ಇಸ್ಲಾಮಾಬಾದ್: ಉಗ್ರರ ಪೋಷಣೆ, ಇಸ್ಲಾಮಿಕ್ ಮೂಲಭೂತವಾದಿಗಳ ಅಟ್ಟಹಾಸ, ಬಲವಂತದ ಮತಾಂತರದಿಂದಾಗಿ ಪಾಕಿಸ್ತಾನದಲ್ಲಿ (Pakistan) ಅಲ್ಪಸಂಖ್ಯಾತರಾಗಿರುವ ಹಿಂದುಗಳು ಸೇರಿ ಹಲವು ಧಾರ್ಮಿಕ ಅಲ್ಪಸಂಖ್ಯಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಿನ ಬೆಳಗಾದರೆ, ಹಿಂದುಗಳನ್ನು ಮತಾಂತರ ಮಾಡುವುದು, ದೇವಾಲಯಗಳ ಮೇಲೆ ದಾಳಿ ಮಾಡುವುದು ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತವೆ. ಇದರ ಬೆನ್ನಲ್ಲೇ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬುದನ್ನು ಆ ದೇಶದ ರಕ್ಷಣಾ ಸಚಿವ ಖವಾಜ ಆಸಿಫ್ (Khawaja Asif) ಅವರೇ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಗುಂಪು ಹತ್ಯೆ, ಧರ್ಮನಿಂದನೆ ಸೇರಿ ಹಲವು ಪ್ರಕರಣಗಳು ಕೇಳಿಬಂದಿದ್ದು, ಇದನ್ನು ಖಂಡಿಸಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ನಿರ್ಣಯ ಮಂಡಿಸಿತು. ಇದೇ ವೇಳೆ ಖವಾಜ ಆಸಿಫ್ ಮಾತನಾಡಿದರು. “ಪಾಕಿಸ್ತಾನದಲ್ಲಿ ಪ್ರತಿದಿನ ಅಲ್ಪಸಂಖ್ಯಾತರ ಕೊಲೆಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರೂ ಸುರಕ್ಷಿತವಲ್ಲ. ಇಸ್ಲಾಂನಲ್ಲೇ ಸಣ್ಣ ಸಮುದಾಯಗಳಿಗೂ ಕೂಡ ರಕ್ಷಣೆ ಇಲ್ಲದಂತಾಗಿದೆ” ಎಂದು ಹೇಳುವ ಮೂಲಕ ಇಸ್ಲಾಮಿಕ್ ಮೂಲಭೂತವಾದದ ಅಟ್ಟಹಾಸವನ್ನು ಜಗಜ್ಜಾಹೀರು ಮಾಡಿದ್ದಾರೆ.
How shameless and moronic do you have to be to be disruptive and make noise when someone is talking about minorities being targeted on the name of blasphemy? In the fight against terrorism, why is PTI always on the side of terrorism?pic.twitter.com/5H9TTNHCzf
— Syed Zain Raza (@SydZainRaza) June 23, 2024
“ಅಲ್ಪಸಂಖ್ಯಾತರು ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಹತ್ಯೆ ಮಾಡಲಾಗುತ್ತಿದೆ. ಅವರ ಮೇಲೆ ಧರ್ಮನಿಂದನೆಯ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ನಾವು ಪಾಕಿಸ್ತಾನದ ಅಲ್ಪಸಂಖ್ಯಾತ ಸಹೋದರ ಹಾಗೂ ಸಹೋದರಿಯರನ್ನು ರಕ್ಷಣೆ ಮಾಡಬೇಕಿದೆ. ಅವರು ಕೂಡ ಬಹುಸಂಖ್ಯಾತರು ಹೊಂದಿರುವಷ್ಟೇ ಹಕ್ಕುಗಳನ್ನು ಹೊಂದಿದ್ದಾರೆ. ಪಾಕಿಸ್ತಾನವು ಎಲ್ಲ ನಾಗರಿಕರಿಗೂ ಸೇರಿದೆ. ಮುಸ್ಲಿಮರು ಇರಲಿ, ಕ್ರೈಸ್ತರು ಇರಲಿ, ಸಿಖ್ಖರು ಸೇರಿ ಯಾವುದೇ ಧರ್ಮೀಯರು ಇರಲಿ, ನಮ್ಮ ಸಂವಿಧಾನವು ಅವರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಅವರ ರಕ್ಷಣೆಗೆ ಸಂವಿಧಾನ ಇದೆ” ಎಂಬುದಾಗಿ ಹೇಳಿದರು.
ಪಾಕಿಸ್ತಾನದಲ್ಲಿ ಧರ್ಮನಿಂದನೆ, ಅಲ್ಪಸಂಖ್ಯಾತರ ಹತ್ಯೆಯನ್ನು ಖಂಡಿಸಿ ಸರ್ಕಾರವೇ ನಿರ್ಣಯ ಮಂಡಿಸಿದರೂ, ಅದರ ಅಂಗೀಕಾರಕ್ಕೆ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು ಬಿಡಲಿಲ್ಲ. ಪಾಕಿಸ್ತಾನದಲ್ಲಿ ನಿತ್ಯ ದೇವಾಲಯಗಳ ಮೇಲೆ ದಾಳಿ, ಮೂರ್ತಿಗಳ ಭಂಜನೆ, ಹಿಂದುಗಳ ಮತಾಂತರ, ಅಲ್ಪಸಂಖ್ಯಾತ ಯುವತಿಯರ ಮೇಲೆ ಅತ್ಯಾಚಾರ, ಗುಂಪು ಹತ್ಯೆಗಳು ನಡೆಯುತ್ತಲೇ ಇವೆ. ಇದಕ್ಕಾಗಿ ನಿರ್ಣಯ ಮಂಡಿಸಿದರೂ ಪಿಟಿಐ ಪಕ್ಷವು ಮೂಲಭೂತವಾದಿ ಮನಸ್ಥಿತಿಯನ್ನೇ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದೆ.