ಬೆಂಗಳೂರು: ಜೂನ್ 3ರಂದು ವಿಧಾನಸಬೆಯಿಂದ (vidhana sabha) ವಿಧಾನ ಪರಿಷತ್‌ಗೆ (vidhana parishat) ನಡೆಯಲಿರುವ ಚುನಾವಣೆಗೆ (MLC Election) ಬಿಜೆಪಿಯಿಂದ (BJP) ಅಭ್ಯರ್ಥಿಗಳನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದ್ದು, ಇದರಲ್ಲಿ ಸುಮಲತಾ ಅಂಬರೀಶ್ (Sumalatha Ambareesh) ಹೆಸರು ಪ್ರಮುಖವಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿಯಿಂದ ಮೂವರಿಗೆ ಟಿಕೆಟ್ ಫೈನಲ್ ಆಗಿದ್ದು, ಇಂದು ಸಂಜೆ ಅಧಿಕೃತ ಘೋಷಣೆ ಆಗಲಿದೆ ಎಂದು ತಿಳಿದುಬಂದಿದೆ. ಸಂಸದೆ ಸುಮಲತಾ ಅಂಬರೀಶ್, ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಎಂ. ನಾಗರಾಜು ಅವರಿಗೆ ಪರಿಷತ್ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಇಂದು ಸಂಜೆ ಈ ವಿಚಾರವನ್ನು ಹೈಕಮಾಂಡ್ ಘೋಷಿಸಲಿದೆ ಎಂದು ಹೇಳಲಾಗಿದೆ.
ಸಂಪ್ರದಾಯದ ಅನುಸಾರ ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚಿಸಿದ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ರವಾನಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಅದರಂತೆ ರಾಜ್ಯ ಘಟಕ ನಡೆದುಕೊಂಡಿದೆ. ವರಿಷ್ಠರ ಮುಂದಿನ ನಿರ್ಧಾರಕ್ಕಾಗಿ ಎದುರು ನೋಡಲಾಗುತ್ತಿದೆ. ಬಿಜೆಪಿ ವರಿಷ್ಠರು ಕೂಡ ಲೋಕಸಭೆ ಚುನಾವಣೆಯಲ್ಲಿ ವ್ಯಸ್ತರಾಗಿದ್ದ ಕಾರಣ ಜೂನ್ 1ರ ಬಳಿಕವೇ ಎಂಎಲ್ಸಿ ಪಟ್ಟಿ ಅಂತಿಮಗೊಳಿಸುವುದಾಗಿ ಹೇಳಿದ್ದರು. ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆಗೊಳಿಸಲು ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 3 ಕಡೆಯ ದಿನವಾಗಿದೆ.
ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಮಂಡ್ಯದಲ್ಲಿ ಸಂಸತ್ ಸದಸ್ಯ ಸ್ಥಾನವನ್ನು ತ್ಯಾಗ ಮಾಡಿರುವ ಅವರ ನಡೆಯನ್ನು ಪರಿಗಣಿಸಲಾಗಿದೆ. ಈ ಸಲ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಮಂಡ್ಯವನ್ನು ಎಚ್.ಡಿ ಕುಮಾರಸ್ವಾಮಿ ತಮ್ಮ ಅದೃಷ್ಟ ಪರೀಕ್ಷೆಗೆ ಆಯ್ದುಕೊಂಡಿದ್ದರು.
ಇದರಿಂದ ಸುಮಲತಾ ಅಸಮಾಧಾನಕ್ಕೆ ಒಳಗಾಗಿದ್ದರು. ಈ ಬಗ್ಗೆ ಅಮಿತ್ ಶಾ ಜೊತೆಗೂ ಮಾತನಾಡಿದ್ದರು. ಮುಂದೆ ಸೂಕ್ತ ಸ್ಥಾನಮಾನವನ್ನು ನೀಡುವುದಾಗಿ ಅಮಿತ್ ಶಾ, ಸುಮಲತಾ ಅವರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಸಂಸದೆ ಸುಮ್ಮನಾಗಿದ್ದರು. ಆದರೆ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗದೆ ಸುಮ್ಮನುಳಿದಿದ್ದರು. ಸುಮಲತಾ ಅವರ ತ್ಯಾಗವನ್ನು ಪರಿಗಣಿಸಿರುವ ಹೈಕಮಾಂಡ್ ಇದೀಗ ಸೂಕ್ತ ಸ್ಥಾನ ನೀಡಲು ಮುಂದಾಗಿದೆ.
ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಹಾಗೂ ದಕ್ಷಿಣ ಕನ್ನಡದ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಉತ್ತರ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೂ ಟಿಕೆಟ್ ಕೈತಪ್ಪಿತ್ತು. ಇವರಿಗೂ ವಿಧಾನ ಪರಿಷತ್ ಟಿಕೆಟ್ ದೊರೆಯಬಹುದು ಎನ್ನಲಾಗಿತ್ತು. ಆದರೆ ಹೈಕಮಾಂಡ್ ಇವರನ್ನು ಪರಿಗಣಿಸಿಲ್ಲ.
ಕರ್ನಾಟಕದಲ್ಲಿ ಎರಡು ಹಂತಗಳ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆಯ ಕಾವು ಜೋರಾಗಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಅಸಮಾಧಾನ ತೀವ್ರವಾಗಿದೆ. ಆದರೆ ಕೇಂದ್ರದಲ್ಲಿನ ಉಭಯ ಪಕ್ಷಗಳು ಈಗ ಈ ಬಗ್ಗೆ ಗಮನ ಹರಿಸುವಷ್ಟು ಬಿಡುವಾಗಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕ ನೋಡೋಣ ಎಂದು ರಾಜ್ಯ ನಾಯಕರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯ ಮತದಾನಕ್ಕೆ ಸಿದ್ಧತೆ: ಡಿಸಿ ಎಂ.ಎಸ್. ದಿವಾಕರ್