Site icon Vistara News

Mollywood Sex Mafia: ಮಲಯಾಳಂ ಚಿತ್ರರಂಗದ ಸೆಕ್ಸ್‌ ಮಾಫಿಯಾ ಬಟಾಬಯಲು; 15 ಪ್ರಭಾವಿಗಳಿಂದ ದಂಧೆ- ಸ್ಫೋಟಕ ವರದಿ ಔಟ್‌

Mollywood Sex Mafia

ತಿರುವನಂತಪುರಂ: ಬಹಳ ಸಹಜ, ನೈಜ ಕಥಾವಸ್ತು, ಅತ್ಯದ್ಭುತ ನಟನೆಯ ನಟ-ನಟಿಯರು, ಜನರಿಗೆ ಬೇಗ ಮುಟ್ಟುವ ಮತ್ತು ಮೆಚ್ಚುಗೆಯಾಗುವಂತಹ ಸಿನಿಮಾಗಳ ಮೂಲಕ ಇಡೀ ದೇಶದ ಪ್ರೇಕ್ಷಕರ ಗಮನ ಸೆಳೆಯುವ ಮಲಯಾಳಂ ಚಿತ್ರರಂಗದ(Malayalam film industry) ವಿರುದ್ಧ ಇದೀಗ ಬಹುದೊಡ್ಡ ವಿವಾದವೊಂದು ಕೇಳಿಬಂದಿದೆ. ಕೇರಳ ಚಿತ್ರರಂಗದ ಸೆಕ್ಸ್ ಹಗರಣ(Mollywood Sex Mafia)ಹೊರಬಿದ್ದಿದ್ದು 15 ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಲಭ್ಯವಾಗಿವೆ.

ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಇನ್ನು ಈ ಬಗ್ಗೆ ಕಿರಿಯ ನಟಿಯೊಬ್ಬರು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ್ದು, ಇದೇ ಅನೇಕ ಮಾಹಿತಿ ಕಳೆ ಹಾಕಿರುವ ಸಮಿತಿ 233 ಪುಟಗಳ ವರದಿ ತಯಾರು ಮಾಡಿದೆ. ಇದೀಗ ಮಾಹಿತಿ ಹಕ್ಕು(RTI) ಅಡಿಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಸಂಗತಿಗಳು ಒಂದೊಂದೆ ಬಯಲಾಗಿದೆ. ಮಲಯಾಳ ಚಿತ್ರರಂಗದಲ್ಲಿ ‘ಕಾಸ್ಟಿಂಗ್‌ ಕೌಚ್‌’ (ಸಿನಿಮಾದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸುವುದು) ಇದೆ. ತಮಗೆ ಯಾರು ಸಹಕರಿಸುತ್ತಾರೋ ಅವರನ್ನು ಒಂದು ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ನಟಿಯರಿರುವ ಕೋಣೆ ಬಾಗಿಲು ಬಡಿಯುತ್ತಾರೆ

ಇನ್ನು ವರದಿಯಲ್ಲಿ ಹೇಳಿರುವಂತೆ ರಾತ್ರಿ ವೇಳೆ ನಟಿಯರು ತಂಗಿದ್ದಾಗ ಅವರ ಕೋಣೆಯ ಬಾಗಿಲನ್ನು ಪದೇ ಪದೇ ಬಡಿಯಲಾಗುತ್ತದೆ. ಅವರು ತೆಗೆಯದಿದ್ದರೆ ಇನ್ನೂ ಜೋರಾಗಿ ಬಡಿಯಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಬಾಗಿಲೇ ಮುರಿದು ಬೀಳಬಹುದು ಎಂಬಂತೆ ಅದನ್ನು ಬಡಿಯಲಾಗುತ್ತದೆ ಎಂದು ನಟಿಯರು ತನಗೆ ತಿಳಿಸಿದ್ದಾರೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಮಲಯಾಳಂ ಚಿತ್ರರಂಗದಲ್ಲಿ ಅತಿಹೆಚ್ಚಾಗಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ. ಒಂದು ವೇಳೆ ಅದನ್ನು ಪ್ರತಿಭಟಿಸಿದರೆ ಈ 15ಜನರ ಮಾಫಿಯಾ ಅವರ ಭವಿಷ್ಯವನ್ನೇ ಹಾಳುಗೆಡವುತ್ತಿದೆ. ಇದಕ್ಕೆ ಹೆದರಿ ನಟಿಯರು ದೂರು ನೀಡಲೂ ನಿರಾಕರಿಸುತ್ತಿದ್ದಾರೆ.

ಸಮಿತಿ ರಚನೆ ಆಗಿದ್ದು ಯಾವಾಗ?

2017ರಲ್ಲಿ ಖ್ಯಾತ ಚಿತ್ರನಟಿಯೊಬ್ಬರ ಮೇಲೆ ನಟ ದಿಲೀಪ್‌ ತಂಡದಿಂದ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬಹಳ ಸಂಚಲನ ಮೂಡಿಸಿತ್ತು. ಹೀಗಾಗಿ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಹೇಮಾ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಲಾಗಿತ್ತು.

ಇನ್ನು ಈ ವರದಿ ಬಿಡುಗಡೆಯಾಗಿರುವ ಬಗ್ಗೆ ಸಂಸದ ಶಶಿ ತರೂರ್‌ ಪ್ರತಿಕ್ರಿಯಿಸಿದ್ದು, ಇಷ್ಟು ದೊಡ್ಡಮಟ್ಟದಲ್ಲಿ ಕೇರಳ ಚಿತ್ರರಂಗದಲ್ಲಿ ಮಾಫಿಯಾ ನಡೆಯುತ್ತಿದ್ದರೂ ಕೇರಳ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Casting Couch | ಅಡ್ಜೆಸ್ಟ್‌ ಆಗಬೇಕು ಅಂದಿದ್ದ ನಿರ್ಮಾಪಕ: ರತನ್‌ ರಜಪೂತ್‌ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿದ್ದೇನು?

Exit mobile version