ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ
ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.
ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.
ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.
ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.
ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.
ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.
ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.
ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.
ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.
ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್ ಲಿಂಕ್- https://youtube.com/@gurusakalamaa?feature=shared
ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!