ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ರಾಜ್ಯಪಾಲರು (Governor) ಅನುಮತಿ ನೀಡುವುದು ಬಹುತೇಕ ಖಚಿತವಾಗಿದ್ದು, ಮುಡಾ ಹಗರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುವಂತೆ ಅರ್ಜಿದಾರ ಟಿಜೆ ಅಬ್ರಹಾಂ (TJ Abraham) ಅವರಿಗೆ ಸೂಚಿಸಿದ್ದಾರೆ.
ನಿನ್ನೆ ಈ ಕುರಿತು ಅಬ್ರಹಾಂ ಅವರನ್ನು ಕರೆದು ಮಾಹಿತಿ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಕ್ಯಾಬಿನೆಟ್ ನಿರ್ಣಯದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ಪ್ರಕರಣವನ್ನು ಗಟ್ಟಿಗೊಳಿಸಲು ಅಗತ್ಯವಾದ ಮಾಹಿತಿಗಳನ್ನು ಪಡೆಯಲು ಮುಂದಾಗಿದ್ದಾರೆ.
ಕ್ಯಾಬಿನೆಟ್ ರಾಜ್ಯಪಾಲರಿಗೆ ತನ್ನ ನಿರ್ಣಯವನ್ನು ಕಳಿಸುವುದರ ಜೊತೆಗೆ, ದೂರುದಾರರ ಚಾರಿತ್ರ್ಯವನ್ನೂ ಪ್ರಶ್ನೆ ಮಾಡಿತ್ತು. ಸರ್ಕಾರಿ ಅಧಿಕಾರಿಯನ್ನು ಒಂದು ಕೋಟಿ ರೂಪಾಯಿಗೆ ಬ್ಲಾಕ್‌ಮೇಲ್ ಮಾಡಿದ ಆರೋಪ ಅಬ್ರಹಾಂ ಮೇಲಿದೆ ಎಂದಿತ್ತು. ಈ ಕುರಿತು ಸಿಡಿಯನ್ನು ಕೂಡ ರಾಜ್ಯಪಾಲರಿಗೆ ರವಾನೆ ಮಾಡಿತ್ತು. ಈ ಆರೋಪದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿ ಎಂದು ಕೂಡ ರಾಜ್ಯಪಾಲರು ಅಬ್ರಹಾಂಗೆ ಸೂಚಿಸಿದ್ದಾರೆ.
ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿ ದಾಖಲೆ ಕೊಡಲಿದ್ದೇನೆ ಎಂದು ದೂರುದಾರ ಅಬ್ರಹಾಂ ತಿಳಿಸಿದ್ದಾರೆ. ಸರ್ಕಾರದ ಆರೋಪಕ್ಕೆ ಪ್ರತಿಯಾಗಿ ದಾಖಲೆ ರೆಡಿ ಮಾಡಿಕೊಳ್ಳುತ್ತಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿದ ಇನ್ನಷ್ಟು ದಾಖಲೆ ಪತ್ರಗಳನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.
ರಾಜ್ಯಪಾಲರ ನೋಟೀಸ್‌ಗೆ ಒಂದು ಸಾಲಿನ ನಿರ್ಣಯ ಕಳಿಸಿದ ರಾಜ್ಯ ಸರ್ಕಾರ, ಅದಕ್ಕೆ ಸಂಬಂಧಿಸಿದಂತೆ 70 ದಾಖಲೆಗಳನ್ನು ರಾಜ್ಯಪಾಲರಿಗೆ ರವಾನಿಸಿತ್ತು. 1990ರ ದಶಕದಿಂದಲೂ ಇಲ್ಲಿಯವರೆಗೂ ದಾಖಲೆ ನೀಡಿರುವ ಸರ್ಕಾರ, ಸಿದ್ದರಾಮಯ್ಯ ಪತ್ನಿಗೆ ಆಸ್ತಿ ವರ್ಗಾವಣೆ ಹಾಗೂ ಗಿಫ್ಟ್ ಡೀಡ್ ಬಗ್ಗೆ ದಾಖಲೆ ಹಾಗೂ ಸಾಕ್ಷಿ ಸಮೇತ ವಿವರಣೆ ನೀಡಿದೆ. ಹಾಗೂ ದೂರುದಾರ ಅಬ್ರಹಾಂ ಬಗ್ಗೆಯೂ ಮಾಹಿತಿ ನೀಡಿದೆ. ಈ ದಾಖಲೆಗಳನ್ನು ರಾಜ್ಯಪಾಲರು ಪರಿಶೀಲನೆ ಮಾಡುತ್ತಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯ ಅವರ 10 ಜನರ ಕಾನೂನು ಟೀಮ್ ಫುಲ್ ಆಕ್ಟೀವ್ ಆಗಿದೆ. ರಾಜ್ಯಪಾಲರ ನಡೆ ಪ್ರಶ್ನೆ ಮಾಡಿ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳ ಹಾಗೂ ಲೋಕಾಯುಕ್ತ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೂ ಹೋಗಲು ವಕೀಲರ ಟೀಮ್ ರೆಡಿಯಾಗಿದೆ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರಿಂದಲೇ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.
ಒಂದೆಡೆ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯಪಾಲರಿಂದ ಕಾನೂನಾತ್ಮಕ ಅಂಶಗಳ ಕುರಿತು ಮೀಟಿಂಗ್ ನಡೆಸಲಾಗುತ್ತಿದೆ. ಈ ನಡುವೆ ಪ್ರತಿಪಕ್ಷಗಳ ವಿರುದ್ಧ ಸಮರ ಸಾರಲು ಮೆಗಾ ತಯಾರಿ ಮಾಡಿಕೊಲ್ಳುತ್ತಿರುವ ಕಾಂಗ್ರೆಸ್, ಆಗಸ್ಟ್ 9ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಚಿವರ ಹಾಜರಾತಿ ಕಡ್ಡಾಯ ಎಂದು ಎಐಸಿಸಿ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಪ್ಲಾನ್ ನಡೆದಿದ್ದು, ಬಿಜೆಪಿ ಕಾಲದ ಹಗರಣಗಳ ಕುರಿತು ಹೆಚ್ಚಿನದಾಗಿ ಪ್ರಸ್ತಾಪಿಸಿ ಆ ಮೂಲಕ ಪ್ರತಿಪಕ್ಷಗಳ ವಿರುದ್ಧ ರಣಕಹಳೆ ಮೊಳಗಿಸಲು ಸರ್ಕಾರ ಸಜ್ಜಾಗುತ್ತಿದೆ.
ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ರಾಜಭವನದಿಂದ ಮೂರನೇ ನೋಟೀಸ್ ಜಾರಿ! ಯಾಕೆ ಪದೇ ಪದೆ ನೋಟೀಸ್?