Site icon Vistara News

MUDA Scam: ಬಿಜೆಪಿಯವರದು ಮನೆಮುರುಕ ರಾಜಕೀಯ; ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಸಿಎಂ ಸಿದ್ದರಾಮಯ್ಯ

cm siddaramaiah pressmeet

ಬೆಂಗಳೂರು: ಇಪ್ಪತ್ತು ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದು ಮನೆಮುರುಕ ರಾಜಕೀಯ. ಮುಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ (MUDA Scam) ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಮುಡಾ ಜಮೀನು ಅವ್ಯವಹಾರದ ಕುರಿತು ಬಿಜೆಪಿ- ಜೆಡಿಎಸ್‌ ನಡೆಸುತ್ತಿರುವ ಹೋರಾಟ ಹಾಗೂ ಆರೋಪಗಳಿಗೆ ಸಿಎಂ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಜಮೀನು ಸರ್ಕಾದಿಂದ ಗ್ರ್ಯಾಂಟ್‌ ಆಗಿದ್ದಲ್ಲ ಹಾಗೂ ಪ್ರಸ್ತುತ ಹಕ್ಕುದಾರಿಕೆ ಇದೆ ಎಂದು ಹೇಳುತ್ತಿರುವ ಮಂಜುನಾಥ್‌ ಸ್ವಾಮಿ ಅದರ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವ ಕುರಿತು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.

ಸಿಎಂ ಹೇಳಿಕೆಯ ಪೂರ್ಣ ಪಾಠ ಹೀಗಿದೆ:

ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿ ಉಭಯ ಸದನಗಳಲ್ಲಿ ನಿಲುವಳಿ ಸೂಚನೆಯನ್ನು ವಿಪಕ್ಷ ತಂದಿದ್ದರು. ಸದನದ ನಿಯಮಗಳ ಪ್ರಕಾರ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ, ಚರ್ಚೆ ಮಾಡಿದರೆ ಕೆಟ್ಟ ಸಂಪ್ರದಾಯ ಆಗುತ್ತದೆ ಎಂದು ಸ್ಪೀಕರ್‌ ಸದನದಲ್ಲಿ ರೂಲಿಂಗ್ ಕೊಟ್ಟು ವಿಪಕ್ಷ ನಿಲುವಳಿಯನ್ನ ತಿರಸ್ಕರಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಕಾರಣದಿಂದ ಈ ನಿಲುವಳಿ ಸೂಚನೆ ತಂದಿವೆ. ಯಾವುದಾದರೂ ನಿಲುವಳಿ ಸೂಚನೆ ‌ನಿಯಮಾನುಸಾರವಾಗಿ ಇರಬೇಕು. ಸದನದ ನಿಯಮಗಳಿಗೆ ವಿರುದ್ಧವಾಗಿದ್ರೆ ಚರ್ಚೆ ಮಾಡಲು ಸಾಧ್ಯವಿಲ್ಲ.

ಇಂದು ಬಿಜೆಪಿ ಮತ್ತು ಜೆಡಿಎಸ್‌ನವರು ಹತಾಶೆಗೊಂಡಿದ್ದಾರೆ. ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಆಗ್ತಾ ಇಲ್ಲ. ಎರಡು ವಾರಗಳ ಅಧಿವೇಶನದಲ್ಲಿ ಎರಡು ವಿಚಾರಗಳೇ ಚರ್ಚೆ ಆಯ್ತು. ಮುಡಾ ಮತ್ತು ವಾಲ್ಮೀಕಿ ಹಗರಣ ಎರಡು ಬಿಟ್ಟು ರಾಜ್ಯದ ವಿಚಾರ ಬಗ್ಗೆ ಚರ್ಚೆ ನಡೆದಿಲ್ಲ. ಸರ್ಕಾರ ಮತ್ತು ಸಿಎಂ ಮುಖಕ್ಕೆ ಮಸಿಬಳಿಯುವ ಯತ್ನ ಮಾಡಿದ್ದಾರೆ. ಬಿಜೆಪಿ- ಜೆಡಿಎಸ್ ರಾಜಕೀಯವಾಗಿ ಹತಾಶರಾಗಿದ್ದಾರೆ.

ರಾಜ್ಯ ಸರಕಾರ ಹಾಗೂ ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು, ಕಪ್ಪು ಚುಕ್ಕೆ ತರಬೇಕು ಅಂತ ಇಡೀ ಸದನ ಹಾಳು ಮಾಡಿದರು. 1983ರಲ್ಲಿ ನಾನು ಶಾಸಕನಾದವನು, 84ರಲ್ಲಿ ಮಂತ್ರಿಯಾದವನು. ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ, ಸಿಎಂ ಆಗಿ ನಲವತ್ತು ವರ್ಷಗಳ ಕಾಲ ರಾಜಕೀಯವಾಗಿ ಇದ್ದೇನೆ. ಇವತ್ತಿನವರೆಗೆ ಒಂದೂ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ- ಜೆಡಿಎಸ್ ಸೇಡಿನ ದ್ವೇಷದ ರಾಜಕಾರಣ ಮಾಡ್ತಾ ಇವೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಸೇರಿದರೂ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಚುನಾವಣೆಯಲ್ಲಿ ನಮಗೆ ಮೊದಲಿಗಿಂತ 13 ಪರ್ಸೆಂಟ್ ಹೆಚ್ಚು ಮತ ಬಂದಿದೆ. 2019ರಲ್ಲಿ ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಇದರಿಂದ ಹತಾಶರಾಗಿ ಅವರು ವಾಮಮಾರ್ಗ ಹುಡುಕಿದ್ದಾರೆ.

ವಾಲ್ಮಿಕಿ ನಿಗಮದ ಬಗ್ಗೆ ನಿಲುವಳಿ ಸೂಚಿಸಿದ್ದರು. ಅದಕ್ಕೆ ಸರ್ಕಾರ ಸಮರ್ಥವಾದ ಉತ್ತರ ಕೊಟ್ಟಿದೆ. ಬುಧವಾರ ಮುಡಾದ ಬಗ್ಗೆ ಚರ್ಚೆಗೆ ಅವಕಾಶ ಕೇಳಿದರು. 1987ರಲ್ಲಿ ಮುಡಾ ಆಗಿದೆ. ಆವತ್ತಿನಿಂದ ಸಾವಿರಾರು ಎಕರೆಗಳನ್ನು ವಸತಿ ಬಡಾವಣೆ ಮಾಡಲಾಗುತ್ತಿದೆ. ಸರ್ವೆ ನಂ 464, 3 ಎಕರೆ 16 ಗುಂಟೆ ಜಮೀನು ಪಿಟಿಸಿಎಲ್ ಕಾಯ್ದೆ ಅಟ್ರಾಕ್ಟ್ ಮಾಡುತ್ತದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಜಮೀನು ದಲಿತರಿಗೆ ಆಗಿದ್ದರೆ ಅದಕ್ಕೆ ಕೆಲವೊಂದು ನಿಬಂಧನೆ ಹಾಕಿರುತ್ತಾರೆ. ನಿಬಂಧನೆ ಉಲ್ಲಂಘನೆ ಆಗಿದ್ದರೆ ಪಿಟಿಸಿಎಲ್ ಕಾಯ್ದೆ ಬರುತ್ತದೆ. ಇಲ್ಲಿ ಇದು ಪಿತ್ರಾರ್ಜಿತ ಆಸ್ತಿ ಆದ್ದರಿಂದ ಪಿಟಿಸಿಎಲ್‌ ಕಾಯ್ದೆ ಅನ್ವಯ ಆಗುವುದಿಲ್ಲ.

ಈ ಜಮೀನಿನ ಮಾಲೀಕ ಪೂರ್ವದಲ್ಲಿ ನಿಂಗ ಬಿನ್ ಜವರ ಅಂತ. 2/8/1935 ರಲ್ಲಿ ಮೈಸೂರು ತಾಲೂಕು ಕಚೇರಿಗೆ ಒಂದು ಅರ್ಜಿ ಕೊಡ್ತಾರೆ. ಅದರ ಮೇಲೆ ಹರಾಜು ನಡೆಯುತ್ತದೆ. ಆಗ ಹರಾಜಿನ ಮೊತ್ತ ಮೂರು ರೂಪಾಯಿ. 3/10/1935 ರಲ್ಲಿ ಹರಾಜಿನಲ್ಲಿ ಭಾಗಿಯಾಗಿ ಒಂದು ರೂಪಾಯಿಗೆ ಕೂಗ್ತಾರೆ. ಆಗ ನಿಂಗ ಬಿನ್ ಜವನ ಅವರಿಗೆ ಇದು ಕ್ರಯ ಆಗುತ್ತದೆ. 13/10/1935ರಲ್ಲಿ ಅವರಿಗೆ ಸೇಲ್ ಕನ್ಫರ್ಮ್ ಆಗುತ್ತದೆ. ಹೀಗೆ ಈ ಜಮೀನು ಹರಾಜಿನ ಮೂಲಕ ಬಂದಿದ್ದು, ಸ್ವಯಾರ್ಜಿತ ಆಸ್ತಿ.

ಮುಡಾ 1987ರಿಂದ ಜಾರಿಗೆ ಬಂದಿದೆ. ಅದಕ್ಕಿಂತ ಮುಂಚೆ ಸಿಐಟಿಬಿ ಅಂತ ಇತ್ತು. 1987ರಲ್ಲಿ ಕಾನೂನು ಮಾಡಿ ಅಥಾರಿಟಿ ಮಾಡಿದರು. ಅವತ್ತಿನಿಂದ ಸಾವಿರಾರು ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಸಾಕಷ್ಟು ನಿವೇಶನಗಳನ್ನು ಮಾಡಲಾಗಿದೆ. ಮುಡಾದ ಸರ್ವೆ ನಂಬರ್ 464, 3.16 ಗುಂಟೆ ಜಮೀನು ಮಲ್ಲಿಕಾರ್ಜುನ ಸ್ವಾಮಿ ಕ್ರಯ ಮಾಡಿಕೊಂಡಿದ್ದಾರೆ. 2004ರಲ್ಲಿ ಇದರ ಕ್ರಯ ಆಗಿದೆ. ಈ ಜಮೀನು ಪಿಟಿಸಿಎಲ್ ಕಾಯಿದೆಗೆ ಒಳಪಟ್ಟಿಲ್ಲ.

ನಿಂಗ ಅವರಿಗೆ ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ಮೂವರು ಮಕ್ಕಳು. ಮೈಲಾರಯ್ಯನ ಮಗ ಎಂ. ಮಂಜುನಾಥ ಸ್ವಾಮಿ, ದೇವರಾಜ ಎಲ್ಲರೂ ಸೇರಿ ವಂಶವೃಕ್ಷಕ್ಕೆ ಸಹಿ ಮಾಡಿದ್ದಾರೆ. ಮೂರು ಜನ ಮಕ್ಕಳು ವಂಶವೃಕ್ಷಕ್ಕೆ ಸಹಿ ಹಾಕಿದ್ದಾರೆ. ಅದರಂತೆ ಮೂವರು 10/05/1993ರಲ್ಲಿ ಸರ್ವೆ ನಂಬರ್ 464 ರ‌ ಜಮೀನಿಗೆ ಯಾವುದೇ ತಕರಾರು ಇಲ್ಲ ಅಂತ ಎಲ್ಲರೂ ಸಹಿ ಮಾಡಿದ್ದಾರೆ. ಜಮೀನು ದೇವರಾಜ ಹೆಸರಿಗೆ ವರ್ಗಾವಣೆ ಮಾಡಲು ಸಹಿ ಹಾಕಿದ್ದರು. ದೇವರಾಜ ಹೆಸರಲ್ಲಿ ಪಹಣಿ‌ ಕೂಡ ಬಂದಿದೆ. ದಾಖಲಾತಿಗಳಲ್ಲಿ ಎಲ್ಲವೂ ದಾಖಲಾಗಿದೆ.

ಮಂಜುನಾಥ್ ಸ್ವಾಮಿ ಕಳೆದ 20 ವರ್ಷಗಳಲ್ಲಿ ಯಾವುದೇ ತಕರಾರು ಮಾಡಿಲ್ಲ. ಈಗ ಮಂಜುನಾಥ್ ಅವರನ್ನ ಎತ್ತಿ ಕಟ್ಟಿ ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಏನಾದ್ರೂ ಮಾನ ಮರ್ಯಾದೆ ಇದೆಯಾ? ಈಗ ಬಿಜೆಪಿಯವರು ನಮಗೂ ಪಾಲು ಬರಬೇಕು ಅಂತ ಮಂಜುನಾಥ್ ಸ್ವಾಮಿ ಕೈಲಿ ಹೇಳಿಸ್ತಾರಲ್ಲ. ಹತಾಶರಾಗಿ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅವರು ಬರೆದುಕೊಟ್ಟ ಹೇಳಿಕೆ ಮೇಲೆ ದೇವರಾಜಗೆ ಮ್ಯುಟೇಷನ್ ಆಗಿದ್ದು. 20 ವರ್ಷದಿಂದ‌ ಜಗಳ‌ ಇಲ್ಲದ ಕುಟುಂಬದಲ್ಲಿ ಜಗಳ ತಂದಿದ್ದಾರಲ್ಲ ಬಿಜೆಪಿಯವರು, ಇಂಥವರಿಗೆ ಏನಂತ ಕರೆಯೋದು? ಮನೆ‌ ಮುರುಕರು ಇವರು.

ಇದಾದ ಮೇಲೆ ಮುಡಾದವರು ಈ ಜಮೀನು 464 ಸರ್ವೆ ನಂಬರ್ ಅನ್ನು 92ನೇ ಇಸ್ವಿಯಲ್ಲಿ ಪ್ರಿಲಿಮಿನರಿ ನೋಟಿಫಿಕೇಷನ್ ಮಾಡ್ತಾರೆ. 97ರಲ್ಲಿ ಅಂತಿಮ ನೋಟಿಫಿಕೇಷನ್ ಆಗುತ್ತದೆ. ಬಿಜೆಪಿ ಜೆಡಿಎಸ್‌ನವರು ಹೇಳೋದು ಅರ್ಜಿಯೇ ಕೊಡದೇ ಡಿನೋಟಿಫೈ ಆಗಿದೆ ಅಂತ. ಆದರೆ ಬಚ್ಚೇಗೌಡ ಮಂತ್ರಿ ಆಗಿದ್ದಾಗ 13-8-1996ರಲ್ಲಿ ಜಮೀನು ಮಾಲೀಕ ದೇವರಾಜ ಅರ್ಜಿ ಕೊಡ್ತಾರೆ. ಸದರಿ ಜಮೀನನ್ನು ಭೂ ಸ್ವಾದೀನದಿಂದ ಕೈ ಬಿಡಿ ಅಂತ ದೇವರಾಜ ಅರ್ಜಿ ಕೊಟ್ಟಿದ್ದರು. ಇದರ ಮೇಲೆ ಫೈಲ್ ಪುಟಪ್ ಆಗಿ ಡಿನೋಟಿಫೈ ಸಮಿತಿಗೆ ಹೋಗುತ್ತದೆ. ಖಡಕ್ ಆಫೀಸರ್ ವಿ.ಬಾಲಸುಬ್ರಹ್ಮಣ್ಯನ್ ಎಂಬವರ ನೇತೃತ್ವದಲ್ಲಿ ಸಮಿತಿ ಆಗುತ್ತದೆ. ಅವರ ಸಮಿತಿ 1998ರಲ್ಲಿ ಡಿನೋಟಿಫೈ ಮಾಡಲು ಶಿಫಾರಸು ಮಾಡುತ್ತದೆ. ಇದರ ಜತೆಗೆ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಅದೇ ಸಮಯದಲ್ಲಿ 18 ಪ್ರಕರಣ ಡಿನೋಟಿಫೈ ಮಾಡಲಾಗುತ್ತದೆ.

ನಮ್ಮ ಮಾವನಿಗೆ ಮೂವರ ಮಕ್ಕಳು. ಮಲ್ಲಿಕಾರ್ಜುನ, ಜಗದೀಶ್, ನನ್ನ ಹೆಂಡತಿ. ಅವರು ಭಾಗ ಆದಾಗ 2010ರಲ್ಲಿ ದಾನ ಪತ್ರದ ಮೂಲಕ ಅರಿಸಿನ-ಕುಂಕುಮ ಅಂತ ನನ್ನ ಹೆಂಡತಿಗೆ ಕೊಟ್ಟಿದ್ದಾರೆ. ನಮಗೆ ಈ 2013/14ರಲ್ಲಿ ಮುಡಾ ಅಕ್ರಮವಾಗಿ ಭೂಸ್ವಾಧೀನ ಮಾಡಿದ್ದು ಗೊತ್ತಾಯಿತು. 2014ರಲ್ಲಿ ನಾವು ಅರ್ಜಿ ಹಾಕಿದೆವು. ನಮ್ಮ ಜಮೀನಿಗೆ ಪರ್ಯಾಯವಾಗಿ ಜಮೀನು ಕೊಡಿ ಅಂತ ಕೇಳಿದೆವು. ಅದರಲ್ಲಿ ತಪ್ಪೇ‌ನಿದೆ? 2 ಅರ್ಜಿ ಹಾಕಿದ್ದೇವೆ- 2014 ಹಾಗೂ 2021ರಲ್ಲಿ. ನನ್ನ ಹೆಂಡತಿ ನಾನು ಸಿಎಂ ಆಗಿದ್ದಾಗ ನನ್ನ ಗಮನಕ್ಕೆ ತಂದರು. ಅದಕ್ಕೆ, ನಾನು ಸಿಎಂ ಆಗಿದ್ದೇನೆ, ಈಗ ನಾನು‌ ಹೇಳಲು ಬರಲ್ಲ ಅಂತ ಹೇಳಿದ್ದೆ.

ಮುಡಾದವರು ಸದರಿ ಜಮೀನು ಭೂಸ್ವಾಧೀನದಿಂದ ಕೈ ಬಿಟ್ಟಿದ್ದರೂ ಕೂಡ ಪ್ರಾಧಿಕಾರ ಆ ಜಮೀನು ಉಪಯೋಗಿಸಿಕೊಂಡಿದೆ. ಹೀಗಾಗಿ ಅರ್ಜಿದಾರರಿಗೆ ಸದರಿ ಜಮೀನಿಗೆ ಬದಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ. ಸುಂದರಮ್ಮ ಅವರಿಗೆ ಇದ್ದ 2.17 ಎಕರೆ ಜಮೀನಿಗೆ ಡೆವಲಪ್ಡ್ ಏರಿಯಾದಲ್ಲಿ ಜಮೀನು ಕೊಡುತ್ತಾರೆ. ಈ ಕೇಸ್ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಹೀಗಾಗಿ ಸುಂದರಮ್ಮ ಅವರಂತೆಯೇ ನ್ಯಾಯ ಆಗಿದೆ. 2.17 ಜಮೀನು ಅವರಿಗೆ ಕೊಟ್ಟಿದ್ದಾರೆ. ನಾವು ಮುಡಾದವರಿಗೆ ಇಲ್ಲಿಯೇ ಜಮೀನು ಕೊಡಿ ಅಂತ ಹೇಳಿಲ್ಲ. 50:50ರಡಿ ಕೊಡಿ ಅಂತ ನಾವು ಕೇಳಿರಲಿಲ್ಲ. ದೇವರಾಯ ಬಡವಾಣೆ, ವಿಜಯನಗರ ಬಡಾವಣೆಯಲ್ಲಿಯೇ‌ ಕೊಡಿ ಎಂದಿಲ್ಲ. ಮುಡಾದವರೇ ನಮಗೆ ಜಮೀನಿನ ಬದಲಿ ನಿವೇಶನ ಕೊಟ್ಟಿದ್ದಾರೆ. 3.16 ಎಕರೆ ಜಮೀನಿಗೆ 1.48 ಚದರ ಅಡಿ ಇದೆ. 38,284 ಚದರ ಅಡಿ ಜಮೀನು ನಮಗೆ ಬಂದಿದೆ.

Exit mobile version