ದೇಶದಲ್ಲಿ ಡಿಜಿಟಲ್ ಮೀಡಿಯಾ ನಿಯಂತ್ರಣ ಸುವ್ಯವಸ್ಥೆ ಕುರಿತು ಶೀಘ್ರವೇ ಒಂದು ಕಾನೂನು ರೂಪಣೆ ಹಾಗೂ ಡಿಜಿಟಲ್ ಪತ್ರಕರ್ತರಿಗೆ ಮಾನ್ಯತೆ ನೀಡುವ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹಳ್ಳಿಹಳ್ಳಿಗಳನ್ನೂ ತಲುಪುತ್ತಿರುವ ಡಿಜಿಟಲ್ ಮಾಧ್ಯಮ ವ್ಯಾಪಕತೆ ಹೆಚ್ಚಾಗುತ್ತಿರುವುದರ ಜತೆಗೆ ಅದು ಸೃಷ್ಟಿಸಿರುವ ಅಸೀಮ ಅವಕಾಶಗಳನ್ನೂ, ಜತೆಗೆ ಅನಿರೀಕ್ಷಿತ ಸವಾಲುಗಳನ್ನೂ ಅವರು ಗುರುತಿಸಿದ್ದಾರೆ. ಸಮತೋಲನ ಕಾಪಾಡುವ ದೃಷ್ಟಿಯಿಂದ ಶೀಘ್ರವೇ ವಿಧೇಯಕ ಮಂಡಿಸಲಾಗುತ್ತದೆ. ಮುದ್ರಣ ಹಾಗೂ ಟಿವಿ ಮಾಧ್ಯಮದ ಪತ್ರಕರ್ತರಂತೆ ಡಿಜಿಟಲ್ ಮೀಡಿಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು ಎಂದಿದ್ದಾರೆ.
ಡಿಜಿಟಲ್ ಮಾಧ್ಯಮ ವಲಯವು ಕಳೆದ ಒಂದು ದಶಕದಲ್ಲಿ ನಮ್ಮ ದೇಶದಲ್ಲೂ ಇತರ ಕಡೆಗಳಲ್ಲೂ ತೀವ್ರ ವೇಗದಲ್ಲಿ ಬೆಳೆದ ಕ್ಷೇತ್ರ. ಮುದ್ರಣ ಮಾಧ್ಯಮದಂತೆ ನೂರಾರು ವರ್ಷಗಳ ಇತಿಹಾಸ ಇದಕ್ಕಿಲ್ಲ. ಹೀಗಾಗಿ ಮುದ್ರಣ ಮಾಧ್ಯಮದ ಶೈಲೀಕೃತ ನಿರೂಪಣೆಯ ಪರಂಪರೆ, ಸಾಂಪ್ರದಾಯಿಕ ಪತ್ರಿಕೋದ್ಯಮದ ಬುನಾದಿಯೂ ಇಲ್ಲ. ಆದರೆ ಇದು ಭವಿಷ್ಯದ ಮಾಧ್ಯಮವೆಂದೇ ಪರಿಗಣಿತವಾಗಿದೆ. ಅಂಕಿ ಅಂಶಗಳನ್ನು ಗಮನಿಸಿದಾಗ ಇದು ನಿಜ ಅನಿಸುತ್ತದೆ. ಭಾರತದಲ್ಲಿ 2022ರಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 65.80 ಕೋಟಿ. ಅಂದರೆ ಶೇ.50ಕ್ಕಿಂತಲೂ ಅಧಿಕ ಮಂದಿ ಅಂತರ್ಜಾಲ ಬಳಸುತ್ತಿದ್ದಾರೆ. ಇದರಲ್ಲಿ 46.70 ಕೋಟಿ ಮಂದಿ ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದು ಕಂಡುಬಂದಿದೆ. ಇನ್ನು 2022ರ ಆರಂಭದಲ್ಲಿ ದೇಶದಲ್ಲಿ 114 ಕೋಟಿ ಮೊಬೈಲ್ ಸಂಪರ್ಕಗಳಿದ್ದವು. 2021ರಿಂದ 2022ರ ಒಂದು ವರ್ಷದ ಅವಧಿಯಲ್ಲಿ 3.4 ಕೋಟಿ ಮೊಬೈಲ್ ಸಂಪರ್ಕಗಳ ಹೆಚ್ಚಳವಾಗಿದೆ. ಇದರಲ್ಲಿ 80 ಕೋಟಿಯಷ್ಟು ಸ್ಮಾರ್ಟ್‌ಫೋನ್‌ಗಳಿವೆ ಎಂಬ ಅಂದಾಜು ಇದೆ. ಅಂದರೆ ಇಷ್ಟು ಮಂದಿ ಒಂದಲ್ಲ ಒಂದು ಡಿಜಿಟಲ್ ಮಾಧ್ಯಮದ ಸಂಪರ್ಕಕ್ಕೆ ಬಂದವರಾಗಿರುತ್ತಾರೆ. ಮತ್ತು ಈ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಲೇ ಇದೆ. 2026ರ ವೇಳೆಗೆ ಇಂಟರ್‌ನೆಟ್ ಬಳಸುವವರಲ್ಲಿ ಶೇ.89 ಮಂದಿ ಡಿಜಿಟಲ್ ಸುದ್ದಿಯನ್ನು ನೆಚ್ಚಿಕೊಳ್ಳಲಿದ್ದಾರೆ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಹೀಗಾಗಿಯೇ ಇದನ್ನು ಭವಿಷ್ಯದ ಮಾಧ್ಯಮ ಎಂದು ಬಣ್ಣಿಸುತ್ತಿರುವುದು. ಹೆಚ್ಚಿನ ಎಲ್ಲ ಮುದ್ರಣ ಹಾಗೂ ಟಿವಿ ಮಾಧ್ಯಮ ಸಂಸ್ಥೆಗಳೂ ಇಂದು ತಮ್ಮದೇ ಆದ ಡಿಜಿಟಲ್ ವೇದಿಕೆಗಳನ್ನು ಹೊಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿವೆ.
ಈ ವಲಯ ಮಾಧ್ಯಮ ಬೆಳವಣಿಗೆಗೆ ಹುಲುಸಾಗಿದೆ ಎಂಬುದಂತೂ ನಿಜ. ಹೀಗಾಗಿ ಇಲ್ಲಿ ಬಂಡವಾಳ ಹೂಡುವವರೂ, ವೃತ್ತಿಪರ ಹಾಗೂ ಅನುಭವಿ ಪತ್ರಕರ್ತರೂ ಇದ್ದಾರೆ ಮತ್ತು ವಿಶ್ವಾಸಾರ್ಹ ಮಾಧ್ಯಮಕಾಯಕವೂ ನಡೆಯುತ್ತಿದೆ. ಆದರೆ ಅನೇಕ ವಿಚಾರಗಳಲ್ಲಿ ಡಿಜಿಟಲ್ ಮಾಧ್ಯಮ ಇನ್ನೂ ಬೆಳವಣಿಗೆ ಕಂಡುಕೊಳ್ಳಬೇಕಿದೆ. ಮೊದಲನೆಯದು ವಿಶ್ವಾಸಾರ್ಹತೆಯ ಪ್ರಶ್ನೆ. ಬೆಳೆ ಇದ್ದಲ್ಲಿ ಕಳೆಯೂ ಇರುವಂತೆ ಇಲ್ಲೂ ಇದೆ. ವಿಶ್ವಾಸಾರ್ಹ ಮಾಧ್ಯಮಗಳು ಇದ್ದಂತೆ ನಂಬಲರ್ಹವಲ್ಲದ, ನೋಡುಗರನ್ನು ಆಕರ್ಷಿಸುವುದಕ್ಕಾಗಿಯೇ ಪ್ರಚೋದಕ ಆದರೆ ನಿಜವಲ್ಲದ ಕಂಟೆಂಟ್ ನೀಡುವ, ಅರ್ಧಸತ್ಯಗಳನ್ನು ಸಾರಿ ಓದುಗರ ದಾರಿ ತಪ್ಪಿಸುವ ಮೀಡಿಯಾಗಳೂ ಇವೆ. ಇವುಗಳನ್ನು ವಿಶ್ವಾಸಾರ್ಹ ಮಾಧ್ಯಮಗಳಿಂದ ಪ್ರತ್ಯೇಕಿಸುವ ಕಾರ್ಯ ಆಗಬೇಕಿದೆ. ಇದಕ್ಕಾಗಿ ಸರಿಯಾದ ಕಾಯಿದೆ, ಡಿಜಿಟಲ್ ಮಾಧ್ಯಮ ಪಾಲಿಸಿಯನ್ನು ರೂಪಿಸಬೇಕಿದೆ. ಆದರೆ ನಿಯಂತ್ರಣದ ಹೆಸರಿನಲ್ಲಿ ಸೆನ್ಸಾರ್‌ಶಿಪ್ ತರಲು ಸರ್ಕಾರ ಪ್ರಯತ್ನಿಸಬಾರದು ಎಂಬ ಎಚ್ಚರ ಅಗತ್ಯ. ಹಾಗೆಯೇ, ಈ ವಲಯದಲ್ಲಿ ಸದ್ಯಕ್ಕೆ ಒಂದು ಬಗೆಯ ಅರಾಜಕತೆ ನೆಲೆಸಿದೆ. ಮುದ್ರಣ ಮಾಧ್ಯಮದ ನೋಂದಣಿ- ವಿಶ್ವಾಸಾರ್ಹತೆ ಮತ್ತಿತರ ಸಂಗತಿಗಳನ್ನು ಖಚಿತಪಡಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಹಾಗೆಯೇ ಟಿವಿ ರೇಟಿಂಗ್ ಖಚಿತಪಡಿಸಲು ಹಲವು ವ್ಯವಸ್ಥೆಗಳಿವೆ. ಆದರೆ ಡಿಜಿಟಲ್ ಮೀಡಿಯಾಕ್ಕೆ ಇನ್ನೂ ಸರಿಯಾದ ಯಾವುದೇ ಸಾಂಸ್ಥಿಕ ನಿಯಂತ್ರಣವಿಲ್ಲ. ಡಿಜಿಟಲ್ ಮೀಡಿಯಾಗಳಿಗೂ ಪತ್ರಕರ್ತರಿಗೂ ಸೂಕ್ತ ಮಾನ್ಯತೆ ಸಿಗಬೇಕು. ಇದನ್ನು ಸಾಧ್ಯವಾಗಿಸಿದಾಗ ಸುಳ್ಳು ಮೀಡಿಯಾಗಳ ಹಾವಳಿ ಕಡಿಮೆಯಾಗಿ ನೈಜ ಮಾಧ್ಯಮಗಳನ್ನು ಜನ ನೆಚ್ಚಿಕೊಳ್ಳುವಂತಾಗುತ್ತದೆ.
ಮುದ್ರಣ ಮಾಧ್ಯಮಕ್ಕೆ ಸಬ್ಸಿಡಿ ದರದಲ್ಲಿ ನ್ಯೂಸ್‌ಪ್ರಿಂಟ್ ಅನ್ನು ಸರ್ಕಾರ ಒದಗಿಸುತ್ತದೆ. ಟಿವಿ ಮಾಧ್ಯಮಕ್ಕೂ ಜಾಹಿರಾತುಗಳನ್ನು ಮೀಸಲಿಡಲಾಗಿದೆ. ಜವಾಬ್ದಾರಿಯುತ ಮಾಧ್ಯಮಗಳನ್ನು ಬೆಳೆಸುವ ದೃಷ್ಟಿಯಿಂದ ಇದು ಸ್ವಾಗತಾರ್ಹವೇ. ಹಾಗೆಯೇ ಮಾನ್ಯತೆ ಪಡೆದ ಡಿಜಿಟಲ್ ಮೀಡಿಯಾಗಳಿಗೂ ಜಾಹೀರಾತು ಸೇರಿದಂತೆ ಮೂಲಸೌಕರ್ಯ ಒದಗಿಸುವ ಕುರಿತು ಕೂಡ ಸರ್ಕಾರ ಚಿಂತಿಸಬೇಕಿದೆ. ನ್ಯೂಸ್‌ಪ್ರಿಂಟ್ ದುಬಾರಿಯಾಗುತ್ತಿರುವ, ಹಲವು ದೊಡ್ಡ ಪತ್ರಿಕೆಗಳು ಕೂಡ ಮುದ್ರಣ ನಿಲ್ಲಿಸುತ್ತಿರುವ ಈ ಕಾಲದಲ್ಲಿ ಜನತೆ ಹೆಚ್ಚೆಚ್ಚು ಡಿಜಿಟಲ್ ಕಡೆಗೆ ವಾಲುತ್ತಿರುವುದರಿಂದ ಈ ವಲಯವನ್ನು ಪೋಷಿಸುವ ಕಡೆಗೆ ಗಂಭೀರವಾಗಿ ಚಿಂತಿಸಬೇಕಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮುಖ್ಯ ಚುನಾವಣಾ ಆಯುಕ್ತರ ನೇಮಕದಲ್ಲಿ ಪಾರದರ್ಶಕತೆ ಅಗತ್ಯ