ಬೆಂಗಳೂರು: ಅಕ್ರಮ ಆಸ್ತಿ (Disproportionate assets) ಗಳಿಕೆ ಆರೋಪದಡಿ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ, CBI) ಆರಂಭಿಸಿರುವ ತನಿಖೆಯನ್ನು (CBI probe) ಕೈಬಿಡುವಂತೆ ಸೂಚಿಸಬೇಕು ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
2013ರಿಂದ 2017ರವರೆಗಿನ ಅವಧಿಯಲ್ಲಿ ಡಿಕೆಶಿಯವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದ್ದಾರೆಂದು ಸಿಬಿಐ ಆರೋಪಿಸಿದ್ದು, ಆ ಕುರಿತಂತೆ ಎಫ್ಐಆರ್ ದಾಖಲಿಸಿತ್ತು. ಆ ಪ್ರಕರಣವನ್ನು ಕೈಬಿಡುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಡಿಕೆಶಿ ಮನವಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಾಲಾ ತ್ರಿವೇದಿ ನೇತೃತ್ವದ ಪೀಠ, ಡಿಕೆ ಶಿವಕುಮಾರ್ ಅವರ ಅರ್ಜಿಯನ್ನು ವಜಾಗಳಿಸಿತು.
ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಅನುಮತಿ ಪಡೆಯದೆ ತನಿಖೆ ಆರಂಭಿಸಲಾಗಿದೆ. 2018 ರ ತಿದ್ದುಪಡಿಯ ದಿನಾಂಕದ ಮೊದಲು ಸೆಕ್ಷನ್ 17 ಎ ಸೇರಿಸಲಾದ ಅಪರಾಧಗಳಿಗೆ ಸೆಕ್ಷನ್ 17 ಎ ಅನ್ವಯಿಸುತ್ತದೆಯೇ ಎಂಬ ವಿಷಯವನ್ನು ಘನ ಪೀಠಕ್ಕೆ ಉಲ್ಲೇಖಿಸಲಾಗಿದೆ ಎಂದು ಅವರು ಚಂದ್ರಬಾಬು ನಾಯ್ಡು ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು.
ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ತ್ರಿವೇದಿ ಅವರು, ವಿಭಜಿತ ತೀರ್ಪಿನ ಆಧಾರದ ಮೇಲೆ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಉತ್ತರಿಸಿದರು. ಡಿಕೆಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡುವಂತೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು. ಆದರೆ, ಪೀಠ ಇದಕ್ಕೆ ನಿರಾಸಕ್ತಿ ವ್ಯಕ್ತಪಡಿಸಿತು.
ಯಾವುದಿದು ಪ್ರಕರಣ?
ಈ ಹಿಂದಿನ ಸಿದ್ದರಾಮಯ್ಯನವರ ರಾಜ್ಯ ಸರ್ಕಾರದಲ್ಲಿ ಡಿಕೆಶಿಯವರು ಇಂಧನ ಸಚಿವರಾಗಿದ್ದರು. ಆ ಸರ್ಕಾರದ ಅವಧಿಯಲ್ಲಿ 74 ಕೋಟಿ ರೂ.ಗಳಷ್ಟು ದಾಖಲೆರಹಿತ ಆದಾಯವನ್ನು ಡಿಕೆ ಶಿವಕುಮಾರ್ ಅವರು ಗಳಿಸಿದ್ದಾರೆಂದು ಹೇಳಲಾಗಿದೆ. ಅದರಂತೆ, 74.93 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದಾರೆಂದು ಸಿಬಿಐ ಆರೋಪಿಸಿತ್ತು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ 2019ರಲ್ಲಿ ರಾಜ್ಯ ಸರ್ಕಾರಕ್ಕೆ ಸಿಬಿಐ ಅರ್ಜಿ ಸಲ್ಲಿಸಿತ್ತು.
2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಸಿಬಿಐ ಮನವಿಗೆ ಸ್ಪಂದಿಸಿ ತನಿಖೆಗೆ ಅನುಮತಿ ನೀಡಿತ್ತು. ಆನಂತರ ಸಿಬಿಐ, ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಅದೇ ತನಿಖೆಯನ್ನು ಕೈಬಿಡುವಂತೆ ಡಿಕೆ ಶಿವಕುಮಾರ್ ಅವರು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದು ಮೊದಲಿಗೆ ಅದು ವಿಭಾಗೀಯ ಪೀಠದಲ್ಲಿ ವಿಚಾರಣೆಯಾಗಿ ಆನಂತರ ಅದೀಗ ವಿಸ್ತ್ರೃತ ಪೀಠಕ್ಕೆ ವರ್ಗಾವಣೆಯಾಗಿದೆ.
ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದ ಹಿಂದಿನ ಸರ್ಕಾರದ ನಿರ್ಧಾರವನ್ನು ಹಾಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ರದ್ದು ಮಾಡಲು ನಿರ್ಧರಿಸಿದೆ. ಅದರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಮತ್ತೆ ಹೈಕೋರ್ಟ್ ಮೊರೆ ಹೋಗಿರುವ ಸಿಬಿಐ, ಒಮ್ಮೆ ತನಿಖೆಗೊಳಪಡಿಸಲಾಗಿರುವ ಪ್ರಕರಣವನ್ನು ಪುನಃ ಹಿಂಪಡೆಯುವುದು ಸಲ್ಲದು ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದೆ. ಅತ್ತ, ಸುಪ್ರೀಂ ಕೋರ್ಟ್‌ಗೂ ಸಿಬಿಐ ಮೇಲ್ಮನವಿ ಸಲ್ಲಿಸಿದೆ.
ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಅಕ್ರಮಗಳು ಬಿಜೆಪಿ ಆಡಳಿತಾವಧಿಯಲ್ಲೇ ಶುರುವಾಗಿರುವಂಥವು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾದ ನಂತರ ಅವು ಮೇಲೆದ್ದಿವೆ. ಬಿಜೆಪಿಯು ಆ ಎಲ್ಲಾ ಹಗರಣಗಳನ್ನು ನಮ್ಮ ತಲೆಗೆ ಕಟ್ಟಲು ನೋಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: DK Shivakumar: ಸಿಎಂ- ಡಿಸಿಎಂ ದಂಗಲ್ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್