Site icon Vistara News

MLC Election: ಕಾಂಗ್ರೆಸ್‌ನ 7, ಬಿಜೆಪಿಯ 3, ಜೆಡಿಎಸ್‌ನ ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ ನಾಮಪತ್ರ ಸಲ್ಲಿಕೆ

mlc election nomination

ಬೆಂಗಳೂರು: ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ (MLC Election) ನಾಮಪತ್ರ (nomination) ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಮೂರೂ ಪಕ್ಷಗಳ ಎಲ್ಲ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ (Congress) 7, ಬಿಜೆಪಿಯ (BJP) 3, ಜೆಡಿಎಸ್‌ನ (JDS) ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ (legislative council) ನಾಮಪತ್ರ ಸಲ್ಲಿಕೆಯಾಯಿತು.

ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿರುವ 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ (ಜೂ. 3) ಕೊನೆಯ ದಿನವಾಗಿತ್ತು. ಹನ್ನೊಂದು ಸ್ಥಾನಗಳ ಪೈಕಿ ಕಾಂಗ್ರೆಸ್ 7, ಬಿಜೆಪಿ 3 ಮತ್ತು ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಅವಕಾಶವಿದೆ. ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 13ಕ್ಕೆ ಮತದಾನ ನಿಗದಿಯಾಗಿದ್ದು, ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ, ಚುನಾವಣೆ ಇಲ್ಲದೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ಆಗುವ ಸಂಭವ ಇದೆ.

ಇಂದು ಕಾಂಗ್ರೆಸ್‌ 7 ಅಭ್ಯರ್ಥಿಗಳಾದ ಯತೀಂದ್ರ ಸಿದ್ದರಾಮಯ್ಯ, ಎನ್.ಎಸ್ ಬೋಸರಾಜು, ವಸಂತ್ ಕುಮಾರ್, ಗೋವಿಂದ ರಾಜು, ಐವಾನ್ ಡಿಸೋಜಾ, ಬಿಲ್ಕಿಸ್ ಬಾನು ಹಾಗೂ ಜಗದೇವ್ ಗುತ್ತೆದಾರ್ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಬಿಜೆಒಇ ಅಭ್ಯರ್ಥಿಗಳಾದ ಸಿ.ಟಿ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮುಳೆ ಕೂಡ ವಿಧಾನ ಸಭೆ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.‌ ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಸುನೀಲ್ ಕುಮಾರ್ ಮುಂತಾದವರು ಸಾಥ್‌ ನೀಡಿದರು.

ಜೆಡಿಎಸ್‌ ಅಭ್ಯರ್ಥಿ ಜವರಾಯಿಗೌಡ ಕೂಡ ಇಂದೇ ನಾಮಪತ್ರ ನೀಡಿದರು. ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ಜೊತೆಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, “ಬಿಜೆಪಿಯಿಂದ ನಮ್ಮ ಮೂರು ಜನ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆಗಿದೆ. ವಿಜಯೇಂದ್ರ, ಸದಾನಂದಗೌಡ ಎಲ್ಲರೂ ಇದ್ದಾರೆ. ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ರಾಜ್ಯದಿಂದ, ರಾಷ್ಟ್ರದಿಂದ ಆಯ್ಕೆಯಾಗಿದೆ. ಪಕ್ಷದಿಂದ ಇನ್ನಷ್ಟು ಗಟ್ಟಿಯಾದ ಹೋರಾಟ ಆಗಬೇಕಿದೆ. ಕಾಂಗ್ರೆಸ್ ಭಂಡ ಸರ್ಕಾರ. ಹಗರಣ ಮಾಡಿ ರಾಜಾರೋಷವಾಗಿ ಓಡಾಡ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟಕ್ಕೆ ಅಣಿಯಾಗಿದೆ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ನಮ್ಮ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿ, ಬಿಜೆಪಿ ಪರ ಹೋರಾಟ ಮಾಡ್ತಾರೆ” ಎಂದರು.

ಯತೀಂದ್ರ ಸಿದ್ದರಾಮಯ್ಯ ವಿಸ್ತಾರ ನ್ಯೂಸ್‌ಗೆ ನೀಡಿದ ಹೇಳಿಕೆ: “2023ರಲ್ಲಿ ಹೈಕಮಾಂಡ್ ನನಗೆ ಕ್ಷೇತ್ರ ತ್ಯಾಗ ಮಾಡಲು ಸೂಚಿಸಿತ್ತು. ಹೀಗಾಗಿ ನಾನು ವರುಣ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಮಾಡಿದೆ. ಹೈಕಮಾಂಡ್ ಅಂದು ಹೇಳಿದಂತೆ ನಡೆದುಕೊಂಡಿದೆ. ನಾನು ಹೈಕಮಾಂಡ್ ಗೆ ಧನ್ಯವಾದ ತಿಳಿಸುತ್ತೇನೆ. ರಾಜ್ಯದ ಜನರ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡ್ತೀನಿ” ಎಂದರು.

ಬಿ.ವೈ ವಿಜಯೇಂದ್ರ ಹೇಳಿಕೆ: “ಪಕ್ಷವು ಸಿ.ಟಿ ರವಿ, ಎನ್. ರವಿಕುಮಾರ್, ಎಂ.ಜಿ ಮುಳೆ ಅವರನ್ನು ಆಯ್ಕೆ ಮಾಡಿದೆ. ಮೂವರೂ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಇನ್ನಷ್ಟು ಧ್ವನಿ ಎತ್ತುವ ಕೆಲಸ ಮಾಡಲಿದ್ದೇವೆ. ಎಕ್ಸಿಟ್ ಪೋಲ್ ಫಲಿತಾಂಶದಿಂದ ಸಿಎಂ, ಸಚಿವರಿಗೆ ಎದೆಬಡಿತ ಜೋರಾಗಿದೆ. ವಾಲ್ಮೀಕಿ ನಿಗಮ ಹಗರಣದಲ್ಲಿ ಬಿಜೆಪಿಯಿಂದ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಸಿಬಿಐ ತನಿಖೆ ಆಗಬೇಕು. ರಾಜ್ಯ ಸರ್ಕಾರ ಇದನ್ನು ಮುಚ್ಚಿ ಹಾಕೋ ಪ್ರಯತ್ನ ಮಾಡ್ತಿದೆ” ಎಂದರು.

ಇದನ್ನೂ ಓದಿ: MLC Election: ಮೇಲ್ಮನೆ ಚುನಾವಣೆ ಮತದಾನ ಆರಂಭ, 6 ಕ್ಷೇತ್ರಗಳಲ್ಲಿ 78 ಸ್ಪರ್ಧಿಗಳ ಹಣಾಹಣಿ

Exit mobile version