ನಮ್ಮ ಕರ್ನಾಟಕದ ಹೆಮ್ಮೆಯ ಉತ್ಪನ್ನ, ಕೆಎಂಎಫ್‌ನ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿ ಭಾಷೆಯಲ್ಲಿ ಕಡ್ಡಾಯವಾಗಿ ಮುದ್ರಿಸಬೇಕು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ ಹೊರಡಿಸಿತ್ತು. ತಮಿಳುನಾಡಿನ ಮೊಸರು ಉತ್ಪನ್ನದ ಮೇಲೂ ಹಾಗೆಯೇ ಮುದ್ರಿಸುವಂತೆ ಆದೇಶಿಸಲಾಗಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೊನೆಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ವಿವಾದಾತ್ಮಕ ಆದೇಶವನ್ನು ಪಂಪಡೆದುಕೊಂಡಿದೆ. ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿಯಲ್ಲಿ ಬರೆಯಬೇಕಿಲ್ಲ. Curd ಎಂದು ಇಂಗ್ಲಿಷ್‌ನಲ್ಲಿ ಬರೆದು, ಬ್ರಾಕೆಟ್‌ನಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮೊಸರು ಎಂದು ಬರೆಯಬಹುದು ಎಂದು ಸ್ಪಷ್ಟನೆ ನೀಡಲಾಗಿದೆ. ಇಂಥದೊಂದು ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದೊಂದು ಅನಗತ್ಯವಾಗಿದ್ದ ವಿವಾದ. ಕನ್ನಡಿಗರು ಹಾಗೂ ತಮಿಳರ ಮೇಲೆ ʼದಹಿʼಯನ್ನು ಹೇರಬೇಕು ಎಂದು ಕೇಂದ್ರದ ಪ್ರಾಧಿಕಾರಕ್ಕೆ ಯಾಕೆ ಅನಿಸಿತೋ ಗೊತ್ತಿಲ್ಲ. ಕನ್ನಡದ ಮೊಸರಿನ ಬದಲು ಹಿಂದಿಯ ದಹಿ ಬಂದು ಕೂತರೆ ಉತ್ಪನ್ನದ ಗುಣಮಟ್ಟ ಏನಾದರೂ ಹೆಚ್ಚಾಗುತ್ತದೆಯೇ? ದಹಿಯ ಬದಲು ಮೊಸರು ಇದ್ದರೆ ಗುಣಮಟ್ಟ ಕಡಿಮೆಯಾಗುತ್ತದೆಯೇ? ಅಥವಾ ಕರ್ನಾಟಕದಾಚೆಗೆ ಇಲ್ಲಿನ ಹಾಲಿನ ಉತ್ಪನ್ನಗಳನ್ನು ಪರಿಚಯಿಸಬೇಕು, ಜನಪ್ರಿಯಗೊಳಿಸಬೇಕು ಎಂಬ ಇರಾದೆ ಕೇಂದ್ರಕ್ಕೆ ಇದ್ದರೆ, ಅದಕ್ಕೆ ತಕ್ಕ ಮೂಲಸೌಕರ್ಯಕ್ಕೆ ನೆರವಾಗಬೇಕೇ ಹೊರತು ಹೀಗೆ ಹೆಸರು ಬದಲಾಯಿಸುವುದರಿಂದ ಅಲ್ಲ. ಗುಜರಾತ್ ಮೂಲದ ಅಮುಲ್ ಉತ್ಪನ್ನಗಳು ಗುಜರಾತ್‌ನ ಆಚೆಗೂ ವ್ಯಾಪಿಸಿವೆ. ಕರ್ನಾಟಕದಲ್ಲೂ ಲಭ್ಯವಿವೆ. ಆದರೆ ಇವುಗಳ ಮೇಲೆ ಕನ್ನಡದಲ್ಲಿ ಹಾಲು- ಮೊಸರು ಎಂದು ಮುದ್ರಿಸಿಲ್ಲ. ಅಂದ ಮೇಲೆ ನಂದಿನಿ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ಮುದ್ರಿಸುವುದನ್ನು ಕಡ್ಡಾಯಗೊಳಿಸುವುದರ ಹಿಂದೆ ಯಾವುದೇ ತರ್ಕ, ವೈಜ್ಞಾನಿಕತೆ ಇಲ್ಲ.
ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಗಾಗ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ. ಹಿಂದೆ ಅನೇಕ ಬಾರಿ ಹಿಂದಿಯನ್ನು ಬಳಸಲು ಹೋಗಿ ಕೇಂದ್ರ ಸರ್ಕಾರಗಳು ತಮಿಳುನಾಡಿನಲ್ಲಿ ಮುಖಭಂಗಕ್ಕೆ ಒಳಗಾಗಿವೆ. ಹಿಂದಿ ವಿರೋಧಿ ಚಳವಳಿಯ ಮೂಲವೇ ತಮಿಳುನಾಡು. ಇತ್ತೀಚೆಗೆ ತಮಿಳಿಗರಿಂದ ಸ್ವಲ್ಪ ಪಾಠ ಕಲಿತಿರುವ ಕನ್ನಡಿಗರು ತಮ್ಮ ಭಾಷೆಯ ಮೇಲೆ ಆಗುವ ಅನ್ಯಾಕ್ರಮಣವನ್ನು ಪ್ರಶ್ನಿಸಲು ತೊಡಗಿದ್ದಾರೆ. ಕನ್ನಡಿಗರು ಪ್ರೀತಿಯಿಂದ ಎಲ್ಲ ಭಾಷೆಯನ್ನೂ ಕಲಿಯುತ್ತಾರೆ. ಆದರೆ ತಮ್ಮ ಮೇಲೆ ಹೇರಿಕೆಯನ್ನು ಸಹಿಸುವುದಿಲ್ಲ. ಎಲ್ಲ ಭಾರತೀಯ ಭಾಷೆಗಳಂತೆ ಹಿಂದಿಯೂ ಒಂದು ಭಾಷೆ. ಹಿಂದಿ ಭಾಷೆಗೆ ಇರುವ ಘನತೆ ಕನ್ನಡ ಭಾಷೆಗೂ ಇದೆ. ಬ್ಯಾಂಕಿಂಗ್, ರೈಲ್ವೇ ಮುಂತಾದ ವಲಯಗಳಲ್ಲಿ ಹಿಂದಿ ಭಾಷಿಕರು ಬಂದು ತುಂಬಿಕೊಂಡಿರುವುದರಿಂದ ಕನ್ನಡಿಗರಿಗೆ ಹಿಂದಿಯ ಮೇಲೆ ಸ್ವಲ್ಪ ಅಸಹನೆಯೂ ಇದೆ. ಇಂಥ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಭಾಷೆಯ ವಿಚಾರದಲ್ಲಿ ಸರಸವಾಡುವುದು ಬೆಂಕಿಯ ಜತೆ ಆಡಿದಂತೆ. ಕೇಂದ್ರ ಆಡಳಿತದ ಅಧಿಕಾರಿಗಳು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಅನಗತ್ಯವಾಗಿ ಅನ್ಯ ಭಾಷಿಕರನ್ನು ಕೆರಳಿಸುವಂಥ ಸುತ್ತೋಲೆಗಳನ್ನು ಹೊರಡಿಸಬಾರದು. ಕೇಂದ್ರ ಸರ್ಕಾರದ ನಾನಾ ಇಲಾಖೆ, ಬ್ಯಾಂಕ್ ಹುದ್ದೆಗಳ ಆಯ್ಕೆ ವೇಳೆಯೂ ಇಂಗ್ಲಿಷ್, ಹಿಂದಿಯಂತೆ ಸ್ಥಳೀಯ ಭಾಷೆಗಳಿಗೂ ಅದ್ಯತೆ ನೀಡಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮತ ಪ್ರಮಾಣ ಹೆಚ್ಚಿಸುವ ಆಯೋಗದ ಕ್ರಮವನ್ನು ಬೆಂಬಲಿಸೋಣ
ಹಾಗಂತ ನಾವೂ ಹಿಂದಿ ಭಾಷೆಯ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಏಕಪಕ್ಷೀಯವಾಗಿ ದ್ವೇಷ ಕಾರಬೇಕಿಲ್ಲ. ಹಿಂದಿ ಇಂದಿಗೂ ದಕ್ಷಿಣ ಭಾರತೀಯರ ಭಾವನಾತ್ಮಕ ವಲಯವನ್ನು ಪ್ರವೇಶಿಸಲು ಇನ್ನೂ ಶಕ್ತವಾಗಿಲ್ಲವಾದರೂ, ನಮ್ಮ ಸಂವಿಧಾನವೇನೋ ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಬಳಸಬಹುದು (ಆರ್ಟಿಕಲ್ 343 (1) ಎಂದಿದೆ. ದೇಶವನ್ನು ಸಮಗ್ರವಾಗಿ ಸಂಪರ್ಕಿಸುವ ಒಂದು ಭಾಷೆ ಇರಲಿ ಎಂಬ ದೂರದೃಷ್ಟಿ ನಮ್ಮ ಹಿರಿಯರಿಗೆ ಇದ್ದಿದ್ದರೆ ಅದು ಸಹಜ. ಇಂದು ಇಂಗ್ಲಿಷೇ ಆ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ ಹಿಂದಿ ನಮ್ಮದೇ ನೆಲದ ಭಾಷೆ. ಅದರಲ್ಲಿ ವಿಪುಲವಾದ ಸಾಂಸ್ಕೃತಿಕ ಸಂಪತ್ತು ಕೂಡ ಇದೆ. ಆದದ್ದರಿಂದ ನಮಗದು ತ್ಯಾಜ್ಯವಲ್ಲ. ಭಾರತವು ವಿವಿಧತೆಯಲ್ಲಿ ಏಕತೆಗೆ ಜಗತ್ತಿನಲ್ಲೆ ಖ್ಯಾತಿ ಪಡೆದಿದೆ. ಹಾಗಾಗಿ ಭಾಷೆ ವಿಚಾರದಲ್ಲಿ ಭಾರತೀಯರು ಕಚ್ಚಾಡುವಂಥ ಸನ್ನಿವೇಶ ನಿರ್ಮಾಣ ಆಗಬಾರದು.