ಮಾಲೆ: ಭಾರತ ವಿರೋಧಿ ಮನಸ್ಥಿತಿಯ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಮಾಲ್ಡೀವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ (Maldives Election) ಭಾರಿ ಬಹುಮತದಲ್ಲಿ ಆರಿಸಿ ಬಂದಿದ್ದಾರೆ. ಮಾಲ್ಡೀವ್ಸ್‌ನ ಸಂಸತ್ತಿಗೆ (ಮಜ್ಲಿಸ್) ನಡೆದ ಚುನಾವಣೆಯಲ್ಲಿ ಚೀನಾ ಪರ (Pro China) ಆಡಳಿತ ನೀಡುತ್ತಿರುವ ಅಧ್ಯಕ್ಷ ಮೊಹಮ್ಮದ್ ಮುಯಿಜು ಪಕ್ಷ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ಆಡಳಿತ ಪಕ್ಷವಾಗಿರುವ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮಾಲ್ಡೀವ್ಸ್‌ನ 93 ಸ್ಥಾನಗಳಲ್ಲಿ 86ರಲ್ಲಿ ಸ್ಪರ್ಧಿಸಿತ್ತು. ಮಾಲ್ಡೀವ್ಸ್ ಸಂಸತ್ತಿನಲ್ಲಿ PNC ಬಹುಮತವನ್ನು ಪಡೆದುಕೊಂಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ 86 ಸ್ಥಾನಗಳ ಪೈಕಿ ಪಿಎನ್‌ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದ ರೆ, ಮಾಲ್ಡೀವ್ಸ್ ಡೆವಲಪ್ಮೆಂಟ್ ಅಲಯನ್ಸ್ ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಪಕ್ಷ ನಾಯಕ ಮೊಹಮ್ಮದ್ ಸೋಲಿಹ್ ಅವರನ್ನು ಸೋಲಿಸುವ ಮೂಲಕ ಮುಯಿಝು ಅಧ್ಯಕ್ಷರಾದರು. ಸೊಲಿಹ್ ಅವರ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಪ್ರಸ್ತುತ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿತ್ತು. ಇದು ಮುಯಿಜುಗೆ ಹೊಸ ವಿಧೇಯಕಗಳನ್ನು ತರಲು ಅಡ್ಡಿಯುಂಟುಮಾಡಿತ್ತು. ಚೀನಾ ಪರವಾದ ಹೊಸ ಕಾನೂನುಗಳನ್ನು ಮಾಡಲು ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಜು ಪಕ್ಷಕ್ಕೆ ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.
ಸಂಸತ್ತಿನ 93 ಸ್ಥಾನಗಳಿಗೆ ಆರು ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಗುಂಪುಗಳು 368 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜನಸಂಖ್ಯೆಯ ಹೆಚ್ಚಳದ ನಂತರ, ಹಿಂದಿನ ಸಂಸತ್ತಿಗಿಂತ ಆರು ಹೆಚ್ಚು ಸ್ಥಾನಗಳಿವೆ. ಚುನಾವಣೆಯಲ್ಲಿ ಸುಮಾರು 2,84,000 ಜನರು ಮತ ಚಲಾಯಿಸಿದ್ದಾರೆ. ಮುಯಿಜುವಿನ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಸ್ವತಂತ್ರರು ಕಣದಲ್ಲಿದ್ದಾರೆ.
ಭೂಮಧ್ಯರೇಖೆಯಾದ್ಯಂತ ಸುಮಾರು 800 ಕಿಲೋಮೀಟರ್ (500 ಮೈಲುಗಳು) ಹರಡಿರುವ ಸುಮಾರು 1,192 ಸಣ್ಣ ಹವಳ ದ್ವೀಪಗಳ ತಗ್ಗು ರಾಷ್ಟ್ರವಾದ ಮಾಲ್ಡೀವ್ಸ್, ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ಸಮುದ್ರ ಮಟ್ಟ ಏರಿಕೆಗೆ ಹೆಚ್ಚು ಅಪಾಯಕ್ಕೊಳಗಾಗುವ ದೇಶಗಳಲ್ಲಿ ಒಂದಾಗಿದೆ. ಮಾಜಿ ನಿರ್ಮಾಣ ಸಚಿವರಾದ ಮುಯಿಜು ಅವರು ಮಹತ್ವಾಕಾಂಕ್ಷೆಯ ಭೂ ಸುಧಾರಣೆ ಮತ್ತು ದ್ವೀಪಗಳನ್ನು ಎತ್ತರಕ್ಕೆ ನಿರ್ಮಿಸುವ ಮೂಲಕ ಅಲೆಗಳನ್ನು ಸೋಲಿಸುವುದಾಗಿ ಭರವಸೆ ನೀಡಿದ್ದಾರೆ. ಪರಿಸರವಾದಿಗಳು ಈ ನೀತಿಯಲ್ಲಿ ಪ್ರವಾಹದ ಹೊಸ ಅಪಾಯಗಳನ್ನು ಕಂಡಿದ್ದಾರೆ.
ಮಾಲ್ಡೀವ್ಸ್ ತನ್ನ ಪ್ರಾಚೀನ ಧವಳ ಕಡಲತೀರಗಳು ಮತ್ತು ರೆಸಾರ್ಟ್‌ಗಳಿಂದ ಉನ್ನತ ಮಟ್ಟದ ಐಷಾರಾಮಿ ಹಾಲಿಡೇ ಸ್ಪಾಟ್ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಹಿಂದೂ ಮಹಾಸಾಗರದಲ್ಲಿ ಭೂ-ರಾಜಕೀಯ ಹಾಟ್‌ಸ್ಪಾಟ್. ಇಲ್ಲಿ ಜಾಗತಿಕ ಪೂರ್ವ-ಪಶ್ಚಿಮ ಹಡಗು ಮಾರ್ಗಗಳು ದ್ವೀಪಸಮೂಹವನ್ನು ಹಾದುಹೋಗುತ್ತವೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಪರ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ಗೆ ಪ್ರಾಕ್ಸಿಯಾಗಿ ಮುಯಿಜು ಗೆದ್ದರು. ಕಳೆದ ವಾರ ನ್ಯಾಯಾಲಯ ಯಮೀನ್‌ಗೆ ಭ್ರಷ್ಟಾಚಾರಕ್ಕಾಗಿ ನೀಡಿದ್ದ 11 ವರ್ಷಗಳ ಜೈಲು ಶಿಕ್ಷೆಯಿಂದ ರಿಲೀಫ್ ನೀಡಿತ್ತು.
ಮಾಲ್ಡೀವ್ಸ್‌ನ ವಿಶಾಲವಾದ ಸಮುದ್ರ ಗಡಿಗಳಲ್ಲಿ ಗಸ್ತು ತಿರುಗಲು ನವದೆಹಲಿಯಿಂದ ಉಡುಗೊರೆಯಾಗಿ ನೀಡಿದ ವಿಮಾನದಳ ಹಾಗೂ 89 ಭಾರತೀಯ ಸೈನಿಕರ ಗ್ಯಾರಿಸನ್ ಅನ್ನು ವಾಪಸ್ ಕಳಿಸಲು ಮುಯಿಜು ಆಡಳಿತ ಡೆಡ್‌ಲೈನ್ ನೀಡಿದೆ.
ಇದನ್ನೂ ಓದಿ: Maldives Election: ಮಾಲ್ಡೀವ್ಸ್‌ನಲ್ಲಿ ಇಂದು ಚುನಾವಣೆ; ಭಾರತ ವಿರೋಧಿ ಮುಯಿಜುಗೆ ಸೋಲು?