ಮುಂಬಯಿ: ಅದು ೧೩ ವರ್ಷಗಳ ಹಿಂದಿನ ಸನ್ನಿವೇಶ. ಬಿಲಿಯನೇರ್ ಮುಕೇಶ್ ಅಂಬಾನಿ ಹಾಗೂ ಕಿರಿಯ ಸೋದರ ಅನಿಲ್ ಅಂಬಾನಿ ಅವರು ಮುಂಬಯಿನಲ್ಲಿ ತಾಯಿ ಕೋಕಿಲಾಬೆನ್ ಅಂಬಾನಿಯವರ ಜತೆ ಒಟ್ಟಿಗಿದ್ದರೂ, ತಂದೆ ಕಟ್ಟಿದ ರಿಲಯನ್ಸ್ ಸಾಮ್ರಾಜ್ಯಕ್ಕಾಗಿ ಕೋರ್ಟ್‌ಗಳಲ್ಲಿ ಪರಸ್ಪರ ತೀವ್ರವಾಗಿ ಕಾದಾಡುತ್ತಿದ್ದರು.
ಧೀರೂಭಾಯಿ ಅಂಬಾನಿ ಮಾಡಿದ ತಪ್ಪೇನು?
ಧೀರೂಭಾಯಿ ಅಂಬಾನಿ ಅವರು ೨೦೦೨ರಲ್ಲಿ ನಿಧನರಾಗುವ ವೇಳೆಗೆ ೯೦,೦೦೦ ಕೋಟಿ ರೂ. ಮೌಲ್ಯದ ರಿಲಯನ್ಸ್ ಸಾಮ್ರಾಜ್ಯವನ್ನು ನಿರ್ಮಿಸಿದ್ದರು. ಆದರೆ ಬೃಹತ್ ಉದ್ದಿಮೆಗಳ ಭವಿಷ್ಯಕ್ಕಾಗಿ ವಿಲ್ ಬರೆದಿಟ್ಟಿರಲಿಲ್ಲ. ಇದು ಅವರು ಮಾಡಿದ ಪ್ರಮಾದವಾಗಿತ್ತು. ಬಹುಶಃ ತಮ್ಮ ಕಾಲವಾದ ಬಳಿಕ ಇಬ್ಬರು ಮಕ್ಕಳು ಆಸ್ತಿಗಾಗಿ ಭಾರಿ ವಿವಾದ ಸೃಷ್ಟಿಸಿಕೊಳ್ಳಲಿದ್ದಾರೆ ಎಂದು ಅವರು ಭಾವಿಸಿರಲಿಲ್ಲ ಎಂದು ಅನ್ನಿಸುತ್ತಿದೆ. ಆದರೆ ಆದದ್ದೇ ಬೇರೆ.
ಧೀರೂಭಾಯಿ ಅಂಬಾನಿ ಅವರು ೨೦೦೨ಲ್ಲಿ ತಮ್ಮ ಉದ್ದಿಮೆಗಳನ್ನು ಇಬ್ಬರು ಮಕ್ಕಳಿಗೆ ಹೇಗೆ ಪಾಲು ಮಾಡಬೇಕು ಎಂಬುದರ ಬಗ್ಗೆ ಯಾವುದೇ ವಿಲ್ ಬರೆಯದೆ ಮೃತಪಟ್ಟಿದ್ದರು. ಇದರ ಪರಿಣಾಮ ಇಬ್ಬರು ಸೋದರರು ಭಾರಿ ಸಂಘರ್ಷದ ಹಾದಿಯನ್ನೇ ತುಳಿದಿದ್ದರು.
ಅನಿಲ ನಿಕ್ಷೇಪಕ್ಕಾಗಿ ಕೋರ್ಟ್‌ನಲ್ಲಿ ಕಾದಾಡಿದ್ದ ಅಣ್ಣ-ತಮ್ಮ
೨೦೦೫ರ ಕೌಟುಂಬಿಕ ಒಪ್ಪಂದದ ಪ್ರಕಾರ ಮುಕೇಶ್ ಅಂಬಾನಿ ಅವರು ಬಂಗಾಳಕೊಲ್ಲಿಯಲ್ಲಿರುವ ಕೆಜಿ ಬೇಸಿನ್ ನೈಸರ್ಗಿಕ ಅನಿಲ ಉದ್ದಿಮೆ ಕುರಿತ ರಿಲಯನ್ಸ್ ಹಕ್ಕನ್ನು ಪಡೆದಿದ್ದರು. ಆದರೆ ಅದು ಆಗತಾನೆ ಅನಿಲವನ್ನು ಉತ್ಪಾದಿಸಲು ಆರಂಭಿಸಿತ್ತು. ಕೌಟುಂಬಿಕ ಒಪ್ಪಂದದ ಪ್ರಕಾರ, ಸೋದರ ಅನಿಲ್ ಅಂಬಾನಿಯ ಉದ್ದೇಶಿತ ವಿದ್ಯುತ್ ಘಟಕಕ್ಕೆ ಅಗ್ಗದ ದರದಲ್ಲಿ ಗ್ಯಾಸ್ ಅನ್ನು ೧೭ ವರ್ಷದ ಅವಧಿಗೆ ಮುಕೇಶ್ ಅಂಬಾನಿ ಪೂರೈಸಬೇಕಿತ್ತು. ಆದರೆ ಇದಕ್ಕೆ ಮುಕೇಶ್ ಅಂಬಾನಿ ಅವರು ಒಪ್ಪಿರಲಿಲ್ಲ. ಇದರ ಪರಿಣಾಮ ಇಬ್ಬರೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಕಾನೂನು ಸಂಘರ್ಷದ ಕಾಲದಲ್ಲಿ ಪರಸ್ಪರ ದೋಷಾರೋಪಣೆ ಸುದ್ದಿಯಾಗುತ್ತಿತ್ತು. ಅಣ್ಣ ಮತ್ತು ತಮ್ಮನ ಕಲಹ ರಿಲಯನ್ಸ್ ಗ್ರೂಪ್ ಕಂಪನಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿತ್ತು. ಅದು ಹಲವಾರು ಕಂಪನಿಗಳ ಭವಿಷ್ಯದ ಹಿತದೃಷ್ಟಿಯಿಂದ ಮಾರಕವಾಗುತ್ತಿತ್ತು.
ಮುಕೇಶ್ ಅಂಬಾನಿ ತನ್ನ ವಿರುದ್ಧ ಹಗೆ ಸಾಧಿಸಲು ಅನಿಲ ಪೂರೈಸುತ್ತಿಲ್ಲ. ಇದರ ಪರಿಣಾಮ ದೇಶಕ್ಕೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಅನಿಲ್ ಅಂಬಾನಿ ಆರೋಪಿಸಿದ್ದರು. ಮತ್ತೊಂದು ಕಡೆ ಸರ್ಕಾರ ನಿಗದಿಪಡಿಸಿದ ರೇಟಿಗಿಂತ ೪೪% ಕಡಿಮೆ ದರದಲ್ಲಿ ಅನಿಲವನ್ನು ನೀಡಲು ಸಾಧ್ಯವಿಲ್ಲ ಎಂದು ಮುಕೇಶ್ ಅಂಬಾನಿ ವಾದಿಸಿದ್ದರು.
ಮುಕೇಶ್ ಅಂಬಾನಿ ಪರ ಸುಪ್ರೀಂಕೋರ್ಟ್ ತೀರ್ಪು
ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ನಡುವೆ ಗಂಭೀರ ಸ್ವರೂಪಕ್ಕೆ ತಿರುಗಿದ್ದ ನೈಸರ್ಗಿಕ ಅನಿಲ ವಿತರಣೆಯ ಕೌಟುಂಬಿಕ ಒಪ್ಪಂದದ ವಿವಾದವನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ೨೦೧೦ರಲ್ಲಿ ಬಗೆಹರಿಸಿತ್ತು. ಬಂಗಾಳಕೊಲ್ಲಿಯಲ್ಲಿನ ಕೃಷ್ಣಾ ಗೋದಾವರಿ ( ಕೆಜಿ ಬೇಸಿನ್) ಅನಿಲ ನಿಕ್ಷೇಪ ದೇಶದಲ್ಲಿಯೇ ಅತಿ ದೊಡ್ಡ ಅನಿಲ ನಿಕ್ಷೇಪ. ಇದು ದೇಶದ ಆಸ್ತಿಯೂ ಹೌದು. ಹೀಗಾಗಿ ಕೌಟುಂಬಿಕ ಒಪ್ಪಂದಗಳು ಇದರ ವ್ಯವಹಾರಗಳಲ್ಲಿ ನಿರ್ಣಾಯಕವಾಗುವುದಿಲ್ಲ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಮುಕೇಶ್ ಅಂಬಾನಿ ಪರ ತೀರ್ಪು ನೀಡಿತ್ತು. ಈ ಕೇಸ್‌ನಲ್ಲಿ ಅದೃಷ್ಟ ಮುಕೇಶ್ ಅಂಬಾನಿ ಪರ ಇತ್ತು. ಇದಾದ ಎರಡು ವಾರಗಳಲ್ಲಿ ಸೋದರರು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿದರು.
ಮುಕೇಶ್ ಕೈತಪ್ಪಿದ್ದ ಟೆಲಿಕಾಂ ಉದ್ದಿಮೆ
ಮುಕೇಶ್ ಅಂಬಾನಿ ಅವರಿಗೆ ಟೆಲಿಕಾಂ ಉದ್ದಿಮೆಯಲ್ಲಿ ಪ್ರಗತಿ ಸಾಧಿಸಬೇಕು ಎಂಬ ಬಯಕೆ ಮೊದಲಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ತಮ್ಮ ಅನಿಲ್ ಅಂಬಾನಿಯವರ ಪಾಲಾಯಿತು. ಆದ್ದರಿಂದ ತಡವಾಗಿ ಮುಕೇಶ್ ಅಂಬಾನಿ ಟೆಲಿಕಾಂ ಉದ್ದಿಮೆಗೆ ಪ್ರವೇಶಿಸಬೇಕಾಯಿತು. ಒಮ್ಮೆ ಜಿಯೊ ಮೂಲಕ ಟೆಲಿಕಾಂ ಕ್ಷೇತ್ರ ಪ್ರವೇಶಿಸಿದ ಬಳಿಕ ಮುಕೇಶ್ ಅಂಬಾನಿ ಭರ್ಜರಿ ಯಶಸ್ಸು ಗಳಿಸಿದರು. ಮತ್ತೊಂದು ಕಡೆ ರಿಲಯನ್ಸ್ ಕಮ್ಯುನಿಕೇಷನ್ಸ್ ವಿಫಲವಾಗಿತ್ತು. ಅಂತಿಮವಾಗಿ ಮುಕೇಶ್ ಅಂಬಾನಿ ಅವರು ಆರ್‌ಕಾಮ್‌ಮ ಗೋಪುರಗಳು ಮತ್ತು ಫೈಬರ್ ಬಿಸಿನೆಸ್ ಅನ್ನು ೧೮,೦೦೦ ಕೋಟಿ ರೂ.ಗೆ ಖರೀದಿಸಿದ್ದರು. ೨೦೧೯ರಲ್ಲಿ ಆರ್‌ಕಾಮ್ ದಿವಾಳಿಯಾಗಿರುವುದಾಗಿ ಘೋಷಿಸಿತ್ತು. ಇದರೊಂದಿಗೆ ತಮ್ಮ ಅನಿಲ್ ಅಂಬಾನಿಗೆ ಮೊದಲೇ ಪಾಲಿನ ಮೂಲಕ ದೂರಸಂಪರ್ಕ ಕಂಪನಿ ಸಿಕ್ಕಿದ್ದರೂ, ಅದನ್ನು ಉಳಿಸಿಕೊಂಡು ಬೆಳೆಸಲು ಸಾಧ್ಯವಾಗಲಿಲ್ಲ.
ಅನಿಲ್ ಅಂಬಾನಿ ವೈಫಲ್ಯ, ಮುಕೇಶ್ ಸಕ್ಸಸ್
ಒಡಹುಟ್ಟಿದವರಾದರೂ, ಅನಿಲ್ ಅಂಬಾನಿ ಉದ್ಯಮಿಯಾಗಿ ಯಶಸ್ವಿಯಾಗಲಿಲ್ಲ. ಮತ್ತೊಂದು ಕಡೆ ಮುಕೇಶ್ ಅಂಬಾನಿ ರಿಲಯನ್ಸ್ ಸಾಮ್ರಾಜ್ಯವನ್ನು ಜಾಗತಿಕ ಮಟ್ಟದ ಪ್ರಮುಖ ಕಂಪನಿಯನ್ನಾಗಿಸಿ ಬೆಳೆಸಿದರು.
ಅನಿಲ್ ಅಂಬಾನಿ ಅವರು ಕೆ.ಜಿ ಬೇಸಿನ್ ಅನಿಲಕ್ಕಾಗಿ ಮಾಡಿದ ಹೋರಾಟದಿಂದ ಅವರೇನೂ ದೊಡ್ಡವರಾಗಲಿಲ್ಲ. ನಿಜವಾದ ಯಶಸ್ಸಿ ಉದ್ಯಮಿಯಾಗಿ ಹೊರಹೊಮ್ಮಿದವರು ಮುಕೇಶ್ ಅಂಬಾನಿ. ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್, ರಿಲಯನ್ಸ್ ಪವರ್ ಎಲ್ಲ ದಿವಾಳಿಯಾಯಿತು.
ಜಗತ್ತಿನ ೭ನೇ ಶ್ರೀಮಂತ ಮುಕೇಶ್ ಅಂಬಾನಿ
ಧೀರೂಭಾಯಿ ಅಂಬಾನಿ ಅವರ ೯೦,೦೦೦ ಕೋಟಿ ರೂ. ಮೌಲ್ಯದ ರಿಲಯನ್ಸ್ ಸಾಮ್ರಾಜ್ಯದಲ್ಲಿ ವಿವಾದದ ಬಳಿಕ ತಮ್ಮ ಪಾಲನ್ನು ಪಡೆದ ಮುಕೇಶ್ ಅಂಬಾನಿ ಬಳಿಕ ಹಿಂತಿರುಗಿ ನೋಡಲಿಲ್ಲ. ಸದ್ದಿಲ್ಲದೆ ಉದ್ದಿಮೆಯನ್ನು ದಿನೇದಿನೆ ವಿಸ್ತರಿಸುತ್ತಲೇ ಹೋದರು. ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಭಾರತದ ಅತಿ ದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್. ಇದರ ಮೌಲ್ಯ ೧೨. ೬೭ ಲಕ್ಷ ಕೋಟಿ ರೂ.ಗೂ ಹೆಚ್ಚು. ಫಾರ್ಚ್ಯೂನ್ ಗ್ಲೋಬಲ್ ೫೦೦ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಇದೆ. ಫೋರ್ಬ್ಸ್ ಪ್ರಕಾರ ಮುಕೇಶ್ ಅಂಬಾನಿಯ ನಿವ್ವಳ ಸಂಪತ್ತು ೭.೨೫ ಲಕ್ಷ ಕೋಟಿ ರೂ. ತಮ್ಮ ೬೫ನೇ ವಯಸ್ಸಿನಲ್ಲಿ ಮುಕೇಶ್ ಅಂಬಾನಿ ಅವರು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಮಾಡುತ್ತಿದ್ದಾರೆ. ಆದರೆ ತಂದೆ ಧೀರೂಭಾಯಿ ಅಂಬಾನಿ ಅವರು ಮಾಡಿದ ಪ್ರಮಾದ ಮರುಕಳಿಸದಂತೆ ಎಚ್ಚರ ವಹಿಸುತ್ತಿದ್ದಾರೆ. ಇದಕ್ಕಾಗಿ ಜಗತ್ತಿನ ಪ್ರಮುಖ ಕಾರ್ಪೊರೇಟ್ ಮನೆತನಗಳಲ್ಲಿ ನಡೆದ ಉತ್ತರಾಧಿಕಾರ ಪ್ರಕ್ರಿಯೆಗಳ ಮಾದರಿಗಳ ಅಧ್ಯಯನವನ್ನೂ ನಡೆಸಲಾಗಿದೆ. ಮುಕೇಶ್ ಅಂಬಾನಿ-ನೀತಾ ಅಂಬಾನಿ ದಂಪತಿಗೆ ಮೂವರು ಮಕ್ಕಳು. ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಅವಳಿಗಳಾದರೆ, ಅನಂತ್ ಅಂಬಾನಿ ಕಿರಿಯ ಪುತ್ರ.
ಮಕ್ಕಳಿಗೆ ಆಸ್ತಿ ಹಂಚಿದರೂ ರಿಲಯನ್ಸ್ ವಿಭಜನೆ ಆಗಲ್ಲ
ಧೀರೂಭಾಯಿ ಅಂಬಾನಿಯವರ ರಿಲಯನ್ಸ್ ಸಾಮ್ರಾಜ್ಯವನ್ನು ಮುಕೇಶ್ ಮತ್ತು ಅನಿಲ್ ಅಂಬಾನಿ ಹಂಚಿಕೊಂಡ ಬಳಿಕ ಎರಡಾಗಿ ಸಮೂಹದ ವಿಭಜನೆಯಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಮುಕೇಶ್ ಅಂಬಾನಿ ಪಾಲಾದರೆ, ಅನಿಲ್ ಅಂಬಾನಿ ಗ್ರೂಪ್ -ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಎಂದು ಪ್ರತ್ಯೇಕವಾಗಿತ್ತು.
ಆದರೆ ಮುಕೇಶ್ ಅಂಬಾನಿ ಅವರು ತಮ್ಮ ಮಕ್ಕಳಿಗೆ ರಿಲಯನ್ಸ್ ಇಂಡಸ್ಟ್ರಿಯ ಪ್ರಮುಖ ಕಂಪನಿಗಳನ್ನು ಒಂದೊಂದಾಗಿ ಹಂಚುತ್ತಿದ್ದರೂ, ರಿಲಯನ್ಸ್ ಇಂಡಸ್ಟ್ರೀಸ್ ಮಾತೃಸಂಸ್ಥೆಯಾಗಿ ಉಳಿಯಲಿದೆ. ಅದರ ವಿಭಜನೆ ಆಗುವುದಿಲ್ಲ. ಅಂದರೆ ಅಂಬಾನಿ ಮಕ್ಕಳು ತಮ್ಮ ಪಾಲಿನ ಕಂಪನಿಗಳನ್ನು ಎಷ್ಟು ಬೇಕಾದರೂ ಬೆಳೆಸಬಹುದು. ಆದರೆ ಮಾತೃಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಜತೆಗಿನ ಒಪ್ಪಂದವನ್ನು ಉಳಿಸಿಕೊಳ್ಳಬೇಕಾಗುತ್ತದೆ. ತಮ್ಮ ಕಂಪನಿಗಳನ್ನು ಬೆಳೆಸಲು ಸಕಲ ಸ್ವಾತಂತ್ರ್ಯ ಹೊಂದಿದ್ದರೂ, ರಿಲಯನ್ಸ್ ಇಂಡಸ್ಟ್ರೀಸ್‌ನ ಬಂಡವಾಳ ಹಂಚಿಕೆ ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಒಂದು ಇಡಿಯ ಸಮೂಹವಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಬಲ ಕುಂದುವುದಿಲ್ಲ. ಬದಲಿಗೆ ಯುವ ಸಾರಥ್ಯದಿಂದ ಸಮೂಹ ಮತ್ತಷ್ಟು ಪ್ರಬಲವಾಗಿ ವಿಸ್ತರಿಸುವ ಸಾಧ್ಯತೆ ಇದೆ. ಇದು ಒಬ್ಬ ತಂದೆಯಾಗಿ ಮುಕೇಶ್ ಅಂಬಾನಿ ಅವರು ಮಾಡಬಹುದಾದ ಅತ್ಯುತ್ತಮ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಎನ್ನುತ್ತಾರೆ ತಜ್ಞರು.
ಆಕಾಶ್ ಅಂಬಾನಿಗೆ ರಿಲಯನ್ಸ್ ಜಿಯೊ
ಮುಕೇಶ್ ಅಂಬಾನಿಯ ಮೊದಲ ಮಗ ಆಕಾಶ್ (೩೦) ಇದೀಗ ರಿಲಯನ್ಸ್ ಜಿಯೊದ ಅಧ್ಯಕ್ಷರಾಗಿ ತಂದೆಯಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಜಿಯೊದ ಮಂಡಳಿಯಿಂದ ಮುಕೇಶ್ ಅಂಬಾನಿ ನಿರ್ಗಮಿಸಿದ್ದಾರೆ. ಆಕಾಶ್ ೨೦೧೪ರ ಅಕ್ಟೋಬರ್‌ನಲ್ಲಿ ರಿಲಯನ್ಸ್ ಜಿಯೊದ ಮಂಡಳಿಗೆ ನಿರ್ದೇಶಕರಾಗಿ ಸೇರಿದ್ದರು. ೨೦೨೦ರಲ್ಲಿ ಜಿಯೊದ ಹಲವಾರು ಸ್ವಾಧೀನ ಮತ್ತು ಷೇರು ವಿಕ್ರಯಗಳಲ್ಲಿ ಆಕಾಶ್ ಜವಾಬ್ದಾರಿ ವಹಿಸಿದ್ದರು.
ಇಶಾ ಅಂಬಾನಿಗೆ ರಿಲಯನ್ಸ್ ರಿಟೇಲ್ ಸಾರಥ್ಯ
ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮತ್ತೊಂದು ಪ್ರಮುಖ ಕಂಪನಿ ರಿಲಯನ್ಸ್ ರಿಟೆಲ್‌ನ ನೂತನ ಅಧ್ಯಕ್ಷೆಯಾಗಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ನೇಮಕವಾಗಿದ್ದಾರೆ. ಇಶಾ ಅಂಬಾನಿ (೩೦) ಜಿಯೊ ಮತ್ತು ರಿಲಯನ್ಸ್ ರಿಟೇಲ್ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು.
ಕಿರಿಯ ಪುತ್ರ ಆಕಾಶ್ ಅಂಬಾನಿಗೆ ರಿಲಯನ್ಸ್ ಎನರ್ಜಿ ಪಟ್ಟ?
ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ (೨೭) ರಿಲಯನ್ಸ್ ಸಾಮ್ರಾಜ್ಯದ ಮುಕುಟಮಣಿ ಎನ್ನಿಸಿರುವ ತೈಲ ಮತ್ತು ರಾಸಾಯನಿಕ ಉದ್ದಿಮೆಗಳ ಅಧಿಪತ್ಯ ದೊರೆಯಲಿದೆ ಎಂದು ಹೇಳಲಾಗಿದೆ. ಆದರೆ ಸಾಂಪ್ರದಾಯಿಕ ಮೂಲಗಳ ಬದಲಿಗೆ ಪರಿಸರಸ್ನೇಹಿ, ಸ್ವಚ್ಛ ಇಂಧನ ಮೂಲಗಳಿಂದ ಇಂಧನ ಉತ್ಪಾದನೆಯನ್ನು ಮಾಡಬೇಕಾದ ಜವಾಬ್ದಾರಿಯನ್ನು ಅನಂತ್ ಅಂಬಾನಿಗೆ ವಹಿಸಲಾಗಿದೆ. ಅಂದರೆ ಸೋಲಾರ್, ಸೋಡಿಯಂ-ಇಯಾನ್ ಬ್ಯಾಟರಿ ಉತ್ಪಾದನೆ, ಗ್ರೀನ್ ಹೈಡ್ರೋಜನ್ ಇತ್ಯಾದಿ ಕ್ಷೇತ್ರಗಳಲ್ಲಿ ಕೂಡ ಉದ್ದಿಮೆಯನ್ನು ಮುನ್ನಡೆಸಬೇಕಾಗಿದೆ.
ರಿಲಯನ್ಸ್ ಕಂಪನಿಗಳಲ್ಲಿ ಅಂಬಾನಿ ಕುಟುಂಬದ ಭವಿಷ್ಯದ ಪಾತ್ರ ಏನು?
ಭವಿಷ್ಯದ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ರಿಟೇಲ್, ಟೆಲಿಕಾಂ, ಎನರ್ಜಿ ಕಂಪನಿಗಳು ವೃತ್ತಿಪರ ಅಧಿಕಾರಿ, ಸಿಬ್ಬಂದಿ ವರ್ಗದೊಂದಿಗೆ ಚೆನ್ನಾಗಿಯೇ ನಡೆಯಬಹುದು. ಹಾಗೂ ರಿಲಯನ್ಸ್ ರಿಟೇಲ್, ರಿಲಯನ್ಸ್ ಜಿಯೊ ಮತ್ತು ಇತರ ಕಂಪನಿಗಳು ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿತ ಕಂಪನಿಗಳಾಗಬಹುದು. ಅವುಗಳಲ್ಲಿ ಹೆಚ್ಚಿನ ಷೇರುಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಅಂಬಾನಿ ಕುಟುಂಬ ತನ್ನ ನಿಯಂತ್ರಣವನ್ನು ಇಟ್ಟುಕೊಳ್ಳಬಹುದು.
ದಿಗ್ಗಜ ಕಂಪನಿಗಳ ಜತೆ ಒಪ್ಪಂದ ಸಂಭವ
ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಲಾಭ ಮತ್ತು ಅತ್ಯಲ್ಪ ಸಾಲದ ಉತ್ತಮ ಸ್ಥಿತಿಯಲ್ಲಿದೆ. ಬಂಡವಾಳಕ್ಕೆ ಕೊರತೆ ಇಲ್ಲ. ಹೀಗಾಗಿ ಭವಿಷ್ಯದಲ್ಲಿ ಮತ್ತಷ್ಟು ವಿಸ್ತರಣೆಗೆ ಅನುಕೂಲಕರವಾಗಲಿದೆ. ಜತೆಗೆ ಇತರ ದಿಗ್ಗಜ ಕಂಪನಿಗಳ ಜತೆಗೆ ಭಿನ್ನ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳಲು ಹಾದಿ ಸುಗಮವಾಗುತ್ತದೆ. ಇದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಕಂಪನಿಗಳಿಗೆ ತಮ್ಮ ವಹಿವಾಟನ್ನು ಷೇರು ಮಾರುಕಟ್ಟೆಯ ಪ್ರವೇಶದ ಅಗತ್ಯ ಇಲ್ಲದೆಯೂ, ಬೇರೆ ಬೇರೆ ವಲಯಗಳಲ್ಲಿ ವಿಸ್ತರಿಸಲು ಸಹಕಾರಿಯಾಗುತ್ತದೆ. ಉದಾಹರಣೆಗೆ ಗೂಗಲ್, ಜಿಯೊದಲ್ಲಿ ಕೇವಲ ಹೂಡಿಕೆ ಮಾಡುವುದು ಮಾತ್ರವಲ್ಲದೆ ಅಗ್ಗದ ಆಂಡ್ರಾಯ್ಡ್ ಆಧಾರಿತ ಫೋನ್ ವಿತರಣೆಗೆ ಸಹಕರಿಸಿದೆ. ಅಮೆಜಾನ್ ಡಾಟ್‌ಕಾಮ್‌ನಿಂದಲೂ ಉಪಯುಕ್ತ ಡೀಲ್ ಪಡೆಯಬಹುದು. ಆದರೆ ಅಮೆಜಾನ್ ಜತೆ ಡೀಲ್‌ಗಿಂತಲೂ ಕಾಂಪಿಟೇಶನ್‌ಗೆ ರಿಲಯನ್ಸ್ ಸಿದ್ಧತೆ ನಡೆಸುತ್ತಿದೆ. ಈ ರೀತಿ ಭಿನ್ನ ಆಯಾಮಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಮೈಗೂಡಿಸಿಕೊಂಡು ಬೆಳೆಯಬಹುದು.
ಕಳೆದ ವರ್ಷವೇ ಅಧಿಕಾರ ಹಸ್ತಾಂತರದ ಇಂಗಿತ
ಮುಕೇಶ್ ಅಂಬಾನಿ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಂದೆ ಧೀರೂಭಾಯಿ ಅಂಬಾನಿಯವರ 89ನೇ ಜನ್ಮದಿನಾಚರಣೆಯ ವೇಳೆ, ರಿಲಯನ್ಸ್ ಉದ್ದಿಮೆಗಳ ಸಾರಥ್ಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅವರಿಗೆ ತಮ್ಮ ತಂದೆ ಮಾಡಿದ್ದ ಪ್ರಮಾದ ಮತ್ತು ಅದರ ಪರಿಣಾಮಗಳ ಖಚಿತ ಅರಿವು ಇತ್ತು. ಹೀಗಾಗಿ ಇಬ್ಬರು ಪುತ್ರರು ಮತ್ತು ಪುತ್ರಿ ನಡುವೆ ಅಧಿಕಾರ ಹಂಚಿಕೆಯ ಸೂತ್ರವನ್ನು ಮುಕೇಶ್ ಅಂಬಾನಿ ಸಿದ್ಧಪಡಿಸಿದ್ದರು.
ಕುಟುಂಬದ ಕುಡಿಗಳಿಗೇ ನಾಯಕತ್ವ
” ರಿಲಯನ್ಸ್ ಇಂಡಸ್ಟ್ರೀಸ್‌ಗೆ ಯುವಪೀಳಿಗೆಯ ಹೊಸ ಚೈತನ್ಯಶಾಲಿ ನಾಯಕತ್ವ ಸಿಗಲಿದೆ. ಆಕಾಶ್, ಇಶಾ ಮತ್ತು ಅನಂತ್ ಈ ಸಮೂಹವನ್ನು ಮತ್ತೊಂದು ಎತ್ತರದ ಹಂತಕ್ಕೆ ಅವರು ಕೊಂಡೊಯ್ಯಲಿದ್ದಾರೆ ಎಂಬುದರನ್ನು ಅನುಮಾನವೇ ಇಲ್ಲ. ನಾವು ಹಿರಿಯರಾಗಿ ಅವರಿಗೆ ಮಾರ್ಗದರ್ಶನ ನೀಡುತ್ತೇವೆ. ಅವರನ್ನು ಉತ್ತೇಜಿಸಿ ಬಲಪಡಿಸುತ್ತೇವೆ” ಎನ್ನುವ ಮೂಲಕ ಮುಕೇಶ್ ಅಂಬಾನಿಯವರು, ರಿಲಯನ್ಸ್ ಸಮೂಹದ ದಿನವಹಿ ಚಟುವಟಿಕೆಗಳನ್ನು ನುರಿತ ವೃತ್ತಿಪರರು ನೋಡಿಕೊಂಡರೂ, ಸಾರಥ್ಯವನ್ನು ಮಾತ್ರ ಮುಂದೆಯೂ ಕುಟುಂಬದ ಕುಡಿಗಳೇ ನೋಡಿಕೊಳ್ಳಲಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ.
ಪುತ್ರರಷ್ಟೇ ಅಲ್ಲ, ಪುತ್ರಿಗೂ ಆದ್ಯತೆ
ಸ್ವಾರಸ್ಯವೆಂದರೆ ಧೀರೂಭಾಯಿ ಅಂಬಾನಿಯವರು ತಮ್ಮ ಉತ್ತರಾಧಿಕಾರಿಗಳಾಗಿ ಮುಕೇಶ್ ಮತ್ತು ಅನಿಲ್ ಅಂಬಾನಿಯವರನ್ನು ಪರಿಭಾವಿಸಿದ್ದರು. ಅವರ ಇಬ್ಬರು ಪುತ್ರಿಯರಿಗೆ ಪ್ರಾಧಾನ್ಯತೆ ಇದ್ದಿರಲಿಲ್ಲ. ಆದರೆ ಮುಕೇಶ್ ಅಂಬಾನಿಯವರು ಹಾಗಲ್ಲ. ತಮ್ಮ ಪುತ್ರಿ ಇಶಾ ಅಂಬಾನಿಗೂ ರಿಲಯನ್ಸ್ ಸಾಮ್ರಾಜ್ಯದಲ್ಲಿ ಪ್ರಾಧಾನ್ಯತೆ ನೀಡಿದ್ದಾರೆ.
ಮುಕೇಶ್ ಅಂಬಾನಿಯವರು ಉತ್ತರಾಧಿಕಾರ ವಿಚಾರದಲ್ಲಿ ತಂದೆ ಮಾಡಿದ್ದ ಪ್ರಮಾದದಿಂದ ದೊಡ್ಡ ಪಾಠ ಕಲಿತಿರುವುದಂತೂ ಸ್ಪಷ್ಟವಾಗಿ ಕಾಣುತ್ತಿದೆ. ೬೫ನೇ ವರ್ಷದಲ್ಲಿ ಅಧಿಕಾರ ಹಸ್ತಾಂತರದ ರೂಪುರೇಷೆಗಳನ್ನು ಸಿದ್ಧಪಡಿಸುವ ಮೂಲಕ, ಅಕಸ್ಮಾತ್ ಏನಾದರೂ ವಿವಾದ ಉಂಟಾದರೂ, ಬಗೆಹರಿಸುವ ಸಾಮರ್ಥ್ಯವನ್ನೂ, ಶಕ್ತಿಯನ್ನೂ ಹೊಂದಿದ್ದಾರೆ. ದೊಡ್ಡ ಕಾರ್ಪೊರೇಟ್ ಗ್ರೂಪ್‌ಗಳಲ್ಲಿ ಉತ್ತರಾಧಿಕಾರ ಪ್ರಕ್ರಿಯೆ ಮಹತ್ವ ಪಡೆಯುತ್ತದೆ. ಏಕೆಂದರೆ ಅವುಗಳು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ, ಆರ್ಥಿಕ ವ್ಯವಸ್ಥೆಯ ಮೇಲೂ ಪ್ರಭಾವ ಬೀರುತ್ತವೆ. ಆದ್ದರಿಂದ ಒಂದು ಉತ್ತಮ ಮಾದರಿಯನ್ನು ಮುಕೇಶ್ ಅಂಬಾನಿ ಜಾರಿಗೊಳಿಸುತ್ತಿದ್ದಾರೆ. ಇಡೀ ಕಾರ್ಪೊರೇಟ್ ವಲಯ ಕುತೂಹಲದಿಂದ ಇದನ್ನು ಗಮನಿಸುತ್ತಿದೆ.