ಬೆಂಗಳೂರು: ನಾಡಗೀತೆ (Nada Geethe) ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಿದೆ.
ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ 2 ನಿಮಿಷ 30 ಸೆಕೆಂಡ್‌ಗಳ ಕಾಲದ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದರು. ಆದರೆ, ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಶಿಕ್ಷಣ ಕಾಯ್ದೆಯಡಿ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟನೆ ನೀಡುವ ಮೂಲಕ, ಕಿಕ್ಕೇರಿ ಕೃಷ್ಣಮೂರ್ತಿ ಅವರ ಅರ್ಜಿಯನ್ನು ತಿರಸ್ಕರಿಸಿದೆ.
ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಸರ್ಕಾರದ ಆದೇಶ ಪ್ರಶ್ನಿಸುವ ಯಾವುದೇ ಅಧಿಕಾರವನ್ನು ಅರ್ಜಿದಾರರು ಹೊಂದಿಲ್ಲ. ಅವರೇನೂ ಸರ್ಕಾರಿ ನೌಕರರಲ್ಲ ಅಥವಾ ಅವರ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದಾಗಲೀ ಇಲ್ಲ. ಹೀಗಾಗಿ, ಅವರ ಮೂಲಭೂತ ಹಕ್ಕು ಉಲ್ಲಂಘನೆ ಆಗಿದೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಿಮ್ಮ ಯಾವ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ ಎಂಬುದನ್ನು ನೆನಪಿಡಿ. ಹೀಗಾಗಿ, ನಿಮ್ಮ ಅರ್ಜಿ ವಜಾ ಮಾಡಲಾಗುತ್ತಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.
ಇದನ್ನೂ ಓದಿ | Lok Sabha Election 2024: ಏ. 26ಕ್ಕೆ ವೋಟ್ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್ ಡಿಸ್ಕೌಂಟ್!
ಅರ್ಜಿದಾರರ ವಾದವೇನು?
ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು’ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಅವರು ಪ್ರಶ್ನಿಸಿದ್ದರು. ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ.ಅಶ್ವತ್ ಅವರ ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು. ಆದರೆ, ಇದೀಗ ಈ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.