Site icon Vistara News

Naresh Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕನನ್ನು ಜೈಲಿನಲ್ಲೇ ಕಾಡುತ್ತಿದೆ ಕ್ಯಾನ್ಸರ್‌

naresh goyal

ಮುಂಬಯಿ: ಸಾಲ ವಂಚನೆಗೆ (bank loan fraud) ಸಂಬಂಧಿಸಿ ಜೈಲಿನಲ್ಲಿರುವ ಜೆಟ್ ಏರ್‌ವೇಸ್‌ನ (Jet Airways) ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಅವರು ಕ್ಯಾನ್ಸರ್‌ನಿಂದ (Cancer) ಬಳಲುತ್ತಿರುವ ಕಾರಣ ಮಧ್ಯಂತರ ಜಾಮೀನು (Interim bail) ಕೋರಿದ್ದಾರೆ.

ಖಾಸಗಿ ವೈದ್ಯರು ನಡೆಸಿದ ಪರೀಕ್ಷೆಗಳಲ್ಲಿ ʼನಿಧಾನವಾಗಿ ಬೆಳೆಯುತ್ತಿರುವ ಕ್ಯಾನ್ಸರ್’ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡುವಂತೆ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಗುರುವಾರ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ₹538 ಕೋಟಿ ಮೌಲ್ಯದ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ 74 ವರ್ಷದ ನರೇಶ್ ಅವರನ್ನು ಸೆಪ್ಟೆಂಬರ್ 2023ರಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿತ್ತು.

ನರೇಶ್ ಗೋಯಲ್ ಅವರ ಮಧ್ಯಂತರ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಇಡಿ ಸಮಯ ಕೋರಿದೆ. ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿ ಸ್ಥಾಪಿಸಲು ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಕಳೆದ ತಿಂಗಳು, “ಜೀವನದ ಮೇಲಿನ ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದಾರೆ. ಅವರ ಪ್ರಸ್ತುತ ಪರಿಸ್ಥಿತಿಯಲ್ಲಿ ಬದುಕುವುದಕ್ಕಿಂತ ಶಾಂತಿಯುತವಾಗಿ ಸಾಯಲು ಬಯಸುತ್ತಾರೆ” ಎಂದು ನರೇಶ್ ಗೋಯಲ್ ಅವರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದರು. ಜನವರಿ 9ರಂದು, ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯ, ಜೆಜೆ ಆಸ್ಪತ್ರೆಯಲ್ಲಿ ಕೈದಿಗಳಿಗೆ ಚಿಕಿತ್ಸೆ ನೀಡುವ ವಿಧಾನವು ಅವರ ಆರೋಗ್ಯಕ್ಕೆ ಸಮರ್ಪಕವಾಗಿಲ್ಲ ಎಂದು ಗಮನಿಸಿ, ಗೋಯಲ್ ಅವರ ವೈದ್ಯಕೀಯ ತಪಾಸಣೆಗಾಗಿ ಅವರ ಆಯ್ಕೆಯ ಖಾಸಗಿ ವೈದ್ಯರನ್ನು ಭೇಟಿ ಮಾಡಲು ಅನುಮತಿ ನೀಡಿತ್ತು.

ಅನಾರೋಗ್ಯದಿಂದ ಬಳಲುತ್ತಿರುವ, ಹಾಸಿಗೆ ಹಿಡಿದಿರುವ ತಮ್ಮ ಪತ್ನಿ ಅನಿತಾ ಅವರನ್ನು ಭೇಟಿಯಾಗಲು ನರೇಶ್ ಗೋಯಲ್ ಅವರು ಜನವರಿ 13ರಂದು ಅವಕಾಶ ಪಡೆದಿದ್ದರು. ಗುರುವಾರದ ಜಾಮೀನು ಅರ್ಜಿಯಲ್ಲಿ ನರೇಶ್ ಗೋಯಲ್ ಅವರು, ʼಖಾಸಗಿ ವೈದ್ಯರು ನಡೆಸಿದ ಪರೀಕ್ಷೆಗಳಲ್ಲಿ ಮಾರಣಾಂತಿಕ ಕಾಯಿಲೆ ಬಹಿರಂಗವಾಗಿದೆʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅವರ ವೈದ್ಯಕೀಯ ದಾಖಲೆಗಳ ಪ್ರಕಾರ, ನರೇಶ್ ಗೋಯಲ್ ಅವರ ಕರುಳಿನಲ್ಲಿ ಸಣ್ಣ ಗೆಡ್ಡೆಗಳನ್ನು ಹೊಂದಿದ್ದಾರೆ. ಇದು ನ್ಯೂರೋ ಎಂಡೋಕ್ರೈನ್ ಟ್ಯೂಮರ್ಸ್ (ನಿಧಾನವಾಗಿ ಬೆಳೆಯುತ್ತಿರುವ ಕ್ಯಾನ್ಸರ್) ಎಂದು ಪಿಟಿಐ ವರದಿ ಮಾಡಿದೆ. ನರೇಶ ಗೋಯಲ್‌ ಅವರು ಹರ್ನಿಯಾ ಸಮಸ್ಯೆ ಹಾಗೂ ತೀವ್ರ ರಿಫ್ಲಕ್ಸ್ ಓಸೋಫಾಗಿಟಿಸ್‌ ಅನ್ನೂ ಹೊಂದಿದ್ದಾರೆ. ಹೊಟ್ಟೆಯ ಮೇಲಿನ ಭಾಗವು ಡಯಾಫ್ರಾಮ್ ಮೂಲಕ ಎದೆಯ ಕುಹರದೊಳಗೆ ಉಬ್ಬಿದಾಗ ಉಂಟಾಗುವ ವೈದ್ಯಕೀಯ ಸಮಸ್ಯೆಗೆ ರಿಫ್ಲಕ್ಸ್ ಓಸೋಫಾಗಿಟಿಸ್‌ ಎನ್ನುತ್ತಾರೆ.

ನರೇಶ್‌ ಅವರ ಮಧ್ಯಮ ಮತ್ತು ಕೆಳಗಿನ ಅನ್ನನಾಳದ ಸಂಧಿಯಲ್ಲಿ ಒಂದು ಸಣ್ಣ ಭಾಗದಲ್ಲಿ ಕ್ಯಾನ್ಸರ್ ಪೂರ್ವ ಸ್ಥಿತಿ ಕಂಡುಬಂದಿದೆ. ಅವರ ಬಯಾಪ್ಸಿಯನ್ನು ಹಿಸ್ಟೋಪಾಥೋಲಾಜಿಕಲ್ ವಿಶ್ಲೇಷಣೆ ಮತ್ತು ಇಮ್ಯುನೊಹಿಸ್ಟೋಕೆಮಿಸ್ಟ್ರಿಗಾಗಿ ಕಳುಹಿಸಲಾಗಿದೆ. ಕಾಯಿಲೆಯ ಹಂತವನ್ನು ನಿರ್ಧರಿಸಲು PET ಸ್ಕ್ಯಾನ್‌ಗೆ ಒಳಗಾಗಲಿದ್ದು, ನಂತರ ಅವರ ವೈದ್ಯರು ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಸೇರಿದಂತೆ ಅವರ ಚಿಕಿತ್ಸೆಯ ಮಾರ್ಗವನ್ನು ನಿರ್ಧರಿಸಲಿದ್ದಾರೆ. ತಕ್ಷಣದ ಚಿಕಿತ್ಸೆಗಾಗಿ ಸೂಚಿಸಲಾಗಿದೆ.

ಜಾರಿ ನಿರ್ದೇಶನಾಲಯದ ಪರ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ಇನ್ನಷ್ಟು ದಾಖಲೆಗಳಿಗಾಗಿ ಹಾಗೂ ವೈದ್ಯಕೀಯ ತಜ್ಞರ ಅಭಿಪ್ರಾಯಕ್ಕಾಗಿ ಸಮಯ ಕೇಳಿದ್ದಾರೆ. ನಂತರ ನ್ಯಾಯಾಲಯವು ಜೆಜೆ ಆಸ್ಪತ್ರೆಯ ಡೀನ್‌ಗೆ ವೈದ್ಯಕೀಯ ಮಂಡಳಿಯನ್ನು ರಚಿಸಿ ನರೇಶ್ ಗೋಯಲ್ ಅವರನ್ನು ಕೂಲಂಕಷವಾಗಿ ಪರೀಕ್ಷಿಸುವಂತೆ ಸೂಚಿಸಿತು. ಫೆಬ್ರವರಿ 20ರೊಳಗೆ ವೈದ್ಯಕೀಯ ಮಂಡಳಿಯು ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ

ನರೇಶ್ ಗೋಯಲ್ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದೆ. ಗೋಯಲ್ ಹಾಗೂ ಅವರ ಪತ್ನಿ ಅನಿತಾ ಮತ್ತು ಸಂಸ್ಥೆಯ ಕೆಲವು ಮಾಜಿ ಕಾರ್ಯನಿರ್ವಾಹಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇಡಿ ಪ್ರಕಾರ, ಜೆಟ್ ಏರ್‌ವೇಸ್ ತನ್ನ ಕಾರ್ಯಾಚರಣೆಯ ವೆಚ್ಚವನ್ನು ಪೂರೈಸಲು 10 ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲವನ್ನು ತೆಗೆದುಕೊಂಡಿದೆ. ₹6,000 ಕೋಟಿ ಮೊತ್ತವು ಇನ್ನೂ ಬಾಕಿ ಉಳಿದಿದೆ. ಫೋರೆನ್ಸಿಕ್ ಆಡಿಟ್ ಪ್ರಕಾರ, ಕನ್ಸಲ್ಟೆನ್ಸಿ ಮತ್ತು ವೃತ್ತಿಪರ ಶುಲ್ಕದ ನೆಪದಲ್ಲಿ ಸುಮಾರು ₹1,152 ಕೋಟಿಗಳನ್ನು ಬೇರೆಡೆಗೆ ಹರಿಸಲಾಗಿದೆ ಮತ್ತು ₹2,547.83 ಕೋಟಿಯನ್ನು ಜೆಟ್ ಲೈಟ್ ಲಿಮಿಟೆಡ್ ಎಂಬ ಸಹೋದರಿ ಸಂಸ್ಥೆಗೆ ಸಾಲ ತೀರಿಸಲು ನೀಡಲಾಗಿದೆ.

ಇದನ್ನೂ ಓದಿ: ಜೈಲಲ್ಲೇ ಸಾಯಲು ಬಿಡಿ; ಕೋರ್ಟ್‌ನಲ್ಲಿ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಹೀಗೆ ಬಿಕ್ಕಳಿಸಿದ್ದೇಕೆ?

Exit mobile version