ಬೆಂಗಳೂರು : ವಿಧಾನ ಪರಿಷತ್ನ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗುರುವಾರ ರಾತ್ರಿ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಹಿರಿಯ ಮುಖಂಡ ಆಯನೂರು ಮಂಜುನಾಥ್ (Ayanuru Manjunath) ಅವರಿಗೆ ಹೈಕಮಾಂಡ್ ಮಣೆ ಹಾಕಿದೆ. ಈ ಮೂಲಕ ಕಾಂಗ್ರೆಸ್ನ ಇನ್ನೊಬ್ಬರ ಆಕಾಂಕ್ಷಿ ಎಸ್. ಪಿ ದಿನೇಶ್ ಅವರಿಗೆ ಹಿನ್ನಡೆಯಾಗಿದೆ. ದಿನೇಶ್ ಅವರು ಹಿಂದಿನ ಎರಡು ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಆ ವೇಳೆ ಬಿಜೆಪಿಯಲ್ಲಿದ್ದ ಆಯನೂರು ವಿರುದ್ಧ ಸೋತಿದ್ದರು. ಇದೀಗ ಕಾಂಗ್ರೆಸ್ನಿಂದ ಆಯನೂರು ಕಣಕ್ಕೆ ಇಳಿದಿದ್ದಾರೆ.
ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಡುವೆ ಪ್ರಕಟಿಸಿ ಸಿದ್ಧತೆ ಆರಂಭಿಸಿದೆ ಕಾಂಗ್ರೆಸ್.
ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕೊಡಗಿನ ಕೆ.ಕೆ.ಮಂಜುನಾಥ್‌ಗೆ ಕೆಪಿಸಿಸಿ ಅವಕಾಶ ಕೊಟ್ಟಿತ್ತು. ಆದರೆ, ಪದವೀಧರ ಕ್ಷೇತ್ರಕ್ಕೆ ಉಳಿಸಿಕೊಂಡಿತ್ತು. ಲೋಕಸಭೆ ಚುನಾವಣೆ ಅಬ್ಬರ ಆರಂಭಗೊಂಡ ನಂತರ ಪರಿಷತ್ ಚುನಾವಣೆಗೆ ಗೌಣವಾಗುತ್ತದೆ ಎಂಬ ಕಾರಣಕ್ಕೆ ತಕ್ಷಣವೇ ಅಭ್ಯರ್ಥಿಗಳನ್ನು ಘೋಷಿಸಿ ಎಂಬುದು ಆಕಾಂಕ್ಷಿಗಳ ಬೇಡಿಕೆಯಾಗಿತ್ತು. ಆದರೆ, ತೀವ್ರ ಪೈಪೋಟಿ ಇದ್ದ ಕಾರಣ ಅಂತಿಮ ಲೆಕ್ಕಾಚಾರ ಹಾಕಿ ಆಯನೂರು ಅವರಿಗೆ ಟಿಕೆಟ್ ಕೊಟ್ಟಿದೆ.
ಎಸ್.ಪಿ.ದಿನೇಶ್ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ನಿಂದ ಅವಕಾಶ ಪಡೆದುಕೊಂಡು ಪರಾಭವಗೊಂಡಿದ್ದರೂ, ಈ ಬಾರಿ ಉತ್ತಮ ವಾತಾವರಣವಿರುವುದರಿಂದ ಮತ್ತೊಂದು ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವಾಗಲೇ ಟಿಕೆಟ್ ಬೇಡಿಕೆ ಇಟ್ಟಿದ್ದರು. ಹೀಗಾಗಿ ಟಿಕೆಟ್ ಅವರಿಗೇ ಕೊಡಲಾಗಿದೆ.
ಇದನ್ನೂ ಓದಿ : Congress Candidate List : ಕಾಂಗ್ರೆಸ್ನ 3ನೇ ಪಟ್ಟಿ ಬಿಡುಗಡೆ; 57 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ
ನೈಯತ್ಯ ಪದವೀಧರ ಕ್ಷೇತ್ರ ಅಸ್ತಿತಕ್ಕೆ ಬಂದಾಗಿನಿಂದಲೂ ಬಿಜೆಪಿ ಇಲ್ಲಿ ಪಾರಮ್ಯ ಸಾಧಿಸಿದೆ. ಆಯನೂರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹೊರತಾಗಿಯೂ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷ ತೊರೆದು ಹೋಗಿದ್ದ ಆಯನೂರು ಜೆಡಿಎಸ್ ಸೇರಿದ್ದರು ಅಲ್ಲಿ ಪರಾಭವಗೊಂಡು ಬಳಿಕ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಇದೀಗ ಬಿಜೆಪಿ ವಿರುದ್ಧವೇ ತೊಡೆ ತಟ್ಟಿದ್ದಾರೆ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ(ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕು ಮಾತ್ರ) ಸೇರಿಕೊಂಡು ಒಟ್ಟಾರೆ 5 ಲೋಕಸಭೆ, 30 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ.