Site icon Vistara News

ವಿಸ್ತಾರ ಸಂಪಾದಕೀಯ | ಆರೆಸ್ಸೆಸ್‌ನ ಸಮಕಾಲೀನ ಸ್ಪಂದನ ಬಿಂಬಿಸಿದ ಮೋಹನ್‌ ಭಾಗವತ್‌

Mohan Bhagwat

Destructive forces attack on cultural Marxists: RSS Chief Mohan Bhagwat

ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಅಥವಾ ಬೆದರಿಕೆ ಇಲ್ಲ. ಅವರು ತುಂಬ ಸುರಕ್ಷಿತವಾಗಿದ್ದಾರೆ. ಅವರು ತಮ್ಮ ನಂಬಿಕೆಗಳನ್ನು, ಆಚಾರ-ವಿಚಾರಗಳನ್ನು ಪಾಲಿಸಲು ಸ್ವತಂತ್ರರಾಗಿದ್ದಾರೆ. ಅವರು ಈಗಿನ ಸಂಪ್ರದಾಯಗಳನ್ನು ಪಾಲಿಸಬಹುದು ಅಥವಾ ಅವರ ಪೂರ್ವಜರ ಆಚರಣೆಗಳ ಮೊರೆ ಹೋಗಬಹುದು. ಆದರೆ, ಮುಸ್ಲಿಮರು ತಮ್ಮದೇ ಸರಿ, ತಾವೇ ಶ್ರೇಷ್ಠ ಎಂಬ ಪ್ರತಿಪಾದನೆಯನ್ನು ಬಿಡಬೇಕು. ಇಂತಹ ಅಬ್ಬರಗಳನ್ನು, ಅಬ್ಬರದ ವಾಕ್ಚಾತುರ್ಯವನ್ನು ನಿಲ್ಲಿಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ ಹೇಳಿದ್ದಾರೆ. ಜತೆಗೆ ಅವರು, ಭಾರತದಲ್ಲಿರುವ ಹಿಂದುಗಳು, ಕಮ್ಯುನಿಸ್ಟರು ಸೇರಿ ಎಲ್ಲರೂ ಇದೇ ಮಾದರಿಯನ್ನು ಅನುಸರಿಸಬೇಕು, ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಉಳಿಯಬೇಕು ಎಂದೂ ಹೇಳಿದ್ದಾರೆ.

ಇದಲ್ಲದೇ ಹಿಂದೂ- ಮುಸ್ಲಿಮರ ಸಹಬಾಳ್ವೆ, ಹಿಂದುತ್ವ, ಎಲ್‌ಜಿಬಿಟಿಕ್ಯು ಸಮುದಾಯದ ಖಾಸಗಿತನದ ಗೌರವಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕೆಲ ವರ್ಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಋಣಾತ್ಮಕ ಪ್ರಚಾರದ ಹಿನ್ನೆಲೆಯಲ್ಲಿ ಅವರ ಸಂದರ್ಶನದ ಮಾತುಗಳು ಗಮನಾರ್ಹವಾಗಿವೆ. ದೇಶದ ಒಗ್ಗಟ್ಟು ಹಾಗೂ ಮುಸ್ಲಿಮರ ಮನಸ್ಥಿತಿ ಬಗ್ಗೆ ಪ್ರತಿಪಾದಿಸಿರುವ ಅವರು ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಎಲ್ಲರಲ್ಲೂ ಇದೇ ಭಾವನೆ ಒಡಮೂಡಬೇಕು. ಈ ನೆಲವನ್ನು ತಾವು ಹಿಂದೆ ಆಳಿದ್ದೇವೆ, ಮುಂದೆಯೂ ಆಳುತ್ತೇವೆ ಎಂಬ ಮನಸ್ಥಿತಿ ಮುಸ್ಲಿಮರಲ್ಲಿ ಇರಕೂಡದು ಎಂದು ಎಚ್ಚರಿಸಿರುವುದು ಮನನೀಯ. ಹಿಂದುತ್ವವು ಎಲ್ಲರೂ ನಮ್ಮವರು ಎಂಬುದನ್ನು ಸಾರುತ್ತದೆ. ನಮ್ಮದು ಮಾತ್ರ ಪರಮ ಸತ್ಯ, ಬೇರೆಯವರದ್ದು ಸರಿಯಲ್ಲ ಎಂಬುದಾಗಿ ಎಂದೂ ಹೇಳುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಆರೆಸ್ಸೆಸ್‌ ಈ ನೆಲದ ಸಹಬಾಳ್ವೆಯನ್ನು ಎಷ್ಟು ಗೌರವಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ.

ಭಾರತದಲ್ಲಿ ಮುಸ್ಲಿಮರ ಸುರಕ್ಷತೆಯ ಬಗ್ಗೆ ಭಾಗವತ್‌ ಹೇಳಿದ ಮಾತನ್ನು ಬೇಕಿದ್ದರೆ ಪರೀಕ್ಷಿಸಬಹುದು. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಮುಸ್ಲಿಂ ದೇಶಗಳು, ಬಾಂಗ್ಲಾ, ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಆಗ್ನೇಯ ಏಷ್ಯಾ ದೇಶಗಳು ಕೂಡ ಭಾರತದ ಜತೆ ಹೆಚ್ಚಿನ ಸ್ನೇಹದಿಂದಿವೆ. ಇದು ಹಿಂದೂ- ಮುಸ್ಲಿಂ ಸಹಬಾಳ್ವೆಗೆ ಸಾಕ್ಷಿ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ ಎಂದು ಭಾಗವತ್ ಹೇಳಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಮಾನವೀಯ ಹಾಗೂ ಹಿಂದುಸ್ತಾನದ ಪಾರಂಪರಿಕ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಆರೆಸ್ಸೆಸ್‌ ನಡೆಸುತ್ತಿರುವ ಮಹತ್ಕಾರ್ಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. ತನ್ನ ಮೂಲ ಆಶಯವಾದ ʼಭಾರತೀಯ ಪರಂಪರೆಯ ರಕ್ಷಣೆʼಯ ನೆಲೆಯಿಂದ ಅದು ಹಿಂದೆ ಸರಿದಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ನೀತಿ ನಡಾವಳಿಗಳಲ್ಲಿ ಬದಲಾಗುತ್ತ ಬಂದಿದೆ. ಮೊದಲು ಚಡ್ಡಿ ಧರಿಸುತ್ತಿದ್ದ ಸ್ವಯಂಸೇವಕರು ಈಗ ಪ್ಯಾಂಟ್ ಧರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ RSS ಇತ್ತೀಚಿನ ವರ್ಷಗಳಲ್ಲಿ ಹಲವಾರು ಸುಧಾರಣಾವಾದಿ ಹೆಜ್ಜೆಗಳನ್ನು ಇರಿಸಿದೆ. ಆಧುನಿಕ ತಾಂತ್ರಿಕತೆಯನ್ನು ಜನತೆಯ ಒಳಿತಿಗಾಗಿ ಬಳಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುತ್ತಿದೆ. ಸಂಘದ ಸ್ವಯಂಸೇವಕರು ಜನರ ಬಳಿಗೆ ಹೋಗಿ ಸೇವಾಕಾರ್ಯಗಳನ್ನು ಮಾಡುತ್ತಿದ್ದಾರೆ. ಆರೆಸ್ಸೆಸ್‌ನ ಅಂಗಸಂಸ್ಥೆಯಾದ, ʼರಾಷ್ಟ್ರ ಸೇವಿಕಾ ಸಮಿತಿʼಯು ಇದರ ಮಹಿಳಾ ವಿಭಾಗವಾಗಿದ್ದು, ಉನ್ನತ ಔದ್ಯೋಗಿಕ ವಲಯಗಳಲ್ಲಿ ʼಪ್ರಬುದ್ಧʼ ಹೆಸರಿನ ಚಿಂತನಶಿಬಿರಗಳನ್ನು ನಡೆಸುತ್ತ ಉದ್ಯೋಗಿ ಮಹಿಳೆಯರ ಸುಖಸಂಕಷ್ಟಗಳತ್ತ ಸ್ಪಂದಿಸುತ್ತಿದೆ. ಇನ್ನು ದುರಂತ- ವಿಕೋಪಗಳು ಸಂಭವಿಸಿದ ಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿ ಶಿಸ್ತುಬದ್ಧ ಸೇನಾಪಡೆಯಂತೆ ತುರ್ತು ಕಾರ್ಯಾಚರಣೆ ಹಾಗೂ ಸೇವೆ ಒದಗಿಸುವ ಅದರ ಕ್ರಮ ಮಾದರಿಯಾಗಿದೆ. ಇಂಥ ಆರೆಸ್ಸೆಸ್‌ ಆಧುನಿಕ ಜೀವನಕ್ರಮಕ್ಕೂ ಸ್ಪಂದಿಸುತ್ತಿರುವದಕ್ಕೆ ಸಾಕ್ಷಿ, ಈಗ ಎಲ್‌ಜಿಬಿಟಿಕ್ಯು ಸಮುದಾಯದ ಬಗ್ಗೆ ಮೋಹನ್‌ ಭಾಗವತ್‌ ಅವರು ಹೇಳಿರುವ ಮಾತು. ಅವರ ಖಾಸಗಿತನ ಗೌರವಿಸಿ, ಇದು ನಿಸರ್ಗಸಹಜ ಎಂದು ಅವರು ಹೇಳಿರುವ ಮಾತು ಸಮಕಾಲೀನ ವಿಚಾರಗಳ ಕುರಿತ ಸಂಘದ ಸ್ಪಂದನಕ್ಕೆ ಸಾಕ್ಷಿ.

ಈ ಎಲ್ಲ ಕಾರಣಗಳಿಂದ ಆರೆಸ್ಸೆಸ್‌ ಮುಖ್ಯಸ್ಥರ ಮಾತುಗಳು ಮಹತ್ವದ್ದಾಗಿವೆ. ಅಂತಿಮವಾಗಿ, ಭಾರತದಲ್ಲಿ ವಾಸಿಸುವ ಎಲ್ಲರೂ ತಮ್ಮ ತಮ್ಮ ಸಂಸ್ಕೃತಿ ಪ್ರತಿಪಾದಿಸುತ್ತಲೇ, ಬೇರೆಯವರ ಸಂಸ್ಕೃತಿಯನ್ನೂ ಗೌರವಿಸಬೇಕು ಎಂದು ಭಾಗವತ್ ಹೇಳಿದ್ದು ಭವಿಷ್ಯದ ಸೌಹಾರ್ದ ಮತ್ತು ಸಹಬಾಳ್ವೆಯ ಭಾರತದ ದೃಷ್ಟಿಯಿಂದ ಸಮಂಜಸವಾಗಿದೆ.

ಇದನ್ನೂ ಓದಿ | Mohan Bhagwat | ಮುಸ್ಲಿಮರಿಗೆ ಭಾರತದಲ್ಲಿ ಅಪಾಯ ಇಲ್ಲ, ಆದರೆ ಅವರು ತಮ್ಮದೇ ಸರಿ ಎಂದು ಅಬ್ಬರಿಸುವುದನ್ನು ಬಿಡಬೇಕು: ಭಾಗವತ್

Exit mobile version