ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಮತ ಪ್ರಮಾಣ ಹೆಚ್ಚಿಸುವ ಆಯೋಗದ ಕ್ರಮವನ್ನು ಬೆಂಬಲಿಸೋಣ
ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಿದರೆ ಮಾತ್ರ ಮತ ಪ್ರಮಾಣ ಹೆಚ್ಚಲು ಸಾಧ್ಯ.
ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನವನ್ನು ಘೋಷಿಸಿದೆ. ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು, ಮೇ 13ರಂದು ಮತ ಎಣಿಕೆಯಾಗಿ ಫಲಿತಾಂಶ ಕೂಡ ಬರಲಿದೆ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದರ ಜತೆಗೆ, ಮತದಾನ ಪ್ರಮಾಣವನ್ನೂ ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಆಯೋಗ ಘೋಷಿಸಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಿದೆ. ವಿದ್ಯಾವಂತರೇ ಮತದಾನ ಮಾಡುತ್ತಿಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವ ಕೊರಗುಗಳಲ್ಲಿ ಒಂದು. ಹೀಗಾಗಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಿಗೆ ಪೂರಕವಾಗಿ ಎಲ್ಲರೂ ಸ್ಪಂದಿಸಬೇಕಿದೆ.
ಸಾಮಾನ್ಯವಾಗಿ ವಾರಾಂತ್ಯ ಅಥವಾ ವಾರದ ಆರಂಭದಲ್ಲಿ ಮತದಾನ ದಿನ ನಿಗದಿಪಡಿಸಿದರೆ ಒಂದಿಷ್ಟು ಸಂಖ್ಯೆಯ ಮತದಾರರು ಪ್ರವಾಸಕ್ಕೆ ಹೊರಡುವ ಪ್ರವೃತ್ತಿಯನ್ನು ನಾವು ಈ ಹಿಂದಿನ ಚುನಾವಣೆಗಳಲ್ಲಿ ಗಮನಿಸಿದ್ದೇವೆ. ಅದನ್ನು ತಪ್ಪಿಸಲು ಈ ಬಾರಿ ಆಯೋಗವು ವಾರದ ನಡುವೆ ಮತದಾನದ ದಿನ ನಿಗದಿಪಡಿಸಿದ್ದು ಕೂಡ ಯೋಜಿತ ಮತ್ತು ಪರಿಣಾಮಕಾರಿ ನಿರ್ಧಾರ ಎನ್ನಬಹುದಾಗಿದೆ. ಹಾಗೆಯೇ ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ. ಆದರೆ ಮೊದಲೇ ಈ ಬಗ್ಗೆ ನೋಂದಾಯಿಸಿಕೊಳ್ಳಬೇಕು. ಅಂಥ ಒಂದು ಮತದ ಸಂಗ್ರಹಕ್ಕೆ ಮೂರ್ನಾಲ್ಕು ಮಂದಿಯನ್ನು ನಿಯೋಜಿಸಲಾಗುತ್ತದೆ ಎಂದರೆ, ಒಂದೊಂದು ಮತವನ್ನೂ ಆಯೋಗ ಎಷ್ಟು ಗಂಭಿರವಾಗಿ ಪರಿಗಣಿಸಿದೆ ಎಂಬುದನ್ನು ಗಮನಿಸಬಹುದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿರುವ ಇದೊಂದು ಕ್ರಾಂತಿಕಾರಿ ಉಪಕ್ರಮವೇ ಸರಿ. ಅಗತ್ಯವಿದ್ದವರು ಇದರ ಸದ್ಬಳಕೆ ಮಾಡಿಕೊಳ್ಳಬೇಕಿದೆ.
ಯುವ ಮತದಾರರಿಗೆ, ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕರ್ನಾಟಕದಲ್ಲಿ 5, 21, 73, 573 ಮತದಾರರಿದ್ದು, ಇದರಲ್ಲಿ ಮೊದಲ ಬಾರಿಯ ಮತದಾರರ ಸಂಖ್ಯೆ 9.17 ಲಕ್ಷದಷ್ಟು ಹೆಚ್ಚಳವಾಗಿದೆ. ಇವರನ್ನು ಮತಗಟ್ಟೆಗಳತ್ತ ತರಲು ಉತ್ಸಾಹ ತುಂಬಲು, ಪ್ರಜಾಪ್ರಭುತ್ವದಲ್ಲಿ ಅವರ ಹೊಣೆಯ ಕುರಿತು ಆಡುವ ನಾಲ್ಕು ಪ್ರೋತ್ಸಾಹದ ಮಾತುಗಳೂ ಸಾಕಾಗುತ್ತವೆ. ಇವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜೇನು ಕುರುಬ ಹಾಗೂ ಕೊರಗ ಸಮುದಾಯಗಳನ್ನು ಬುಡಕಟ್ಟು ಸಮುದಾಯಗಳು ಎಂದು ಪರಿಗಣಿಸಲಾಗಿದ್ದು, ಈ ಸಮುದಾಯದವರ ಮತದಾನಕ್ಕೆ 40 ಮತಗಟ್ಟೆ ಮಾಡಲಾಗಿದೆ. ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿರುವುದರಿಂದ ಒತ್ತಡ ಕಡಿಮೆಯಾಗಲಿದೆ. ಬೆಂಗಳೂರು ನಗರದಲ್ಲಿ ಯುವಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಐಐಎಸ್‌ಸಿ, ಐಐಟಿ ಹಾಗೂ ಸ್ಟಾರ್ಟಪ್‌ಗಳ ಸಹಯೋಗದೊಂದಿಗೆ ಎಲೆಕ್ಥಾನ್ ಹಾಗೂ ಇನ್ನಿತರ ಕ್ರಮಗಳನ್ನು ಆಯೋಗ ಕೈಗೊಳ್ಳುತ್ತಿದೆ. ಮತ ಪ್ರಮಾಣ ಹೆಚ್ಚಿಸುವ ಸಲಹೆ ನೀಡುವವರಿಗೆ ಬಹುಮಾನ ಇತ್ಯಾದಿ ಹಲವು ಕ್ರಮಗಳನ್ನು ಕೈಗೊಂಡಿರುವುದು ಕ್ರಾಂತಿಕಾರಕವಾಗಿದೆ.
ಪ್ರತಿ ಮತವೂ ಅಮೂಲ್ಯ ಎಂದು ನಾವು ಹೇಳುತ್ತೇವೆ. ಆದರೆ, ಮುಖ್ಯವಾಗಿ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ.60ನ್ನು ದಾಟುವುದಿಲ್ಲ. ನಗರ ಪ್ರದೇಶದ ಮತದಾರರ ಆಲಸ್ಯ ಹಾಗೂ ಹಣದ ಪ್ರಾಬಲ್ಯವು ಕರ್ನಾಟಕದಲ್ಲಿ ಪ್ರಮುಖ ಸವಾಲಾಗಿದೆ ಎಂದು ಆಯೋಗವೇ ಹೇಳಿದೆ. ಸುಶಿಕ್ಷಿತರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವವೆಂಬುದು ಸುಮ್ಮನೇ ಯಾರೋ ನಮಗೆ ತಟ್ಟೆಯಲ್ಲಿಟ್ಟು ಕೊಟ್ಟ ಉಡುಗೊರೆಯಲ್ಲ. ಪ್ರತಿ ಪ್ರಜೆಯೂ ಪ್ರತಿ ಕಾಲದಲ್ಲೂ ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು. ಸಂವಿಧಾನದ ಪ್ರಕಾರ ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಮತದಾನದ ಒಂದು ದಿನದಂದು ಮಾತ್ರವೇ ಪ್ರಜೆ ಪ್ರಭುವಾಗಿರುತ್ತಾನೆ. ಅಂದು ಸರಿಯಾಗಿ ತಮ್ಮ ಅಧಿಕಾರ ಚಲಾಯಿಸದೇ ಹೋದರೆ ಮುಂದಿನ ಐದು ವರ್ಷ ತಮಗಿಷ್ಟವಿಲ್ಲದ ವ್ಯಕ್ತಿಗಳ ಗುಲಾಮರಾಗಿರಬೇಕಾಗುತ್ತದೆ. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಬೇಕು. ಆಗ ಮಾತ್ರ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ.
ಕರ್ನಾಟಕ
Bandipur National Park: ಬಂಡೀಪುರವೀಗ ಫುಲ್ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್!
Bandipur Safari: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಈಗ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಪ್ರತಿ ದಿನಕ್ಕೆ ಎರಡರಿಂದ ಮೂರು ಸಾವಿರ ಮಂದಿ ಭೇಟಿ ನೀಡುತ್ತಿದ್ದು, ಏಳರಿಂದ ಎಂಟು ಲಕ್ಷ ರೂಪಾಯಿ ವರೆಗೂ ಆದಾಯ ಬರುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಮೇಲೆ ಇಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ಹೇಳಲಾಗುತ್ತಿದೆ.
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park) ಈಗ ಮತ್ತಷ್ಟು ಕಳೆಗಟ್ಟಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೇಟಿ ಬಳಿಕ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ವಾರಾಂತ್ಯವಾದರೆ ಸಾಕು ಬಂಡಿಪುರ ಸಫಾರಿಗೆ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
2023ರ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರದಲ್ಲಿ ಸಫಾರಿ ನಡೆಸಿದ್ದರು. ಪ್ರಾಜೆಕ್ಟ್ ಟೈಗರ್‌ನ (Project Tiger) 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಗಾಗಿ ಅವರು ಆಗಮಿಸಿದ್ದರು. ಈ ವೇಳೆ ಮೋದಿ ಸುಮಾರು 2 ಗಂಟೆ ಕಾಲ ಬಂಡೀಪುರ ಉದ್ಯಾನವನವನ್ನು ಸುತ್ತಿದ್ದರು.
ಬಂಡೀಪುರ ಅಭಯಾರಣ್ಯದ ಸೊಬಗಿನ ಜತೆಗೆ ಕಾಲ ಕಳೆದಿದ್ದ ನರೇಂದ್ರ ಮೋದಿ ಅವರು ವನ್ಯಜೀವಿ, ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಿ ಖುಷಿಪಟ್ಟಿದ್ದರು. ಸುದೀರ್ಘ 2 ಗಂಟೆ 15 ನಿಮಿಷ ಟೈಗರ್ ಸಫಾರಿ ನಡೆಸಿ, ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ಅವುಗಳ ಫೋಟೊ ತೆಗೆದು ಖುಷಿಪಟ್ಟಿದ್ದರು. ಇದಾದ ಬಳಿಕ ಪರಿಸರ ಪ್ರೇಮಿಗಳು, ಪ್ರವಾಸಿ ಪ್ರೇಮಿಗಳಿಗೆ ಇದು ಫೇವರಿಟ್ ತಾಣವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದಲ್ಲದೆ, ಕೇರಳ-ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ
ನಿತ್ಯ 2 ಸಾವಿರ ಜನ ಭೇಟಿ
ಪ್ರತಿ ನಿತ್ಯ ಒಂದೂವರೆಯಿಂದ ಎರಡು ಸಾವಿರ ಜನರ ಭೇಟಿ ನೀಡುತ್ತಿದ್ದು, ಸಫಾರಿಯಿಂದಲೇ ಪ್ರತಿ ದಿನ 7 ರಿಂದ 8 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ಪ್ರವಾಸಿಗರ ಹೆಚ್ಚಳದಿಂದ ಅರಣ್ಯ ಇಲಾಖೆಯ ಆದಾಯದಲ್ಲಿಯೂ ಹೆಚ್ಚಳವಾಗುತ್ತಿದೆ.
ಹೊಸ ವಾಹನಗಳ ಖರೀದಿ
ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು 4 ಹೊಸ ವಾಹನಗಳನ್ನು ಖರೀದಿಸಿದೆ. ಸಫಾರಿಗಾಗಿ ಮತ್ತೆ 2 ಬಸ್, 2 ಜೀಪ್‌ಗಳನ್ನು ಖರೀದಿ ಮಾಡಲಾಗಿದೆ.
ಟಿಕೆಟ್‌ಗಾಗಿ ಪರದಾಟ
ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿರುವುದರಿಂದ ಮೊದಲೇ ಬುಕ್ಕಿಂಗ್ ನಡೆಯುತ್ತಿದ್ದು, ಸೋಲ್ಟ್‌ಔಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆಫ್‌ಲೈನ್ ಟಿಕೆಟ್ ಕಡಿಮೆ ಪ್ರಮಾಣದಲ್ಲಿಟ್ಟಿದ್ದರಿಂದ ಅವುಗಳು ಎಲ್ಲರಿಗೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಟಿಕೆಟ್ ಸಿಗದೇ ಪ್ರವಾಸಿಗರು ನಿರಾಸೆಯಿಂದ ವಾಪಸ್ ಆಗುತ್ತಿರುವ ಸನ್ನಿವೇಶವೂ ಇದೆ.
912.04 ಚದರ ಕಿ.ಮೀ ವಿಸ್ತೀರ್ಣ
ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಮೀಸಲು ಪ್ರದೇಶವು ಭಾರತದ 2ನೇ ಅತಿ ದೊಡ್ಡ ಹುಲಿ ಸಂರಕ್ಷಣಾ ತಾಣವಾಗಿದ್ದು, 912.04 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್ (ವನ್ಯಜೀವಿ ಅಭಯಾರಣ್ಯ), ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಇನ್ನು ಈ ಬಂಡೀಪುರವು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ದಕ್ಷಿಣ ಏಷ್ಯಾದ ಕಾಡಾನೆಗಳ ಅತಿ ದೊಡ್ಡ ಆವಾಸ ಸ್ಥಾನವೂ ಇದಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ.
ಇದನ್ನೂ ಓದಿ: Weather Report: ಭಾನುವಾರ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಗಾಳಿ ವೇಗವೂ ಹೆಚ್ಚಲಿದೆ ಎಂದ ಹವಾಮಾನ ಇಲಾಖೆ
ಇಲ್ಲಿರುವ ವನ್ಯಜೀವಿಗಳು
ಹುಲಿಗಳು, ಚಿರತೆ, ಜಿಂಕೆ, ಕಡವೆಗಳು, ಕಾಡು ನಾಯಿಗಳು, ಕಾಡುಹಂದಿ, ಕರಡಿಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆ ಇತ್ಯಾದಿಗಳು ವನ್ಯಜೀವಿಗಳನ್ನು ಬಂಡಿಪುರದಲ್ಲಿ ಕಾಣಬಹುದಾಗಿದೆ.
ದಿನಕ್ಕೆರಡು ಬಾರಿ ಅರಣ್ಯ ಸಫಾರಿ
ಬಂಡೀಪುರದಲ್ಲಿ ಪ್ರತಿದಿನ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಇಲ್ಲಿ ಎರಡು ರೀತಿಯ ಸಫಾರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಬಸ್ ಹಾಗೂ ಜೀಪ್ ವ್ಯವಸ್ಥೆ ಇದೆ. ಬಸ್‌ನಲ್ಲಿ ಹೆಚ್ಚಿನ ಜನರು ಒಮ್ಮೆಲೆಗೆ ಹೋಗಬಹುದಾಗಿದ್ದು, ಇದು 45 ನಿಮಿಷಗಳಿಂದ 1 ಗಂಟೆಯ ಅವಧಿಯನ್ನು ಹೊಂದಿರುತ್ತದೆ. ಇನ್ನು ಜೀಪ್ ಸಫಾರಿಯಲ್ಲಿ ಸರಿಸುಮಾರು 2 ಗಂಟೆಗಳ ಅವಧಿ ಇರುತ್ತದೆ. ಈ ಎರಡೂ ಸಫಾರಿಗಳು ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆ ನಡುವೆ ಕಾರ್ಯನಿರ್ವಹಿಸುತ್ತವೆ. ಇನ್ನು ನೀವು ಕ್ಯಾಮೆರಾಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಹೆಚ್ಚುವರಿ ಶುಲ್ಕವಿರುತ್ತದೆ.
ಎಷ್ಟು ದೂರ?
ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರು ನಗರವು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ (ಬಂಡೀಪುರದಿಂದ 73 ಕಿ.ಮೀ). ಮೈಸೂರಿನಿಂದ ಬಂಡೀಪುರ ತಲುಪಲು ಬಸ್‌ಗಳು ಅಥವಾ ಟ್ಯಾಕ್ಸಿಗಳು ಸಿಗುತ್ತವೆ.
ವಸತಿ ವ್ಯವಸ್ಥೆಯೂ ಇದೆ
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ರಾಷ್ಟ್ರೀಯ ಉದ್ಯಾನವನದ ಹೊರಗಡೆ ಬಂಡೀಪುರ ಸಫಾರಿ ಲಾಡ್ಜ್ ಅನ್ನು ನಡೆಸುತ್ತಿದೆ. ಕೆಲವು ಖಾಸಗಿ ರೆಸಾರ್ಟ್‌ಗಳು ಲಭ್ಯವಿವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳೂ ಇದ್ದು, ಪ್ರವಾಸಿಗರು ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬಹುದು.
ಯಾವ ಸಮಯ ಹೆಚ್ಚು ಸೂಕ್ತ
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ವರ್ಷದ ಯಾವ ಸಮಯದಲ್ಲಿ ಭೇಟಿ ನೀಡಬಹುದಾದರೂ ಮುಂಗಾರು ನಂತರದ ಅಂದರೆ, ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಭೇಟಿ ನೀಡುವುದು ಉತ್ತಮ ಸಮಯ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?
ರಾತ್ರಿ ಸಂಚಾರ ನಿಷೇಧ
ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಕಾರಣ ರಾತ್ರಿ ವಾಹನಗಳ ಸಂಚಾರದಿಂದ ಅಪಘಾತಗಳು ಸಂಭವಿಸಿ ಕಾಡು ಪ್ರಾಣಿಗಳು ಮೃತಪಡುತ್ತವೆ. ಹೀಗಾಗಿ ರಾತ್ರಿ ಸಂಚಾರವನ್ನು ನಿಷೇಧ ಮಾಡಲಾಗಿದೆ.
ಕರ್ನಾಟಕ
Karnataka Cabinet: 34 ಸಚಿವರ ಪೈಕಿ 16 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್, ನಂ.1 ಸ್ಥಾನದಲ್ಲಿ ಯಾರಿದ್ದಾರೆ?
Karnataka Cabinet: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟವು ಶನಿವಾರ ಅಸ್ತಿತ್ವಕ್ಕೆ ಬಂದಿದೆ. 34 ಸಚಿವರ ಪೈಕಿ 16 ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಬೆಂಗಳೂರು, ಕರ್ನಾಟಕ: ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರದಲ್ಲಿ ಎಲ್ಲ ಮಂತ್ರಿ ಸ್ಥಾನಗಳ್ನು (Karnataka Cabinet) ಭರ್ತಿ ಮಾಡಲಾಗಿದೆ. ಕಳೆದ ವಾರ 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರೆ, ನಿನ್ನೆ ಮತ್ತೆ 24 ಶಾಸಕರು ಸಚಿವರಾಗಿದ್ದಾರೆ. ಈ ಮೂಲಕ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಂತಾಗಿದೆ. ಈ ಮಧ್ಯೆ, ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವರ ಪೈಕಿ ಅಂದರೆ, 34 ಸಚಿವರ ಪೈಕಿ 16 ಜನರು ಕ್ರಿಮಿನಲ್ ಪ್ರಕರಣಗಳನ್ನು (Criminal Cases) ಎದುರಿಸುತ್ತಿದ್ದಾರೆ. ಎಡಿಆರ್ (ADR) ಈ ಮಾಹಿತಿಯನ್ನು ಹೊರ ಹಾಕಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಸಚಿವ ಬಿ ನಾಗೇಂದ್ರ ಅವರ 42 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಈ ಪಟ್ಟಿಯಲ್ಲಿ ಅವರೇ ಅಗ್ರಸ್ಥಾನಿಯಾಗಿದ್ದಾರೆ. ನಾಗೇಂದ್ರ ನಂತರದ ಸ್ಥಾನದಲ್ಲಿ ಉಪ ಮುಖ್ಯಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಅವರಿದ್ದು, 19 ಕ್ರಿಮಿನಲ್ ಪ್ರಕ್ರಣಗಳ ವಿಚಾರಣೆ ನಡೆಯುತ್ತಿದೆ. ನಾಗೇಂದ್ರ ಅವರ ವಿರುದ್ಧ ಪ್ರಕರಣಗಳಲ್ಲಿ 21 ಪ್ರಕರಣಗಳು ಲೋಕಾಯುಕ್ತ ಮುಂದಿವೆ. ಉಳಿದ ಪ್ರಕರಣಗಳು ಸಿಬಿಐ, ಸಿಐಡಿಗಳ ಮುಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೂಡ 13 ಪ್ರಕರಣಗಳಿವೆ. ಕಾನೂನು ಬಾಹಿರ ಸಭೆ, ಚುನಾವಣೆ ಮೇಲೆ ಪ್ರಭಾವ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಜಮೀರ್ ಖಾನ್ ಅವರು ವಿರುದ್ಧ 6 ಗಂಭೀರ ಪ್ರಕರಣಗಳಿವೆ. ಇನ್ನುಳಿದಂತೆ ಪ್ರಿಯಾಂಕ್ ಖರ್ಗೆ(9), ಈಶ್ವರ್ ಖಂಡ್ರೆ(7), ಎಂ ಬಿ ಪಾಟೀಲ್(5), ರಾಮಲಿಂಗಾ ರೆಡ್ಡಿ(4), ಡಾ. ಜಿ ಪರಮೇಶ್ವರ್(3), ಎಚ್ ಕೆ ಪಾಟೀಲ್ (2), ಡಿ ಸುಧಾಕರ್ (2), ಸತೀಶ್ ಜಾರಕಿಹೊಳಿ (2), ಕೃಷ್ಣ ಭೈರೇಗೌಡ (1), ಎನ್ ಚಲುವರಾಯಸ್ವಾಮಿ (1), ಕೆ ಎಚ್ ಮುನಿಯಪ್ಪ (1) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
ಅಸೋಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(Association for Demorcatic Reforms- ADR) ಈ ಮಾಹಿತಿಯನ್ನು ಹೊರ ಹಾಕಿದೆ. ಚುನಾವಣಾ ವೇಳೆ ಆಯೋಗಕ್ಕೆ ಸಲ್ಲಿಸಲಾದ ಅಫಿಡವಿಟ್‌ಗಳ ಮೂಲಕ ಈ ಪಟ್ಟಿಯನ್ನು ರಚಿಸಲಾಗಿದೆ.
ಕರ್ನಾಟಕ ರಾಜಕೀಯದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!
New Parliament Building: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೆಂಗೋಲ್‌ನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ 20 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ.
ನವದೆಹಲಿ: ಹೊಸ ಸಂಸತ್ ಭವನ ಸಂಬಂಧ ವಿವಾದಗಳು ಇನ್ನೂ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತ ಹೊಸ ಸಂಸತ್ ಭವನ (New Parliament Building) ಉದ್ಘಾಟನೆ ಮಾಡುತ್ತಿದ್ದಂತೆ ಅತ್ತ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ರಾಷ್ಟ್ರೀಯ ಜನತಾ ದಳ(RJD), ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಕೆ ಮಾಡಿ, ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ. ಆರ್‌ಜೆಡಿ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇಂದು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಲಾಯಿತು ಎಂಬುದನ್ನು ಸಾಂಕೇತಿವಾಗಿ ಹೇಳಲು ಶವಪೆಟ್ಟಿಗೆಗೆ ಹೋಲಿಸಲಾಗಿದೆ ಎಂದು ಆರ್‌ಜೆಡಿ ಹೇಳಿದೆ.
ಟ್ವೀಟ್ ಬಗ್ಗೆ ವಿವರಿಸಿದ ಪಕ್ಷದ ನಾಯಕ ಶಕ್ತಿ ಸಿಂಗ್ ಯಾದವ್ ಅವರು, ನಾವು ಮಾಡಿರುವ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಸಂಕೇತಿಸುತ್ತಿದೆ. ದೇಶವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಮತ್ತು ಇದು ಚರ್ಚೆಯ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳ ಮಾಡಿರುವ ಟ್ವೀಟ್
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023
ಆರ್‌ಜೆಡಿ ವರ್ತನೆಯ ವಿರುದ್ಧ ಕೆಂಡಕಾರಿರುವ ಬಿಜೆಪಿಯ ನಾಯಕ ಸುಶೀಲ್ ಮೋದಿ ಅವರು, ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆ ಹೋಲಿಕೆ ಮಾಡಿರುವವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರ್‌ಜೆಡಿ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಅವರು ಇಂದು ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡುತ್ತಿದ್ದಾರೆ. ಹಳೆ ಸಂಸತ್ ಭವನವನ್ನು ಅವರು ಶೂನ್ಯದೊಂದಿಗೆ ಹೋಲಿಕೆ ಮಾಡುತ್ತಾರೆಯೇ? ನಾವು ಈ ಮೊದಲು ಸೊನ್ನೆಯಲ್ಲಿ ಕುಳಿತುಕೊಳುತ್ತಿದ್ದೇವು ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಸಂಯುಕ್ತ ಜನತಾ ದಳ ಕೂಡ ಈ ರೇಸ್‌ನಲ್ಲಿ ನುಗ್ಗಿದ್ದು, ಹೊಸ ಸಂಸತ್ ಭವನದ ಉದ್ಘಾಟನೆಯೊಂದಿಗೆ ಅಪಮಾನ ಇತಿಹಾಸವನ್ನು ಬರೆಯಲಾಗಿದೆ ಎಂದು ಹೇಳಿದೆ.
New Parliament Building: ಕಾರ್ಮಿಕರನ್ನು ಸನ್ಮಾನಿಸಿದ ಪ್ರಧಾನಿ ನೇರಂದ್ರ ಮೋದಿ
ನೂತನ ಸಂಸತ್ ಭವನ ಉದ್ಘಾಟನೆ (New Parliament Building Inauguration) ನಿಮಿತ್ತ ಮುಂಜಾನೆ 7.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪೂಜೆಗಳಲ್ಲೂ ಪಾಲ್ಗೊಂಡರು. ಗಣಪತಿ ಹೋಮ ಮುಕ್ತಾಯವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಸೆಂಗೋಲ್‌ನ್ನು ಹಿಡಿದು, ನೂತನ ಸಂಸತ್ ಭವನ ಪ್ರವೇಶಿಸಿ, ಅಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಈ ವೇಳೆ ತಮಿಳುನಾಡಿನ ಅಧೀನಂ ಮಠದ ಪುರೋಹಿತರು, ಸಂತರು, ಮಠಾಧೀಶರು ಇದ್ದರು. ಮಂತ್ರಘೋಷ ಮೊಳಗುತ್ತಿತ್ತು.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಇಷ್ಟಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರನ್ನು ಸನ್ಮಾನಿಸಿದರು. ನೂತನ ಸಂಸತ್ ಭವನ ನಿರ್ಮಾಣ ಮಾಡಿದ ಈ ಕೆಲಸಗಾರರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅದಕ್ಕೂ ಮೊದಲು ನರೇಂದ್ರ ಮೋದಿಯವರು ಸಂಸತ್ ಭವನದ ಫಲಕ ಅನಾವರಣಗೊಳಿಸಿದರು. ನಂತರ ಅಲ್ಲಿ ಸರ್ವಧರ್ಮಗಳ ಪ್ರಾರ್ಥನೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ಇನ್ನಿತರ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಅನುರಾಗ್ ಠಾಕೂರ್, ರಾಜನಾಥ್ ಸಿಂಗ್ ಮತ್ತಿತರ ಹಲವು ಗಣ್ಯರು ಇದ್ದರು. ಇವರಲ್ಲಿ ಸ್ಪೀಕರ್ ಓಂ ಬಿರ್ಲಾ ಪ್ರತಿ ಕಾರ್ಯದಲ್ಲೂ ಪ್ರಧಾನಿ ಮೋದಿಗೆ ಜತೆಯಾದರು.
ಬಿಜೆಪಿ ನಾಯಕ ಸುಶೀಲ್ ಮೋದಿ ಆಕ್ರೋಶ
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಂಕಣ
ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS
Raja Marga column: ಭರತ ವಾಕ್ಯ- ಒಬ್ಬ ಸೇವಾಕಾಂಕ್ಷಿ IAS ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಪರಿವರ್ತನೆಗಳನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಆದಿತ್ಯ ರಂಜನ್ ಒಂದು ಮೇರು ಉದಾಹರಣೆ ಆಗಿದ್ದಾರೆ.
ಕೇವಲ ಸಂಕಲ್ಪ ಶಕ್ತಿ ಮತ್ತು ಸಮಾಜ ಸೇವೆಯ ಕಾಳಜಿಯಿಂದ IAS ಪರೀಕ್ಷೆ ಬರೆದು ಜಿಲ್ಲಾಧಿಕಾರಿ ಆದ ಒಬ್ಬ ಉತ್ಸಾಹಿ ಯುವಕ ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿರುವುದು ಬಹಳ ದೊಡ್ಡ ಸುದ್ದಿ! ಅದೂ ಕೂಡ ಶೈಕ್ಷಣಿಕ ಕ್ರಾಂತಿಯ ಮೂಲಕ ಅನ್ನುವಾಗ ಇನ್ನೂ ಹೆಚ್ಚು ರೋಮಾಂಚನ ಆಗುತ್ತದೆ. ಅದಕ್ಕೆ ಕಾರಣರಾದವರು ಆದಿತ್ಯ ರಂಜನ್.
ಸರಕಾರಿ ಶಾಲೆಗಳಲ್ಲಿ ಓದಿ ಐಎಎಸ್ ಬರೆದರು
ಅವರು ಮೂಲತಃ ಕೈಗಾರಿಕಾ ನಗರವಾದ ಬೋಕಾರೋದ ಒಂದು ಮಧ್ಯಮವರ್ಗದ ಕುಟುಂಬದಿಂದ ಬಂದವರು. ಸರಕಾರಿ ಶಾಲೆಗಳಲ್ಲಿ ಓದಿದರು. ಮುಂದೆ ಬಿ. ಟೆಕ್ ಪದವಿಯನ್ನು ಪಡೆದು ಶ್ರೀಮಂತವಾದ ಬಹುರಾಷ್ಟ್ರೀಯ ಕಂಪೆನಿಯಾದ ORACLE ಇದರ ಬೆಂಗಳೂರು ಕಚೇರಿಯಲ್ಲಿ ಉದ್ಯೋಗವನ್ನು ಮಾಡಿದರು. ಲಕ್ಷ ಲಕ್ಷ ಸಂಬಳ ಬರುವ ಉದ್ಯೋಗ, ಅದನ್ನು ಹಿಂಬಾಲಿಸಿಕೊಂಡು ಬರುವ ಆಧುನಿಕ ಲೈಫ್ ಸ್ಟೈಲ್ ಎಲ್ಲಾ ಇದ್ದರೂ ಒಂದೂವರೆ ವರ್ಷದಲ್ಲಿ ಅವರು ರಾಜೀನಾಮೆ ಕೊಟ್ಟು ಹೊರಬಂದರು. ಕಾರಣ ಬಾಲ್ಯದಿಂದ ಅವರಿಗಿದ್ದ ಸಮಾಜಸೇವೆಯ ತೀವ್ರವಾದ ತುಡಿತ.
ಮುಂದೆ UPSC ಪರೀಕ್ಷೆಯನ್ನು ಬರೆದು(2015) ಅವರು ಐಎಎಸ್ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರಮಟ್ಟದ 99ನೆಯ ರಾಂಕ್ ಅವರಿಗೆ ದೊರಕಿತು. ಪ್ರೊಬೇಷನರಿ ಅವಧಿ ಮುಗಿದ ನಂತರ ಅವರು ಸೇವೆಗೆ ಸೇರಿದ್ದು ಜಾರ್ಖಂಡ್ ರಾಜ್ಯದ ಸಿಂಗಭುಂ ಜಿಲ್ಲೆಯಲ್ಲಿ.
ಸರಕಾರಿ ಶಾಲೆಗಳಲ್ಲಿ ಅಡ್ಮಿಷನ್ ಹೆಚ್ಚಿಸಲು ಅವರು ಮಾಡಿದ ಯೋಜನೆ
ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಜಿಲ್ಲೆ ಅದು. ಸಾಕ್ಷರತೆಯ ಪ್ರಮಾಣವು ಕೇವಲ 67% ಇತ್ತು. ಅಷ್ಟೊಂದು ಬಡತನ ಇದ್ದರೂ ಜನ ಸಾವಿರ ಸಾವಿರ ಡೊನೇಶನ್ ಸುರಿದು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದರು. ಸರಕಾರಿ ಶಾಲೆಯಲ್ಲಿ ಮಕ್ಕಳ ತೀವ್ರವಾದ ಕೊರತೆ ಇತ್ತು. ಸಮಸ್ಯೆಯನ್ನು ಆಳವಾಗಿ ಜಿಲ್ಲಾಧಿಕಾರಿಯವರು ಅಧ್ಯಯನ ಮಾಡಿದರು.
ಆಗ ಅವರ ಗಮನಕ್ಕೆ ಬಂದ ವಾಸ್ತವ ಏನೆಂದರೆ ಸರಕಾರಿ ಅಂಗನವಾಡಿಗಳ ಸ್ಥಿತಿಯು ತುಂಬಾ ಕೆಟ್ಟು ಹೋಗಿತ್ತು. ಖಾಸಗಿ ಶಾಲೆಗಳು LKG/UKG ಎಂದು ವೈಭವೀಕರಣ ಮಾಡಿ ಪೋಷಕರನ್ನು ಆಕರ್ಷಣೆ ಮಾಡುತ್ತಿದ್ದರು. ಸರಕಾರಿ ಅಂಗನವಾಡಿಗೆ ಬಂದ ಮಕ್ಕಳು ಬೆಳಿಗ್ಗೆ ಇಲಾಖೆ ನೀಡಿದ ಕಿಚಡಿ ತಿಂದು ಮನೆಗೆ ಓಡಿ ಹೋಗುತ್ತಿದ್ದರು! ಅಂಗನವಾಡಿ ಸಹಾಯಕಿಯರು ಪಾಠವನ್ನೇ ಮಾಡುತ್ತಿರಲಿಲ್ಲ!
ಅಂಗನವಾಡಿಗಳ ಉನ್ನತೀಕರಣಕ್ಕೆ ಗಟ್ಟಿ ಸಂಕಲ್ಪ!
ಆಗ ಜಿಲ್ಲಾಧಿಕಾರಿ ಆದಿತ್ಯ ರಂಜನ್ ಅವರು ಒಬ್ಬ ಅಂಗನವಾಡಿಯ ಶಿಕ್ಷಕಿಯನ್ನು ಭೇಟಿ ಮಾಡಿದರು.ಆಕೆ ವಿಧವೆ. ಆದರೂ ತಿಂಗಳಿಗೆ 4,500 ರೂಪಾಯಿ ತನ್ನ ಕಿಸೆಯಿಂದ ಖರ್ಚು ಮಾಡಿ ಒಂದು ಮಾದರಿ ಅಂಗನವಾಡಿಯನ್ನು ನಡೆಸುತ್ತಿದ್ದರು. ಅದನ್ನು ನೋಡಿದ ಜಿಲ್ಲಾಧಿಕಾರಿಯವರ ಕಣ್ಣು ತೆರೆಯಿತು. ಅದನ್ನು ಅವರು ಒಂದು ಸವಾಲಾಗಿ ಸ್ವೀಕರಿಸಿದರು.
ಅವರ ಜಿಲ್ಲೆಯಲ್ಲಿ 2330ರಷ್ಟು ಅಂಗನವಾಡಿಗಳು ಇದ್ದವು. ಅದರಲ್ಲಿ 1000 ಅಂಗನವಾಡಿ ಆಯ್ದುಕೊಂಡು ನೀಲನಕ್ಷೆಯನ್ನು ಸಿದ್ಧಪಡಿಸಿದರು. BALA ( Buiding As Learning Aid) ಎಂಬ ಹೆಸರಿನ ಯೋಜನೆಯು ಜಾರಿಯಾಯಿತು. ಅವರು ಮಾಡಿದ ಸಣ್ಣ ಸಣ್ಣ ಕೆಲಸಗಳು ಆ ಜಿಲ್ಲೆಯ ಎಲ್ಲಾ ಅಂಗನವಾಡಿಗಳನ್ನು ಶ್ರೀಮಂತಗೊಳಿಸಿದವು.
ಐಎಎಸ್ ಆದಿತ್ಯ ರಂಜನ್ ಚಿತ್ರಣವನ್ನು ಬದಲಾಯಿಸಿದರು!
1) ಅಂಗನವಾಡಿಗಳ ಗೋಡೆಯನ್ನು ಬಣ್ಣ ಬಣ್ಣದ ಚಿತ್ರಗಳಿಂದ ಸಿಂಗಾರ ಮಾಡಿದರು. ಆಕರ್ಷಕವಾಗಿ ಅಕ್ಷರ ಮತ್ತು ಸಂಖ್ಯೆಗಳಿಂದ ತುಂಬಿಸಿದರು. ಪ್ರಾಣಿ ಪಕ್ಷಿಗಳ ಚಿತ್ರಗಳೂ ಮೂಡಿದವು.
2) ಅಂಗನವಾಡಿಗಳ ಕಲಿಕೆಗೆ ಸಿಲೆಬಸ್ ರಚಿಸಿದರು. ಆಕರ್ಷಕ ಪಠ್ಯಪುಸ್ತಕವು ಬಂದಿತು. ದೃಶ್ಯ ಮಾಧ್ಯಮಗಳ ಬಳಕೆ ಆಯಿತು. ಮಕ್ಕಳಿಗೆ ಇಷ್ಟ ಆಗುವ ಆಟಗಳ ಮೂಲಕ ಪಾಠ ಕಲಿಸುವ ವಿಧಾನವು ಜಾರಿಗೆ ಬಂದಿತು.
3) ಅಂಗನವಾಡಿಗಳ ಶಿಕ್ಷಕರಿಗೆ ಸನಿವಾಸ ತರಬೇತಿಯ ಸರಣಿಗಳು ನಡೆದವು. ಸ್ವತಃ DC ಬಂದು ಪಾಠ ಮಾಡಿದರು. ಮಕ್ಕಳನ್ನು ಪ್ರೀತಿಸುವ, ಶಿಕ್ಷೆ ಇಲ್ಲದೇ ಪ್ರೀತಿಯಿಂದ ಮಕ್ಕಳಿಗೆ ಕಲಿಸುವ ವಾತಾವರಣವನ್ನು ಕಲ್ಪಿಸಲಾಯಿತು. ಇಂಗ್ಲಿಷ್ ಪ್ರಾಸ ಪದ್ಯಗಳು ( Rhymes) ಬಳಕೆಗೆ ಬಂದವು.
4) E-Sameeksha ಎಂಬ ಆಪ್ ಮೂಲಕ ಪ್ರತೀ ಅಂಗನವಾಡಿಯ ಪ್ರತಿದಿನದ ಪ್ರಗತಿಯನ್ನು ದಾಖಲಿಸುವ ಮತ್ತು ಡಿಸಿ ಮಾನಿಟರ್ ಮಾಡುವ ವ್ಯವಸ್ಥೆಯು ಜಾರಿಯಾಯಿತು.
5) ವಿವಿಧ ಸೇವಾಸಂಸ್ಥೆಗಳ ಸಹಯೋಗದೊಂದಿಗೆ ಅಂಗನವಾಡಿಯ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಮತ್ತು ಆಟದ ಸಾಮಗ್ರಿ ದೊರೆಯಿತು. ಸಂಗೀತ – ನಾಟಕ ಇತ್ಯಾದಿ ಚಟುವಟಿಕೆಗಳು ಗರಿಗೆದರಿದವು.
ಜಿಲ್ಲೆಯ ಅಂಗನವಾಡಿಗಳು ಸಿಂಗಾರವಾದವು
ಇವೆಲ್ಲದರ ಪರಿಣಾಮವಾಗಿ ಕೇವಲ ಎರಡೇ ವರ್ಷಗಳಲ್ಲಿ ಸರಕಾರಿ ಅಂಗನವಾಡಿಗಳು ಪ್ಲೇ ಸ್ಕೂಲಿಗಿಂತ ಅದ್ಭುತ ಆದವು. ಖಾಲಿಯಾಗಿದ್ದ ಸರಕಾರಿ ಪ್ರಾಥಮಿಕ ಶಾಲೆಗಳು ತುಂಬಿದವು. ಅಂಗನವಾಡಿಗಳನ್ನು ಅವರು ಉನ್ನತೀಕರಣ ಮಾಡಿದ್ದರಿಂದ ಇಡೀ ಜಿಲ್ಲೆಯ ಶೈಕ್ಷಣಿಕ ಚಿತ್ರಣವೇ ಬದಲಾಯಿತು. ಇದಕ್ಕೆ ಕಾರಣರಾದ ವ್ಯಕ್ತಿ ನಮ್ಮ ಜಿಲ್ಲಾಧಿಕಾರಿ ಆದಿತ್ಯ ರಂಜನ್.
ಇನ್ನೆರಡು ಅಪೂರ್ವವಾದ ಯೋಜನೆಗಳು
ಇಂತಹ ನೂರಾರು ಪರಿಕ್ರಮಗಳನ್ನು ಅವರು ಮಾಡಿದ್ದಾರೆ. ಅವರ ಇನ್ನೆರಡು ಯೋಜನೆಗಳು ರಾಷ್ಟ್ರದ ಗಮನವನ್ನು ಸೆಳೆದಿವೆ. ಅವುಗಳ ಬಗ್ಗೆ ನಾನು ಹೇಳಲೇಬೇಕು.
೧) Wonder on Wheels (Wow) ಎಂಬ ಯೋಜನೆಯ ಅಡಿಯಲ್ಲಿ ಒಂದು ಸಂಚಾರಿ ವಾಹನವು ನಗರದಾದ್ಯಂತ ಸಂಚರಿಸಿ ದೃಶ್ಯ ಮಾಧ್ಯಮಗಳ ಮೂಲಕ ಸಣ್ಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಾ ಪರಿಣಾಮವಾಗಿ ಮೂಡಿಸುತ್ತಿದೆ. ಆ ಹೆಸರೇ ( WOW) ಅದ್ಭುತವಾಗಿದೆ.
೨) ಅವರ ಜಿಲ್ಲೆಯು ಕೂಡ ಕೊರೋನಾ ಪೀಡಿತವಾದಾಗ ಜಿಲ್ಲಾಧಿಕಾರಿ ಸ್ವತಃ ಕೆಲಸ ಮಾಡಿ CO- BOT ಎಂಬ ಹೆಸರಿನ ರೋಬೋಟನ್ನು ತಯಾರಿ ಮಾಡಿದರು. ಅದು ರಿಮೋಟ ಮೂಲಕ ಕೆಲಸ ಮಾಡುತ್ತ ಆಸ್ಪತ್ರೆ ಇಡೀ ಓಡಾಡಿ ರೋಗಿಗಳಿಗೆ ಔಷಧಿ, ಆಹಾರ, ಸೇನಿಟೈಸರಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು. ಮಾತ್ರವಲ್ಲದೆ ಅವರನ್ನು ನಗಿಸಿ ಖುಷಿ ಪಡಿಸುವ ಕೆಲಸವನ್ನೂ ಮಾಡುತ್ತಿತ್ತು. ಇದು ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿದೆ!
-
ಕರ್ನಾಟಕ23 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ23 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ21 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ17 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್13 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER4 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?