ವೈದ್ಯಕೀಯ ನಿರ್ಲಕ್ಷ್ಯ ತೋರಿದ ಧಾರವಾಡದ ಪ್ರಸೂತಿ ತಜ್ಞೆಯೊಬ್ಬರಿಗೆ ಗ್ರಾಹಕ ನ್ಯಾಯಾಲಯ 11 ಲಕ್ಷ ರೂ. ದಂಡ ವಿಧಿಸಿದೆ. ಈ ಪ್ರಕರಣ ವೈದ್ಯಕೀಯ ನಿರ್ಲಕ್ಷ್ಯದಿಂದ ಬವಣೆ ಅನುಭವಿಸುವ ಸಾಮಾನ್ಯ ಜನರ ಪಾಲಿಗೆ ಆಶಾಕಿರಣವಾಗಿದೆ. ಏಕೆಂದರೆ, ಅಲ್ಲಲ್ಲಿ ವೈದ್ಯ ನಿರ್ಲಕ್ಷ್ಯದಿಂದ ಜೀವಹಾನಿ, ಅಂಗಾಂಗ ಶಾಶ್ವತ ಊನ ಇತ್ಯಾದಿ ಪ್ರಕರಣ ನಡೆಯುತ್ತಲೇ ಇರುತ್ತದೆ. ಆದರೆ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ.
ಈ ಪ್ರಕರಣದಲ್ಲಿ, ನರ್ಸಿಂಗ್ ಹೋಮ್ ಒಂದರಲ್ಲಿ ಗರ್ಭಿಣಿಯೊಬ್ಬರ ತಪಾಸಣೆ ನಡೆಸಲಾಗಿತ್ತು. ಹೊಟ್ಟೆಯಲ್ಲಿರುವ ಶಿಶು ಆರೋಗ್ಯದಿಂದಿದೆ ಎಂದು ವರದಿ ನೀಡಲಾಗಿತ್ತು. ಐದು ಬಾರಿ ಸ್ಕ್ಯಾನ್ ಮಾಡಿದಾಗಲೂ ಮಗು ಆರೋಗ್ಯದಿಂದಿದೆ ಎಂದೇ ವರದಿ ನೀಡಲಾಗಿತ್ತು. ಆದರೆ ಅದು ಅಂಗವಿಕಲ ಮಗುವಾಗಿತ್ತು ಎಂದು ಹೆರಿಗೆ ಆದಾಗ ಗೊತ್ತಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾ ಸೌಂಡ್ ಸ್ಕ್ಯಾನ್ ನಿಯಮಾವಳಿ ಪ್ರಕಾರ, 18ರಿಂದ 20 ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ ಮತ್ತು ಅದರ ಅಂಗಾಂಗಗಳ ಸುಸ್ಥಿತಿ ತಿಳಿಯುತ್ತದೆ. ಆದರೆ ಈ ಪ್ರಕರಣದಲ್ಲಿ 5 ಬಾರಿ ಸ್ಕ್ಯಾನ್ ನಡೆಸಿದಾಗಲೂ ಮಗುವಿನ ನೈಜ ಸ್ಥಿತಿಯನ್ನು ವೈದ್ಯರು ಸರಿಯಾಗಿ ಹೇಳಿರಲಿಲ್ಲ. ಹೀಗಾದರೆ ಆ ಅಂಗವಿಕಲ ಮಗುವಿನ ಕರಾಳ ಭವಿಷ್ಯಕ್ಕೆ ಯಾರು ಹೊಣೆ? ಈ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯ ನರ್ಸಿಂಗ್ ಹೋಮ್ ಮತ್ತು ಪ್ರಸೂತಿ ತಜ್ಞೆಗೆ ದೊಡ್ಡ ಮೊತ್ತದ ದಂಡ ವಿಧಿಸಿದೆ. ಈ ಹಣವನ್ನು ಆ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಮೀಸಲಿಡಬೇಕು ಎಂದಿದೆ. ಇದೊಂದು ವೈದ್ಯಲೋಕದ ಕಣ್ಣು ತೆರೆಸುವ ಮತ್ತು ಮಾನವೀಯತೆಯ ಹಿನ್ನೆಲೆಯಲ್ಲಿ ಮಹತ್ವದ ತೀರ್ಪಾಗಿದೆ.
ನಮ್ಮಲ್ಲಿ ವೈದ್ಯರ ಮೇಲಿನ ಹಲ್ಲೆಗಳನ್ನು ತಡೆಯಲು ಕಠಿಣ ಕಾನೂನುಗಳು ಇವೆ. ನಿರ್ಲಕ್ಷ್ಯದಿಂದ ರೋಗಿ ಮೃತಪಟ್ಟಾಗ, ಅಥವಾ ಕೆಲವೊಂದು ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಹೀಗಾಯಿತು ಎಂಬ ತಪ್ಪು ಕಲ್ಪನೆಯಿಂದ ರೋಗಿಯ ಕಡೆಯವರು ಆಕ್ರೋಶದಿಂದ ವೈದ್ಯರ ಮೇಲೆ ಹಲ್ಲೆ ನಡೆಸುವುದು ಹೆಚ್ಚಾಗಿದೆ. ಇಂಥ ಹಲ್ಲೆಗಳನ್ನು ತಡೆಯಲು ಸರ್ಕಾರ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಇಂಥ ಕೃತ್ಯಗಳು ಮೂರು ತಿಂಗಳಿಂದ ಐದು ವರ್ಷದವರೆಗೆ ಜೈಲು ಮತ್ತು ಒಂದು ಲಕ್ಷ ರೂ. ದಂಡಕ್ಕೆ ಅರ್ಹ. ವೈದ್ಯರ ಸಂರಕ್ಷಣೆಗೆ ಇದು ಅಗತ್ಯವೇ ಅನ್ನೋಣ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಆಗುವ ಹಾನಿ ಸಂತ್ರಸ್ತರಿಗೂ ನ್ಯಾಯ ದೊರೆಯಬೇಕಲ್ಲವೇ?
ಆ ದೃಷ್ಟಿಯಿಂದ, 1995ರಲ್ಲಿ ಸುಪ್ರೀಂ ಕೋರ್ಟ್, ವೈದ್ಯಕೀಯವನ್ನು ‘ಸೇವೆ’ ಎಂದು ಪರಿಗಣಿಸಿ, ಈ ಸೇವೆಯಲ್ಲಿ ಆಗುವ ನ್ಯೂನತೆಗೆ ತಕ್ಕ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ಗ್ರಾಹಕ ನ್ಯಾಯಾಲಯಕ್ಕೆ ನೀಡಿತು. ಹೀಗೆ ಇಂದು ಸೇವಾನ್ಯೂನತೆಗೆ ಒಳಗಾದವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಪಡೆಯಬಹುದಾಗಿದೆ. ಇದೇ ರೀತಿ ರೋಗಿಗಳ ಅಥವಾ ಗರ್ಭಿಣಿಯರ ಚಿಕಿತ್ಸೆ, ತಪಾಸಣೆ, ಸಲಹೆಯ ಸಂದರ್ಭದಲ್ಲಿ ವೈದ್ಯರು ನಿರ್ಲಕ್ಷ್ಯ ಎಸಗಿದ ಸಂದರ್ಭದಲ್ಲಿ ದಂಡನೆಗೆ ಒಳಪಡಿಸುವ ಕಠಿಣ ಕಾಯಿದೆಯನ್ನೂ ಸರ್ಕಾರ ರೂಪಿಸುವುದು ಅಗತ್ಯ. ಏಕೆಂದರೆ ವೈದ್ಯಕೀಯವು ಪ್ರಾಣ ಉಳಿಸುವ ಅಥವಾ ತೆಗೆಯುವ ಸಾಧ್ಯತೆಯುಳ್ಳ ವೃತ್ತಿ ಆಗಿರುವುದರಿಂದ ಇದರ ಹೊಣೆಗಾರಿಕೆ ಹೆಚ್ಚು. ಈಗ ಇರುವ ಕಾಯಿದೆಗಳು ವೈದ್ಯಕೀಯ ನಿರ್ಲಕ್ಷ್ಯವನ್ನು ಸರಿಯಾಗಿ ವ್ಯಾಖ್ಯಾನಿಸುವ, ಅಪರಾಧವನ್ನು ಗುರುತಿಸುವ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಸಾಕಷ್ಟು ಬಲಿಷ್ಠತೆಯನ್ನು ಹೊಂದಿಲ್ಲ. ಉದಾಹರಣೆಗೆ, ದಂಡ ಸಂಹಿತೆಯ ಸೆಕ್ಷನ್ 304ಎಯ ವೈದ್ಯಕೀಯ ನಿರ್ಲಕ್ಷ್ಯದ ವ್ಯಾಖ್ಯಾನವನ್ನು ಕೋರ್ಟ್‌ನಲ್ಲಿ ಬಹು ಸುಲಭವಾಗಿ ವೈದ್ಯರು ತಳ್ಳಿಹಾಕಬಹುದಾಗಿದೆ. ಹಾಗೂ ಶಿಕ್ಷೆಯ ಪ್ರಮಾಣ ಕೂಡ ಅಲ್ಪವಾದುದಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಲ್ಪಸಂಖ್ಯಾತರ ಹಿತರಕ್ಷಣೆಯಲ್ಲಿ ಭಾರತ ನಂ.1
ಸಂವಿಧಾನದ 21ನೇ ಆರ್ಟಿಕಲ್‌ನಲ್ಲಿ ದತ್ತವಾಗಿರುವ ಪ್ರಜೆಯ ಬದುಕುವ ಹಕ್ಕು, ಸರಿಯಾದ ಆರೋಗ್ಯ ಸೇವೆಯ ಖಾತ್ರಿ ಇಲ್ಲವೆಂದಾದರೆ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಬಾರದು. ಹೆಚ್ಚು ನಿಖರವಾದ ಮತ್ತು ಗ್ರಾಹಕಸ್ನೇಹಿ ಕಾಯಿದೆ ಇದ್ದಾಗ ವೈದ್ಯರು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸುವಂತಾಗುತ್ತದೆ. ಮತ್ತು, ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಅಥವಾ ಜೀವಮಾನವಿಡೀ ಬವಣೆ ಅನುಭವಿಸುವುದು ತಪ್ಪುತ್ತದೆ.