Site icon Vistara News

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka Congress snatches Rs 4000 under Kisan Samman says PM Narendra Modi

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಮೂರನೇ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ರೈತರಿಗೆ ಯಾವ ರೀತಿಯ ಮೋಸ ಮಾಡುತ್ತದೆ ಎನ್ನುವುದಕ್ಕೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರವೇ ಸಾಕ್ಷಿ. ನಾವು ರೈತರ ಬಗ್ಗೆ ಕಳಕಳಿಯಿಂದ ಯೋಜನೆಯಿಂದ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇದಕ್ಕೆ ಈ ಹಿಂದಿನ ಸರ್ಕಾರವು ಕೇಂದ್ರ ಸರ್ಕಾರ ಕೊಡುತ್ತಿದ್ದ 6 ಸಾವಿರ ರೂಪಾಯಿ ಜತೆಗೆ 4 ಸಾವಿರ ರೂಪಾಯಿಯನ್ನು ಕೊಡುತ್ತಲಿತ್ತು. ಆದರೆ, ಈ ಸರ್ಕಾರ ಅದನ್ನು ನಿಲ್ಲಿಸಿದೆ. ಹೀಗಾಗಿ ರೈತ ವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಚಿಕ್ಕಬಳ್ಳಾಪುರದಲ್ಲಿ ಶನಿವಾರ (ಏಪ್ರಿಲ್‌ 20) ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಪರವಾಗಿ ಮತಯಾಚಿಸಿದರು.

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ

ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 150 ಅಮೃತ ಸರೋವರ ಯೋಜನೆ ಮಾಡಲಾಗಿದೆ. 2.70 ಲಕ್ಷ ಕುಟುಂಬಕ್ಕೆ ಕುಡಿಯುವ ನೀರನ್ನು ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆದರೆ, ಕಾಂಗ್ರೆಸ್‌ ಸರ್ಕಾರವು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೀರಿ ಎಂಬುದಾಗಿ ಭಾವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಲಾಗಿತ್ತು. 1,300 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಶಿಡ್ಲಘಟ್ಟದಲ್ಲಿ ರೇಷ್ಮೆ ಉದ್ಯಮಕ್ಕೆ ಸಹಾಯ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ಕರ್ನಾಟಕದ ಕಮಿಟ್ಮೆಂಟ್‌ ಗೊತ್ತಾಗುತ್ತಿದೆ

ಸಂತ ಕೈವಾರ ತಾತಯ್ಯ, ಸರ್.ಎಂ ವಿಶ್ವೇಶ್ವರಯ್ಯ, ಈ ಮಣ್ಣಿನಲ್ಲಿ ಜನರ ದರ್ಶನ ನನ್ನ ಸೌಭಾಗ್ಯ ಎಂದು ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಉತ್ಸಾಹ ಹೆಚ್ಚಾಗಿದೆ. ಆ ಉತ್ಸಾಹ ನನಗೆ ಕಾಣುತ್ತಿದೆ. ಯುವಕರಿಗೆ ಪ್ರೇರಣೆ ಸಿಗಲಿದೆ. ನನಗೆ ಭಾಷೆ ಅರ್ಥ ಆಗಲ್ಲ. ಆದರೆ, ಕರ್ನಾಟಕದ ಕಮಿಟ್ಮೆಂಟ್‌ ಗೊತ್ತಾಗುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ನನ್ನ ಹೃದಯದಿಂದ ಅಭಾರಿಯಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದೇವೇಗೌಡರು ಇಂಡಿ ಮೈತ್ರಿ ಬಗ್ಗೆ ಹೇಳಿದ್ದಾರೆ. ಇಂಡಿ ಮೈತ್ರಿಯಲ್ಲಿ ನಾಯಕರಿಲ್ಲ, ಭವಿಷ್ಯದ ಬಗ್ಗೆ ಚಿಂತನೆಯೇ ಅವರಲ್ಲಿ ಇಲ್ಲ. ಅವರ ಇತಿಹಾಸ ಕೇವಲ ಹಗರಣ ಮಾತ್ರ ಎಂದು ಗುಡುಗಿದರು.

ದೇಶದ ಬಗ್ಗೆ 24×7 ಕೆಲಸ

ದೇಶದ ಜನತೆಗೆ ನನ್ನ ಕೆಲಸದ ಬಗ್ಗೆ ತಿಳಿಸಿದ್ದೇನೆ. ನಾನು ನಿಮ್ಮ ನಡುವೆ ನಮ್ಮ ರಿಪೋರ್ಟ್‌ ಕಾರ್ಡ್ ಹಿಡಿದು ಆಶೀರ್ವಾದ ಪಡೆಯಲು ಬಂದಿದ್ದೇನೆ. ನಾನು ಎಲ್ಲರನ್ನೂ ಪರಿವಾರ ಅಂತ ತಿಳಿದಿದ್ದೇನೆ. ನಿಮ್ಮ ಕನಸು, ಮೋದಿಯ ಸಂಕಲ್ಪವಾಗಿದೆ. ಪ್ರತಿ ಕ್ಷಣದಲ್ಲೂ ನಿಮ್ಮ ಹಾಗೂ ದೇಶದ ಬಗ್ಗೆ 24×7 ಕೆಲಸ ಮಾಡಲು ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.

ಮುಂದಿನ ಐದು ವರ್ಷವೂ ಉಚಿತ ರೇಷನ್

ದೇಶದ ಜನ ಎಂದೂ ಉಚಿತ ರೇಷನ್ ಸಿಗುತ್ತದೆ ಅಂತ ಅನ್ನಿಸಿರಲಿಲ್ಲ. ನಿಮ್ಮ ಮೋದಿ ಅದನ್ನು ಈಡೇರಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಎಂಟು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ರೇಷನ್ ಕೊಡುತ್ತಿದ್ದೇವೆ. ಇದೇ ರೀತಿ ಮುಂದಿನ ಐದು ವರ್ಷವೂ ಉಚಿತ ಅಕ್ಕಿ ನಿಮಗೆ ಸಿಗಲಿದೆ. ಕರ್ನಾಟಕದ ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಆಯುಷ್ಮಾನ್ ಯೋಜನೆ ಮೂಲಕ ಐದು ಲಕ್ಷ ರೂಪಾಯಿವರೆಗೂ ಚಿಕಿತ್ಸೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‌

25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ

ಮೋದಿ ಸರ್ಕಾರದ ಯೋಜನೆ ಮೂಲಕ ಕೋಟ್ಯಂತರ ಮಂದಿ ಲಾಭ ಪಡೆದಿದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ಕುಟುಂಬದವರಿಗೆ ಭರಪೂರ ಯೋಜನೆ ನೀಡಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಕೊಳಗೇರಿಯಲ್ಲಿ ವಾಸ ಮಾಡುವಂತಾಗಿತ್ತು. ವಿದ್ಯುತ್, ನೀರು ಕೂಡ ಸಿಗುತ್ತಿರಲಿಲ್ಲ. ಜನರೂ ಹಿಂದಿನ ಸರ್ಕಾರದ ಮೇಲೆ ಭರವಸೆ ಕೂಡ ಬಿಟ್ಟುಬಿಟ್ಟಿದ್ದರು. ಆದರೆ, ನಿಮ್ಮ ಭರವಸೆಯನ್ನು ಮೋದಿ ಗ್ಯಾರಂಟಿ ನಿಜ ಮಾಡಿದೆ. 25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇನ್ನೈದು ವರ್ಷದಲ್ಲಿ ಸೂರಿಲ್ಲದವರಿಗೆ ಮನೆ

ಹಿಂದಿನ ಹತ್ತು ವರ್ಷಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ 14 ಕೋಲಾರ 24 ಸಾವಿರ ಮನೆ ನಿರ್ಮಾಣ ಮಾಡಿ ನೀಡಲಾಗಿದೆ. ಮೋದಿ ಸರ್ಕಾರ ಹೊಸ ಮನೆಗಳ ನಿರ್ಮಾಣ ಮಾಡುವ ಭರವಸೆ ನೀಡಿದೆ. ಯಾರಿಗೆ ಈವರೆಗೆ ಮನೆ ಸಿಕ್ಕಿಲ್ಲವೋ ಅವರಿಗೆ ಮುಂದಿನ ಐದು ವರ್ಷಗಳಲ್ಲಿ ಖಂಡಿತವಾಗಿಯೂ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಎಸ್‌ಸಿ ಸಮುದಾಯದವರನ್ನು ರಾಷ್ಟ್ರಪತಿ ಮಾಡಿದ್ದು ಎನ್‌ಡಿಎ

2014ರಲ್ಲಿ ಎನ್‌ಡಿಎ ಸರ್ಕಾರ ಬಂದ ಬಳಿಕ ಎಸ್‌ಸಿ ಸಮುದಾಯದವರನ್ನು ರಾಷ್ಟ್ರಪತಿ ಮಾಡುವ ಮೂಲಕ ಮೊದಲ ಪ್ರಜೆಯನ್ನು ಆಯ್ಕೆ ಮಾಡಿತು. ಹಿಂದುಳಿದ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಲಾಗಿದೆ ಎಂದು ಎನ್‌ಡಿಎ ಸರ್ಕಾರ ಕೈಗೊಂಡ ಕ್ರಮಗಳು, ನಿರ್ಧಾರಗಳ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು.

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 10ರಿಂದ 20 ಲಕ್ಷ ರೂಪಾಯಿ ವರೆಗೂ ಸಾಲ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮೂಲಕ ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗಿದೆ. ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ‌ ಒತ್ತು ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ದಾಖಲಾತಿ ಹೆಚ್ಚಾಗಿದೆ. ಗ್ಯಾರಂಟಿ ಇಲ್ಲದೆ, ಮುದ್ರಾ ಲೋನ್ ಮೂಲಕ ಸಾಲ ನೀಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 10ರಿಂದ 20 ಲಕ್ಷ ರೂಪಾಯಿ ವರೆಗೂ ಸಾಲ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ಒಂದು ಕೋಟಿ ಮಹಿಳೆಯರನ್ನು ಲಕ್ಷಪತಿಯರನ್ನಾಗಿ ಮಾಡಿದ್ದೇವೆ

ಇಂದು ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಬಂದಿದ್ದಾರೆ. ನಿಮ್ಮ ಕಷ್ಟವನ್ನು ಮೋದಿ ನೋಡಿದ್ದಾರೆ. ದೇಶದ ಅನೇಕರು ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ತಾಯಂದಿರ ಆಶೀರ್ವಾದ ಇದೆ. ನಿಮ್ಮೆಲ್ಲರ ಆಶೀರ್ವಾದಿಂದ ನಾನು ಎದುರಿಸುತ್ತೇನೆ. ಪ್ರತಿ ತಾಯಂದಿರ ಸೇವೆ ಮಾಡುವುದು ಮೋದಿ ಗ್ಯಾರಂಟಿಯಾಗಿದೆ. ಒಂದು ಕೋಟಿ ಮಹಿಳೆಯರನ್ನು ಲಕ್ಷಪತಿಯರನ್ನಾಗಿ ತಯಾರು ಮಾಡಲಾಗಿದೆ. ಮೂರು ಕೋಟಿ ಮಹಿಳೆಯರ ವಾರ್ಷಿಕ ಆದಾಯ ಲಕ್ಷ‌ ರೂಪಾಯಿ ಮೀರಲಿದೆ. ಎನ್‌ಡಿಎ ಸರ್ಕಾರದಿಂದ ಡ್ರೋನ್ ಪೈಲೆಟ್ ಟ್ರೈನಿಂಗ್ ಕೊಡಲಾಗುತ್ತಿದೆ. ಯುವತಿಯರು ಡ್ರೋನ್ ಮೂಲಕ ಸಾಧನೆ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಈ ನೆಲದಲ್ಲಿ ಮಾವು, ಪಶುಪಾಲನೆ ನಡೆಯುತ್ತಿದೆ. ಎನ್‌ಡಿಎ ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಶ್ರಮ ವಹಿಸುತ್ತಿದೆ. ನಮ್ಮ ಜತೆ ದೇವೇಗೌಡರಂತಹ ಹಿರಿಯ ರಾಜಕಾರಣಿ ಇದ್ದಾರೆ. ಅಂಥವರ ಮಾರ್ಗದರ್ಶನ ನಮಗಿದೆ. ಪಶು ಪಾಲನೆ ಮಾಡುವವರಿಗೂ ಕಿಸಾನ್ ಕಾರ್ಡ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೋಲಾರ ಸಂಸದ ಮುನಿಸ್ವಾಮಿ, ಯಲಹಂಕ ಶಾಸಕರಾದ ವಿಶ್ವನಾಥ್, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ವೈ. ಸಂಪಂಗಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Exit mobile version