ಹೊಸದಿಲ್ಲಿ : ವೈದ್ಯಕೀಯ ಪ್ರವೇಶ ಪರೀಕ್ಷೆಯ (NEET-UG 2024) ನಡಾವಳಿಯ ಅಕ್ರಮಗಳ ಕುರಿತು ಎದ್ದಿರುವ ಕೋಲಾಹಲದ (NEET-UG Row) ನಡುವೆ, NEET-UG 2024 ಕೌನ್ಸೆಲಿಂಗ್‌ಗೆ (NEET-UG 2024 counselling) ತಡೆ ನೀಡಲು ಸುಪ್ರೀಂ ಕೋರ್ಟ್ (Supreme Court) ಮತ್ತೊಮ್ಮೆ ನಿರಾಕರಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (NTA) ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬಾಕಿ ಉಳಿದಿರುವ ಅರ್ಜಿಗಳ ಜೊತೆಗೆ ಹೊಸ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಟ್ಯಾಗ್ ಮಾಡಿ ಜುಲೈ 8ರಂದು ವಿಚಾರಣೆಗೆ ಮುಂದೂಡಿದೆ. ಗುರುವಾರ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ- ಪದವಿಪೂರ್ವ (NEET-UG) 2024ರ ನಡವಳಿಯನ್ನು ಪ್ರಶ್ನಿಸಿ, ಪೇಪರ್ ಸೋರಿಕೆ ಮತ್ತು ಗ್ರೇಸ್ ಮಾರ್ಕ್‌ಗಳನ್ನು ಒಳಗೊಂಡಿರುವ ಅವ್ಯವಹಾರಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿ ಮೂರು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ರಜಾಕಾಲದ ಪೀಠವು, ಎನ್‌ಇಇಟಿ-ಯುಜಿ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲ್ಲಿಸಿದ ವರ್ಗಾವಣೆ ಅರ್ಜಿಗಳು ಮತ್ತು ಇದೇ ರೀತಿಯ ಕುಂದುಕೊರತೆಗಳನ್ನು ಎತ್ತುವ ಇತರ 11 ಅರ್ಜಿಗಳನ್ನೂ ಸೇರಿಸಿ ನೋಟಿಸ್ ಜಾರಿ ಮಾಡಿದೆ. ಜುಲೈ 8 ರಂದು ವಿಚಾರಣೆಗೆ ಬರಲಿರುವ ಇದೇ ವಿಷಯದ ಕುರಿತು ಬಾಕಿ ಉಳಿದಿರುವ ಪ್ರಕರಣಗಳ ಜೊತೆಗೆ ಈ ವಿಷಯವನ್ನು ಸೇರಿಸಲಾಗಿದೆ.
ಕಳೆದ ವಾರ, ನೀಟ್ ಪರೀಕ್ಷೆಯಲ್ಲಿ ಆಗಿರಬುದಾದ ಸಣ್ಣ ನಿರ್ಲಕ್ಷ್ಯವನ್ನು ಸಹ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗುಡುಗಿತ್ತು. ಆದರೆ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತ್ತು. “ಯಾರದಾದರೂ ಕಡೆಯಿಂದ 0.001% ನಿರ್ಲಕ್ಷ್ಯವಿದ್ದರೆ ಸದ ಅದನ್ನು ಸಂಪೂರ್ಣವಾಗಿ ಬಗೆಹರಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ನೀಟ್ ಪರೀಕ್ಷೆಯನ್ನು ಮೇ 5ರಂದು ನಡೆಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ಫಲಿತಾಂಶಗಳು ಬಂದವು. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾದ ನೀಟ್ ಪರೀಕ್ಷೆಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದರು. ನಂತರ, ಪ್ರವೇಶ ಪರೀಕ್ಷೆಯ ನಡವಳಿಯಲ್ಲಿ ಅಕ್ರಮಗಳಾಗಿವೆ ಎಂದು ವೈದ್ಯಕೀಯ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳ ಬಗ್ಗೆಯೂ ಕೋಲಾಹಲ ಉಂಟಾಗಿತ್ತು. ಪ್ರತಿಭಟನೆಯ ನಂತರ, NTA 1500ಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳಿಗೆ ಪರೀಕ್ಷೆಯನ್ನು ಮರುಪಡೆಯಲು ಕೇಳಿಕೊಂಡಿತು.
ಏತನ್ಮಧ್ಯೆ, ಯುಜಿಸಿ-ನೆಟ್ ಪೇಪರ್ ಇಂಟರ್‌ನೆಟ್‌ನಲ್ಲಿ ಸೋರಿಕೆಯಾದ ನಂತರ ಪರೀಕ್ಷೆ ರದ್ದತಿಗೆ ಕಾರಣವಾಯಿತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎನ್‌ಟಿಎಯಲ್ಲಿ ಸುಧಾರಣೆಗಳ ಕುರಿತು ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
“ಎನ್‌ಟಿಎಯಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಿದೆ. ಸಮಿತಿಯು ಎನ್‌ಟಿಎ, ಅದರ ರಚನೆ, ಕಾರ್ಯನಿರ್ವಹಣೆ, ಪರೀಕ್ಷಾ ಪ್ರಕ್ರಿಯೆ, ಪಾರದರ್ಶಕತೆ ಮತ್ತು ಡೇಟಾ ಭದ್ರತಾ ಪ್ರೋಟೋಕಾಲ್‌ಗಳನ್ನು ಇನ್ನಷ್ಟು ಸುಧಾರಿಸಲು ಶಿಫಾರಸುಗಳನ್ನು ಮಾಡುವ ನಿರೀಕ್ಷೆಯಿದೆ. ಶೂನ್ಯ-ದೋಷ ಪರೀಕ್ಷೆಯು ನಮ್ಮ ಬದ್ಧತೆ. ಸಮಿತಿಯು ಜಾಗತಿಕ ತಜ್ಞರನ್ನೂ ಹೊಂದಿರುತ್ತದೆ” ಎಂದು ಅವರು ಹೇಳಿದರು.
ಏನಿದು ಹಗರಣ?
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Result 2024) ಅಕ್ರಮ ನಡೆದಿದೆ ಎಂದು ನೀಟ್ ಆಕಾಂಕ್ಷಿಗಳು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ (exam) ಗ್ರೇಸ್ ಅಂಕಗಳನ್ನು (grace marks) ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ (retest) ನಡೆಸಲು ಕೇಂದ್ರ ಸರ್ಕಾರ (central govt) ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ನೀಟ್ ಫಲಿತಾಂಶ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಮತ್ತು ಪೋಷಕರು ಕೆಲವು ಕೇಂದ್ರಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ತನಿಖೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.
ನೀಟ್- ಯುಜಿ ಅನ್ನು ಮೊದಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಎಂದು ಕರೆಯಲಾಗುತ್ತಿತ್ತು. ಇದು ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಡೆಯುವ ಏಕೈಕ ಪ್ರವೇಶ ಪರೀಕ್ಷೆಯಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದೆ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (CBSE) ಇದನ್ನು ನಡೆಸುತ್ತಿತ್ತು.
ನೀಟ್ ಯುಜಿ ಫಲಿತಾಂಶಗಳ ಸುತ್ತ ವಿವಾದ
2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿದೆ.
ನೀಟ್ ಯುಜಿ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು ಒಟ್ಟು 720 ಅಂಕಗಳನ್ನು ಗಳಿಸಿದ್ದಾರೆ ಎಂಬುದು ಫಲಿತಾಂಶ ತೋರಿಸಿವೆ. ಇದು ಹಿಂದಿನ ವರ್ಷಗಳ ಫಲಿತಾಂಶಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಿದ್ದರೆ, 2022ರಲ್ಲಿ ಮೂವರು, 2021ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು ಮಾತ್ರ ಪೂರ್ಣ ಅಂಕ ಗಳಿಸಿದ್ದರು. ಈ ಬಾರಿ ಹರ್ಯಾಣದ ಒಂದೇ ಕೇಂದ್ರದಲ್ಲಿ ಆರು ಮಂದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದು ಸಂಶಯಕ್ಕೆ ಆಸ್ಪದ ಮಾಡಿ ಕೊಟ್ಟಿದೆ.