Site icon Vistara News

Modi in Bengaluru | ನಾಡಪ್ರಭು ಕೆಂಪೇಗೌಡ ಪ್ರತಿಮೆ, ರಾಜ್ಯ, ದೇಶದ ಅಭಿವೃದ್ಧಿಗೆ ಸ್ಫೂರ್ತಿದಾಯಕ: ಪ್ರಧಾನಿ ನರೇಂದ್ರ ಮೋದಿ

modi

ಬೆಂಗಳೂರು: ‌ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಭವ್ಯ ಪ್ರತಿಮೆಯು ಕರ್ನಾಟಕ ಮತ್ತು ಭಾರತದ ಭವಿಷ್ಯದ ಪ್ರಗತಿಗೆ ಪ್ರೇರಣೆ ನೀಡಲಿದೆ (Modi in Bengaluru) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದಲ್ಲಿ ತಂತ್ರಜ್ಞಾನ ಮತ್ತು ಸ್ಟಾರ್ಟಪ್‌ಗಳ ಆವಿಷ್ಕಾರಕ್ಕೆ ಬೆಂಗಳೂರು ಅಮೋಘ ಕೊಡುಗೆ ನೀಡಿದೆ. ಸ್ಟಾರ್ಟಪ್‌ ಎಂದರೆ ಹೊಸ ವಿಶ್ವಾಸ, ಹೊಸ ಸಂಶೋಧನೆಗೆ ಹಾದಿ ಮಾಡಿಕೊಡುತ್ತದೆ. ಈವತ್ತು ಜಾಗತಿಕ ಸ್ಟಾರ್ಟಪ್‌ ನಕಾಶೆಯಲ್ಲಿ ಬೆಂಗಳೂರು ತನ್ನ ಛಾಪು ಮೂಡಿಸಿದೆ.

ಇಂದು ಆರಂಭವಾಗಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಒಂದೇ ಅಲ್ಲ, ಇದು ಅಭಿವೃದ್ಧಿಯ ನವ ಯುಗದ ಒಂದು ಝಲಕ್‌ ಮಾತ್ರ. ಭಾರತ ತನ್ನ ಮಂದಗತಿಯ, ಪ್ರಯಾಸದ ದಿನಗಳ ಬದಲಿಗೆ ವೇಗದ ಪ್ರಗತಿಯತ್ತ ಮುನ್ನಡೆಯಲಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ 400ಕ್ಕೂ ಹೆಚ್ಚು ವಂದೇ ಭಾರತ್‌ ಹೈಸ್ಪೀಡ್‌ ರೈಲುಗಳು ಸಂಚಾರ ನಡೆಸಲಿವೆ.

ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕಕ್ಕೆ ಮೊದಲ ಬಾರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಿಕ್ಕಿದೆ. ಕರ್ನಾಟಕದ ಜನತೆಗೆ ಅಯೋಧ್ಯೆ, ಪ್ರಯಾಗ್‌ರಾಜ್‌ ದರ್ಶನಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್‌ ಲೋಕಾರ್ಪಣೆಯಾಗಿದೆ. ಈ ಟರ್ಮಿನಲ್‌ ಚಿತ್ರದಲ್ಲಿ ಕಾಣುವುದಕ್ಕಿಂತಲೂ ಅದ್ಭುತವಾಗಿದೆ. ಬೆಂಗಳೂರಿನ ಜನತೆಯ ಬೇಡಿಕೆಯಾಗಿತ್ತು ಎಂದರು.

Exit mobile version