Site icon Vistara News

medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

Medical negligence Hospital fined Rs 10 lakh for drowning newborn baby in hot water

ಧಾರವಾಡ: ನವಜಾತ ಶಿಶುವನ್ನು (Newborn baby in Hubballi) ಬಿಸಿನೀರಿನಲ್ಲಿ ಮುಳುಗಿಸಿದ ಪರಿಣಾಮ ತೀವ್ರ ಸುಟ್ಟ ಗಾಯಗಳಾಗಿದ್ದು, ಅದನ್ನು ಮರೆಮಾಚಲು ಚರ್ಮ ರೋಗದ (Skin disease) ಕಥೆ ಕಟ್ಟಿದ್ದ ಹುಬ್ಬಳ್ಳಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ (Multispeciality Hospital in Hubballi) ಗ್ರಾಹಕ ನ್ಯಾಯಾಲಯವು (Consumer Court) 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.

ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಅಜಿತ್ ಎಸ್.ಜೋಶಿ, ಡಾ.ಪ್ರಕಾಶ್ ಮಾಡಲಗೇರಿ ಮತ್ತು ಡಾ.ವಿದ್ಯಾ ಜೋಶಿ ಅವರಿಗೆ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವನ್ನು ಪಾವತಿಸುವಂತೆ ಫೆಬ್ರವರಿ 15 ರಂದು ನಿರ್ದೇಶನ ನೀಡಿದೆ. ಕುಟುಂಬಕ್ಕೆ 7.5 ಲಕ್ಷ ರೂ.ಗಳನ್ನು ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.

ಆಸ್ಪತ್ರೆಯ ಸಹಾಯಕಿ ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‌ನಲ್ಲಿ ಕೂರಿಸಿದ್ದ ಪರಿಣಾಮ ಶಿಶುವಿಗೆ ಸುಟ್ಟ ಗಾಯವಾಗಿತ್ತು. ಈ ತಪ್ಪನ್ನು ಮರೆಮಾಚಲು ಮಗುವಿಗೆ ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಎಂಬ ಚರ್ಮ ರೋಗ ಇರಬಹುದು ಎಂದು ಆಸ್ಪತ್ರೆ ವೈದ್ಯರು ತಪ್ಪು ಮಾಹಿತಿಯನ್ನು ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಶಿಶುವಿನ ಪೋಷಕರು ಆಸ್ಪತ್ರೆ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದ ಮೊರೆಹೋಗಿದ್ದರು. ಈಗ ಪ್ರಕರಣದ ತೀರ್ಪು ಬಂದಿದ್ದು 10 ಲಕ್ಷ ರೂಪಾಯಿಯನ್ನು ಪರಿಹಾರದ ರೂಪವಾಗಿ ನೀಡುವಂತೆ ಆದೇಶಿಸಿದೆ.

ದಂಡ ಪಾವತಿಸಲು ತಪ್ಪಿದರೆ ವಾರ್ಷಿಕ ಶೇ.8ರ ಬಡ್ಡಿ

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ.ಹಿರೇಮಠ ಅವರು ಆದೇಶ ನೀಡಿದ್ದಾರೆ. ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ ಶೇ. 75 ಭಾಗ ಹಾಗೂ ಬಾಕಿ ಶೇ. 25 ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗಾಗಿ 10 ಲಕ್ಷ ಪರಿಹಾರವನ್ನು ನೀಡಬೇಕು. ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ. 8ರ ಬಡ್ಡಿಯನ್ನು ಲೆಕ್ಕಹಾಕಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?

ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿ ಎಂಬುವವರು 2019 ಡಿಸೆಂಬರ್‌ 10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪತ್ನಿ ರೇಖಾ ಅವರನ್ನು ದಾಖಲಿಸಿದ್ದರು. ಅಂದೇ ರೇಖಾ ಅವರಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿತ್ತು.

ಡಿ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಬೇಕಿತ್ತು. ಆದರೆ, ಆ ವೇಳೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಬಿಸಿ ಬಿಸಿ ಕುದಿಯುವ ನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಈ ವಿಷಯವನ್ನು ಮನಗಂಡ ಮಗುವಿನ ಪೋಷಕರು ಈ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಅಜಿತ್ ಜೋಶಿ, ಡಾ. ವಿದ್ಯಾ ಜೋಶಿ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಆದರೆ, ಇದನ್ನು ಒಪ್ಪದ ಆಸ್ಪತ್ರೆಯವರು ಚರ್ಮ ರೋಗ ಎಂದು ಹೇಳಿತ್ತು. ಚರ್ಮರೋಗ ತಜ್ಞ ಡಾ. ರಂಜನ್ ಜೀವನ್ನವರ ಮಗುವನ್ನು ತಪಾಸಣೆ ಮಾಡಿ ಅದಕ್ಕೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಚರ್ಮ ರೋಗ ಇರಬಹುದು ಎಂದು ಹೇಳಿ, ಬೆಂಗಳೂರಿನ ಹ್ಯೂಮನ್‍ಜೆನಟಿಕ್ ಸೆಂಟರ್‌ನಲ್ಲಿ ಜೆನಟಿಕ್ ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು ಎನ್ನಲಾಗಿದೆ.

ವಿನಯ ಹಂಜಿ ಅವರು ಪತ್ನಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಸಿಕೊಂಡು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಎಸ್‌ಡಿಎಂ ಆಸ್ಪತ್ರೆಯಲ್ಲಿ ಇದು ಚರ್ಮ ರೋಗ ಅಲ್ಲ, ಸುಟ್ಟ ಗಾಯ ಎಂದು ದೃಢಪಡಿಸಿದ್ದಲ್ಲದೆ, ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಮಗು ಗುಣಮುಖವಾಗಿತ್ತು.

ಗ್ರಾಹಕರ ಆಯೋಗದ ಮೊರೆ ಹೋಗಿದ್ದ ವಿನಯ್

ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಸಲಹೆ ಬಗ್ಗೆ ಬೇಸರಗೊಂಡ ವಿನಯ ಹಂಜಿ, ಹುಬ್ಬಳ್ಳಿಯ ಸಿಟಿ ಕ್ಲಿನಿಕ್, ಏಳು ವೈದ್ಯರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಸ್ಪತ್ರೆಗೆ ವಿಮೆ ನೀಡಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯನ್ನು ಒಂಬತ್ತನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ಇದನ್ನೂ ಓದಿ: BBMP Tax: ಏಪ್ರಿಲ್ 1ರಿಂದ ಬೆಂಗಳೂರಲ್ಲಿ ಹೊಸ ಆಸ್ತಿ ತೆರಿಗೆ; ಎಲ್ಲೆಲ್ಲಿ ದುಪ್ಪಟ್ಟು ಟ್ಯಾಕ್ಸ್? ಬಾಡಿಗೆದಾರರಿಗೆ ಭಾರಿ ಬರೆ!

ವಿಚಾರಣೆಯಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ಸಾಬೀತು

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗ್ರಾಹಕರ ಆಯೋಗಕ್ಕೆ ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಚರ್ಮ ಕಾಯಿಲೆ ಇರಬಹುದು ಎಂದು ಸುಳ್ಳು ಹೇಳಿರುವುದು ಗೊತ್ತಾಗಿದೆ. “ಇದು ಆಸ್ಪತ್ರೆ ಸಿಬ್ಬಂದಿಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಸ್ಪಷ್ಟ ನಿರ್ಲಕ್ಷ್ಯ ಮತ್ತು ತಪ್ಪುಗಳ ಹೊರತಾಗಿಯೂ, ಆಸ್ಪತ್ರೆ ವೈದ್ಯರು, ಸುಟ್ಟ ಗಾಯಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಸಂತ್ರಸ್ತ ಮಗುವಿನ ಪೋಷಕರಾದ ದೂರುದಾರ, ಅವರ ಪತ್ನಿಯನ್ನು ಸಮಾಧಾನಪಡಿಸಬೇಕಾಗಿತ್ತು. ಹಾಗೆ ಮಾಡುವ ಬದಲು ಅವರು ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಚರ್ಮ ಕಾಯಿಲೆ ಎಂದು ಬಣ್ಣಿಸಲು ಪ್ರಯತ್ನಿಸಿದ್ದಾರೆ. ಇದು ಅಕ್ಷಮ್ಯವಾಗಿದೆ. ಇದರಿಂದ ಮಗುವಿನ ಪೋಷಕರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಳಲುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ 10ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Exit mobile version