Site icon Vistara News

ವಿಸ್ತಾರ ಸಂಪಾದಕೀಯ: ಯುಗಾದಿ ದೇಶಕ್ಕೆ ಶುಭ ಹೊತ್ತು ತರಲಿ

Yugadi festival

ಮಂಗಳವಾರ ಮುಂಜಾನೆ ಚಾಂದ್ರಮಾನ ಯುಗಾದಿ (Yugadi Festival). ಇಂದಿಗೆ ಶೋಭಕೃತು ಹೆಸರಿನ ಸಂವತ್ಸರ ಮುಕ್ತಾಯವಾಗಿ ʼಕ್ರೋಧಿʼ ಅಥವಾ ʼಕ್ರೋಧʼ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರಿನಲ್ಲೇ ಕ್ರೋಧವನ್ನು ಧರಿಸಿರುವ ಈ ಸಂವತ್ಸರ, ಕೋಪವನ್ನು ಹೆಸರಿನಲ್ಲಿ ಮಾತ್ರ ಹೊಂದಿದ್ದರೆ ಸಾಕು ಎಂಬುದು ಹಿಂದೂ ಪಂಚಾಂಗ ನಂಬುವವರ ಆಶಯವಾಗಿದೆ. ಮುಂದಿನ ದಿನಗಳು ಶುಭವನ್ನು ಹೊತ್ತು ತರಲಿ ಎಂಬ ಆಶಯದಿಂದ ಹಬ್ಬಗಳನ್ನು ಆಚರಿಸುತ್ತೇವೆ. ಇಂದಿನಿಂದ ವಸಂತ ಋತು ಆರಂಭವಾಗುತ್ತದೆ. ಮಾವು ಚಿಗುರಿ, ಹಣ್ಣು ಬಿಟ್ಟು ಮಾರುಕಟ್ಟೆಯನ್ನು ತುಂಬಿದೆ. ಹಲಸು ಮುಂತಾದ ಈ ಋತುವಿನ ಹಣ್ಣುಗಳು ಕೈಗೆ ಸಿಗುತ್ತಿವೆ. ಹೊಂಗೆ ಮುಂತಾದ ಮರಗಳು ಹೂಬಿಟ್ಟಿವೆ. ಚಾಂದ್ರಮಾನ ಯುಗಾದಿ ಬಂದರೆ ಇಡೀ ಪ್ರಕೃತಿ ಹೊಸದಾಗುತ್ತದೆ. ಮಾನವನನ್ನೂ ʼಮತ್ತೆ ಹೊಸದಾಗುʼ ಎಂದು ಆಹ್ವಾನಿಸುತ್ತದೆ. ದ.ರಾ ಬೇಂದ್ರೆ ಅವರ ಕವನದ ಆಶಯದಂತೆ, “ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ.”

ಯುಗಾದಿ ಎಂಬ ಹಬ್ಬದ ಸಂದೇಶ ಬೇವು ಹಾಗೂ ಬೆಲ್ಲಗಳನ್ನು ಒಟ್ಟಾಗಿ ಸೇರಿಸಿ, ಸೇವಿಸಿ, ಬದುಕಿನಲ್ಲಿ ಅವೆರಡೂ ಸಮಾನವಾಗಿ ಇದೆ ಎಂಬ ಸತ್ಯವನ್ನು ಕಂಡುಕೊಳ್ಳುವುದು. ಪ್ರಕೃತಿ ಮರಳಿ ಅರಳಿದೆ. ಆದರೆ ಬಿರುಬಿಸಿಲು, ನೀರಿನ ಕೊರತೆ ಹಾಗೂ ಶಾಖದ ಕರಾಳತೆ ಈ ವರ್ಷ ತನ್ನ ಪ್ರತಾಪವನ್ನು ತೋರಿಸುತ್ತಿದೆ. ಬೆಂಗಳೂರಿನಂಥ, ಇದುವರೆಗೆ ಕಾವೇರಿ ನೀರಿನಿಂದ ತನ್ನ ಬದುಕನ್ನು ಕಂಡುಕೊಂಡ ನಗರದಲ್ಲಿ ನೀರಿನ ತತ್ವಾರ ಕಂಡುಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ಬರದ ಛಾಯೆ ವ್ಯಾಪಿಸಿದೆ. ಹಣದುಬ್ಬರ ಎಲ್ಲದರ ಮೇಲೂ ತನ್ನ ಕರಾಳ ಬಾಹುಗಳನ್ನು ಚಾಚಿದೆ. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳಿಗೂ ಬೆಲೆಗಳು ದುಬಾರಿಯಾಗಿವೆ. ಹೀಗಾಗಿ ಕಳೆದ ವರ್ಷದ ಯುಗಾದಿಗೆ ಮಾಡಿದ ಪ್ರಮಾಣದಲ್ಲಿ ಈ ವರ್ಷವೂ ಸಿಹಿತಿಂಡಿ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂಬುದು ಮಧ್ಯಮ, ಕೆಳಮಧ್ಯಮ ವರ್ಗದ ದುಗುಡ. ಬಡವರಿಗಂತೂ ಕೇಳುವುದೇ ಬೇಡ. ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಿದ್ದರೂ ರೈತನಿಗೇನೂ ಅದರಿಂದ ಲಾಭವಾಗಿಲ್ಲ ಎಂಬುದು ಗೊತ್ತೇ ಇದೆ. ಇವೆಲ್ಲವನ್ನೂ ಬೇವು ಎಂದು ಭಾವಿಸಿ ಬೆಲ್ಲವನ್ನು ಹುಡುಕಾಡಬೇಕಿದೆ. ಹೊಸ ಫಸಲು ಕೈಗೆ ಬರುವ ಕಾಲವಿದು. ಉತ್ತಮ ಬೆಳೆ ಬರಲಿ ಹಾಗೂ ಅದನ್ನು ಬೆಳೆದ ಅನ್ನದಾತನಿಗೆ ಸರಿಯಾದ ಬೆಲೆ ಸಿಗಲಿ ಎಂದು ಆಶಿಸೋಣ.

ಈ ಸಲದ ಬೇಸಿಗೆ ನಮ್ಮೆಲ್ಲರನ್ನು ಬೇಯಿಸುತ್ತಿದೆ; ಬರ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇದೇನೂ ಹಿತಕರವಾದ ಸುದ್ದಿಯಲ್ಲ. ಈ ವಿಶ್ಲೇಷಣೆ ಸುಳ್ಳಾಗದು. ಆದರೆ ಪರಿಸ್ಥಿತಿಯನ್ನು ಸಹನೀಯವಾಗಿಸಲು ಏನೇನು ಮಾಡಬಹುದು ಎಂಬುದನ್ನು ನಾವು ನೋಡಬೇಕಿದೆ. ಬರದಲ್ಲಿ ಸಿಲುಕಿ ನಾವು ಹಾಗೂ ಸುತ್ತಮುತ್ತಲಿನವರು ಸಂಕಷ್ಟಕ್ಕೆ ಒಳಗಾಗದಂತೆ ಯಾವ್ಯಾವ ಉಪಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಯುಗಾದಿಯ ಕಾಲಪುರುಷ ನಮಗೂ ನಮ್ಮನ್ನು ಆಳುವವರಿಗೂ ಅಧಿಕಾರಿಗಳಿಗೂ ವಿವೇಕವನ್ನು ಕೊಡಲಿ ಎಂದು ಹಾರೈಸೋಣ. ʼಕಾಲಚಕ್ರʼ ಎಂದು ಹಿರಿಯರು ಕರೆದಿದ್ದಾರೆ. ಅಂದರೆ ಸುಖದುಃಖಗಳು ಚಕ್ರದಂತೆ ತಿರುಗುತ್ತಲೇ ಇರುತ್ತವಂತೆ. ಹೀಗಾಗಿ ಇಂದು ಕಷ್ಟಗಳು ಎದುರಾದರೆ ನಾಳೆ ಸುಖ ಬರಬಹುದು. ಹೀಗಾಗಿ ಗತಿಸಿದ ಕಾಲದ ಬಗ್ಗೆ ಹೆಚ್ಚು ಕೊರಗದೆ ಮುಂಬರುವ ಹಿತವನ್ನು ಎದುರು ನೋಡುತ್ತಾ ಭರವಸೆಯಿಂದ ಬದುಕಬೇಕೆಂಬುದನ್ನೇ ನಮಗೆ ಯುಗಾದಿಯು ಸಂದೇಶ ರೂಪದಲ್ಲಿ ತಿಳಿಸುತ್ತದೆ. ಈ ಸಂದೇಶವನ್ನು ಅರ್ಥ ಮಾಡಿಕೊಂಡು ವಿವೇಕಯುತವಾದ ರೀತಿಯಲ್ಲಿ ಹಬ್ಬವನ್ನು ಆಚರಿಸೋಣ.

ವಿಶೇಷವೆಂದರೆ ಈ ಬಾರಿಯ ಯುಗಾದಿ, ಜನಪ್ರಾತಿನಿಧ್ಯದ ಮಹತ್ವದ ನಿರ್ಣಯವನ್ನು ನೀಡುವ ಸಂದರ್ಭವನ್ನೂ ಹೊತ್ತು ತಂದಿದೆ. ಲೋಕಸಭೆ ಚುನಾವಣೆ ಹತ್ತಿರ ಬಂದಿದೆ. ನಮ್ಮನ್ನು ಆಳುವವರು ಹೇಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು, ಹೇಗಿರಬೇಕು ಎಂಬುದನ್ನು ವಿಶ್ಲೇಷಿಸಿಕೊಂಡು, ಮುಂಬರುವ ಚುನಾವಣೆಯಲ್ಲಿ ಮೌಲಿಕವಾದ ರೀತಿಯಲ್ಲಿ ಮತದಾನ ಮಾಡುವ ಸಂದೇಶವನ್ನೂ ಈ ಬಾರಿಯ ಯುಗಾದಿ ನಮಗೆ ಹೊತ್ತು ತಂದಿದೆ. ಸರಿಯಾದ ಫಲಿತಾಂಶ ಮತ್ತು ಉತ್ತಮ ಸರ್ಕಾರ ನಮ್ಮದಾಗಬೇಕಿದ್ದರೆ ಪೂರ್ಣ ಪ್ರಮಾಣದ ಮತದಾನ ಆಗಬೇಕು ಹಾಗೂ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯೂ ಅದರಲ್ಲಿ ಭಾಗಿಯಾಗಬೇಕು. ಆಗ ಪ್ರಜಾಪ್ರಭುತ್ವ ಎಂಬುದು ಸಿಹಿಯಾದ ಬೆಲ್ಲವಾಗುತ್ತದೆ. ಅಲ್ಲಿ ಎಲ್ಲರ ಧ್ವನಿಗೂ ಮನ್ನಣೆ ದೊರೆಯುತ್ತದೆ. ಉತ್ತಮ ಸರ್ಕಾರವಿದ್ದರೆ ಬದುಕು ಸುಗಮವಾಗುತ್ತದೆ. ಹಿಂದಿನವರು ʼರಾಜಾ ಕಾಲಸ್ಯ ಕಾರಣಂʼ ಎಂದಿದ್ದಾರೆ. ಆಳುವವರಿಂದಾಗಿ ಕಾಲವು ರೂಪ ಪಡೆಯುತ್ತದೆ. ಆಳುವವರು ಮತ್ತು ಅವರನ್ನು ಆಯ್ಕೆ ಮಾಡುವ ಮತದಾರರು- ಇಬ್ಬರಿಗೂ ಕಾಲಪುರುಷ ವಿವೇಕ ನೀಡಿ, ಸೂಕ್ತ ಆಯ್ಕೆಗೆ ಕಾರಣವಾಗಲಿ.

Exit mobile version