ಬೆಂಗಳೂರು: ಕಾಂಗ್ರೆಸ್ ಪ್ರಾಬಲ್ಯದ ಮೈಸೂರು ಲೋಕ ಸಭಾ ಕ್ಷೇತ್ರವು (Mysore lok sabha Constituency) ಕಳೆದ ಎರಡು ಚುನಾವಣೆಗಳಲ್ಲಿ ಸಂಪೂರ್ಣ ಬದಲಾವಣೆಗೆ ಸಾಕ್ಷಿಯಾಗಿದೆ. ಪ್ರತಾಪ್ ಸಿಂಹ (Pratap Simha) ಸತತ ಎರಡು ಬಾರಿ ಗೆದ್ದಿರುವ ಕ್ಷೇತ್ರದಲ್ಲಿ ಬಿಜೆಪಿ ತನ್ನ ಬಲವನ್ನು ಸಾಬೀತುಪಡಿಸಿದೆ. ಅದಕ್ಕಿಂತ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೇರಿದಂತೆ ಹಿಂದಿನ ಮೈಸೂರು ರಾಜಮನೆತನದ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಮೈಸೂರು ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮೈಸೂರಿನ ಕೆಲವು ಪ್ರದೇಶಗಳಲ್ಲಿ ಹಿಡಿತ ಹೊಂದಿರುವ ಬಿಜೆಪಿಯ ಮೈತ್ರಿ ಪಾಲುದಾರ ಜೆಡಿಎಸ್ ಅವರ ಗೆಲುವಿನ ಅಭಿಯಾನದಲ್ಲಿ ಸಾಥ್ ನೀಡಿದೆ. ಹೀಗಾಗಿ ಈ ಬಾರಿಯ ಚುನಾವಣೆ ‘ಕಿಂಗ್ ವರ್ಸಸ್ ಆರ್ಡಿನರಿ ಸಿಟಿಜನ್’ ಎಂಬ ಟ್ಯಾಗ್ ಲೈನ್ ಹೊಂದಿದೆ. ಕಾಂಗ್ರೆಸ್ನಿಂದ ಆ ಪಕ್ಷದ ರಾಜ್ಯ ವಕ್ತಾರ ಲಕ್ಷ್ಮಣ ಕಣದಲ್ಲಿದ್ದಾರೆ.
1977 ರಲ್ಲಿ ರಚನೆಯಾದ ಮೈಸೂರು ಲೋಕಸಭಾ ಕ್ಷೇತ್ರವು ಮುಖ್ಯವಾಗಿ ಕಾಂಗ್ರೆಸ್ ಪ್ರಭಾವ ಹೊಂದಿತ್ತು. ಎಚ್.ಡಿ.ತುಳಸೀದಾಸ್, ಎಂ. ರಾಜಶೇಖರಮೂರ್ತಿ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಂತಹ ಗಮನಾರ್ಹ ನಾಯಕರು ಇಲ್ಲಿ ಗೆದ್ದಿದ್ದರು. ಇತ್ತೀಚಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಪ್ರತಾಪ್ ಸಿಂಹ ಈ ಕ್ಷೇತ್ರದಲ್ಲಿ ಬಿಜೆಪಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಈ ಕ್ಷೇತ್ರವು ಮೈಸೂರು ಜಿಲ್ಲೆಯ ಭಾಗ ಮತ್ತು ಇಡೀ ಕೊಡಗು ಜಿಲ್ಲೆಯನ್ನು ಒಳಗೊಂಡಿದೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು 18,96,333 ಮತದಾರರಿದ್ದರು.
ಕ್ಷೇತ್ರದ ವ್ಯಾಪ್ತಿಯೇನು?
ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1 ಸ್ಥಾನ ಹೊಂದಿವೆ. ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 67,65% ರಷ್ಟಿದೆ. ಸುಮಾರು 977500 ನಗರ ಮತದಾರರು 51.6% ರಷ್ಟಿದ್ದಾರೆ. ಎಸ್ಸಿ ಮತ್ತು ಎಸ್ಟಿ ಮತದಾರರು ಸುಮಾರು 13.9% ರಷ್ಟಿದ್ದಾರೆ.
ಹಿಂದಿನ ಮೂರು ಚುನಾವಣಾ ಫಲಿತಾಂಶಗಳು
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ನ ಸಿ.ಎಚ್.ವಿಜಯಶಂಕರ್ ಅವರನ್ನು 1,38,647 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.52.27ರಷ್ಟು ಮತಗಳನ್ನು ಪಡೆದಿತ್ತು.
ಇದನ್ನೂ ಓದಿ : Kolar lok sabha constituency : ಕೋಲಾರವನ್ನು ವಾಪಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಕಾಂಗ್ರೆಸ್
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ನ ಅಡಗೂರು ಎಚ್.ವಿಶ್ವನಾಥ್ ಅವರನ್ನು 31,608 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.43.46ರಷ್ಟು ಮತಗಳನ್ನು ಗಳಿಸಿದೆ
2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅಡಗೂರು ಎಚ್.ವಿಶ್ವನಾಥ್ ಅವರು ಬಿಜೆಪಿಯ ಸಿ.ಎಚ್.ವಿಜಯಶಂಕರ್ ಅವರನ್ನು 7,691 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 36.42% ಮತಗಳನ್ನು ಪಡೆದಿತ್ತು.
ಬೌಗೋಳಿಕ ಗಡಿಗಳು
ಮೈಸೂರು ಲೋಕಸಭೆ ಕ್ಷೇತ್ರ ಭಾರತದ ದಕ್ಷಿಣ ಪ್ರದೇಶ ಮತ್ತು ಕರ್ನಾಟಕದ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿದೆ. ಈ ಸ್ಥಾನವು ಕರ್ನಾಟಕದ ಕೊಡಗು, ಮೈಸೂರು ಜಿಲ್ಲೆಗಳನ್ನು ಒಳಗೊಂಡಿದೆ.