ಟು 1200 ಸದಸ್ಯರಿದ್ದು, ಅದರಲ್ಲಿ 350 ಮಂದಿ ಮತದಾನದಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಫುಲೋಗುರಿ ನೇಪಾಳಿ ಪಾಮ್ ಪ್ರದೇಶದಲ್ಲಿ ಸುಮಾರು 300 ಕುಟುಂಬಗಳಿದ್ದು, ಅವರೆಲ್ಲಾ ರಾನ್ ಬಹದ್ದೂರ್ ಥಾಪಾ ಅವರಂತೆ ವಂಶಾವಳಿಯನ್ನು ಹೊಂದಿದ್ದಾರೆ ಎಂಬುದಾಗಿ ಪಾಮ್ ಗ್ರಾಮದ ಮುಖ್ಯಸ್ಥ ಮತ್ತು ರಾನ್ ಬಹದ್ದೂರ್ ಥಾಪಾ ಅವರ ಪುತ್ರ ಟಿಲ್ ಬಹದ್ದೂರ್ ಥಾಪಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೇ ಇವರು ಕೂಡ 8 ಪುತ್ರರು ಮತ್ತು 3 ಪುತ್ರಿಯರನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಬೇಸರ ವ್ಯಕ್ತಪಡಿಸಿದ ಟಿಲ್!

ಆದರೆ ಅವರ ಕುಟುಂಬವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒದಗಿಸುವ ಯಾವುದೇ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆದಿಲ್ಲ. ಅವರ ಕುಟುಂಬದ ಮಕ್ಕಳು ಉನ್ನತ ಶಿಕ್ಷಣ ಪಡೆದಿದ್ದರೂ ಸರ್ಕಾರಿ ಉದ್ಯೋಗ ಸಿಗದೇ ದೂರದೂರಿನಲ್ಲಿ ಖಾಸಗಿ ಉದ್ಯೋಗವನ್ನು ಮಾಡುತ್ತಿರುವುದಾಗಿ ಟಿಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ರಣ್‌ ಬಹದ್ದೂರ್ ಥಾಪಾ ಅವರ ಮತ್ತೊಬ್ಬ ಪುತ್ರ ಸರ್ಕಿ ಬಹದ್ದೂರ್ ಥಾಪಾ ಅವರು ಮಾಧ್ಯಮದೊಂದಿಗೆ ಮಾತನಾಡಿ, ಅವರ ಕುಟುಂಬವು ಸುಮಾರು 1200 ಸದಸ್ಯರನ್ನು ಒಳಗೊಂಡಿದ್ದು, ಅವರಲ್ಲಿ 350 ಸದಸ್ಯರು ಮತ ಚಲಾಯಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಅವರ ತಂದೆ ರಣ್‌ ಬಹದ್ದೂರ್ ಥಾಪಾ ಅವರು 1997ರಲ್ಲಿ ನಿಧನರಾಗಿದ್ದಾರೆ. ಸರ್ಕಿ ಬಹದ್ದೂರ್ ಥಾಪಾ ಅವರಿಗೆ ಈಗ 64 ವರ್ಷ ವಯಸ್ಸಾಗಿದ್ದು, ಮೂವರು ಪತ್ನಿಯರು ಮತ್ತು 12 ಮಕ್ಕಳನ್ನು ಹೊಂದಿದ್ದಾರೆ.

ಇದನ್ನೂ ಓದಿ:Ayodhya Ramanavami: ರಾಮನವಮಿ ವೇಳೆ ಅಯೋಧ್ಯೆ ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಸೋನಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ 9 ವಿಧಾನಸಭಾ ಕ್ಷೇತ್ರವಿದ್ದು, ಅದರಲ್ಲಿ 16.25 ಲಕ್ಷ ಮತದಾರರಿದ್ದಾರೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತ ಏಪ್ರಿಲ್ 19ರಂದು, ಎರಡನೇ ಹಂತ ಏಪ್ರಿಲ್ 26ರಂದು ಹಾಗೂ ಮೂರನೇ ಹಂತ ಮೇ7 ರಂದು ನಡೆಯಲಿದೆ.

Exit mobile version