Site icon Vistara News

MLC Election Results: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಧನಂಜಯ ಸರ್ಜಿಗೆ ಗೆಲುವು; ರಘುಪತಿ ಭಟ್‌ ಬಂಡಾಯ ವಿಫಲ

dhananjaya sarji mlc election

ಮೈಸೂರು: ವಿಧಾನ ಪರಿಷತ್‌ಗೆ (MLC Election Results) ನೈರುತ್ಯ ಪದವೀಧರ ಕ್ಷೇತ್ರದಿಂದ (Graduate constituency) ನಡೆದ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಾ. ಧನಂಜಯ ಸರ್ಜಿಗೆ ಭರ್ಜರಿ ಗೆಲುವು ದೊರೆತಿದೆ. ಕಾಂಗ್ರೆಸ್ (Congress) ಅಭ್ಯರ್ಥಿ ಆಯನೂರು ಮಂಜುನಾಥ್‌ಗೆ ಹೀನಾಯ ಸೋಲಾಗಿದೆ. ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಮಾಜಿ ಶಾಸಕ ರಘುಪತಿ ಭಟ್‌ (Raghupathi Bhat) ಅವರ ಉಮೇದುವಾರಿಕೆ ವಿಫಲವಾಗಿದೆ.

ಬಿಜೆಪಿಯ ಧನಂಜಯ ಸರ್ಜಿಗೆ 37,627 ಮತಗಳು ಲಭ್ಯವಾಗಿವೆ. ಕಾಂಗ್ರೆಸ್‌ನ ಆಯನೂರು ಮಂಜುನಾಥ್‌ಗೆ 13,516 ಮತಗಳು ಲಭ್ಯವಾಗಿವೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಗೆ 24,111 ಮತಗಳ ಅಂತರದ ಭರ್ಜರಿ ಗೆಲುವು ಪ್ರಾಪ್ತವಾಗಿವೆ. ಈ ಮೂಲಕ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸತತ ಏಳನೇ ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ.

ಚಲಾವಣೆಯಾಗಿದ್ದ ಒಟ್ಟು ಮತಗಳು 66497. ಈ ಪೈಕಿ ಸಿಂಧುವಾದ ಮತಗಳು 61382. ಕುಲಗೆಟ್ಟ ಮತಗಳು 5115. ಗೆಲುವಿಗಾಗಿ ನಿಗದಿಪಡಿಸಿದ್ದ ಕೋಟಾ ಮತಗಳು 30,692. ನಿಗದಿಪಡಿಸಿದ್ದ ಕೋಟಾ ಮತಗಳಿಗಿಂತ ಹೆಚ್ಚಿನ ಪ್ರಮಾಣದ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ ಬಿಜೆಪಿಯ ಧನಂಜಯ ಸರ್ಜಿ.

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ 7,039 ಮತಗಳು ಲಭ್ಯವಾಗಿವೆ. ಇವರ ಪರವಾಗಿ ಶಿವಮೊಗ್ಗದಿಂದ ಮಾಜಿ ಸಚಿವ ಈಶ್ವರಪ್ಪ ಕೂಡ ಬಂದು ಮತ ಯಾಚಿಸಿದ್ದರು. ಆದರೆ ಬಿಜೆಪಿ ಮತ ಗಳಿಕೆಯಲ್ಲಿ ಯಾವುದೇ ಕನ್ನ ಕೊರೆಯಲು ಇವರು ವಿಫಲರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಪಕ್ಷ ಟಿಕೆಟ್‌ ನೀಡಿರಲಿಲ್ಲ. ವಿಧಾನ ಪರಿಷತ್ತಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್‌ಗೆ ಅದೂ ಸಿಕ್ಕಿರಲಿಲ್ಲ. ಇದೀಗ ಬಂಡಾಯವೂ ವಿಫಲವಾಗಿದೆ. ಹಿಜಾಬ್‌ ಮುಂತಾದ ಪ್ರಕರಣಗಳಲ್ಲಿ ಆಕ್ರಮಣಕಾರಿ ನಿಲುವು ತಾಳಿದ್ದ ರಘುಪತಿ ಭಟ್‌ ಅವರ ಈ ತೀವ್ರ ನಿಲುವೇ ಅವರನ್ನು ಬಿಜೆಪಿ ಕೈಬಿಡಲು ಕಾರಣವಾಯಿತಾ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಭೋಜೇಗೌಡ ಗೆಲುವು

ಮೈಸೂರು: ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದ (MLC Election Results) ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರು ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ್ದಾರೆ. ಇವರು ಮತ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ವಿರುದ್ಧ 5,267 ಮತಗಳ ಭಾರಿ ಅಂತರದಿಂದ ಜಯಭೇರಿ ಮೊಳಗಿಸಿದ್ದಾರೆ.

ಕ್ಷೇತ್ರದಲ್ಲಿ 19,479 ಒಟ್ಟು ಚಲಾವಣೆ ಆಗಿದ್ದು, ಇದರಲ್ಲಿ 821 ಮತ ತಿರಸ್ಕೃತಗೊಂಡಿವೆ. ಇನ್ನುಳಿದ 18,658 ಮತಗಳಲ್ಲಿ 9,330 ಕೋಟಾ ನಿಗದಿಯಾಗಿತ್ತು. 9829 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಭೋಜೇಗೌಡ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ 4,562 ಮತಗಳನ್ನು ಪಡೆದಿದ್ದಾರೆ.

ವಿಜೇತ ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮಾತನಾಡಿ, ಈ ಬಾರಿ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಬಹಳ ಅಭೂತಪೂರ್ವ ಗೆಲುವನ್ನು ಶಿಕ್ಷಕರು ತಂದು ಕೊಟ್ಟಿದ್ದಾರೆ. ಹಾಗಾಗಿ ಈ ಗೆಲುವನ್ನು ಶಿಕ್ಷಕ ಸಮುದಾಯಕ್ಕೆ ಸರ್ಮಪಿಸುತ್ತೇನೆ. ನಮ್ಮ ಶಿಕ್ಷಕರು ಬಹಳ ಶ್ರಮಪಟ್ಟು ಗೆಲುವನ್ನು ತಂದುಕೊಟ್ಟಿದ್ದಾರೆ. ಬಹಳ ವಿಶ್ವಾಸವಿಟ್ಟು ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿತ್ತು, ಅದರಂತೆಯೇ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಒಂದಾಗಿದ್ದರಿಂದ ನಮ್ಮ ಬಲ ಹೆಚ್ಚಾಗಿದೆ. ಹೊಂದಾಣಿಕೆ ಕೆಲಸ ಮಾಡಿದೆ, ಕಳೆದ ಬಾರಿಯೇ ನಾನು ಜೆಡಿಎಸ್‌ನಿಂದ ಏಕಾಂಗಿಯಾಗಿ ನಿಂತು ಗೆದ್ದಿದ್ದೆ. ಈ ಬಾರಿ ಬಿಜೆಪಿ ಜತೆಗಿನ ಹೊಂದಾಣಿಕೆಯಿಂದ ಬಲ ಇನ್ನಷ್ಟು ಹೆಚ್ಚಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಫಲಪ್ರದವಾಗಿದೆ. ಬಿಜೆಪಿ-ಜೆಡಿಎಸ್‌ನ ಎಲ್ಲಾ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

Exit mobile version