Site icon Vistara News

Lok Sabha Election 2024: ಲೋಕಸಭಾ ಚುನಾವಣೆಗೆ ಮೈಸೂರಿನಿಂದ 26 ಲಕ್ಷ ಇಂಕ್‌ ಬಾಟಲ್‌ ಪೂರೈಕೆ!

ink

ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ (Lok Sabha Election 2024) ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದ್ದು, ಮಾರ್ಚ್ 13ರ ನಂತರ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ನಡುವೆಯೇ ಮತದಾನಕ್ಕೆ ಅಗತ್ಯವಿರುವ ಅಳಿಸಲಾಗದ ಶಾಯಿಗೆ ಚುನಾವಣೆ ಆಯೋಗ ಬೇಡಿಕೆ ಸಲ್ಲಿಸಿದೆ.

ಸಾವರ್ತ್ರಿಕ ಚುನಾವಣೆಗಳಿಗೆ ಮೈಸೂರು ಪೇಯಿಂಟ್ಸ್ ಆ್ಯಂಡ್‌ ವಾರ್ನಿಷ್ ಲಿಮಿಟೆಡ್ (Mysore Paints And Varnish Limited) ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತದೆ. ಚುನಾವಣೆಗಾಗಿ ಸುಮಾರು 10 ಎಂ. ಎಲ್. ಇಂಕ್ ಬಾಟಲ್‌ಗಳನ್ನು ತಯಾರು ಮಾಡಲಾಗುತ್ತದೆ. ಒಂದು ಬಾಟಲ್‌ನಿಂದ ಸುಮಾರು 700 ಬೆರಳುಗಳಿಗೆ ಇಂಕ್ ಹಚ್ಚಬಹುದು. ಈ ಬಾರಿಯ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಇಂಕ್ ಹಚ್ಚಲಾಗುತ್ತದೆ.

ಎಷ್ಟು ಬಾಟಲ್ ಇಂಕ್?

ಮೈಸೂರು ಪೇಯಿಂಟ್ಸ್ ಆ್ಯಂಡ್‌ ವಾರ್ನಿಷ್ ಲಿಮಿಟೆಡ್‌ಗೆ 26 ಲಕ್ಷ ಇಂಕ್‌ ಬಾಟಲ್‌ ಪೂರೈಕೆ ಮಾಡುವಂತೆ ಚುನಾವಣಾ ಆಯೋಗ ಬೇಡಿಕೆ ಇಟ್ಟಿದೆ. ಕರ್ನಾಟಕ ಸರ್ಕಾರದ ಸ್ವಾಮ್ಯದ ಮೈಸೂರು ಪೇಯಿಂಟ್ಸ್ ಆ್ಯಂಡ್‌ ವಾರ್ನಿಷ್ ಲಿಮಿಟೆಡ್ 1962ರಿಂದಲೂ ಚುನಾವಣೆಗೆ ಬೇಕಾದ ಶಾಯಿಯನ್ನು ಪೂರೈಕೆ ಮಾಡುತ್ತದೆ. ದೇಶದಲ್ಲಿ ಮಾತ್ರವಲ್ಲ ಅಮೆರಿಕದಲ್ಲಿ ಚುನಾವಣೆ ನಡೆದಾಗಲೂ ಶಾಹಿ ಪೂರೈಕೆ ಮಾಡಲಾಗಿತ್ತು. ಕೇವಲ ಸಾಮಾನ್ಯ ಚುನಾವಣೆಗಳು ಮಾತ್ರವಲ್ಲ ರಾಷ್ಟ್ರಪತಿ ಚುನಾವಣೆಗೆ ಸಹ ಎಂಪಿವಿಎಲ್‌ನಿಂದಲೂ ಅಳಿಸಲಾಗದ ಶಾಯಿ ಪೂರೈಕೆಯಾಗುತ್ತದೆ.

ಇದನ್ನೂ ಓದಿ | Budget Session: ಪರಿಷತ್‌ನಲ್ಲಿ ಹಿಂದು ಧಾರ್ಮಿಕ ವಿಧೇಯಕ ತಿರಸ್ಕಾರ; ರಾಜ್ಯ ಸರ್ಕಾರಕ್ಕೆ ಮುಖಭಂಗ

ಇಲ್ಲಿ ಅಳಿಸಲಾಗದ ಶಾಯಿಯನ್ನು ತಯಾರು ಮಾಡಿ ಸಂಗ್ರಹ ಮಾಡುವುದಿಲ್ಲ. ಇಂತಿಷ್ಟು ಎಂದು ಬೇಡಿಕೆ ಬಂದ ಮೇಲೆಯೇ ತಯಾರು ಮಾಡಿ ಸರಬರಾಜು ಮಾಡಲಾಗುತ್ತದೆ. ವಿಶೇಷ ರಾಸಾಯನಿಕಗಳನ್ನು ಬಳಕೆ ಮಾಡಿಕೊಂಡು ಈ ಅಳಿಸಲಾಗದ ಶಾಯಿ ತಯಾರಿಸಲಾಗುತ್ತದೆ.

2023ರ ವಿಧಾನಸಭೆ ಚುನಾವಣೆಗೆ ಸುಮಾರು 1.30 ಲಕ್ಷ ಬಾಟಲ್ ಅಳಿಸಲಾಗದೆ ಶಾಯಿಯನ್ನು ತಯಾರು ಮಾಡಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಯಾವುದೇ ಚುನಾವಣೆ ನಡೆದರೂ. ಭಾರತ ಮಾತ್ರವಲ್ಲ ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಚುನಾವಣೆಗೆ ಅಳಿಸಲಾಗದ ಶಾಯಿ ಪೂರೈಕೆಯಾಗುತ್ತದೆ.

ಸ್ವಾತಂತ್ರ್ಯಾನಂತರ 1951, 1957ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.

26.55 ಲಕ್ಷ ಅಳಿಸಲಾಗದ ಶಾಹಿಯನ್ನು ಮಾರ್ಚ್ 15ರೊಳಗೆ ದೇಶದ ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳಿಗೆ ಪೂರೈಕೆ ಮಾಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ. 2023ರ ಡಿಸೆಂಬರ್‌ನಲ್ಲಿಯೇ ಶಾಯಿಗಾಗಿ ಬೇಡಿಕೆ ಸಲ್ಲಿಕೆಯಾಗಿತ್ತು. ಆದರೆ ಎಷ್ಟು ಎಂದು ಮಾತ್ರ ಈಗ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ | Rajya sabha Election: ಕಾಂಗ್ರೆಸ್‌ನಿಂದ ರೆಸಾರ್ಟ್‌ ಪಾಲಿಟಿಕ್ಸ್‌; ಹೆಚ್ಚುವರಿ ಬಟ್ಟೆ ಜತೆ ಬರುವಂತೆ ಶಾಸಕರಿಗೆ ಡಿಕೆಶಿ ಪತ್ರ

ಈ ಶಾಯಿಯ ಪೂರೈಕೆಯಿಂದಾಗಿ ಮೈಲ್ಯಾಕ್‌ಗೆ 55 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. 1989ರಿಂದ ಮೈಸೂರು ಪೇಯಿಂಟ್ಸ್ ಆ್ಯಂಡ್‌ ವಾರ್ನಿಷ್ ಲಿಮಿಟೆಡ್ ಉತ್ಪಾದನೆಯನ್ನು ಆರಂಭಿಸಿದೆ. ವಿಶ್ವದ 30 ರಾಷ್ಟ್ರಗಳ ಚುನಾವಣೆಗೆ ಕಾರ್ಖನೆ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಿದೆ.

Exit mobile version