Site icon Vistara News

ವಿಸ್ತಾರ ಸಂಪಾದಕೀಯ: ಸರ್ವಸ್ಪರ್ಶಿ ಬಜೆಟ್; ಆದರೆ ಯೋಜನೆ ಜಾರಿಯೇ ಸವಾಲು

Basavaraj Bommai

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ರ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ. ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲು, ಎಲ್ಲ ವಲಯಗಳಿಗೂ ಸಂತುಲಿತ ರೀತಿಯಲ್ಲಿ ನ್ಯಾಯ ಒದಗಿಸಲು ಅವರು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಈ ಬಜೆಟ್‌ನಲ್ಲಿ ಭಾರಿ ಸಂಚಲನ ಮೂಡಿಸುವ ಘೋಷಣೆಗಳಿಲ್ಲ. ಆದರೆ ಎಲ್ಲ ವರ್ಗದವರಿಗೂ ಆದ್ಯತೆ ನೀಡಲಾಗಿದೆ. ಮಹಿಳೆಯರು, ವಿದ್ಯಾರ್ಥಿಗಳು, ಕೃಷಿಕರಿಗೆ ಉಪಯುಕ್ತ ಆಗುವ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇನ್ನು ಒಂದೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದ್ದರೂ ನಿರ್ದಿಷ್ಟ ಜನವರ್ಗಗಳನ್ನು ಓಲೈಸುವ ಪ್ರಕಟಣೆಗಳಿಗೆ, ಮಿತಿ ಮೀರಿದ ಘೋಷಣೆಗಳಿಗೆ ಹೋಗಿಲ್ಲ. ಆದರೆ ಎಲ್ಲ ವಲಯಗಳಿಗೂ ಅನುದಾನ ಒದಗಿಸುವ ಪ್ರಯತ್ನದಲ್ಲಿ ಈ ಸಾಲಿನ ಬಜೆಟ್‌ ಗಾತ್ರ ಕಳೆದ ವರ್ಷಕ್ಕಿಂತ 45,000 ಕೋಟಿಗಿಂತ ಹೆಚ್ಚಿದ್ದು, 3.09 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇಷ್ಟು ಅನುದಾನಗಳಿಗೆ ಹಣ ಹೊಂಚುವ ಸವಾಲು ಇದೆ. ಇದಕ್ಕಾಗಿ ಶೇ.26ರಷ್ಟು ತೆರಿಗೆ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದು ಎಷ್ಟರ ಮಟ್ಟಿಗೆ ಕಾರ್ಯಸಾಧುವಾಗಲಿದೆ ಎನ್ನುವುದೂ ಮುಖ್ಯ.

ಹಲವು ಉಪಯುಕ್ತ ಉಪಕ್ರಮಗಳು ಈ ಬಜೆಟ್‌ನಲ್ಲಿವೆ. ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿರುವುದು, 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವನಜ್ಯೋತಿ ವಿಮಾ ಯೋಜನೆ ಜಾರಿ ಇವು ಕೃಷಿ ಬಿಕ್ಕಟ್ಟಿನ ಈ ಸಮಯದಲ್ಲಿ ಸ್ವಾಗತಾರ್ಹ. ಸರ್ಕಾರಿ ಕಾಲೇಜಿನ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ, ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗುವ ಮಕ್ಕಳ ಬಸ್ಸು ಯೋಜನೆಗಳು ಕೂಡ ಸಮಾಜದ ಅಂಚಿನಲ್ಲಿರುವ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಉಪಯುಕ್ತ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸಲು ಬೊಮ್ಮಾಯಿ ಮುಂದಾಗಿದ್ದು, ʻಗೃಹಿಣಿ ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗವನ್ನು ಒಲಿಸಿಕೊಳ್ಳಲು ʻನಮ್ಮ ನೆಲೆ’ ಎಂಬ ಹೊಸ ಯೋಜನೆಯನ್ನು ಬೊಮ್ಮಾಯಿ ಘೋಷಿಸಿದ್ದಾರೆ. ಆರ್ಥಿಕವಾಗಿ ಗಂಭೀರ ಯೋಜನೆಗಳ ಜತೆಗೆ ಕೆಲ ಜನಪ್ರಿಯ ಯೋಜನೆಗಳನ್ನೂ ಬೊಮ್ಮಾಯಿ ಹಮ್ಮಿಕೊಂಡಿದ್ದಾರೆ. ಭುವನೇಶ್ವರಿ ಪ್ರತಿಮೆ ಮುಂತಾದವು ಇದಕ್ಕೆ ಉದಾಹರಣೆ.

ಇದನ್ನೂ ಓದಿ: Karnataka Budget 2023: ʼಸಬ್‌ ಕಾ ಸಾಥ್‌ʼ ಬಜೆಟ್‌ಗೆ ಸಿಎಂ ಬೊಮ್ಮಾಯಿ ಪ್ರಯತ್ನ; ಚುನಾವಣೆ ಹೊಸ್ತಿಲಲ್ಲಿ ಜಾರಿಯೇ ಅನುಮಾನ

ಆದರೆ ಬಜೆಟ್‌ನ ಘೋಷಣೆಗಳು ಎಷ್ಟು ಮುಖ್ಯವೋ ಅವುಗಳ ಜಾರಿಯೂ ಅಷ್ಟೇ ಮುಖ್ಯ. ಚುನಾವಣೆ ಹೊಸ್ತಿಲಲ್ಲೂ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬೊಮ್ಮಾಯಿಯವರು ಬಜೆಟ್ ಮಂಡಿಸಿರುವುದು ಮೆಚ್ಚತಕ್ಕ ಸಂಗತಿ. ಆದರೂ ಕೆಲವು ಕ್ಷೇತ್ರಗಳು ಸಾಕಷ್ಟು ಅನುದಾನವನ್ನು ಪಡೆದಿಲ್ಲ. ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ನೀಡಿದ ಆದ್ಯತೆ ಸಾಕಾಗಿಲ್ಲ. ಉದ್ಯೋಗ ಮತ್ತು ವಾಣಿಜ್ಯ ಬೆಳವಣಿಗೆ ದೃಷ್ಟಿಯಿಂದ ಈ ವಲಯವನ್ನು ಉತ್ತೇಜಿಸಬೇಕಿತ್ತು. ಆರೋಗ್ಯ ಕ್ಷೇತ್ರದಲ್ಲಿ ಕೊರೊನೋತ್ತರ ಕಾಲದಲ್ಲಿ ಹಲವು ಹೊಸ ಸವಾಲುಗಳಿವೆ; ಇಲ್ಲಿಗೆ ನೀಡಿರುವ ಅನುದಾನವೂ ಸಾಲದು. ಇರುವ ಕಡಿಮೆ ಅವಕಾಶದಲ್ಲಿ ಅನೇಕ ಯೋಜನೆಗಳನ್ನು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ರಾಜ್ಯದ ಸ್ವಂತ ತೆರಿಗೆಯನ್ನು ಶೇ.26 ಹೆಚ್ಚಳ ಮಾಡುವ ಮಹತ್ವಾಕಾಂಕ್ಷೆಯೂ ಇದೆ. ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹಣೆ ಹಾಗೂ ಬದ್ಧತೆಯನ್ನು ಹೊಂದಿದ್ದರೆ ಈ ಯೋಜನೆಗಳ ಜಾರಿ ಅಸಾಧ್ಯವಲ್ಲ. ಆದರೆ ಈ ಘೋಷಣೆಗಳನ್ನು ಈಡೇರಿಸಲು ಸಮಯ ಸಾಕಷ್ಟಿಲ್ಲ. ಒಂದಿಡೀ ವರ್ಷ ಸಮಯ ಸಿಕ್ಕಾಗಲೇ ಪೂರ್ಣ ಬಜೆಟ್‌ ಅನುಷ್ಠಾನ ಆಗದೆ ಇರುವಾಗ, ಚುನಾವಣೆ ಹೊಸ್ತಿಲಲ್ಲಿ ಅದರ ಕಥೆ ಏನು ಎನ್ನುವುದು ಪ್ರಶ್ನೆ. ಚುನಾವಣೆ ಪೂರ್ವದ ಬಜೆಟ್ ಯಾವತ್ತೂ ಅತಂತ್ರ ಬಜೆಟ್. ಏಕೆಂದರೆ ಮುಂದಿನ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಗೆದ್ದರಷ್ಟೇ ಬಜೆಟ್ ಘೋಷಣೆಗಳು ಜಾರಿಯಾಗಲು ಸಾಧ್ಯ. ಮತ್ತೊಂದು ಪಕ್ಷ ಗೆದ್ದು ಅಧಿಕಾರ ಹಿಡಿದರೆ ಅದು ಬೇರೆಯೇ ಸ್ವರೂಪದ ಬಜೆಟ್ ಹೊಸದಾಗಿ ಮಂಡಿಸಿಕೊಳ್ಳುತ್ತದೆ. ಇದೇನೇ ಇದ್ದರೂ ಬೊಮ್ಮಾಯಿ ಅವರು ಈಗ ಮಂಡಿಸಿರುವುದು ಶಿಸ್ತಿನ ಬಜೆಟ್ ಎನ್ನುವುದನ್ನು ಮಾತ್ರ ಸ್ಪಷ್ಟವಾಗಿ ಹೇಳಬಹುದು.

Exit mobile version