Site icon Vistara News

Muda Scam: ಸಿಎಂ ವಿರುದ್ಧದ ಖಾಸಗಿ ದೂರಿನ ಅರ್ಜಿ ವಿಚಾರಣೆ; ಆ.13ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

Muda Scam

ಬೆಂಗಳೂರು: ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ಅರ್ಜಿ ವಿಚಾರಣೆ, ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ನಡೆಯಿತು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ.

ದೂರುದಾರರ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಂಡಿಸಿದರು. ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ದೇವನೂರು ಹಾಗೂ ಮೈಸೂರಿನ ವಿಜಯನಗರ ವ್ಯಾಪ್ತಿಯ ಭೂಮಿ ಡಿನೋಟಿಫಿಕೇಷನ್ ಉಲ್ಲೇಖಿಸಿ ವಾದ ಮಂಡಿಸಿದರು. 1996 ರಿಂದ 1999 ರ ಅವಧಿಯಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. ನಂತರ ದೇವರಾಜು ಎಂಬುವರಿಂದ ಮಲ್ಲಿಕಾರ್ಜುನ ಎಂಬುವರಿಗೆ ಸೇಲ್ ಡೀಡ್ ಮಾಡಲಾಗಿದೆ.
2010 ರಲ್ಲಿ ಸಿಎಂ ಪತ್ನಿಯವರ ಹೆಸರಿಗೆ 3 ಎಕರೆ ಗಿಫ್ಟ್ ಡೀಡ್ ಮಾಡಲಾಗಿದೆ. ಅಷ್ಟರಲ್ಲಿ ಲೇಔಟ್ ಅಭಿವೃದ್ಧಿ ಪಡಿಸಲಾಗಿತ್ತು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಡಾ ಆಯುಕ್ತರ ಮೇಲೆ ಪ್ರಭಾವ ಬೀರಿ ಅಕ್ರಮ ಎಸಗಿದ್ದಾರೆ ಎಂದು ಹೇಳಿದರು. ಮುಡಾ ಯಾವುದಾದರೂ ರೆಸಲ್ಯೂಷನ್ ಮಾಡಿದಿಯೇ ಎಂದು ಜಡ್ಜ್ ಪ್ರಶ್ನೆ ಮಾಡಿದರು.

ವಕೀಲೆ ವಾದ ಮುಂದುವರಿಸುತ್ತಾ, ಪ್ರಾಸಿಕ್ಯೂಷನ್ ಇಲ್ಲದೆ ತನಿಖೆ ಮಾಡುವಂತಿಲ್ಲ ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17 ಬಗ್ಗೆ ಹೈಕೋರ್ಟ್ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಕಾಯ್ದೆಯ ಸೆಕ್ಷನ್ 19 ಸಂಬಂಧಿಸಿದ್ದಾಗಿದೆ. ಈ ಹಂತದಲ್ಲಿ ಅನುಮತಿ ಅವಶ್ಯಕತೆ ಇರಲ್ಲ. ಪ್ರಕರಣದಲ್ಲಿ ಸಿಸಿ ಆಗುವಾಗ ಅನುಮತಿ ಅವಶ್ಯಕತೆ ಇರುತ್ತೆ. ಇದರ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಇದೆ, ವಿವಿಧ ಪ್ರಕರಣಗಳ ತೀರ್ಪುಗಳ ಉಲ್ಲೇಖಿಸಿ ಪಿಸಿಆರ್ ದಾಖಲಿಸಲು ಮನವಿ ಮಾಡಿದರು.

ಮುಡಾದಲ್ಲಿ ಅಭಿವೃದ್ಧಿ ಪಡಿಸಿರೋ ಲೇಔಟ್‌ನಲ್ಲಿ 400ಕ್ಕೂ ಹೆಚ್ಚು ಸೈಟ್‌ಗಳು ಇವೆ. ಕಾನೂನು ಪ್ರಕಾರ ಸಿಎಂ ಪತ್ನಿ ಪಾರ್ವತಿ ಅವರು 14 ನಿವೇಶನ ಪಡೆಯುವ ಹಕ್ಕು ಹೊಂದಿರಲಿಲ್ಲ. ಹೆಚ್ಚೆಂದರೆ 4,800 ಚದರ ಅಡಿ ಜಾಗವನ್ನು ಪಡೆಯುವ ಹಕ್ಕಿದೆ. ಅದು ಸ್ವಾಧೀನ ಆಗಿರುವ ಅದೇ ಜಾಗದಲ್ಲಿ ಪಡೆಯಬಹುದಾಗಿತ್ತು. ಆದರೆ, ಇಲ್ಲಿ 50:50 ಅನುಪಾತ ಅನ್ವಯಿಸಲಾಗಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್‌, ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ.

ಇದನ್ನೂ ಓದಿ | Congress Meeting: ನನ್ನದು ಹೋರಾಟದ ಬದುಕು, ಬಿಜೆಪಿ-ಜೆಡಿಎಸ್‌ ಎಷ್ಟೇ ಪಾದಯಾತ್ರೆ ಮಾಡಿದ್ರೂ ಜಗ್ಗಲ್ಲ ಎಂದ ಸಿಎಂ

ಏನಿದು ಪ್ರಕರಣ?

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾದಿಂದ 14 ನಿವೇಶನಗಳನ್ನು ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು 82ನೇ ಸಿಸಿಎಚ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆ.8ರಂದು ಖಾಸಗಿ ದೂರು ಸಲ್ಲಿಸಿದ್ದರು.

ಸಿಎಂ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಜನಪಕ್ಷಪಾತ ತೋರಿ, ಮುಡಾ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಪತ್ನಿ ಹೆಸರಿಗೆ, ದೇವರಾಜು ಎನ್ನುವವರ ಹೆಸರಿಗೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಇದನ್ನೂ ಓದಿ | Congress Meeting: ಮೈಸೂರಲ್ಲಿ ಸಿಎಂ ಶಕ್ತಿ ಪ್ರದರ್ಶನ; ಈ ಬಂಡೆ ಸಿದ್ದರಾಮಯ್ಯ ಜತೆ ಇದೆ ಎಂದ ಡಿಕೆಶಿ

ಈ ಹಿಂದೆ ರಾಜ್ಯಪಾಲರು, ಕೆಲವು ಅಧಿಕಾರಿಗಳಿಗೆ ದೂರು ಅರ್ಜಿ ನೀಡಿದ್ದೆ, ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 15 ಪುಟಗಳ ದೂರು, 300ಕ್ಕೂ ಹೆಚ್ಚು ದಾಖಲಾತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದೇನೆ. ಸಿದ್ದರಾಮಯ್ಯನವರನ್ನು ಮೊದಲನೇ ಆರೋಪಿ, ಅವರ ಪತ್ನಿ ಎರಡನೇ ಆರೋಪಿ, ಸಂಬಂಧಿಕ ಮಲ್ಲಿಕಾರ್ಜುನ 3ನೇ ಮತ್ತು ದೇವರಾಜ್ ಎಂಬುವವರನ್ನು 4ನೇ ಆರೋಪಿಯನ್ನಾಗಿ ಮಾಡಲು ದೂರು ನೀಡಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದರು.

Exit mobile version